ಅಮೆರಿಕದ ಟ್ರಂಪ್ ಸರ್ಕಾರಕ್ಕೆ ಒಂದೇ ದಿನದಲ್ಲಿ ₹1 ಲಕ್ಷ ಕೋಟಿಗೂ ಹೆಚ್ಚು ನಷ್ಟ!

Published : Oct 31, 2026, 10:19 AM IST
Donald Trump

ಸಾರಾಂಶ

ಇಸ್ರೇಲ್ ಘಟಕದಲ್ಲಿನ ಸ್ಫೋಟ ಮತ್ತು ಜಾಗತಿಕ ಪಿಸಿ ಮಾರುಕಟ್ಟೆಯ ಕುಸಿತದಿಂದಾಗಿ ಇಂಟೆಲ್ ಸಂಸ್ಥೆಯ ಷೇರುಗಳು 1970ರ ದಶಕದ ಬಳಿಕ ಅತಿ ದೊಡ್ಡ ಪತನ ಕಂಡಿವೆ. ಇದರಿಂದಾಗಿ ಎನ್‌ವಿಡಿಯಾ ಸೇರಿದಂತೆ ಅಮೆರಿಕದ ಇತರ ಟೆಕ್ ಕಂಪನಿಗಳಿಗೂ ಭಾರಿ ನಷ್ಟ ಉಂಟಾಗಿದೆ.

ವಾಷಿಂಗ್ಟನ್‌ (ಅ.31): ಇಸ್ರೇಲ್‌ನಲ್ಲಿರುವ ಕಂಪನಿಯ ಚಿಪ್ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಸ್ಫೋಟ ಹಾಗೂ ಜಾಗತಿಕ ವೈಯಕ್ತಿಕ ಕಂಪ್ಯೂಟರ್ (PC) ಮಾರುಕಟ್ಟೆಯಲ್ಲಿ ಉಂಟಾಗಿರುವ ಮಂದಗತಿಯು ಇಂಟೆಲ್ ಸಂಸ್ಥೆಗೆ ಭಾರೀ ಪೆಟ್ಟು ನೀಡಿದೆ. ಪ್ರಸ್ತುತ ತ್ರೈಮಾಸಿಕದಲ್ಲಿ ಆದಾಯ ತೀವ್ರವಾಗಿ ಕುಸಿಯಲಿದೆ ಎಂದು ಕಂಪನಿ ಮುನ್ಸೂಚನೆ ನೀಡಿದ ಬೆನ್ನಲ್ಲೇ ವಾಲ್ ಸ್ಟ್ರೀಟ್‌ನಲ್ಲಿ ಇಂಟೆಲ್ ಷೇರುಗಳು ಪಾತಾಳಕ್ಕೆ ಕುಸಿದಿದೆ. ಈ ಭಾರಿ ಹಿನ್ನಡೆಯು ಕೇವಲ ಇಂಟೆಲ್ ಸಂಸ್ಥೆಗೆ ಮಾತ್ರವಲ್ಲದೆ, ಒಂದು ವರ್ಷದ ಹಿಂದೆ ಕಂಪನಿಯಲ್ಲಿ ಶೇಕಡಾ 10 ರಷ್ಟು ಷೇರು ಖರೀದಿಸಿದ್ದ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರಕ್ಕೂ ಭಾರಿ ಆಘಾತ ನೀಡಿದೆ. ಅಷ್ಟೇ ಅಲ್ಲದೆ, 2025 ರ ಮಾರ್ಚ್‌ನಲ್ಲಿ ಇಂಟೆಲ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡು ಸಂಸ್ಥೆಯನ್ನು ಮರಳಿ ಸರಿದಾರಿಗೆ ತರಲು ಶ್ರಮಿಸುತ್ತಿರುವ ಲಿಪ್-ಬು ತಾನ್ (Lip-Bu Tan) ಅವರ ಪ್ರಯತ್ನಗಳಿಗೂ ಹಿನ್ನಡೆಯಾಗಿದೆ. ಇದು 1970ರ ದಶಕದ ಬಳಿಕ ಇಂಟೆಲ್‌ ಷೇರುಗಳಲ್ಲಿ ಆಗಿರುವ ಭಾರೀ ಕುಸಿತ ಎನ್ನಲಾಗಿದೆ.

