ಭಾರತ ದೇಶವೀಗ ಬಡ ರಾಷ್ಟ್ರವಲ್ಲ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

Published : Mar 30, 2023, 05:48 AM IST
ಭಾರತ ದೇಶವೀಗ ಬಡ ರಾಷ್ಟ್ರವಲ್ಲ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಸಾರಾಂಶ

ಎಲ್ಲ ಕ್ಷೇತ್ರದಲ್ಲೂ ಅವಕಾಶ, ಭಾರತೀಯರ ಪ್ರತಿಭೆಗಳ ಪ್ರಯೋಜನ ಪಡೆಯಲು ಜಾಗತಿಕ ಸಂಸ್ಥೆಗಳು ಭಾರತಕ್ಕೆ ಆಗಮನ: ಕೇಂದ್ರದ ಕೌಶಲಾಭಿವೃದ್ಧಿ, ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌

ಬೆಂಗಳೂರು(ಮಾ.30):  ಹಿಂದೆ ಬಿಂಬಿಸುತ್ತಿದ್ದಂತೆ ಭಾರತವೀಗ ಬಡ ರಾಷ್ಟ್ರವಾಗಿಲ್ಲ. ವಿಶ್ವ ಮಟ್ಟದ ಮೂಲಸೌಲಭ್ಯಗಳನ್ನು ಇಲ್ಲಿ ಉದ್ಯಮಿಗಳು ಪಡೆಯಲು ಸಾಧ್ಯವಿದೆ ಎಂದು ಕೇಂದ್ರದ ಕೌಶಲಾಭಿವೃದ್ಧಿ, ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು. ನಗರದ ಕ್ರೈಸ್ಟ್‌ ಯುನಿವರ್ಸಿಟಿಯಲ್ಲಿ ಪ್ರೊಫೆಶನಲ್‌ ಸ್ಟಡೀಸ್‌ ವಿಭಾಗದಿಂದ ಆಯೋಜಿಸಿರುವ ಮೂರು ದಿನಗಳ ‘ಕಾಗ್ನಿಟೊ ಕ್ಯಾಟಲಿಸ್ಟ್‌’ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಮೊದಲು ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಡ ರಾಷ್ಟ್ರವೆಂದು ಬಿಂಬಿಸಲಾಗುತ್ತಿತ್ತು. ಇಲ್ಲಿ ವಿಶ್ವಮಟ್ಟದ ಸೌಲಭ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಭಾವನೆ ಬಿತ್ತಲಾಗಿತ್ತು. ಆದರೆ, ಇವತ್ತು ಭಾರತ ವಿಶ್ವದಲ್ಲಿ ಐದನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದು, 3ನೇ ಸ್ಥಾನಕ್ಕೇರುವ ಹಂತದಲ್ಲಿದ್ದೇವೆ. ನಮ್ಮ ತೆರಿಗೆ ಸಂಗ್ರಹ ವಾರ್ಷಿಕವಾಗಿ ಶೇ.30ರಷ್ಟು ಹೆಚ್ಚಾಗುತ್ತದೆ. ಮೂಲಸೌಕರ್ಯ ವೃದ್ಧಿಗಾಗಿ ಅತೀಹೆಚ್ಚು ಮೊತ್ತವನ್ನು ವ್ಯಯಿಸುತ್ತಿರುವ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ. 2023ರಲ್ಲಿ ಭಾರತ 30 ಲಕ್ಷ ಕೋಟಿಯನ್ನು ಈ ಉದ್ದೇಶಕ್ಕೆ ಬಳಸುತ್ತಿದೆ ಎಂದು ತಿಳಿಸಿದರು.

ಸ್ಕಿಲ್ ಹಬ್ ಪೋರ್ಟಲ್‌ ಉದ್ಘಾಟಿಸಿದ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕ ಯುವಕರ ಉದ್ಯಮಕ್ಕೆ ನೆರವು!

ಐಟಿ, ಡಿಜಿಟಲ್‌ ತಂತ್ರಜ್ಞಾನ, ಸೆಮಿಕಂಡಕ್ಟರ್‌, ಡೀಪ್‌ ಟೆಕ್‌ ಸೇರಿ ಜಗತ್ತಿನಲ್ಲಿ ಎಷ್ಟುಅವಕಾಶಗಳಿವೆಯೋ ಅಷ್ಟೇ ಅವಕಾಶ ಭಾರತದಲ್ಲೂ ಇದೆ. ಕಳೆದ ಹತ್ತಿಪ್ಪತ್ತು ವರ್ಷದ ಹಿಂದೆ ಭಾರತದ ಯುವಕರಿಗೆ ಅವಕಾಶ ಸೀಮಿತವಾಗಿತ್ತು. ಇಲ್ಲಿ ಉನ್ನತ ತಂತ್ರಜ್ಞಾನದ ಅಧ್ಯಯನ ಮಾಡಿದವರು ಉದ್ಯೋಗಕ್ಕೆ ವಿದೇಶಗಳಿಗೆ ತೆರಳುವುದು ಅನಿವಾರ್ಯವಾಗಿತ್ತು. ಆದರೆ, ಈಗ ಜಾಗತಿಕ ಸಂಸ್ಥೆಗಳು ಭಾರತದ ಯುವ ಪ್ರತಿಭೆಗಳ ಪ್ರಯೋಜನ ಪಡೆಯಲು ಇಲ್ಲಿಗೆ ಬರುತ್ತಿವೆ. ಭಾರತದಲ್ಲೇ 90 ಸಾವಿರಕ್ಕೂ ಮಿಕ್ಕಿ ಸ್ಟಾರ್ಟ್‌ಅಪ್‌ಗಳಿವೆ. 110 ಯುನಿಕಾರ್ನ್‌ಗಳಿವೆ. ಭಾರತ ಬದಲಾಗಿರುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ ಎಂದರು.

