ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳುವ ಭೀತಿಯಿಲ್ಲ,ಕೂತಲ್ಲೇ ತಿಂಗಳಿಗೆ 10 ಸಾವಿರ ಆದಾಯ ಗಳಿಸ್ಬಹುದು!

Published : Feb 19, 2024, 05:26 PM IST
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳುವ ಭೀತಿಯಿಲ್ಲ,ಕೂತಲ್ಲೇ ತಿಂಗಳಿಗೆ 10 ಸಾವಿರ ಆದಾಯ ಗಳಿಸ್ಬಹುದು!

ಸಾರಾಂಶ

ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಸುರಕ್ಷಿತವಾಗಿರುವ ಜೊತೆಗೆ ಪ್ರತಿ ತಿಂಗಳು ಅಂದಾಜು 10 ಸಾವಿರ ರೂ. ತನಕ ಆದಾಯ ಗಳಿಸಬಹುದು. 

Business Desk: ಹೂಡಿಕೆ ಮಾಡುವಾಗ ಕೆಲವರು ಅಧಿಕ ರಿಟರ್ನ್ಸ್ ಗಮನಿಸಿದರೆ, ಬಹುತೇಕರು ರಿಸ್ಕ್ ನೋಡುತ್ತಾರೆ. ತಾವು ಹೂಡಿಕೆ ಮಾಡಿದ ಹಣ ಯಾವುದೇ ಅಪಾಯಕ್ಕೆ ಸಿಲುಕದೆ ಹಿಂತಿರುಗಬೇಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ. ಹೀಗಿರುವಾಗ ರಿಸ್ಕ್ ಇಲ್ಲದ ಹೂಡಿಕೆಯನ್ನು ಹೆಚ್ಚಿನವರು ಗಮನಿಸುತ್ತಾರೆ. ಭಾರತದಲ್ಲಿ ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡಬಹುದಾದಂತಹ ತಾಣವೆಂದರೆ ಅದು ಅಂಚೆ ಕಚೇರಿ. ಹೌದು, ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣಕ್ಕೆ ಯಾವುದೇ ಅಪಾಯವಿಲ್ಲ. ಇಲ್ಲಿ ಮಾಡಿದ ಹೂಡಿಕೆ ಶೇ.100ರಷ್ಟು ಸುರಕ್ಷಿತ. ಇದಕ್ಕೆ ಕಾರಣ ಅಂಚೆ ಕಚೇರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬೆಂಬಲವಿರುತ್ತದೆ. ಹೀಗಾಗಿ ನಮ್ಮ ಹಣಕ್ಕೆ ಸರ್ಕಾರದ ಬೆಂಬಲವಿರುವ ಕಾರಣ ಇಲ್ಲಿ ಕಳೆದುಕೊಳ್ಳುವ ಭಯವಿಲ್ಲ. ಇದೇ ಕಾರಣಕ್ಕೆ ಭಾರತದಲ್ಲಿ ಇಂದಿಗೂ ಅಂಚೆ ಕಚೇರಿ ಹೂಡಿಕೆ ಯೋಜನೆಗಳು ಜನರ ಮೆಚ್ಚುಗೆ, ನಂಬಿಕೆ ಗಳಿಸಿವೆ. ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ತಿಂಗಳಿಗೆ ಆದಾಯ ನೀಡುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸೋರಿಗೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಅತ್ಯುತ್ತಮ ಆಯ್ಕೆ. 

