
Gold Price today in india: ನೀವು ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ, ಅಥವಾ ಚಿನ್ನದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದರೆ. ಇದು ನಿಮಗೆ ಒಳ್ಳೆಯ ಸಮಯವಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತವಾಗುತ್ತಿದೆ. ಈ ಬಾರಿ ಮತ್ತೆ ಚಿನ್ನ ಇಳಿಕೆಯಾಗಿದೆ. ಜನವರಿ 2026ರಲ್ಲಿ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ಬೆಲೆಯು ಈಗ ಸುಮಾರು ಶೇ.20ರಷ್ಟು ಇಳಿದಿದೆ. ಅಂದರೆ ಅಕ್ಟೋಬರ್ 23ರಂದು 10 ಗ್ರಾಂ ಚಿನ್ನದ ಬೆಲೆ ₹1,41,031ಕ್ಕೆ ಇಳಿದಿತ್ತು. ಇದು ಜನವರಿಯಲ್ಲಿದ್ದ ಬೆಲೆಗೆ ಹೋಲಿಸಿದರೆ ಸುಮಾರು ಶೇ.19.42ರಷ್ಟು ಕಮ್ಮಿ. ಹೀಗಾಗಿ ಜನೆವರಿಯಲ್ಲಿ ಹೆಚ್ಚಿನ ಬೆಲೆಗೆ ಚಿನ್ನ ಖರೀದಿಸಿದವರು ನಷ್ಟ ಅನುಭವಿಸುವಂತಾಗಿದೆ. ಮತ್ತೊಂದೆಡೆ, ಹೊಸದಾಗಿ ಹೂಡಿಕೆ ಮಾಡಲು ಬಯಸುವವರಿಗೆ ಈಗಿನ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ ಸಿಕ್ಕಿದೆ.
ಆದರೆ, ಚಿನ್ನದ ಬೆಲೆ ಮತ್ತೆ ಹಿಂದಿನ ದಾಖಲೆಯ ಮಟ್ಟ ತಲುಪಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯ. ಹಾಗಾದರೆ, ಈಗಲೇ ಚಿನ್ನ ಖರೀದಿಸುವುದು ಸೂಕ್ತವೇ? ಅಥವಾ ಬೆಲೆ ಮತ್ತಷ್ಟು ಇಳಿಕೆಯಾಗುವವರೆಗೆ ಕಾಯಬೇಕೇ ಎಂಬ ಪ್ರಶ್ನೆ ಹೂಡಿಕೆದಾರರನ್ನು ಕಾಡುತ್ತಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ದತ್ತಾಂಶದ ಪ್ರಕಾರ ಹೇಳುವುದಾದರೆ, ಜನವರಿ 29, 2026ರಂದು 10 ಗ್ರಾಂ ಚಿನ್ನದ ಬೆಲೆ ₹1,75,231ಕ್ಕೆ ತಲುಪಿತ್ತು. ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿತ್ತು. ಇನ್ನು ಕೆಲವು ತಿಂಗಳಲ್ಲೇ ಎರಡು ಲಕ್ಷ ರೂಪಾಯಿಗೆ ದಾಟಬಹುದು ಎಂದು ಹೇಳಲಾಗಿತ್ತು. ಇದರಿಂದಾಗಿ ಚಿನ್ನದ ಬೆಲೆ ಏರಿಕೆ ನಡುವೆಯೂ ಜನರು ಕಳೆದ ಜನೆವರಿಯಲ್ಲಿ ಬೆಲೆ ಏರಿಕೆ ಲೆಕ್ಕಿಸದೆ ಮುಗಿಬಿದ್ದು ಚಿನ್ನ ಖರೀದಿಸಿದ್ದರು. ಆದರೆ ಅವರ ಲೆಕ್ಕಾಚಾರ ಈಗ ತಲೆಕೆಳಗಾಗಿದೆ, ಚಿನ್ನದ ಬೆಲೆ ಹೆಚ್ಚುವ ಬದಲು ಇದೀಗ ದಿಢೀರ್ ಇಳಿಕೆಯಾಗಿದೆ. ಅಕ್ಟೋಬರ್ 27ರಂದು 10 ಗ್ರಾಂ ಚಿನ್ನದ ಬೆಲೆ ₹1,40,664ಕ್ಕೆ ಇಳಿದಿದೆ. ಜನವರಿ ಬೆಲೆಗೆ ಹೋಲಿಸಿದರೆ ಇದು ಸುಮಾರು ಶೇ.20ರಷ್ಟು ಕಡಿಮೆಯಾಗಿದೆ.
ಭಾರತೀಯ ಬೆಳ್ಳಿ ಮತ್ತು ಆಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಅವರ ಪ್ರಕಾರ, ಚಿನ್ನದ ಬೆಲೆ ಇಳಿಕೆಗೆ ಹಲವು ಕಾರಣಗಳಿವೆ. ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಏರಿಕೆ, ಅಮೆರಿಕದ 10 ವರ್ಷಗಳ ಬಾಂಡ್ ಇಳುವರಿಯ ಹೆಚ್ಚಳ, ಕೇಂದ್ರ ಬ್ಯಾಂಕ್‌ಗಳ ಚಿನ್ನದ ಖರೀದಿಯಲ್ಲಿ ಇಳಿಕೆ ಹಾಗೂ ಕಚ್ಚಾ ತೈಲದ ಬೆಲೆ ಹೆಚ್ಚಳ ಪ್ರಮುಖ ಕಾರಣಗಳಾಗಿವೆ.
ಚಿನ್ನದ ಬೆಲೆ ಈಗ ಇಳಿಕೆಯಾಗಿರಬಹುದು. ಆದರೆ ಇದೇ ಸ್ಥಿತಿ ಯಾವಾಗಲೂ ಇರುತ್ತದೆ ಎಂದಲ್ಲ, ಮುಂದಿನ ದಿನಗಳಲ್ಲಿ ಮತ್ತೆ ಬೆಲೆ ಹೆಚ್ಚಳವಾಗಬಹುದು ಅಥವಾ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯೂ ಬರಬಹುದು. ಆದರೆ ಅದು ಬೇಗನೇ ಬೆಲೆ ಏರಿಕೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಹೂಡಿಕೆದಾರರು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಕಾಯುವುದು ಒಳ್ಳೆಯದು. ಆದರೆ ಈಗಿನ ಚಿನ್ನದ ಬೆಲೆ ಕುಸಿತವಾಗಿರುವುದು ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಉತ್ತಮ ಅವಕಾಶ ಸಿಕ್ಕಿರುವುದಂತೂ ಹೌದು.
2026ರ ಜನೆವರಿಯಿಂದ ಇಲ್ಲಿವರೆಗೆ ಪ್ರತಿ ತಿಂಗಳು ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಪ್ರತಿ ತಿಂಗಳ ಗರಿಷ್ಠ ಮತ್ತು ಕನಿಷ್ಠ ಬೆಲೆಯ ವಿವರ ಇಲ್ಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.