Jagan Mohan Reddy : 40 ಲಕ್ಷದ ಬಾತ್ ರೂಮ್…500 ಕೋಟಿ ಮೌಲ್ಯದ ಅರಮನೆ… ವಿವಾದದಲ್ಲಿ ಜಗನ್ ಮೋಹನ್ ರೆಡ್ಡಿ

By Roopa Hegde  |  First Published Jun 22, 2024, 11:20 AM IST

ಆಂಧ್ರಪ್ರದೇಶದಲ್ಲಿ ಅಧಿಕಾರ ಹಸ್ತಾಂತರವಾಗ್ತಿದ್ದಂತೆ ಎಲ್ಲರ ಕಣ್ಣು ಜಗನ್ ಬಂಗಲೆ ಮೇಲೆ ಬಿದ್ದಿದೆ. ಜಗನ್ ಮೋಹನ್ ರೆಡ್ಡಿ ರಾಜ್ಯವನ್ನು ಸಾಲದಲ್ಲಿ ಮುಳುಗಿಸಿ ಭವ್ಯ ಅರಮನೆ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದಿದೆ. ಆದ್ರೆ ಆರೋಪವನ್ನು ಜಗನ್ ತಳ್ಳಿ ಹಾಕಿದ್ದಾರೆ. ಬಂಗಲೆಯಲ್ಲಿ ಏನೆಲ್ಲ ಇದೆ ಎಂಬ ವಿವರ ಇಲ್ಲಿದೆ.
 


ಆಂಧ್ರಪ್ರದೇಶದಲ್ಲಿ ಅಧಿಕಾರ ಬದಲಾಗ್ತಿದ್ದಂತೆ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿವಾದಕ್ಕೊಳಗಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು ಅವರ ಬಂಗಲೆಯಂತಹ ಮನೆ. ವೈಎಸ್ ಆರ್ ಜಗನ್ ಮೋಹನ್ ರೆಡ್ಡಿ ನಿರ್ಮಿಸಿರುವ ಬಂಗಲೆ ಸಾಮಾನ್ಯದ್ದಲ್ಲ. ಅದನ್ನು ಐಷಾರಾಮಿ ಅರಮನೆ ಎಂದೇ ಕರೆಯಬಹುದು. ಇದನ್ನು ಬರೋಬ್ಬರಿ 452 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಅರಮನೆಗೆ ಜಗನ್ ಪ್ಯಾಲೇಸ್ ಎಂದೇ ಕರೆಯಲಾಗ್ತಿದೆ. ಮನೆಯ ಪ್ರತಿಯೊಂದು ರೂಮ್, ಐಷಾರಾಮಿ ವಸ್ತುಗಳು ನಿಬ್ಬೆರಗಾಗಿಸುವಂತಿದೆ.

ವಿಶಾಖಪಟ್ಟಣಂನ (Visakhapatnam)  ಕಡಲತೀರದ ಪಕ್ಕದಲ್ಲಿರುವ ರುಶಿಕೊಂಡ ಬೆಟ್ಟದ ಮೇಲೆ ಈ ಮನೆಯನ್ನು ನಿರ್ಮಿಸಲಾಗಿದೆ. ಈ ಮನೆಯಲ್ಲಿ ಏನಿಲ್ಲ ಎನ್ನಲು ಸಾಧ್ಯವೇ ಇಲ್ಲ. ಎಲ್ಲ ವ್ಯವಸ್ಥೆ ಈ ಬಂಗಲೆ (Bungalow) ಯೊಳಗೇ ಇದೆ. 12 ಐಷಾರಾಮಿ ಬೆಡ್ ರೂಮನ್ನು ಈ ಬಂಗಲೆ ಹೊಂದಿದೆ. ನೀವು ನಂಬಿ ಬಿಡಿ, 33 ಕೋಟಿ ರೂಪಾಯಿಯನ್ನು ಈ ಮನೆ ಇಂಟಿರಿಯರ್ ಗೆ ಖರ್ಚು ಮಾಡಲಾಗಿದೆ. ಈ ಮನೆಯಲ್ಲಿ 2 ಜೂಮರ್ ಇದ್ದು ಅದ್ರ ಬೆಲೆ 15 ಲಕ್ಷ ರೂಪಾಯಿ. ಅಷ್ಟೇ ಅಲ್ಲ ಈ ಬಂಗಲೆಯಲ್ಲಿ ಥಿಯೇಟರ್ (Theatre) ಹಾಲ್ ಕೂಡ ಇದೆ. ಲಕ್ಷ ರೂಪಾಯಿ ಮೌಲ್ಯದ ಮಸಾಜ್ ಟೇಬಲನ್ನು ನೀವಿಲ್ಲಿ ನೋಡ್ಬಹುದು. ಸ್ಪಾಗೆ ಹೊರಗೆ ಹೋಗುವ ಅವಶ್ಯಕತೆ ಇಲ್ಲ. ಈ ಭವ್ಯ ಅರಮನೆಯಲ್ಲಿ ಸ್ಪಾ ವ್ಯವಸ್ಥೆ ಮಾಡಲಾಗಿದೆ. 

Tap to resize

Latest Videos

ಸಾಲ ಕೊಟ್ಟಿದ್ದಕ್ಕೆ ಸಾಕ್ಷಿ‌ ಇಲ್ವಾ? ಹೀಗೆ ಮಾಡಿದ್ರೆ ಹಣ ವಾಪಸ್ ಸಿಗುತ್ತೆಂದ ಮಹಿಳೆ ವಿಡಿಯೋ ವೈರಲ್!

