ಪಾಕಿಸ್ತಾನದ ಜಿಡಿಪಿಯನ್ನು ಐಎಂಎಫ್ 341 ಬಿಲಿಯನ್ ಡಾಲರ್ ಎಂದು ಅಂದಾಜಿಸಿದೆ.ಆದರೆ, ಭಾರತದ ಪ್ರತಿಷ್ಟಿತ ಸಮೂಹ ಸಂಸ್ಥೆಯೊಂದರ ಮಾರುಕಟ್ಟೆ ಮೌಲ್ಯ ಇದಕ್ಕಿಂತಲೂ ಹೆಚ್ಚಿದೆ.
ನವದೆಹಲಿ (ಫೆ.19): ಟಾಟಾ ಗ್ರೂಪ್ ಮಾರುಕಟ್ಟೆ ಮೌಲ್ಯ ಈಗ ಇಡೀ ಪಾಕಿಸ್ತಾನದ ಆರ್ಥಿಕತೆಯನ್ನು ಮೀರಿಸಿದೆ. ಈ ಸಮೂಹ ಸಂಸ್ಥೆಯೊಳಗಿನ ಅನೇಕ ಕಂಪನಿಗಳು ಕಳೆದ ಕೆಲವು ವರ್ಷಗಳಲ್ಲಿ ಭಾರೀ ರಿಟರ್ನ್ಸ್ ಗಳಿಸಿವೆ. ಟಾಟಾ ಗ್ರೂಪ್ ಪ್ರಸಕ್ತ ಮಾರುಕಟ್ಟೆ ಮೌಲ್ಯ 365 ಬಿಲಿಯನ್ ಡಾಲರ್ ಇದ್ದು, ಇದು ಐಎಂಎಫ್ ಅಂದಾಜಿಸಿರುವ ಪಾಕಿಸ್ತಾನದ ಜಿಡಿಪಿಯನ್ನು ಮೀರಿಸಿದೆ. ಐಎಎಫ್ ಪಾಕಿಸ್ತಾನದ ಜಿಡಿಪಿಯನ್ನು 341 ಬಿಲಿಯನ್ ಡಾಲರ್ ಎಂದು ಅಂದಾಜಿಸಿದೆ. ಇದರೊಂದಿಗೆ 170 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಎರಡನೇ ಅತೀದೊಡ್ಡ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಗಾತ್ರ ಪಾಕಿಸ್ತಾನದ ಆರ್ಥಿಕತೆಯ ಅರ್ಧದಷ್ಟಿದೆ.
ಟಾಟಾ ಗ್ರೂಪ್ ಮೌಲ್ಯದಲ್ಲಿ ಹೆಚ್ಚಳ
ಟಾಟಾ ಮೋಟಾರ್ಸ್ ಹಾಗೂ ಟ್ರೆಂಟ್ ಸೇರಿದಂತೆ ಪ್ರಮುಖ ಕಂಪನಿಗಳ ರಿಟರ್ನ್ಸ್ ನಲ್ಲಿ ಭಾರೀ ಹೆಚ್ಚಳವಾಗಿದೆ. ಟೈಟಾನ್, ಟಿಸಿಎಸ್ ಹಾಗೂ ಟಾಟಾ ಪವರ್ ಕೂಡ ಟಾಟಾ ಗ್ರೂಪ್ ಮಾರುಕಟ್ಟೆ ಬಂಡವಾಳ ಏರಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಟಿಆರ್ ಎಫ್, ಟ್ರೆಂಟ್, ಬೆನಾರಸ್ ಹೋಟೆಲ್ಸ್, ಟಾಟಾ ಇನ್ವಿಸ್ಟ್ ಮೆಂಟ್ ಕಾರ್ಪೋರೇಷನ್, ಟಾಟಾ ಮೋಟಾರ್ಸ್, ಅಟೋಮೋಬೈಲ್ ಕಾರ್ಪೋರೇಷನ್ ಆಫ್ ಗೋವಾ ಹಾಗೂ ಆರ್ಟ್ಸನ್ ಇಂಜಿನಿಯರಿಂಗ್ ಸೇರಿದಂತೆ ಕನಿಷ್ಠ ಎಂಟು ಟಾಟಾ ಕಂಪನಿಗಳು ಈ ಅವಧಿಯಲ್ಲಿ ತಮ್ಮ ಆದಾಯದಲ್ಲಿ ದುಪ್ಪಟ್ಟು ಏರಿಕೆಯಾಗಿದೆ.
30 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ದಾಟಿದ ದೇಶದ ಮೊದಲ ಕಂಪನಿ ಎನಿಸಿಕೊಂಡ ಟಾಟಾ ಗ್ರೂಪ್!
ಇನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಭಾರತದ ಎರಡನೇ ಅತೀದೊಡ್ಡ ಕಂಪನಿಯಾಗಿದ್ದು, ಇದರ ಮೌಲ್ಯ 170 ಬಿಲಿಯನ್ ಡಾಲರ್ ಇದೆ. ಇದು ಈಗ ಪಾಕಿಸ್ತಾನದ ಇಡೀ ಆರ್ಥಿಕತೆಯ ಅಂದಾಜು ಅರ್ಧದಷ್ಟಿದೆ. ಇನ್ನು ಟಾಟಾ ಕ್ಯಾಪಿಟಲ್ ಐಪಿಒ ಅನ್ನು ಮುಂದಿನ ವರ್ಷ ಆಯೋಜಿಸುವ ಯೋಜನೆ ಹೊಂದಿದೆ. ಇದರೊಂದಿಗೆ ಅದರ ಮಾರುಕಟ್ಟೆ ಮೌಲ್ಯ 2.7 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ.
