ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆ: ಎಸ್ & ಪಿ ವರದಿ

By Suvarna NewsFirst Published Nov 24, 2022, 5:24 PM IST
Highlights

ಹಣದುಬ್ಬರ ಹೆಚ್ಚಳ, ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿರುವ ಈ ಸಮಯದಲ್ಲಿ ಎಸ್ & ಪಿ ವರದಿಯೊಂದು ಭಾರತದ ಮಟ್ಟಿಗೆ ಆಶಾಭಾವನೆ ಮೂಡಿಸಿದೆ. ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಈ ವರದಿ ತಿಳಿಸಿದೆ. 
 

ನವದೆಹಲಿ (ನ.24): ಭಾರತದ ನೈಜ್ಯ ಜಿಡಿಪಿಯು 2021-2030ನೇ ಸಾಲಿನ ನಡುವೆ ವಾರ್ಷಿಕ ಶೇ.6.3 ಪ್ರಗತಿ ದಾಖಲಿಸುವ ನಿರೀಕ್ಷೆಇದ್ದು, ಇದು ಜಾಗತಿಕ ಅಂದಾಜು ಬೆಳವಣಿಗೆ ದರಕ್ಕಿಂತ ಹೆಚ್ಚಿದೆ ಎಂದು ಎಸ್ ಆಂಡ್ ಪಿ ಗ್ಲೋಬಲ್ ತಿಳಿಸಿದೆ. ಈ ಮೂಲಕ ಭಾರತ ಜಪಾನ್ ಹಾಗೂ ಜರ್ಮನಿಯನ್ನು ಹಿಂದಿಕ್ಕಿ ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ. ತಲಾ ಆದಾಯದ ಹೆಚ್ಚಳ, ದೇಶೀಯ ಉತ್ಪಾದನೆಗೆ ಉತ್ತೇಜನ ಹಾಗೂ ಜಾಗತಿಕ ಆರ್ಥಿಕತೆಗಳ ಜೊತೆಗಿನ ವ್ಯಾಪಾರ ಒಪ್ಪಂದಗಳ ಬೆಂಬಲದಿಂದ ಇದು ಸಾಧ್ಯವಾಗಲಿದೆ ಎಂದು ವರದಿ ತಿಳಿಸಿದೆ. ಭಾರತದ ತಲಾ ಆದಾಯ ಶೇ.5.3ರಷ್ಟು ಪ್ರಗತಿ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಭಾರತೀಯರು ಜಿ20 ಆರ್ಥಿಕತೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವೆಚ್ಚ ಮಾಡುವವರು ಕೂಡ ಆಗಿರಲಿದ್ದಾರೆ ಎಂದು ವರದಿ ತಿಳಿಸಿದೆ. ಭಾರತವು ರಫ್ತು ಕೇಂದ್ರೀಕೃತ ಆರ್ಥಿಕತೆಯಾಗಿ ಬೆಳೆಯುವ ಸುಳಿವನ್ನು ಕೂಡ ಈ ವರದಿ ನೀಡಿದೆ. ಭಾರತ ಉತ್ಪಾದನಾ ಕೇಂದ್ರವಾಗಿ ಬೆಳೆಯುವ ಗುರಿ ಹೊಂದಿದ್ದು,  ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಗಳಿಂದ ಖಾಸಗಿ ಉತ್ಪಾದಕರಿಗೆ ಭಾರತದಲ್ಲಿ ಹೆಚ್ಚಿನ ಬೆಂಬಲ ಸಿಗಲಿದೆ. ಉತ್ಪಾದನಾ, ಹೂಡಿಕೆ ಹಾಗೂ ರಫ್ತು ವಲಯಗಳ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ ಎಂದು ವರದಿ ತಿಳಿಸಿದೆ.

ಈ ವರದಿಯು 2005 ಹಾಗೂ 2021ರ ನಡುವೆ ಭಾರತದ ರಫ್ತು ಮೌಲ್ಯ ಶೇ.279.5 ಹಾಗೂ ಆಮದು ಮೌಲ್ಯ ಶೇ.301.6 ಹೆಚ್ಚಳಗೊಂಡಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ. ಮೌಲ್ಯದ ಆಧಾರದಲ್ಲಿ ನೋಡಿದರೆ ಅಮೆರಿಕ, ಯುಎಇ ಹಾಗೂ ಚೀನಾ 2021ರಲ್ಲಿ ಭಾರತದ ಒಟ್ಟು ವ್ಯಾಪಾರದಲ್ಲಿ ಶೇ.30ರಷ್ಟು ಪಾಲು ಹೊಂದಿವೆ. ಮುಂದಿನ ದಿನಗಳಲ್ಲಿ ಭಾರತ ನೆರೆಯ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಜೊತೆಗೆ ಸಂಬಂಧವನ್ನು ಬಲಗೊಳಿಸಲಿದೆ ಎಂದು ಎಸ್ & ಪಿ ವರದಿ ತಿಳಿಸಿದೆ.