ಇಂಟೆಲ್‌ನಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡಿದ್ದ ಮತ್ತೊಂದು ಚಿಪ್ ದೈತ್ಯ ಎನ್‌ವಿಡಿಯಾ (Nvidia) ಸಂಸ್ಥೆಯೂ ಶುಕ್ರವಾರ ಒಂದೇ ದಿನ ಸುಮಾರು ₹50,700 ಕೋಟಿ (6 ಬಿಲಿಯನ್ ಡಾಲರ್) ನಷ್ಟ ಅನುಭವಿಸಿದೆ. ಆದರೆ, ಈ ಭಾರಿ ಕುಸಿತದ ನಡುವೆಯೂ ಅಮೆರಿಕ ಸರ್ಕಾರದ ಒಟ್ಟಾರೆ ಹೂಡಿಕೆಯು ಲಾಭದಲ್ಲೇ ಉಳಿದಿದೆ ಎಂಬುದು ಗಮನಾರ್ಹ.

ಇನ್ನೂ ಸರಿಹೋಗಿಲ್ಲ: ರೇಟಿಂಗ್ ತಗ್ಗಿಸಿದ ಡಿಎ ಡೇವಿಡ್ಸನ್

ಇಂಟೆಲ್ ಸ್ಥಿತಿಗತಿಯನ್ನು ವಿಶ್ಲೇಷಿಸಿರುವ 'ಡಿಎ ಡೇವಿಡ್ಸನ್' (DA Davidson) ಸಂಸ್ಥೆಯ ಮಾರುಕಟ್ಟೆ ವಿಶ್ಲೇಷಕರು, ಇಂಟೆಲ್ ಷೇರು ರೇಟಿಂಗ್ ಅನ್ನು "ಖರೀದಿಸಿ" (Buy) ಹಂತದಿಂದ "ತಟಸ್ಥ" (Neutral) ಹಂತಕ್ಕೆ ತಗ್ಗಿಸಿದ್ದಾರೆ. ತಮ್ಮ ವರದಿಗೆ "ಇನ್ನೂ ಸರಿಹೋಗಿಲ್ಲ" (Not fixed yet) ಎಂದು ಶೀರ್ಷಿಕೆ ನೀಡಿರುವ ವಿಶ್ಲೇಷಕರು, "ಸಂಪೂರ್ಣ ಕಾಂಪೊನೆಂಟ್ ಉದ್ಯಮದ ಮಟ್ಟದಲ್ಲೇ ಪಿಸಿ ಮಾರುಕಟ್ಟೆ ಕುಸಿದಿರುವುದು ನಮಗೆ ಅರ್ಥವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಇಷ್ಟೊಂದು ತೀವ್ರ ಮಟ್ಟದ ದೌರ್ಬಲ್ಯ ಇರುವಾಗ ಹಾಲಿ ಮೌಲ್ಯಮಾಪನವನ್ನು ಸಮರ್ಥಿಸಿಕೊಳ್ಳುವುದು ಕಷ್ಟ" ಎಂದು ತಿಳಿಸಿದ್ದಾರೆ.