ಜಗತ್ತಿನ ದೊಡ್ಡ ಆರ್ಥಿಕತೆಗಳು ಎಂದು ಕರೆಯಲ್ಪಡುವ ದೇಶಗಳಲ್ಲಿ ಕೋವಿಡ್‌ ಬಳಿಕ ಆರ್ಥಿಕತೆ ಅಲ್ಲೋಲಕಲ್ಲೋಲವಾಗಿದೆ. ಅಮೆರಿಕದಲ್ಲಿ ಆರ್ಥಿಕ ಕುಸಿತ ಕಾಣುತ್ತಿದ್ದೇವೆ. ಬ್ಯಾಂಕ್‌ಗಳು ಮುಚ್ಚುತ್ತಿವೆ. ಚೀನಾದಲ್ಲಿ ಲಾಕ್‌ಡೌನ್‌ ಸಮಸ್ಯೆ ಮುಗಿದಿಲ್ಲ. ಇಂಗ್ಲೆಂಡ್‌, ಯುರೋಪ್‌ನಲ್ಲಿಯೂ ಇದೇ ಸ್ಥಿತಿಯಿದೆ. ಆದರೆ, ಭಾರತ ವಿಶ್ವದ ಅತೀವೇಗದ ಆರ್ಥಿಕಾಭಿವೃದ್ಧಿಯ ದೇಶವಾಗಿ ಮುನ್ನುಗ್ಗುತ್ತಿದೆ. ಎಫ್‌ಡಿಐ ಹಿಂದೆಂದಿಗಿಂತಲೂ ಹೆಚ್ಚಾಗಿ ಹರಿದುಬರುತ್ತಿದೆ. ವಿಶ್ವಮಟ್ಟದ ಅರ್ಥತಜ್ಞರು ಇದನ್ನು ಶ್ಲಾಘಿಸಿದ್ದಾರೆ ಎಂದು ಹೇಳಿದರು.

ಧಾರವಾಡಕ್ಕೆ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಕೋವಿಡ್‌ ಜಾಗತಿಕ ಸಂಕಷ್ಟದ ಪರೀಕ್ಷೆಯಲ್ಲಿ ಭಾರತ, ಭಾರತದ ಯುವಕರು ಯಶಸ್ವಿಯಾಗಿ ಎದುರಿಸಿದ್ದಾರೆ. 2014ರ ಬಳಿಕ ಭಾರತವನ್ನು ಜಗತ್ತು ನೋಡುವ ದೃಷ್ಟಿಕೋನವೂ ಬದಲಾಗಿದೆ. ಯುವಕರಿಗೆ ಸಾಕಷ್ಟುಸದವಕಾಶಗಳು ಎದುರಿವೆ. ನಾವು ಎಲ್ಲರಿಗಿಂತ ಭಿನ್ನ ಹಾಗೂ ವಿಶೇಷ ಎಂಬುದನ್ನು ಸಾಧಿಸಿ ತೋರಿಸಲು ವೇದಿಕೆ ಇದೆ. ಸೋಲು ಗೆಲವುಗಳ ಬಗ್ಗೆ ಯೋಚಿಸದೆ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದರು.
ಈ ವೇಳೆ ಯುನಿವರ್ಸಿಟಿಯ ಮುಖ್ಯಸ್ಥರಾದ ಡಾ. ಫಾದರ್‌ ಜೋಸೆಫ್‌ ಸಿಸಿ, ಡಾ. ಕವಿತಾ ದೇಸಾಯಿ ಇದ್ದರು.

ಸೆಮಿಕಂಡಕ್ಟರ್‌ನಲ್ಲಿ ಕ್ರಾಂತಿ

ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಯಾವುದು ಸತ್ಯ, ಅರೆಸತ್ಯ, ಸುಳ್ಳು ಎಂಬುದನ್ನು ಪತ್ತೆ ಮಾಡುವುದು ಕಷ್ಟ. ಡಿಜಿಟಲ್‌ ಇಂಡಿಯಾ ಆ್ಯಕ್ಟ್ನಲ್ಲಿ ಅಶ್ಲೀಲ ಚಿತ್ರ, ಮಕ್ಕಳ ಮೇಲಿನ ದೌರ್ಜನ್ಯ, ಅವಹೇಳನಕಾರಿ ಟ್ರೋಲ್‌, ಸುಳ್ಳು ಮಾಹಿತಿ ಹರಡುವುದು, ದಿಕ್ಕು ತಪ್ಪಿಸುವುದನ್ನು ತಡೆಯಲು ಸೂಕ್ತ ಕಾನೂನು ರೂಪಿಸಲಾಗಿದೆ. ಸೆಮಿಕಂಡಕ್ಟರ್‌ ವಿಚಾರದಲ್ಲಿ ಇನ್ನು ಒಂದೂವರೆ ವರ್ಷದಲ್ಲಿ ದೇಶ ಮಹತ್ತರವಾದುದನ್ನು ಸಾಧಿಸಲಿದೆ ಅಂತ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?