ಗೂಗಲ್ ಪೇ, ಪೇಟಿಎಂ ವಹಿವಾಟುಗಳಿಗೆ ಕಡಿವಾಣ? ಶೀಘ್ರದಲ್ಲೇ ಯುಪಿಐ ಪಾವತಿ ಆ್ಯಪ್ ಗಳಿಗೆ ಮಿತಿ ಹೇರಿಕೆ

ಪ್ರಸ್ತುತ ಭಾರತ ಜಾಗತಿಕ ರಫ್ತಿನಲ್ಲಿ ಶೇ.2ರಷ್ಟು ಪಾಲು ಹೊಂದಿದೆ. ಚೀನಾ (China), ಅಮೆರಿಕ (America), ಜರ್ಮನಿ (Germany) ಕ್ರಮವಾಗಿ ಶೇ.15, ಶೇ.8 ಹಾಗೂ ಶೇ.7ರಷ್ಟು ಪಾಲು ಹೊಂದಿವೆ. ಭಾರತ ಸರ್ಕಾರವು ರಫ್ತನ್ನು (Export) ಉತ್ತೇಜಿಸಲು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು, ಉಚಿತ ವ್ಯಾಪಾರ ಒಪ್ಪಂದ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಫಿಲಿಪ್ ಕ್ಯಾಪಿಟಲ್ (Phillip Capital) ವರದಿ ತಿಳಿಸಿದೆ. 

ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ಭಾರತಕ್ಕೆ ಅನೇಕ ಸವಾಲುಗಳು ಕೂಡ ಇವೆ. ಇತ್ತೀಚೆಗೆ ಆರ್ಥಿಕ ತಜ್ಞರು ಹಾಗೂ ವಿಶ್ಲೇಷಕರು ಭಾರತದ ಜಿಡಿಪಿ (GDP)ಬೆಳವಣಿಗೆ ದರವನ್ನು ಕಡಿತಗೊಳಿಸಿದ್ದರು. ಗೋಲ್ಡ್ ಮನ್ ಸ್ಯಾಚ್ (Goldman Sachs) 2023ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇ.5.9ಕ್ಕೆ ಇಳಿಕೆ ಮಾಡಿದ್ದರು. 2022ರಲ್ಲಿ ಬೆಳವಣಿಗೆ ದರ ಶೇ.6.9ರಷ್ಟಿತ್ತು. ಇನ್ನು ನವೆಂಬರ್ ಎರಡನೇ ವಾರದಲ್ಲಿ ಮೂಡೀಸ್ (Moody’s) ಕೂಡ ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ದರವನ್ನು 2022ನೇ ಸಾಲಿನಲ್ಲಿ ಈ ಹಿಂದಿನ ಶೇ.7.7ರಿಂದ ಶೇ.7ಕ್ಕೆ ಇಳಿಕೆ ಮಾಡಿತ್ತು. ಹಣದುಬ್ಬರ ಏರಿಕೆ, ಅಧಿಕ ಬಡ್ಡಿದರ ಹಾಗೂ ಜಾಗತಿಕ ಆರ್ಥಿಕತೆಯ ನಿಧಾನಗತಿ ಹಿನ್ನೆಲೆಯಲ್ಲಿ ಭಾರತದ ಜಿಡಿಪಿ ಅಂದಾಜು ಬೆಳವಣಿಗೆ ದರವನ್ನು ಕಡಿತಗೊಳಿಸಲಾಗಿತ್ತು. 

ಉದ್ಯೋಗ ಕಡಿತದ ಈ ಸಮಯದಲ್ಲಿ ನಿಮ್ಮ ಬಜೆಟ್ ಹೀಗಿರಲಿ!

ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ಸೂಚನೆಗಳು ಕೂಡ ಕಾಣಿಸುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಬಹುರಾಷ್ಟ್ರೀಯ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತ ಸೇರಿದಂತೆ ಜಗತ್ತಿನ ಬಹುತೇಕ ಆರ್ಥಿಕತೆಗಳಿಗೆ ಅನೇಕ ಸವಾಲುಗಳು ಎದುರಾಗುವ ಎಲ್ಲ ಸಾಧ್ಯತೆಗಳೂ ಇವೆ. 
 

click me!