ವಿಶೇಷವೆಂದರೆ, ಈ ಕುಸಿತಕ್ಕೂ ಮುನ್ನ ಇಂಟೆಲ್ ಷೇರುಗಳು ಪ್ರಸಕ್ತ ವರ್ಷದಲ್ಲಿ ಶೇಕಡಾ 150 ರಷ್ಟು ಭಾರಿ ಜಿಗಿತ ಕಂಡಿದ್ದವು. ಸಾಫ್ಟ್‌ವೇರ್‌ಗಳು ಮನುಷ್ಯನ ಹಸ್ತಕ್ಷೇಪವಿಲ್ಲದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ 'ಏಜೆಂಟಿಕ್ ಎಐ' (Agentic AI) ತಂತ್ರಜ್ಞಾನಕ್ಕೆ ಇಂಟೆಲ್ ಪ್ರೊಸೆಸರ್‌ಗಳ ಅಗತ್ಯ ಹೆಚ್ಚಿದ್ದರಿಂದ ಷೇರು ಚೇತರಿಸಿಕೊಂಡಿತ್ತು. ಎಐ ಕ್ರಾಂತಿಯ ಆರಂಭಿಕ ವರ್ಷಗಳನ್ನು ಕೈಚೆಲ್ಲಿದ್ದ ಇಂಟೆಲ್ ಅನ್ನು ಮರಳಿ ಮುಂಚೂಣಿಗೆ ತರಲು ಲಿಪ್-ಬು ತಾನ್ ಶ್ರಮಿಸುತ್ತಿದ್ದರು.

ಆದಾಯ ಕುಸಿತದ ಮುನ್ಸೂಚನೆ – ಹೂಡಿಕೆದಾರರ ಕಂಗಾಲು

ಪ್ರಸ್ತುತ ತ್ರೈಮಾಸಿಕದಲ್ಲಿ ಇಂಟೆಲ್ ಸಂಸ್ಥೆಯು ₹1,26,750 ಕೋಟಿಯಿಂದ ₹1,35,200 ಕೋಟಿ (15 ರಿಂದ 16 ಬಿಲಿಯನ್ ಡಾಲರ್) ಆದಾಯದೊಂದಿಗೆ, ಪ್ರತಿಯೊಂದು ಷೇರಿಗೆ 25 ಸೆಂಟ್‌ಗಳ (ಅಂದಾಜು ₹21) ಹೊಂದಾಣಿಕೆಯ ಆದಾಯವನ್ನು ನಿರೀಕ್ಷೆ ಮಾಡುತ್ತಿತ್ತು. ಆದರೆ ಎಲ್‌ಎಸ್‌ಇಜಿ (LSEG) ದತ್ತಾಂಶಗಳ ಪ್ರಕಾರ, ವಿಶ್ಲೇಷಕರು ₹1,44,495 ಕೋಟಿ (17.1 ಬಿಲಿಯನ್ ಡಾಲರ್) ಆದಾಯ ಮತ್ತು ಷೇರಿಗೆ 43 ಸೆಂಟ್ಸ್ ಆದಾಯವನ್ನು ನಿರೀಕ್ಷಿಸಿದ್ದರು.

ಇಂಟೆಲ್ ಈ ಭಾರಿ ಹಿನ್ನಡೆಗೆ ಮುಖ್ಯವಾಗಿ ಎರಡು ಮುಖ್ಯ ಕಾರಣ

ಪಿಸಿ ಮಾರುಕಟ್ಟೆ ಕುಸಿತ: ಮೆಮೊರಿ ಹಾಗೂ ಇತರ ಭಾಗಗಳ ದರ ಭಾರಿ ಏರಿಕೆಯಾಗಿದ್ದರಿಂದ ಪಿಸಿ ಮಾರುಕಟ್ಟೆ ಕುಸಿದಿದೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಪಿಸಿ ಸಾಗಣೆಯು ಶೇ. 4 ರಷ್ಟು ಕುಸಿದಿದೆ. "ಪಿಸಿ ಮಾರುಕಟ್ಟೆಯ ಈ ಮಂದಗತಿಯು ಕನಿಷ್ಠ ಮುಂದಿನ ವರ್ಷದ ಮೊದಲಾರ್ಧದವರೆಗೆ ಮುಂದುವರಿಯಲಿದೆ" ಎಂದು ಇಂಟೆಲ್ ಹಣಕಾಸು ಮುಖ್ಯಸ್ಥ (CFO) ಡೇವಿಡ್ ಜಿನ್ಸ್‌ನೆರ್ ತಿಳಿಸಿದ್ದಾರೆ.

