ವಿವಾಹ ಸಮಯದಲ್ಲಿ ಸ್ವೀಕರಿಸುವ ಸ್ತ್ರೀಧನಕ್ಕೆ ತೆರಿಗೆ ಇದೆಯಾ? ಪ್ರತಿಯೊಬ್ಬ ಮಹಿಳೆಗೂ ಈ ವಿಷಯ ತಿಳಿದಿರಲೇಬೇಕು

By Suvarna NewsFirst Published Mar 29, 2023, 6:12 PM IST
Highlights

ವಿವಾಹ ಸಮಯದಲ್ಲಿ ವಧುವಿಗೆ ಚಿನ್ನ, ಬೆಳ್ಳಿ ಸೇರಿದಂತೆ ದುಬಾರಿ ಮೌಲ್ಯದ ಉಡುಗೊರೆಗಳನ್ನು ನೀಡಲಾಗುತ್ತದೆ. ಸ್ತ್ರೀಧನ ಎಂದು ಕರೆಯಲಾಗುವ ಈ ಉಡುಗೊರೆಗಳ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆಯೇ? ಈ ಬಗ್ಗೆ ಆದಾಯ ತೆರಿಗೆ ಕಾನೂನು ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ. 
 

Business Desk: ವಿವಾಹದ ಸಮಯದಲ್ಲಿ ಮಹಿಳೆ ತನ್ನ ಪೋಷಕರು, ಅತ್ತೆ-ಮಾವ ಹಾಗೂ ಪತಿಯಿಂದ ಪಡೆದಿರುವ ಒಟ್ಟು ಸಂಪತ್ತನ್ನು ಸ್ತ್ರೀಧನ ಎಂದು ಕರೆಯಲಾಗುತ್ತದೆ.  ಸ್ತ್ರೀಧನ ಹಣ, ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಒಳಗೊಂಡಿರುತ್ತದೆ. ಹಾಗಾದ್ರೆ ಈ ಸ್ತ್ರೀಧನಕ್ಕೆ ತೆರಿಗೆ ವಿಧಿಸಲಾಗೋದಿಲ್ವ? ಆದಾಯ ತೆರಿಗೆ ಕಾನೂನು ಈ ಬಗ್ಗೆ ಏನು ಹೇಳುತ್ತದೆ? ಎಂಬ ಪ್ರಶ್ನೆ ಅನೇಕರನ್ನು ಕಾಡಬಹುದು. ಭಾರತದಲ್ಲಿ ಇಂದು ನಾವು ಯಾವುದೇ ವಸ್ತುವನ್ನು ಖರೀದಿಸಿದ್ರೂ ಅದಕ್ಕೆ ತೆರಿಗೆ ಪಾವತಿಸುತ್ತೇವೆ. ಹೀಗಿರುವಾಗ ಚಿನ್ನ, ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳು ಉಡುಗೊರೆ ರೂಪದಲ್ಲಿ ಬಂದಾಗ ಅದಕ್ಕೆ ತೆರಿಗೆ ಇಲ್ಲವೆ ಎಂಬ ಪ್ರಶ್ನೆ ಕಾಡೋದು ಸಹಜ. ಅದರಲ್ಲೂ ಮಹಿಳೆಯರು ಸ್ತ್ರೀಧನಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಏಕೆಂದ್ರೆ ಸ್ತ್ರೀಧನ ಎಂಬುದು ಮಹಿಳೆಯ ಸ್ವತ್ತು, ಈ ಬಗ್ಗೆ ಆಕೆಗೆ ಮಾಹಿತಿ ಇಲ್ಲವಾದ್ರೆ ಜನರು ಪರಿಸ್ಥಿತಿಯ ಲಾಭ ಪಡೆಯುವ ಸಾಧ್ಯತೆ ಕೂಡ ಇರುತ್ತದೆ. ಹಾಗಾದ್ರೆ ಸ್ತ್ರೀಧನದ ಮೇಲೆ ತೆರಿಗೆ ವಿಧಿಸಲಾಗುತ್ತದಾ? ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ.

'ಮಹಿಳೆಯ ಆಸ್ತಿ ಎನ್ನುವ ಪರಿಕಲ್ಪನೆ ಮೊದಲು ಹುಟ್ಟಿದ್ದು ಹಿಂದೂ ಕಾನೂನಿನಲ್ಲಿ. ಆ ಬಳಿಕ ಇದು ಇತರ ಧರ್ಮ ಹಾಗೂ ಜಾತಿಗಳಿಂದಲೂ ಸ್ವೀಕರಿಸಲ್ಪಟ್ಟಿತು. ಸ್ತ್ರೀಧನ ಅನ್ನೋದು ಮಹಿಳೆ ಹೊಂದಿರುವ ಆಸ್ತಿ ಅಥವಾ ಆಕೆ ತನ್ನ ತವರು ಮನೆ, ಅತ್ತೆ-ಮಾವ, ಪತಿ ಅಥವಾ ಸಂಬಂಧಿಕರಿಂದ ವಿವಾಹ ಅಥವಾ ನಂತರದ ದಿನಗಳಲ್ಲಿ ಪಡೆದಿರುವ ಉಡುಗೊರೆಗಳನ್ನು ಒಳಗೊಂಡಿದೆ' ಎನ್ನುತ್ತಾರೆ ಫೈನಾನ್ಸ್ ಕಂಟೆಂಟ್ ಕ್ರಿಯೇಟರ್ ಆಗಿರುವ ಸಿಎ ಶ್ರೇಯಾ ಜೈಸ್ವಾಲ್. ಉದಾಹರಣೆಗೆ ಒಬ್ಬ ಮಹಿಳೆ ಮದುವೆಯಾಗಿ ಒಂದು ವರ್ಷದ ಬಳಿಕ ಮಗು ಜನಿಸಿದ ಸಂದರ್ಭದಲ್ಲಿ ಅಥವಾ ಯಾವುದೇ ಕಾರಣವಿಲ್ಲದೆ ಉಡುಗೊರೆಗಳನ್ನು ಸ್ವೀಕರಿಸಿದ್ರೆ ಅದೆಲ್ಲವನ್ನೂ ಆಕೆಯ ಆಸ್ತಿ ಎಂದೇ ಹೇಳಲಾಗುತ್ತದೆ. 

