ಸೆಪ್ಟೆಂಬರ್‌ನಲ್ಲಿ ಚೇತರಿಕೆ ಕಂಡ ದೇಶದ ಆರ್ಥಿಕತೆ

By Kannadaprabha NewsFirst Published Oct 2, 2020, 8:26 AM IST
Highlights

ದೇಶದ ಆರ್ಥಿಕತೆಯ ಬೆನ್ನಲುಬಾದ ಉತ್ಪಾದನಾ ವಲಯ ಸೆಪ್ಟೆಂಬರ್‌ನಲ್ಲಿ 8.5 ವರ್ಷದ ದಾಖಲೆ ಪ್ರಗತಿ ಸಾಧಿಸಿದೆ. ಕೊರೋನಾ ಲಾಕ್‌ಡೌನ್‌ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಆರ್ಡರ್‌ಗಳು ಬರುತ್ತಿದ್ದು, ಉತ್ಪಾದನೆ ಹೆಚ್ಚಳವಾಗಿರುವುದರ ದ್ಯೋತಕ ಇದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಅ.02): ಕೊರೋನಾ ಮತ್ತು ಲಾಕ್ಡೌನ್‌ನಿಂದಾಗಿ ಕಳೆದ 6 ತಿಂಗಳಿನಿಂದ ಸಂಪೂರ್ಣ ಕುಸಿತವಾಗಿದ್ದ ದೇಶದ ಆರ್ಥಿಕತೆ ಮತ್ತೆ ಹಾದಿಗೆ ಮರಳಿರುವ ಶುಭ ಸುದ್ದಿ ಹೊರಬಿದ್ದಿದೆ. 

ವಿದ್ಯುತ್‌, ಇಂಧನ ಬಳಕೆ, ಜಿಎಸ್‌ಟಿ ಸಂಗ್ರಹ, ವಾಹನ ಮಾರಾಟ, ರೈಲ್ವೆ ಆದಾಯ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್‌ ತಿಂಗಳ ದಾಖಲೆಗಳು ಗುರುವಾರ ಪ್ರಕಟವಾಗಿದ್ದು, ಪರಿಸ್ಥಿತಿ ಸಹಜಸ್ಥಿತಿಗೆ ಮರಳಿರುವ ಮತ್ತು ಕೆಲವೊಂದು ವಲಯಗಳು ಕೋವಿಡ್‌ ಪೂರ್ವ ಅವಧಿಗಿಂತಲೂ ಉತ್ತಮ ಸಾಧನೆ ಮಾಡಿರುವ ಅಂಕಿ ಅಂಶಗಳು ಹೊರಬಿದ್ದಿವೆ.

ದೇಶದ ಆರ್ಥಿಕತೆಯ ಬೆನ್ನಲುಬಾದ ಉತ್ಪಾದನಾ ವಲಯ ಸೆಪ್ಟೆಂಬರ್‌ನಲ್ಲಿ 8.5 ವರ್ಷದ ದಾಖಲೆ ಪ್ರಗತಿ ಸಾಧಿಸಿದೆ. ಕೊರೋನಾ ಲಾಕ್‌ಡೌನ್‌ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಆರ್ಡರ್‌ಗಳು ಬರುತ್ತಿದ್ದು, ಉತ್ಪಾದನೆ ಹೆಚ್ಚಳವಾಗಿರುವುದರ ದ್ಯೋತಕ ಇದಾಗಿದೆ. ಉತ್ಪಾದನಾ ವಲಯದ ಸೂಚ್ಯಂಕ 50ಕ್ಕಿಂತ ಕಡಿಮೆ ಇದ್ದರೆ ಕುಸಿತ, 50ರ ಮೇಲಿದ್ದರೆ ವಿಸ್ತರಣೆ ಎಂದು ಪರಿಗಣಿಸಲಾಗುತ್ತದೆ. ಸತತ 32 ತಿಂಗಳ ಬಳಿಕ ಇದು ಏಪ್ರಿಲ್‌ನಲ್ಲಿ 50ಕ್ಕಿಂತ ಕೆಳಕ್ಕೆ ಜಾರಿತ್ತು. ಆಗಸ್ಟ್‌ನಲ್ಲಿ 52ಕ್ಕೆ ಏರಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ 56.8ಕ್ಕೆ ಹೆಚ್ಚಳವಾಗಿದೆ. 2012ರ ಜನವರಿ ಬಳಿಕ ಈ ಮಟ್ಟದ ಪ್ರಗತಿ ಇದೇ ಮೊದಲಾಗಿದೆ.