ಇಸ್ರೇಲ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ: ಇತ್ತೀಚೆಗೆ ಇಸ್ರೇಲ್‌ನಲ್ಲಿರುವ ಇಂಟೆಲ್‌ನ ಪ್ರಮುಖ ಚಿಪ್ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟು, ಮತ್ತೊಬ್ಬರು ತೀವ್ರ ಗಾಯಗೊಂಡಿದ್ದರು. ಈ ದುರಂತ ಹಾಗೂ ಘಟಕ ಬಂದ್ ಆಗಿದ್ದರಿಂದ ಎರಡು ತ್ರೈಮಾಸಿಕಗಳಲ್ಲಿ ಸುಮಾರು ₹5,070 ಕೋಟಿ (600 ಮಿಲಿಯನ್ ಡಾಲರ್) ಆದಾಯ ನಷ್ಟವಾಗಲಿದೆ. ಇದರಿಂದಾಗಿ 10-ನ್ಯಾನೋಮೀಟರ್ ಚಿಪ್‌ಗಳ ಪೂರೈಕೆಯಲ್ಲಿ ಭಾರಿ ವಿಳಂಬ ಉಂಟಾಗಿದೆ ಎಂದು ಇಂಟೆಲ್‌ ತಿಳಿಸಿದೆ.

ತಂತ್ರಜ್ಞಾನ ವಲಯದಲ್ಲಿ ಭಾರಿ ಆತಂಕ

ಇಂಟೆಲ್ ಮಾತ್ರವಲ್ಲದೆ ಇಡೀ ಅಮೆರಿಕದ ಟೆಕ್ ಮಾರುಕಟ್ಟೆ ತತ್ತರಿಸಿದೆ. ನಾಸ್‌ಡಾಕ್ ಕಾಂಪೊಸಿಟ್ (Nasdaq Composite) ಶುಕ್ರವಾರ ಶೇಕಡಾ 2.9 ರಷ್ಟು ಪತನಗೊಂಡಿದೆ. ಗೂಗಲ್‌ನ ಮಾತೃ ಸಂಸ್ಥೆ ಆಲ್ಫಾಬೆಟ್ ಷೇರು ಗುರುವಾರ ಶೇ. 12 ಕ್ಕಿಂತ ಹೆಚ್ಚು ಕುಸಿದು, ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಿನವನ್ನು ಕಂಡಿತು. ಮೂರನೇ ತ್ರೈಮಾಸಿಕದ ಆದಾಯ ಹಾಗೂ ಲಾಭದ ಗುರಿ ತಲುಪಲು ವಿಫಲವಾದ ಅಮೆಜಾನ್ ಷೇರು ಶೇ. 1.4 ರಷ್ಟು ಕುಸಿದಿದೆ. ಕಂಪನಿಯು ತನ್ನ 2026 ರ ಬಂಡವಾಳ ವೆಚ್ಚವನ್ನು ₹18,59,000 ಕೋಟಿ (220 ಬಿಲಿಯನ್ ಡಾಲರ್) ಯಲ್ಲಿ ಕಾಯ್ದುಕೊಂಡಿದ್ದರೂ, ಸತತ ಎರಡನೇ ತ್ರೈಮಾಸಿಕದಲ್ಲೂ ನೆಗೆಟಿವ್‌ ಫ್ರೀ ಕ್ಯಾಶ್‌ ಫ್ಲೋ ದಾಖಲಿಸಿದೆ. ಎನ್‌ವಿಡಿಯಾ ಶೇ. 4, ಬ್ರಾಡ್‌ಕಾಮ್ ಶೇ. 5 ಕ್ಕಿಂತ ಹೆಚ್ಚು ಹಾಗೂ ಕ್ವಾಲ್ಕಾಮ್ ಶೇ. 11 ರಷ್ಟು ಪತನಗೊಂಡಿವೆ. ದೊಡ್ಡ ಮಟ್ಟದ ಟೆಕ್ ಕಂಪನಿಗಳು ಕೃತಕ ಬುದ್ಧಿಮತ್ತೆಗೆ (AI) ಮಾಡುತ್ತಿರುವ ಕೋಟ್ಯಂತರ ಡಾಲರ್ ಹೂಡಿಕೆಗಳು ನಿಜಕ್ಕೂ ಪ್ರತಿಫಲ ನೀಡುತ್ತವೆಯೇ ಎಂಬ ಶಂಕೆ ಹೂಡಿಕೆದಾರರಲ್ಲಿ ವ್ಯಕ್ತವಾಗಿದೆ.

