
Business Desk:ಮಾಸಿಕ ವೇತನ ಪಡೆಯೋರು, ಸ್ವಂತ ಉದ್ಯಮ ಮಾಡೋರು ಹೀಗೆ ಆದಾಯದಿಂದ ತೆರಿಗೆ ಕಡಿತಕ್ಕೊಳಪಡುವ ಪ್ರತಿಯೊಬ್ಬರು ಪ್ರತಿ ಹಣಕಾಸು ಸಾಲಿಗೆ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ ಮಾಡುತ್ತಾರೆ. ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 139 ಪ್ರಕಾರ ತೆರಿಗೆ ವ್ಯಾಪ್ತಿಗೊಳಪಡುವ ಆದಾಯ ಹೊಂದಿರುವ ವ್ಯಕ್ತಿ ಪ್ರತಿ ವರ್ಷ ಐಟಿಆರ್ ಸಲ್ಲಿಕೆ ಮಾಡೋದು ಕಡ್ಡಾಯ. ಆದ್ರೆ ಬೇರೆ ಕೆಲವು ಸಂದರ್ಭಗಳಲ್ಲಿ ಕೂಡ ಐಟಿಆರ್ ಸಲ್ಲಿಕೆ ಮಾಡೋದು ಅತ್ಯವಶ್ಯಕ.
ಆದ್ರೆ ಇದೇ ಸೆಕ್ಷನ್ ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಆದಾಯದಿಂದ (Income) ತೆರಿಗೆ ಕಡಿತವಾಗದಿದ್ರೂ ಅಥವಾ ಆತ ಯಾವುದೇ ಆದಾಯ ಗಳಿಸದಿದ್ರೂ ಐಟಿಆರ್ ಫೈಲ್ ಮಾಡೋದು ಕಡ್ಡಾಯ ಎಂದು ಹೇಳಿದೆ. ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಈ ಅವಕಾಶವನ್ನೇ ಬಳಸಿಕೊಂಡು ಇನ್ನೊಂದಿಷ್ಟು ಸಂದರ್ಭಗಳಲ್ಲಿ ರಿಟರ್ನ್ಸ್ ಫೈಲ್ ಮಾಡೋದು ಕಡ್ಡಾಯ ಎಂದು ಹೇಳಿದೆ. ಹಾಗಾದ್ರೆ ಒಬ್ಬ ವ್ಯಕ್ತಿ ಯಾವೆಲ್ಲ ಸಂದರ್ಭಗಳಲ್ಲಿ ಐಟಿಆರ್ ಸಲ್ಲಿಕೆ ಮಾಡೋದು ಅತ್ಯವಶ್ಯಕ? ಇಲ್ಲಿದೆ ಮಾಹಿತಿ.
1.ಒಟ್ಟು ಆದಾಯ ಮೂಲ ವಿನಾಯ್ತಿ ಮಿತಿ ಮೀರಿದ್ರೆ
ಒಬ್ಬ ವ್ಯಕ್ತಿಯ ಆದಾಯ ತೆರಿಗೆ ವಿನಾಯ್ತಿಯ ಗರಿಷ್ಠ ಮಿತಿಯನ್ನು ಮೀರಿದ್ರೆ ಆಗ ಆತ ಐಟಿಆರ್ ಸಲ್ಲಿಕೆ ಮಾಡೋದು ಕಡ್ಡಾಯ. ಆದಾಯ ತೆರಿಗೆ ವಿನಾಯ್ತಿಮಿತಿ ಯಾರಿಗೆ ಎಷ್ಟಿದೆ?
*ಒಬ್ಬ ವ್ಯಕ್ತಿಗೆ ಆದಾಯ ತೆರಿಗೆ ವಿನಾಯ್ತಿ ಮಿತಿ 2.5 ಲಕ್ಷ ರೂ.
*ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯ್ತಿ ಮಿತಿ 3ಲಕ್ಷ ರೂ. (60 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಆದ್ರೆ 80 ವರ್ಷಕ್ಕಿಂತ ಕಡಿಮೆ)
*ಹಿರಿಯ ನಾಗರಿಕರಿಗೆ 5ಲಕ್ಷ ರೂ. (80 ವರ್ಷ ಮೇಲ್ಪಟ್ಟವರಿಗೆ)
ಒಬ್ಬ ವ್ಯಕ್ತಿಗೆ ಸಿಗುವ ಈ ಕೆಳಗಿನ ತೆರಿಗೆ ಕಡಿತಗಳು ಹಾಗೂ ವಿನಾಯ್ತಿಗಳನ್ನು ಇಂಥ ಗರಿಷ್ಠ ವಿನಾಯ್ತಿ ಮಿತಿ ಲೆಕ್ಕಾಚಾರಕ್ಕೆ ಪರಿಗಣಿಸಲಾಗೋದಿಲ್ಲ.
