ಯೂಟ್ಯೂಬ್ ಚಾನೆಲ್ ಆಗಿ ಸ್ಟಾರ್ಟ್ ಆಗಿದ್ದ ಈ ಕಂಪನಿಯ ಈಗಿನ ಮೌಲ್ಯ 25 ಸಾವಿರ ಕೋಟಿ!
ಮುಂಬೈನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಗೌರವ್ ಮುಂಜಾಲ್, 2010ರಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ಅನ್ನು ಹೇಗೆ ತಯಾರು ಮಾಡುತ್ತಾರೆ ಎನ್ನುವುದರ ಕುರಿತು ಯೂಟ್ಯೂಬ್ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದರು.
ನವದೆಹಲಿ (ಮಾ.4): ದೇಶದ ಸ್ಟಾರ್ಟ್‌ಅಪ್‌ಗಳ ವಿಚಾರಕ್ಕೆ ಬಂದಾಗ ಯಶಸ್ಸಿನ ಸಾಕಷ್ಟು ಕಥೆಗಳು ನಮ್ಮ ಮುಂದೆ ಬರುತ್ತದೆ. ಬೆಂಗಳೂರು ಸ್ಟಾರ್ಟ್‌ಅಪ್‌ಗಳ ಹಬ್ ಆಗಿರುವ ಹಿಂದೆ ಸಾಕಷ್ಟು ಕಾರಣಗಳಿವೆ. ಬೆಂಗಳೂರಿನ ಅಂಥದ್ದೇ ಒಂದು ಸ್ಟಾರ್ಟ್‌ಅಪ್ ಕಂಪನಿ ಇಂದು ಅಂದಾಜು 3.4 ಬಿಲಿಯನ್ ಡಾಲರ್ ಅಂದರೆ, 25 ಸಾವಿರ ಕೋಟಿ ರೂಪಾಯಿಯ ಸಾಮ್ರಾಜ್ಯವನ್ನು ಕಟ್ಟಿದೆ ಎಂದರೆ ಅಚ್ಚರಿಯಾಗದೇ ಇರದು. ಹೌದು ಅನ್ ಅಕಾಡೆಮಿ ಎನ್ನುವ ಕಂಪನಿಯ ಯಶಸ್ಸಿನ ಕಥೆ ಇದು. ಇಂದು ವಿಶ್ವದ ಅತೀದೊಡ್ಡ ಎಜುಟೆಕ್ ಕಂಪನಿಗಳಲ್ಲಿ ಇದು ಒಂದಾಗಿದೆ. 2022ರಲ್ಲಿ ಇದರ ಮೌಲ್ಯ ಬರೋಬ್ಬರಿ 25 ಸಾವಿರ ಕೋಟಿ ರೂಪಾಯಿ. ಈ ಸಾಮ್ರಾಜ್ಯದ ಮೂಲ ಹುಡುಕುತ್ತಾ ಹೋದರೆ ಬಂದು ನಿಲ್ಲವುದು ಒಂದು ಯೂಟ್ಯೂಬ್ ಚಾನೆಲ್‌ನ ಕಡೆಗೆ. ಈ ಯೂಟ್ಯೂಬ್ ಚಾನೆಲ್‌ಅನ್ನು ಆರಂಭ ಮಾಡಿದ್ದು ಗೌರಮ್ ಮುಂಜಾಲ್ ಎನ್ನುವ ಇಂಜಿನಿಯರಿಂಗ್ ಪದವೀಧರ. ಇಂದು ಗೌರವ್ ಮುಂಜಾಲ್ ಅನ್‌ಅಕಾಡೆಮಿ ಕಂಪನಿಯ ಮುಖ್ಯ ವ್ಯವಸ್ಥಾಪಕ ಅಧಿಕಾರಿ. ಇವರ ಈ ಸಾಹಸಕ್ಕೆ ಕೈಜೋಡಿಸಿದ್ದ ಡಾ.ರೋಮನ್ ಸೈನಿ. ಮಾಜಿ ಐಎಎಸ್ ಅಧಿಕಾರಿಯೂ ಆಗಿರುವ ಸೈನಿ, ವೈದ್ಯರೂ ಕೂಡ ಹೌದು.
ಮುಂಬೈನಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದ ದಿನಗಳವು. 2010ರಲ್ಲಿ ಗೌರವ್ ಮುಂಜಾಲ್ ಕಂಪ್ಯೂಟರ್ ಗ್ರಾಫಿಕ್ಸ್‌ಗಳನ್ನು ಮಾಡೋದು ಹೇಗೆ ಎನ್ನುವುದರ ಕುರುತು ಯೂಟ್ಯೂಬ್ ವಿಡಿಯೋವೊಂದನ್ನು ತಮ್ಮ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಈ ಚಾನೆಲ್‌ನ ಹೆಸರನ್ನು ಅನ್‌ಅಕಾಡೆಮಿ ಎಂದು ಬದಲಾಯಿಸಿದ್ದರು. ಆರಂಭದಲ್ಲಿ ತಮ್ಮ ಸ್ನೇಹಿತರಿಗೆ ಈ ವಿಡಿಯೋಗಳನ್ನು ಇವರು ಕಳಿಸುತ್ತಿದ್ದರು. ಗೌರಮ್ ಮುಂಜಾಲ್ ಅವರ ಪ್ರಯತ್ನಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳನ್ನು ಅವರು ನೀಡುತ್ತಿದ್ದರು. ಪದವಿ ಮುಗಿಸಿ ಡೈರೆಕ್ಟಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇರಿದ ಮೇಲೂ ಈ ವಿಡಿಯೋಗಳನ್ನು ಮಾಡುತ್ತಲೇ ಇದ್ದರು. ಅವರ ಮೊದಲ ವಾಣಿಜ್ಯ ಯಶಸ್ಸು ಫ್ಲಾಟ್ ಎನ್ನುವ ಕಂಪನಿಯ ಮೂಲಕ ಬಂದಿತ್ತು. ಇದನ್ನು ಆರಂಭ ಮಾಡಿದ ಒಂದು ವರ್ಷದಲ್ಲಿ ಅವರು ಮಾರಾಟ ಮಾಡಿದ್ದರು. ಆದರೆ, ಒಂದು ಕಂಪನಿಯನ್ನು ಕಟ್ಟೋದು ಹೇಗೆ ಎನ್ನುವ ಆಳ-ಾಗಲ ಅವರಿಗೆ ಅದಾಗಲೇ ತಿಳಿದುಹೋಗಿತ್ತು.
ಬಳಿಕ ಗೌರವ್ ಮುಂಜಾಲ್, ರೋಮನ್ ಸೈನಿ ಅವರ ಸಂಪರ್ಕಕ್ಕೆ ಬಂದಿದ್ದರು. ರೋಮನ್ ಸೈನಿ ಆಗ, ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡುವುದು ಹೇಗೆ ಎನ್ನುವ ವಿಚಾರದಲ್ಲಿ ತರಗತಿಗಳನ್ನು ನೀಡುತ್ತಿದ್ದರು. ಸೈನಿ ಮೂಲತಃ ವೈದ್ಯ. ಬಳಿಕ ಐಎಎಸ್ ಪರೀಕ್ಷೆಯನ್ನೂ ಪಾಸ್ ಮಾಡಿದರೂ, 2015ರಲ್ಲಿ ತಮ್ಮ ಕೆಲಸವನ್ನು ತೊರೆದರು. ಬಳಿಕ ಸೋರ್ಟಿಂಗ್ ಹ್ಯಾಟ್ ಟೆಕ್ನಾಲಜೀಸ್ ಎನ್ನುವ ಕಂಪನಿಯನ್ನು ಕಟ್ಟಿದ್ದರು. ಇದೇ ಕಂಪನಿ ಅನ್‌ಅಕಾಡೆಮಿಯ ಮಾತೃಸಂಸ್ಥೆಯಾಗಿದೆ. ಈ ಹಂತದಲ್ಲಿ ಇವರಿಗೆ ಮೂರನೇ ಸಹ-ಸಂಸ್ಥಾಪಕ ಹೆಮೇಶ್ ಸಿಂಗ್ ಜೊತೆಯಾಗಿದ್ದರು.