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್)  ಸರ್ಕಾರದ ಬೆಂಬಲ ಹೊಂದಿರುವ ಕಾರಣ ಇದರಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ಸ್ ಕೂಡ ಸಿಗುತ್ತದೆ. ಅಲ್ಲದೆ, ನಿವೃತ್ತಿ ಬಳಿಕ ಪ್ರತಿ ತಿಂಗಳು ನಿಗದಿತ ಆದಾಯ ಕೂಡ ಸಿಗುತ್ತದೆ. ಇನ್ನು ನೀವು ನಿಮ್ಮ ಸಂಗಾತಿಯ ಜೊತೆಗೆ ಪಿಒಎಂಐಎಸ್ ಜಂಟಿ ಖಾತೆ ಕೂಡ ತೆರೆಯಬಹುದು. ಇನ್ನು ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ನಿವೃತ್ತಿ ಬಳಿಕ ಪ್ರತಿ ತಿಂಗಳು ನಿಶ್ಚಿತ ಆದಾಯ ಗಳಿಸಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಶೇ.7.4ರಷ್ಟು ಬಡ್ಡಿದರವಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 5,000ರೂ. ನಿಂದ  9,250ರೂ. ತನಕ ನಿಶ್ಚಿತ ಆದಾಯ ಗಳಿಸಬಹುದು. 

ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಬಂಪರ್ ಲಾಭ; ಮಾರ್ಚ್ 31ರವರೆಗೆ ಸಿಗೋ ಬಡ್ಡಿ ಎಷ್ಟು ಗೊತ್ತಾ?

ಪ್ರತಿ ತಿಂಗಳು 9,250ರೂ.  ಪಡೆಯೋದು ಹೇಗೆ?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ (ಪಿಒಎಂಐಎಸ್) ನೀವು 9 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು  5,550ರೂ. ಗಳಿಸಬಹುದು. ನೀವು ಸಂಗಾತಿ ಜೊತೆಗೆ ಸೇರಿ 15ಲಕ್ಷ ರೂ. ಹೂಡಿಕೆ ಮಾಡಿದರೆ ನಿಮಗೆ ತಿಂಗಳಿಗೆ  9,250ರೂ. ಬಡ್ಡಿ ಸಿಗಲಿದೆ. ಇನ್ನು ನೀವು ಹೂಡಿಕೆ ಮಾಡಿದ ಬರೀ ಒಂದು ತಿಂಗಳ ಬಳಿಕ ಹಣ ಪಡೆಯಲು ಪ್ರಾರಂಭಿಸಬಹುದು ಕೂಡ. ಇನ್ನು ಮೆಚ್ಯೂರಿಟಿ ಅವಧಿ ಮುಗಿದ ಬಳಿಕ ಪ್ರಧಾನ ಮೊತ್ತವನ್ನು ವಿತ್ ಡ್ರಾ ಮಾಡಬಹುದು ಕೂಡ.

ಯಾರು ಈ ಖಾತೆ ತೆರೆಯಬಹುದು?
ವಯಸ್ಕರು, 10 ವರ್ಷದ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.  ಮಕ್ಕಳಿಗೆ 18 ವರ್ಷ ತುಂಬಿದ ಮೇಲೆ ಅವರ ಹೆಸರಿಗೆ ವರ್ಗ ಮಾಡಬಹುದು. 

ಎಂಐಎಸ್ ಖಾತೆ ತೆರೆಯೋದು ಹೇಗೆ?
ಸಮೀಪದ ಅಂಚೆ ಕಚೇರಿಗೆ ತೆರಳಿ, ಉಳಿತಾಯ ಖಾತೆ ತೆರೆಯಿರಿ. ಆ ಬಳಿಕ ಎಂಐಎಸ್ ಖಾತೆ ತೆರೆಯಲು ಅರ್ಜಿ ಭರ್ತಿ ಮಾಡಿ. ನಂತರ ಫೋಟೋ ಜೊತೆಗೆ ಗುರುತು ದೃಢೀಕರಣ ಹಾಗೂ ಕೆವೈಸಿ ದಾಖಲೆ ನೀಡಿ. ಆ ಬಳಿಕ ಹಣ ನೀಡಿದ್ರೆ ಎಂಐಎಸ್ ಖಾತೆ ಚಾಲ್ತಿಗೆ ಬರುತ್ತದೆ. ಅಂಚೆ ಕಚೇರಿಯಲ್ಲಿ ಯಾವುದೇ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೂ ಅವರದ್ದು ಉಳಿತಾಯ ಖಾತೆ ಇರುತ್ತದೆ. ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದರೂ ಅದರ ಬಡ್ಡಿ ಉಳಿತಾಯ ಖಾತೆಗೆ ಜಮೆ ಆಗುತ್ತದೆ. 