ಜಿಎಸ್ಟಿ ಹೆಚ್ಚಳ: ಸೆಪ್ಟೆಂಬರ್‌ ತಿಂಗಳಿನಲ್ಲಿ 95,480 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಅತಿ ಹೆಚ್ಚಿನ ಜಿಎಸ್‌ಟಿ ಸಂಗ್ರಹ ಎನಿಸಿಕೊಂಡಿದೆ. ಅಲ್ಲದೇ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.4ರಷ್ಟು ಹೆಚ್ಚಳಗೊಂಡಿದೆ.

60 ನಿಮಿಷದಲ್ಲಿ 90 ಕೋಟಿ, ಇದು ರಿಲಯನ್ಸ್ ಸಾಹುಕಾರನ ಮ್ಯಾಜಿಕ್!

ಪೆಟ್ರೋಲ್‌, ವಿದ್ಯುತ್‌ ಏರಿಕೆ: ಲಾಕ್ಡೌನ್‌ ಅವಧಿಯಲ್ಲಿ ಕುಸಿತ ಕಂಡಿದ್ದ ಪೆಟ್ರೋಲ್‌ ಮಾರಾಟ ಇದೀಗ ಕೋವಿಡ್‌ ಪೂರ್ವ ಸ್ಥಿತಿಗೆ ಮರಳಿದೆ. ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಶೇ.2ರಷ್ಟು ಮಾರಾಟ ಹೆಚ್ಚಿದೆ. ಮತ್ತೊಂಡೆಡೆ ಸೆಪ್ಟೆಂಬರ್‌ನಲ್ಲಿ ಒಟ್ಟು 11,354 ಕೋಟಿ ಯೂನಿಟ್‌ ವಿದ್ಯುತ್‌ ಬಳಕೆಯಾಗಿದೆ. ಇದು ಕಳೆದ ಆರು ತಿಂಗಳಿನಲ್ಲೇ ಅಧಿಕ. ಜೊತೆಗೆ ಕಳೆದ ವರ್ಷ ಇದೇ ಅವಧಿಗಿಂತ ಶೇ.5.6ರಷ್ಟು ಹೆಚ್ಚು. ಮತ್ತೊಂದೆಡೆ ಸೆಪ್ಟೆಂಬರ್‌ನಲ್ಲಿ ಸರಕು ಸಾಗಣಿಕೆಯಿಂದ ರೈಲ್ವೆ ಭರ್ಜರಿ 9,896 ಕೋಟಿ ರು. ಆದಾಯ ಗಳಿಸಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ ಇದು ಶೇ.13.5ರಷ್ಟು ಹೆಚ್ಚು.

ವಾಹನೋದ್ಯಮ: ವೈಯಕ್ತಿಕ ಮತ್ತು ಸರಕು ಸಾಗಣೆ ವಾಹನಗಳ ಮಾರಾಟದಲ್ಲೂ ಭರ್ಜರಿ ಚೇತರಿಕೆ ಕಂಡುಬಂದಿದೆ. ಕಿಯಾ ಮೋಟಾ​ರ್‍ಸ್ ತಾನು ಇತ್ತೀಚೆಗೆ ಬಿಡುಗಡೆಯಾದ ಸೊನೆಟ್‌ ಮಾಡೆಲ್‌ ಕಾರು ಪ್ರತಿ 2 ನಿಮಿಷಕ್ಕೆ ಒಂದರಂತೆ ಬುಕ್ಕಿಂಗ್‌ ಪಡೆದುಕೊಂಡಿದೆ. ಜೊತೆಗೆ ಕಂಪನಿಯ ಒಟ್ಟಾರೆ ಮಾರಾಟವೂ ಶೇ.147 ಹೆಚ್ಚಾಗಿದೆ ಎಂದು ಹೇಳಿದೆ. ಉಳಿದಂತೆ ಮಾರುತಿ ಸುಜುಕಿ ಇಂಡಿಯಾ ಶೇ.32.2, ಹುಂಡೈ ಶೇ.23.6, ಸ್ಕೋಡಾ ಶೇ.7, ಬಜಾಜ್‌ ಆಟೋಮೊಬೈಲ್‌ ಶೇ.20, ಹೋಂಡಾ ಕಾರು ಶೇ.10ರಷ್ಟು, ಟಿವಿಎಸ್‌ ಶೇ.3.76ರಷ್ಟು, ಹೀರೋ ಮೊಟೋಕಾಪ್‌ರ್‍ ಶೇ.17ರಷ್ಟು, ಹೊಂಡಾ ಮೋಟಾರ್‌ ಸೈಕಲ್ಸ್‌ ಶೇ.8.48, ಟಾಟಾ ಮೋಟಾ​ರ್‍ಸ್ ಶೇ.162, ಮಹೀದ್ರಾ ಟ್ರ್ಯಾಕ್ಟರ್‌ಗಳ ಮಾರಾಟದಲ್ಲೂ ಶೇ.9.2ರಷ್ಟು ಏರಿಕೆ ದಾಖಲಾಗಿದೆ.
 

click me!