ಹಂತ ಹಂತವಾಗಿ ಅತ್ಯಂತ ಜೋಪಾನವಾಗಿ ಈ ಮೂವರು ಎಜುಟೆಕ್ ಕಂಪನಿಯ ಕನಸನ್ನು ನನಸು ಮಾಡಿದ್ದರು. ಕಂಪನಿ ಹೆಸರು ಗಳಿಸುತ್ತಿದ್ದಂತೆ ಅಗಾಧವಾದ ಹೂಡಿಕೆ ಕೂಡ ಹರಿದು ಬಂತು. ಇದರೊಂದಿಗೆ ಕಂಪನಿಯ ಮೌಲ್ಯದಲ್ಲೂ ಕೂಡ ವಿಪರೀತ ಏರಿಕೆಯಾಯಿತು. ಇಂದು ಅವರು ಅನ್‌ಅಕಾಡೆಮಿಯ ಯೂಟ್ಯೂಬ್ ಚಾನೆಲ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾವಿರಾರು ಶಿಕ್ಷಕರನ್ನು ಹೊಂದಿದ್ದಾರೆ, ಲಕ್ಷಾಂತರ ಜನರಿಗೆ ವಿವಿಧ ವಿಷಯಗಳ ಕುರಿತು ಬೋಧನೆ ನೀಡುತ್ತಾರೆ. ಅವರು ಪ್ರೀಮಿಯಂ ಸೇವೆಗಳು ಮತ್ತು ವಿಷಯವನ್ನು ಸಹ ಹೊಂದಿದ್ದಾರೆ.
IPL ಗ್ರೌಂಡಲ್ಲಿ Unacademy board: ಇದರ ಹಿಂದಿದೆ ಯಶಸ್ಸಿನ ಕಥೆ...
ಇಂದು ಈ ಕಂಪನಿಯು ಮೇಳೆ ಹಣದ ಹರಿವು ಅಪಾರವಾಗಿ ಹೆಚ್ಚಾಗುತ್ತಿದೆ. ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ, ನೆಕ್ಸಸ್ ವೆಂಚರ್ ಪಾಲುದಾರರು, ಸೈಫ್ ಪಾರ್ಟ್ನರ್ ಮತ್ತು ಬ್ಲೂಮ್ ವೆಂಚರ್ಸ್ ಕಂಪನಿಗಳನ್ನು ತಮ್ಮ ಹೂಡಿಕೆದಾರರನ್ನಾಗಿ ಹೊಂದಿದೆ. ಇನ್ನು ಗೌರಮ್ ಮುಂಜಾಲ್ ಒಬ್ಬ ಸರಣಿ ಹೂಡಿಕೆದಾರರ. ಈಗಾಗಲೇ 37 ಇತರ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದರೊಂದಿಗೆ ಫ್ಲಾಟ್‌ಚಾಟ್ ಎನ್ನುವ ಕಂಪನಿಯ ಸಂಸ್ಥಾಪಕರೂ ಆಗಿದ್ದಾರೆ. 2022 ರಲ್ಲಿ ಅನಾಕಾಡೆಮಿಯ ಸಿಇಒ ಆಗಿ ಮುಂಜಾಲ್ ಅವರ ಸಂಬಳ 1.58 ಕೋಟಿ ರೂ. ಸೈನಿ ಸಂಭಾವನೆ 88 ಲಕ್ಷ ರೂ., ಸಿಂಗ್ ಸಂಭಾವನೆ 1.19 ಕೋಟಿ ಆಗಿದೆ.
ಐಪಿಎಲ್ ಪ್ರಾಯೋಜಕತ್ವಕ್ಕೆ ಬೆಂಗಳೂರು ಕಂಪನಿ ಅರ್ಜಿ..!
ಸೈನಿ ಅವರ ಜೀವನ ಕೂಡ ಕುತೂಹಲಕಾರಿ. ಅವರು 18 ನೇ ವಯಸ್ಸಿನಲ್ಲಿ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. 22 ನೇ ವಯಸ್ಸಿನಲ್ಲಿ ಅವರು ಯುಪಿಎಸ್‌ಸಿ ಕ್ರ್ಯಾಕ್ ಮಾಡಿದದ್ದರು. ಅವರನ್ನು ಮಧ್ಯಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿತ್ತು. ಆದರೆ ಉದ್ಯಮ ಅವರ ಆಸಕ್ತಿಯಾಗಿತ್ತು. 2015 ರಲ್ಲಿ ಐಎಎಸ್ ತೊರೆದು ಅನ್‌ಅಕಾಡೆಮಿ ಸ್ಥಾಪನೆ ಮಾಡಿದ್ದರು. ಇಂದು ಈ ಪ್ಲಾಟ್‌ಫಾರ್ಮ್ 50 ಮಿಲಿಯನ್ ಬಳಕೆದಾರರನ್ನು ಹೊಂದಿದೆ.