ಇಂಟೆಲ್ ಫೌಂಡ್ರಿ ಚೇತರಿಕೆಯ ಭವಿಷ್ಯವೇನು?

ಇಂಟೆಲ್ ಸಂಸ್ಥೆಯ ಮರುಜೀವದ ಸಂಪೂರ್ಣ ಭರವಸೆಯು ಅದರ 'ಫೌಂಡ್ರಿ' (Foundry) ಉದ್ಯಮದ ಮೇಲಿದೆ. ಅಮೆರಿಕದ ಪ್ರಮುಖ ಅಡ್ವಾನ್ಸ್ಡ್ ಲಾಜಿಕ್ ಚಿಪ್ ತಯಾರಕ ಸಂಸ್ಥೆಯಾಗಿರುವ ಇಂಟೆಲ್, ಸದ್ಯ ತೈವಾನ್‌ನ ಟಿಎಸ್‌ಎಂಸಿ (TSMC) ಸಂಸ್ಥೆಗೆ ಪರ್ಯಾಯವಾಗಿ ತನ್ನ ಏರಿಜೋನಾದ ಹೊಸ ಫ್ಯಾಕ್ಟರಿಯಲ್ಲಿ ಅತ್ಯಂತ ಸುಧಾರಿತ '18A ಚಿಪ್‌ಗಳನ್ನು' ಉತ್ಪಾದಿಸುತ್ತಿದೆ. ಕಂಪನಿಯ ಮುಂದಿನ ಏರಿಜೋನಾ ಫ್ಯಾಕ್ಟರಿ 2028 ರ ವೇಳೆಗೆ ಆರಂಭವಾಗಲಿದೆ. ಆದರೆ, ಈ ನೂತನ ಚಿಪ್‌ಗಳಿಗೆ ಇಂಟೆಲ್ ಸಂಸ್ಥೆಗೆ ಇನ್ನೂ ಯಾವುದೇ ಹೊರಗಿನ ಗ್ರಾಹಕರು ಸಿಕ್ಕಿಲ್ಲ. ಮುಂದಿನ ಎರಡು ತ್ರೈಮಾಸಿಕಗಳಲ್ಲಿ ಒಂದಷ್ಟು ಹೊಸ ಗ್ರಾಹಕರನ್ನು ಅಂತಿಮಗೊಳಿಸಿ ಪ್ರಕಟಿಸಲಾಗುವುದು ಹಾಗೂ ಮುಂಬರುವ '14A ಚಿಪ್‌ಗಳ' ಕೆಲಸ ಅತ್ಯಂತ ವೇಗವಾಗಿ ಸಾಗುತ್ತಿದೆ ಎಂದು ಸಿಇಒ ಲಿಪ್-ಬು ತಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೆಂಗಳೂರಿನ ರಾಜಾಜಿನಗರದ ಐಕಾನಿಕ್‌ ಲ್ಯಾಂಡ್‌ಮಾರ್ಕ್‌ ಸುಗುಣ ಹಾಸ್ಪಿಟಲ್‌ ಇನ್ನು ನೆನಪು ಮಾತ್ರ!
ದೀಪಾವಳಿ ಹಬ್ಬಕ್ಕೆ ಬಂಗಾರ ಖರೀದಿಸೋರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ! ಇಂದಿನ ಬೆಲೆ ಎಷ್ಟು?