*ಸೆಕ್ಷನ್ 54, 54B, 54D, 54EC, 54F, 54G, 54GA ಅಥವಾ 54GB ಅಡಿಯಲ್ಲಿ ಬಂಡವಾಳ ಗಳಿಕೆ ಮೇಲಿನ ವಿನಾಯ್ತಿ.
* ಸೆಕ್ಷನ್ 80C ಇಂದ 80U ಅಡಿಯಲ್ಲಿ ತೆರಿಗೆ ಕಡಿತ.
ಉದಾಹರಣೆಗೆ ಮಿಸ್ಟರ್ ಎ (ವಯಸ್ಸು 50) ಮನೆಯನ್ನು ಮಾರಿ 10ಲಕ್ಷ ರೂ. ಗಳಿಸಿರುತ್ತಾನೆ. ಆತನ ಈ ಹಣವನ್ನು ಹೂಡಿಕೆ ಮಾಡಿ ಅದಕ್ಕೆ ಸೆಕ್ಷನ್ 54 ಅಡಿಯಲ್ಲಿ ವಿನಾಯ್ತಿ ಕ್ಲೈಮ್ ಮಾಡುತ್ತಾನೆ. ಈ ಪ್ರಕರಣದಲ್ಲಿ ತೆರಿಗೆ ವಿನಾಯ್ತಿ ಕ್ಲೇಮ್ ಮಾಡುವ ಮುನ್ನ ಮಿಸ್ಟರ್ ಎ ಒಟ್ಟು ಆದಾಯ 10 ಲಕ್ಷ ರೂ. ಅದು ಗರಿಷ್ಠ ವಿನಾಯ್ತಿ ಮಿತಿಯನ್ನು ಮೀರುತ್ತದೆ. ಹೀಗಾಗಿ ರಿಟರ್ನ್ ಫೈಲ್ ಮಾಡೋದು ಕಡ್ಡಾಯ.
2.ಭಾರತದ ಹೊರಗೆ ಆಸ್ತಿ ಹೊಂದಿದ್ರೆ
ಭಾರತದ ಯಾವುದೇ ನಾಗರಿಕ ವಿದೇಶದಲ್ಲಿ ಆಸ್ತಿ ಹೊಂದಿದ್ರೆ ಅಥವಾ ಅದರ ಪಾಲುದಾರ ಅಥವಾ ಫಲಾನುಭವಿ ಆಗಿದ್ರೆ ಅಂಥ ವ್ಯಕ್ತಿ ಐಟಿಆರ್ ಸಲ್ಲಿಕೆ ಮಾಡಬೇಕು.
3.ಬ್ಯಾಂಕ್ ಖಾತೆಗಳಲ್ಲಿ 1 ಕೋಟಿಗೂ ಅಧಿಕ ಠೇವಣಿಯಿದ್ರೆ
ಒಬ್ಬ ವ್ಯಕ್ತಿ ಕಳೆದ ಆರ್ಥಿಕ ಸಾಲಿನಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಚಾಲ್ತಿ ಖಾತೆಗಳಲ್ಲಿ ಒಂದು ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿದ್ರೆ ಆಗ ಆ ವ್ಯಕ್ತಿ ಐಟಿಆರ್ ಸಲ್ಲಿಕೆ ಮಾಡೋದು ಅಗತ್ಯ. ಆದ್ರೆ ಅಂಚೆ ಕಚೇರಿ ಚಾಲ್ತಿ ಖಾತೆಯಲ್ಲಿ ಒಬ್ಬ ವ್ಯಕ್ತಿಯು ಒಂದು ಕೋಟಿ ರೂ.ಗಿಂತ ಹೆಚ್ಚು ಠೇವಣಿಯಿರಿಸಿದ್ರೆ ಹಾಗೂ ಆತನ ಆದಾಯ ಗರಿಷ್ಠ ತೆರಿಗೆ ವಿನಾಯ್ತಿ ಮಿತಿಗಿಂತ ಕಡಿಮೆಯಿದ್ರೆ ಆಗ ಆತ ಐಟಿಆರ್ ಸಲ್ಲಿಕೆ ಮಾಡಬೇಕಾದ ಅಗತ್ಯವಿಲ್ಲ.