ಕುಂಟುತ್ತಿರುವ ಪಾಕಿಸ್ತಾನದ ಆರ್ಥಿಕತೆ
ಇತ್ತ ಟಾಟಾ ಗ್ರೂಪ್ ಆರ್ಥಿಕವಾಗಿ ವಿಜಯ ಪತಾಕೆ ಹಾರಿಸುತ್ತಿದ್ದರೆ ಅತ್ತ ಪಾಕಿಸ್ತಾನದ ಆರ್ಥಿಕತೆ ಹಲವಾರು ಸವಾಲುಗಳ ನಡುವೆ ಹೆಣಗಾಡುತ್ತಿದೆ. 2022ನೇ ಹಣಕಾಸು ಸಾಲಿನಲ್ಲಿ ಶೇ. 6.1 ಹಾಗೂ 2021ನೇ ಸಾಲಿನಲ್ಲಿ ಶೇ.5.8ರಷ್ಟು ಬೆಳವಣಿಗೆ ದಾಖಲಿಸಿದೆ. 2023ನೇ ಹಣಕಾಸು ಸಾಲಿನಲ್ಲಿ ಪಾಕಿಸ್ತಾನದ ಆರ್ಥಿಕತೆ ಸಂಕೋಚಿತಗೊಂಡಿದೆ. ಇದಕ್ಕೆ ಕಾರಣ ಪ್ರವಾಹದಿಂದ ಸೃಷ್ಟಿಯಾದ ಗಣನೀಯ ಪ್ರಮಾಣದ ಹಾನಿ. ಇದರಿಂದ ಆ ರಾಷ್ಟ್ರ ಶತಕೋಟಿ ಡಾಲರ್ ಗಳಷ್ಟು ನಷ್ಟ ಅನುಭವಿಸಿದೆ.
ಇನ್ನು ಪಾಕಿಸ್ತಾನದ ಬಾಹ್ಯ ಸಾಲದ ಹೊರೆ ಕೂಡ ಹೆಚ್ಚಿದೆ. ಇದು 125 ಬಿಲಿಯನ್ ಡಾಲರ್ ತಲುಪಿದೆ. ಇನ್ನು 25 ಬಿಲಿಯನ್ ಡಾಲರ್ ಬಾಹ್ಯ ಸಾಲವನ್ನು ತೀರಿಸಲೇಬೇಕಾದಂತಹ ಸಂಕಷ್ಟಕ್ಕೆ ಕೂಡ ಸಿಲುಕಿದೆ. ಪಾಕಿಸ್ತಾನದ ಜೊತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 3 ಬಿಲಿಯನ್ ಡಾಲರ್ ಕಾರ್ಯಕ್ರಮ ಮಾರ್ಚ್ ನಲ್ಲಿ ಮುಗಿಯಲಿದೆ. ಈ ಕಾರ್ಯಕ್ರಮವನ್ನು ದೇಶದ ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸಲು ಬೆಂಬಲ ನೀಡುವ ನಿರ್ಣಾಯಕ ಮೂಲವಾಗುವಂತೆ ರೂಪಿಸಲಾಗಿತ್ತು. ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ 8 ಬಿಲಿಯನ್ ಡಾಲರ್ ನಲ್ಲಿದ್ದು, ತನ್ನ ಹಣಕಾಸಿನ ಆಯಾಮವನ್ನು ಜಾಗರೂಕತೆಯಿಂದ ಬದಲಾಯಿಸಬೇಕಾದಂತಹ ಅನಿವಾರ್ಯತೆಯಲ್ಲಿ ಸಿಲುಕಿದೆ.
ರತನ್ ಟಾಟಾ ಅವರ 165,00,00,000 ರೂ. ವೆಚ್ಚದ ಪ್ರಾಣಿಗಳ ಆಸ್ಪತ್ರೆ ಕಾರ್ಯಾಚರಣೆಗೆ ಸಿದ್ಧ!
ಟಾಟಾ ಗ್ರೂಪ್ ತನ್ನ ಮಾರುಕಟ್ಟೆ ಬಂಡವಾಳದಲ್ಲಿ ಪ್ರಗತಿ ಕಾಣುವ ಮೂಲಕ ಸಂಭ್ರಮದಲ್ಲಿದ್ದರೆ, ನೆರೆಯ ಪಾಕಿಸ್ತಾನದ ಆರ್ಥಿಕತೆ ಮಾತ್ರ ದಿನೇದಿನೆ ಇಳಿಕೆಯ ಹಾದಿಯಲ್ಲಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆ ಸೇರಿದಂತೆ ಅನೇಕ ಸವಾಲುಗಳು ಆರ್ಥಿಕತೆಯ ಪ್ರಗತಿಗೆ ಅಡ್ಡಲಾಗಿ ನಿಂತಿವೆ. ಹಾಗೆಯೇ ಪ್ರಾಕೃತಿಕ ವಿಕೋಪಗಳು ಕೂಡ ಪಾಕಿಸ್ತಾನದ ಆರ್ಥಿಕತೆಗೆ ಚೇತರಿಸಿಕೊಳ್ಳಲಾಗದಂತಹ ಹೊಡೆತಗಳನ್ನು ನೀಡುತ್ತಲೇ ಇವೆ.