ಬಾತ್ ರೂಮ್ ನೋಡಿದ್ರೆ ದಂಗಾಗ್ತೀರಿ : ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬಂಗಲೆ ಬಾತ್ ರೂಮ್ ನೋಡಿದ್ರೆ ನೀವು ದಂಗಾಗ್ತೀರಿ. ಈ ಬಾತ್ ರೂಮ್ ಗಳಿಗೆ 40 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ತಲಾ 12 ಲಕ್ಷ ಮೌಲ್ಯದ ಕಮೋಡನ್ನು ಇದಕ್ಕೆ ಅಳವಡಿಸಲಾಗಿದೆ. 9.9 ಎಕರೆ ಜಾಗದಲ್ಲಿ ಇದರ ನಿರ್ಮಾಣವಾಗಿದೆ.

ಮನೆಯಲ್ಲಿದೆ ಈ ಎಲ್ಲ ಸೌಲಭ್ಯ : ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನೆಯ ಬಾಲ್ಕನಿಯಲ್ಲಿ ನಿಂತ್ರೆ ನೀವು ಬೀಚ್ ಸೌಂದರ್ಯವನ್ನು ಸವಿಯಬಹುದು. ಸಿನಿಮಾಗಳಲ್ಲಿ ನೋಡುವಂತಹ ಊಟದ ಹಾಲ್, ಕಾನ್ಫರೆನ್ಸ್ ಹಾಲ್, ವಿಶಾಲವಾದ ಕಾರಿಡಾರ್ ನಿರ್ಮಿಸಲಾಗಿದೆ. ಎಲ್ಲ ಕಡೆ ಅತ್ಯಾಧುನಿಕ ಲೈಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಜಗನ್ ಮೋಹನ್ ರೆಡ್ಡಿ (Jagan Mohan Reddy) ನಿರ್ಮಿಸಿರುವ ಈ ಮನೆ ನೋಡಲು ಎರಡು ಕಣ್ಣು ಸಾಲದು. 

ಜಗನ್ ಮೋಹನ್ ರೆಡ್ಡಿ ಮೇಲೆ ಆರೋಪ : ಸದ್ಯ ಜಗನ್ ಮೋಹನ್ ರೆಡ್ಡಿ ನಿರ್ಮಿಸಿರುವ ಈ ಬಂಗಲೆ ಗಂಭೀರ ಆರೋಪಕ್ಕೆ ಗುರಿಯಾಗಿದೆ. ರುಶಿಕೊಂಡ ಬೆಟ್ಟದ ಮೇಲೆ ಮಾಜಿ ಸಿಎಂ ಜಗನ್ ಮೋಹನ್ ಭವ್ಯ ಬಂಗಲೆ ನಿರ್ಮಾಣ ಮಾಡಿದ್ದು, ಬ್ಯಾರಿಕೇಡ್ ಹಾಕಿ ಅದನ್ನು ಮುಚ್ಚಿಡುವ ಪ್ರಯತ್ನ ನಡೆಸುತ್ತಿದ್ದಾರೆಂದು ಟಿಡಿಪಿ ಆರೋಪಿಸಿದೆ. ಸದ್ಯ ಆಂಧ್ರಪ್ರದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ರಾಜ್ಯದ ಆಂತರಿಕ ಉತ್ಪನ್ನಕ್ಕೆ ಸಾಲದ ಅನುಪಾತವು ತುಂಬಾ ಹೆಚ್ಚಾಗಿದೆ. ಅಧಿಕಾರದಲ್ಲಿದ್ದ ಜಗನ್ ಮೋಹನ್ ರೆಡ್ಡಿ, ರಾಜ್ಯವನ್ನು ಸಾಲದಲ್ಲಿ ಮುಳುಗಿಸಿ, ತಮ್ಮ ಸ್ವಂತಕ್ಕೆ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆಂದು ಟಿಡಿಪಿ ಆರೋಪಿಸಿದೆ.

ಬಿಜೆಪಿಗರೇ ಸರ್ಕಾರಕ್ಕೆ ಆದಾಯದ ಮೂಲ ಹುಡುಕಿಕೊಡಲಿ: ಡಿಕೆಶಿ

ಆದ್ರೆ ಟಿಡಿಪಿ ಆರೋಪವನ್ನು ವೈಎಸ್‌ಆರ್‌ಸಿಪಿ ತಳ್ಳಿ ಹಾಕಿದೆ. ಇದು ಜಗನ್ ಮೋಹನ್ ರೆಡ್ಡಿ ಖಾಸಗಿ ಸಂಪತ್ತಲ್ಲ. ಇದು ಸರ್ಕಾರದ ಆಸ್ತಿ. ಇದು ಜನತೆಗಾಗಿ ನಿರ್ಮಿಸಲಾಗಿದೆ. ಈ ಬಂಗಲೆಯನ್ನು ಟಿಡಿಪಿ ಕೂಡ ಬಳಸಿಕೊಳ್ಳಬಹುದು. ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಬಂದಾಗ ಅವರಿಗೆ ತಂಗಲು ಇಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಟಿಡಿಪಿ ಆರೋಪಕ್ಕೆ ವೈಎಸ್‌ಆರ್‌ಸಿಪಿ ಉತ್ತರ ನೀಡಿದೆ. 

click me!