4.ವಿದೇಶಿ ಪ್ರವಾಸಕ್ಕೆ 2ಲಕ್ಷ ರೂ. ಖರ್ಚು
ತಾನು ಅಥವಾ ಇತರರು ವಿದೇಶಿ ಪ್ರವಾಸಕ್ಕೆ ಹೋಗಲು ಕಳೆದ ಸಾಲಿನಲ್ಲಿ 2ಲಕ್ಷ ರೂ.ಗಿಂತ ಹೆಚ್ಚು ವ್ಯಯಿಸಿದ ವ್ಯಕ್ತಿ ಐಟಿಆರ್ ಸಲ್ಲಿಕೆ ಮಾಡಬೇಕು.
5.ವಿದ್ಯುತ್ ಬಿಲ್ 1ಲಕ್ಷ ರೂ. ಆಗಿದ್ರೆ
ಕಳೆದ ಸಾಲಿನಲ್ಲಿ 1ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ವಿದ್ಯುತ್ ಬಳಕೆಗೆ ವ್ಯಯಿಸಿದ್ರೆ ಆ ವ್ಯಕ್ತಿ ಐಟಿಆರ್ ಸಲ್ಲಿಸಬೇಕು.
6.ಉದ್ಯಮದ ವಾರ್ಷಿಕ ವಹಿವಾಟು, ಒಟ್ಟು ಮಾರಾಟ ಅಥವಾ ಸ್ವೀಕೃತಿ ಕಳೆದ ಸಾಲಿನಲ್ಲಿ 60 ಲಕ್ಷ ರೂ. ಮೀರಿದ್ರೆ ಆ ವ್ಯಕ್ತಿ ಐಟಿಆರ್ ಸಲ್ಲಿಕೆ ಮಾಡೋದು ಅಗತ್ಯ.
7.ವೃತ್ತಿಯಿಂದ ಒಟ್ಟು ಸ್ವೀಕೃತಿ 10 ಲಕ್ಷ ರೂ. ಮೀರಿದ್ರೆ
ವೃತ್ತಿಯಿಂದ ಗಳಿಸಿದ ಒಟ್ಟು ಆದಾಯ ಕಳೆದ ಸಾಲಿನಲ್ಲಿ 60 ಲಕ್ಷ ರೂ. ಮೀರಿದ್ರೆ ಆಗ ಆ ವ್ಯಕ್ತಿ ಐಟಿಆರ್ ಸಲ್ಲಿಕೆ ಮಾಡಬೇಕು.
8.ಟಿಡಿಎಸ್ ಅಥವಾ ಟಿಸಿಎಸ್ 25,000ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ
60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ ಕಳೆದ ಸಾಲಿನಲ್ಲಿ 25,000ರೂ. ಅಥವಾ ಅದಕ್ಕಿಂತ ಹೆಚ್ಚಿನ ಟಿಡಿಎಸ್ ಅಥವಾ ಟಿಸಿಎಸ್ ಕಡಿತಗೊಳಗಾಗಿದ್ರೆ ಆಗ ಐಟಿಆರ್ ಸಲ್ಲಿಸಬೇಕು.
9.ಟಿಡಿಎಸ್ ಹಾಗೂ ಟಿಸಿಎಸ್ 50,000ರೂ. ಅಥವಾ ಹೆಚ್ಚಿದ್ರೆ
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಳೆದ ಸಾಲಿನಲ್ಲಿ 50,000ರೂ. ಅಥವಾ ಅದಕ್ಕಿಂತ ಹೆಚ್ಚಿನ ಟಿಡಿಎಸ್ ಅಥವಾ ಟಿಸಿಎಸ್ ಕಡಿತಗೊಳಗಾಗಿದ್ರೆ ಆಗ ಐಟಿಆರ್ ಸಲ್ಲಿಸಬೇಕು.
10. ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಠೇವಣಿ 50ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿದ್ರೆ
ಕಳೆದ ಸಾಲಿನಲ್ಲಿ ಒಬ್ಬ ವ್ಯಕ್ತಿಯ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 50ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಠೇವಣಿಯಿದ್ರೆ ಆಗ ಆತ ಐಟಿಆರ್ ಸಲ್ಲಿಕೆ ಮಾಡಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.