ಭಾರತದ ಹೆಮ್ಮೆಯ ಟಾಟಾ ಗ್ರೂಪ್ ಮಾರುಕಟ್ಟೆ ಮೌಲ್ಯದಲ್ಲಿ ನೆರೆಯ ಪಾಕಿಸ್ತಾನವನ್ನೇ ಮೀರಿಸಿ ಸಾಧನೆ ಮಾಡಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಟಾಟಾ ಸಮೂಹ ಕಂಪನಿಗಳ ಮಾರುಕಟ್ಟೆ ಮೌಲ್ಯ 30.3 ಲಕ್ಷ ಕೋಟಿ ರು.ಗೆ ತಲುಪಿದೆ. ಆರ್ಥಿಕ ಸಂಕಷ್ಟ, ಸಾಲಬಾಧೆಯಿಂದ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದ ಜಿಡಿಪಿ ಮೌಲ್ಯ ಕೇವಲ 28 ಲಕ್ಷ ಕೋಟಿ ರು.ನಷ್ಟು ಮಾತ್ರವೇ ಇದೆ.
ನವದೆಹಲಿ: ಉಪ್ಪಿನಿಂದ ಸಾಫ್ಟ್‌ವೇರ್‌ವರೆಗೆ ನೂರಾರು ರೀತಿಯ ಉತ್ಪನ್ನಗಳನ್ನು ತಯಾರಿಸುವ ಭಾರತದ ಹೆಮ್ಮೆಯ ಟಾಟಾ ಗ್ರೂಪ್ ಮಾರುಕಟ್ಟೆ ಮೌಲ್ಯದಲ್ಲಿ ನೆರೆಯ ಪಾಕಿಸ್ತಾನವನ್ನೇ ಮೀರಿಸಿ ಸಾಧನೆ ಮಾಡಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಟಾಟಾ ಸಮೂಹ ಕಂಪನಿಗಳ ಮಾರುಕಟ್ಟೆ ಮೌಲ್ಯ 30.3 ಲಕ್ಷ ಕೋಟಿ ರು.ಗೆ ತಲುಪಿದೆ. ಆರ್ಥಿಕ ಸಂಕಷ್ಟ, ಸಾಲಬಾಧೆಯಿಂದ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದ ಜಿಡಿಪಿ ಮೌಲ್ಯ ಕೇವಲ 28 ಲಕ್ಷ ಕೋಟಿ ರು.ನಷ್ಟು ಮಾತ್ರವೇ ಇದೆ.
ಟಾಟಾ ಗ್ರೂಪ್‌ಗೆ ಸೇರಿದ ಸಾಫ್ಟ್‌ವೇರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 14 ಲಕ್ಷ ಕೋಟಿ ರು. ಮೌಲ್ಯ ಹೊಂದಿದ್ದು, ಇದು ಪಾಕಿಸ್ತಾನದ ಆರ್ಥಿಕತೆಯ ಅರ್ಧದಷ್ಟಾಗುತ್ತದೆ ಎಂಬುದು ಗಮನಾರ್ಹ. ರಿಲಯನ್ಸ್ ನಂತರ ದೇಶದ 2ನೇ ಅತಿದೊಡ್ಡ ಕಂಪನಿ ಎಂಬ ಹಿರಿಮೆಯನ್ನು ಟಿಸಿಎಸ್ ಹೊಂದಿದೆ. ಫೆಬ್ರವರಿ ಆರಂಭದಲ್ಲಿ ಟಾಟಾ ಸಮೂಹ ಕಂಪನಿಗಳ ಮಾರುಕಟ್ಟೆ ಮೌಲ್ಯ 30 ಲಕ್ಷ ಕೋಟಿ ರು.ಗೆ ತಲುಪಿತು. ತನ್ಮೂಲಕ ಆ ಸಾಧನೆ ಮಾಡಿದ ದೇಶದ ಮೊದಲ ಕಂಪನಿ ಎಂಬ ದಾಖಲೆಯನ್ನು ನಿರ್ಮಿಸಿತು.
ಎನ್.ಚಂದ್ರಶೇಖರನ್ ನೇತೃತ್ವದ ಟಾಟಾ ಸಮೂಹ 2023ನೇ ಇಸ್ವಿಯೊಂದರಲ್ಲೇ ತನ್ನ ಮಾರುಕಟ್ಟೆ ಬಂಡವಾಳಕ್ಕೆ 6.13 ಲಕ್ಷ ರು.ಗಳನ್ನು ಸೇರ್ಪಡೆ ಮಾಡಿದೆ. ಟಿಸಿಎಸ್, ಟಾಟಾ ಮೋಟರ್ಸ್, ಟಾಟಾ ಪವರ್ ಹಾಗೂ ಇಂಡಿಯನ್ ಹೋಟೆಲ್ಸ್ ಕಂಪನಿಯ ಷೇರುಗಳ ಬೆಲೆ ಹೆಚ್ಚಾದ್ದರಿಂದ ಇದು ಸಾಧ್ಯವಾಗಿದೆ. ಮತ್ತೊಂದೆಡೆ, ಪಾಕಿಸ್ತಾನ ಕಳೆದ ಹಲವಾರು ವರ್ಷಗಳಿಂದ ಸಾಲ, ವಿದೇಶಿ ವಿನಿಮಯ ಕುಸಿತ ಹಾಗೂ ರಾಜಕೀಯ ಅಸ್ಥಿರತೆಯಿಂದ ನಲುಗಿದೆ. 2011ರ ಬಳಿಕ ಪಾಕಿಸ್ತಾನದ ಬಾಹ್ಯ ಸಾಲದ ಪ್ರಮಾಣ ದ್ವಿಗುಣಗೊಂಡಿದೆ. ಆಂತರಿಕ ಸಾಲದ ಪ್ರಮಾಣ ಆರು ಪಟ್ಟು ಹೆಚ್ಚಳವಾಗಿದೆ.