
ಬೆಂಗಳೂರು(ಜೂ.13): ಹೊಸ ಕೆಲಸ ಸಿಕ್ಕಿದೆ ಅಂತಾ ಮನೆಯವರಿಗೆ ಫೋನ್ ಮಾಡಿ ಹೇಳಿ ನೋಡಿ. ಕಚೇರಿ ನಿನ್ನ ಮನೆಯಿಂದ ಎಷ್ಟು ದೂರ ಇದೆ ಎಂಬುದೇ ಅವರ ಮೊದಲ ಪ್ರಶ್ನೆಯಾಗಿರುತ್ತದೆ. ಅಷ್ಟೇ ಏಕೆ ಕೆಲಸಕ್ಕೆ ಸೇರುವ ಮೊದಲು ನೀವೂ ಕೂಡ ಈ ಕುರಿತು ಒಮ್ಮೆಯಾದರೂ ಯೋಚನೆ ಮಾಡಿಯೇ ಮಾಡಿರುತ್ತೀರಿ.
ಕಾರಣ ಬೆಂಗಳೂರು, ಮುಂಬೈ, ನವದೆಹಲಿಯಂತ ಮಹಾನಗರಗಳಲ್ಲಿ ಮನೆಯಿಂದ ಕಚೇರಿಗೆ ಹೋಗಿ ಕೆಲಸ ಮಾಡುವುದೆಂದರೆ ಯುದ್ದವೊಂದನ್ನು ಗೆದ್ದಂತೇ ಸರಿ. ಅದರಲ್ಲೂ ಮನೆಗೂ ಕಚೇರಿಗೂ ತುಂಬ ದೂರ ಇತ್ತೆಂದರೆ ಅರ್ಧ ದಿನ ಟ್ರಾಫಿಕ್ ನಲ್ಲೇ ಕಳೆದು ಹೋಗುತ್ತದೆ. ಹೀಗಾಗಿಯೇ ಬಹುತೇಕರು ಮನೆಗೂ ಕಚೇರಿಗೂ ಹತ್ತಿರವಿರಲಿ ಎಂದೇ ಬಯಸುತ್ತಾರೆ.
ಲಿಂಕ್ಡಿನ್ ಇಂತದ್ದೇ ಸರ್ವೆ ನಡೆಸಿದ್ದು, ಶೇ.26 ರಷ್ಟು ಭಾರತೀಯರು ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲು ಕಡಿಮೆ ಸಂಬಳವಿರುವ ಕೆಲಸವನ್ನಾದರೂ ಮಾಡಲು ಒಪ್ಪಿಕೊಳ್ಳುತ್ತಾರಂತೆ. ಅಂದರೆ ಹೆಚ್ಚಿನ ಸಂಬಳದ ಕೆಲಸಕ್ಕೆ ದೂರ ಪ್ರಯಾಣ ಮಾಡಿ ಬಳಲುವ ಬದಲು ಕಡಿಮೆ ಸಂಬಳಕ್ಕೆ ಮನೆಗೆ ಹತ್ತಿರವಿರುವ ಮತ್ತು ಟ್ರಾಫಿಕ್ ಜಂಜಾಟದಿಂದ ಮುಕ್ತವಾಗಿರುವ ಕಡೆ ಕೆಲಸಕ್ಕೆ ಸೇರಲು ಒಪ್ಪಿಕೊಳ್ಳುತ್ತಾರಂತೆ.
ಲಿಂಕ್ಡಿನ್ ಸರ್ವೆ ಪ್ರಕಾರ ಶೇ.೭೮ ರಷ್ಟು ಭಾರತೀಯರಯ ತಮ್ಮ ಪ್ರಯಾಣದ ಅವಧಿ ಕಡಿಮೆ ಇರಲೆಂದು ಬಯಸುತ್ತಾರೆ. ಅದರಂತೆ ಶೇ. 57 ರಷ್ಟು ಭಾರತೀಯರು ಕುಟುಂಬದ ಜೊತೆ ಕಾಲ ಕಳೆಯಲು ಕಡಿಮೆ ಕಲೆಸದ ಅವಧಿ ಬೇಕೆಂದು ಬಯಸುತ್ತಾರೆ. ಅಲ್ಲದೇ ಶೇ.42 ರಷ್ಟು ಜನ ಹೆಚ್ಚಿನ ವೇತನ ನೀಡುವುದಾದರೆ ದೂರದ ಪ್ರಯಾಣ ಮಾಡಲು ಸಿದ್ದರಿದ್ದಾರಂತೆ. ಆದರೆ ಬಹುತೇಕ ಭಾರತೀಯರು ಕಡಿಮೆ ಪ್ರಯಾಣದ ಅವಧಿಗಾಗಿ ತಮ್ಮ ವೇತನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದ ಎಂಬುದು ಲಿಂಕ್ಡಿನ್ ಸರ್ವೆಯಿಂದ ಬಯಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.