ಗರಿಷ್ಠ ಠೇವಣಿ ಎಷ್ಟು?
ಈ ಯೋಜನೆಯ ಠೇವಣಿ ಮಿತಿಯನ್ನು ಕಳೆದ ವರ್ಷದ ಬಜೆಟ್ ನಲ್ಲಿ ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದೇ ಖಾತೆ ಹೊಂದಿರೋರಿಗೆ ಗರಿಷ್ಠ ಠೇವಣಿ ಮಿತಿಯನ್ನು 4.5ಲಕ್ಷ ರೂ.ನಿಂದ  9ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಜಂಟಿ ಖಾತೆಗೆ 9ಲಕ್ಷ ರೂನಿಂದ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. 

ಹೆಣ್ಣು ಮಕ್ಕಳ ಭದ್ರ ಭವಿಷ್ಯಕ್ಕಾಗಿ ಇಲ್ಲಿಯೇ ಹೂಡಿಕೆ ಮಾಡಿ

ಮೆಚ್ಯುರಿಟಿ ಅವಧಿ ಎಷ್ಟು?
ಎಂಇಎಸ್ ಖಾತೆಯನ್ನು ತೆರೆದ ಐದು ವರ್ಷಗಳ ಬಳಿಕ ಕ್ಲೋಸ್ ಮಾಡಬಹುದದಾಗಿದೆ. ಸಂಬಂಧಪಟ್ಟ ಅಂಚೆ ಕಚೇರಿಗೆ ಅಗತ್ಯ ಅರ್ಜಿ ಹಾಗೂ ಪಾಸ್ ಪುಸ್ತಕ ಸಲ್ಲಿಕೆ ಮಾಡುವ ಮೂಲಕ ಖಾತೆಯನ್ನು ಕ್ಲೋಸ್ ಮಾಡಬಹುದು. ಒಂದು ವೇಳೆ ಖಾತೆ ಮೆಚ್ಯುರ್ ಆಗುವ ಮುನ್ನ ಖಾತೆದಾರ ಸಾವನ್ನಪ್ಪಿದರೆ ಆತ ಅಥವಾ ಆಕೆಯ ನಾಮಿನಿ ಅಥವಾ ಕಾನೂನುಬದ್ದ ಉತ್ತರಾಧಿಕಾರಿಗೆ ಹಣವನ್ನು ರೀಫಂಡ್ ಮಾಡಲಾಗುವುದು. ರೀಫಂಡ್ ಮಾಡುವುದಕ್ಕೆ ಒಂದು ತಿಂಗಳು ಬಾಕಿಯಿರುವ ತನಕ ಬಡ್ಡಿ ನೀಡಲಾಗುತ್ತದೆ. ಇನ್ನು ಅವಧಿಗೂ ಮುನ್ನ ಖಾತೆಯನ್ನು ಕ್ಲೋಸ್ ಮಾಡುವ ಅವಕಾಶ ಕೂಡ ನೀಡಲಾಗಿದೆ. 

ಖಾತೆ ತೆರೆದ ಒಂದು ವರ್ಷದ ಬಳಿಕ ನಿಮ್ಮ ಹೂಡಿಕೆಯನ್ನು ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಒಂದು ವೇಳೆ ನೀವು ಮೊದಲ ಮೂರು ವರ್ಷಗಳೊಳಗೆ ಹಣ ವಿತ್ ಡ್ರಾ ಮಾಡಲು ಬಯಸಿದರೆ ಠೇವಣಿ ಮೊತ್ತದ ಮೇಲೆ ಶೇ.2ರಷ್ಟು ದಂಡ ವಿಧಿಸಲಾಗುತ್ತದೆ. ಇನ್ನು ಮೂರು ವರ್ಷಗಳ ಬಳಿಕ ನೀವು ನಿಮ್ಮ ಹಣವನ್ನು ಕೇವಲ ಶೇ.1ರಷ್ಟು ಕಡಿತದ ಜೊತೆಗೆ ವಿತ್ ಡ್ರಾ ಮಾಡಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!