Success Story: ಶಿಕ್ಷಕಿಯಾಗಿ ವೃತ್ತಿ ಶುರು ಮಾಡಿದ ಮಹಿಳೆ ಈಗ ಲಕ್ಷಾಂತರ ರೂ ಗಳಿಸ್ತಾರೆ

ಸ್ತ್ರೀಧನದ ಮೇಲೆ ಆದಾಯ ತೆರಿಗೆ
ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಸ್ತ್ರೀಧನವನ್ನು ಕೂಡ ಇತರ ಯಾವುದೇ ತೆರಿಗೆ ವಿಧಿಸಬಹುದಾದ ಉಡುಗೊರೆಗಳ ಮಾದರಿಯಲ್ಲೇ ಪರಿಗಣಿಸಲಾಗುತ್ತದೆ. ಆದರೆ, ಕಾನೂನಿನ ಅಡಿಯಲ್ಲಿ ಕೆಲವು ವಿನಾಯ್ತಿಗಳನ್ನು ನೀಡಲಾಗಿದೆ. ವಿವಾಹದ ಸಮಯದಲ್ಲಿ ಮಹಿಳೆ ಸ್ವೀಕರಿಸಿದ ಆಭರಣಗಳು, ಹಣ ಅಥವಾ ಆಸ್ತಿಗಳು ಆದಾಯ ತೆರಿಗೆಯಿಂದ ವಿನಾಯ್ತಿ ಪಡೆದಿವೆ. ಅಂದರೆ ಮದುವೆ ದಿನ ನೀವು ಪಡೆದ ಉಡುಗೊರೆಗಳ ಮೇಲೆ ಯಾವುದೇ ತೆರಿಗೆಯಿಲ್ಲ. ಹೀಗಾಗಿ ಈ ವಸ್ತುಗಳ ಮೇಲೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ. ಈ ಆದಾಯ ತೆರಿಗೆ ವಿನಾಯ್ತಿ ಪಟ್ಟಿಯಲ್ಲಿ ವಂಶಪಾರಂಪರ್ಯವಾಗಿ ಬಂದಂತಹ ಆಸ್ತಿಗಳು ಅಥವಾ ಉಡುಗೊರೆಗಳು ಇತ್ಯಾದಿ ಸೇರಿವೆ. ಆದರೆ, ಈ ಉಡುಗೊರೆಗಳನ್ನು ನೀವು ಕಾನೂನಿನಲ್ಲಿ ಉಲ್ಲೇಖಿಸಿರುವ ಯಾವ ಸಂಬಂಧದಿಂದ ಪಡೆದಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ನಮೂದಿಸಿರುವಂತೆ ಪತಿ, ಪತ್ನಿ, ಸಹೋದರಿ, ಸಹೋದರ ಅಥವಾ ರಕ್ತ ಸಂಬಂಧಿ ಅಥವಾ ವಂಶಸ್ಥ ವ್ಯಕ್ತಿಯಿಂದ ಪಡೆದ ಉಡುಗೊರೆಗಳಿಗೆ ಯಾವುದೇ ತೆರಿಗೆ ಇಲ್ಲ.  ಈ ಮೇಲೆ ತಿಳಿಸಲಾಗಿರುವ ಸಂಬಂಧಗಳನ್ನು ಹೊರತುಪಡಿಸಿ ಇತರರಿಂದ ಪಡೆದ ಎಲ್ಲ ಉಡುಗೊರೆಗಳು ಸ್ತ್ರೀಧನದ ಭಾಗವಾಗಿದ್ದರೂ ತೆರಿಗೆ ವ್ಯಾಪ್ತಿಗೊಳಪಡುತ್ತವೆ. 

Business Women : ಬೀಚಲ್ಲಿ ಟೀ ಮಾರ್ತಿದ್ದ ಮಹಿಳೆ ಈಗ ಕೋಟ್ಯಾಂತರ ರೂಪಾಯಿ ಒಡತಿ

ಮಹಿಳೆಯರ ಸಂರಕ್ಷಣೆ
ಮಹಿಳೆಯರು ಸ್ತ್ರೀಧನದ ಮೇಲಿನ ತೆರಿಗೆಯಿಂದ ತಪ್ಪಿಸಿಕೊಳ್ಳಲು ವಿವಾಹ ಸಮಯದಲ್ಲಿ ಸ್ವೀಕರಿಸಿದ ಎಲ್ಲ ಉಡುಗೊರೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರೋದು ಅಗತ್ಯ. 'ಶಗುನ್' ಎಂದು ಕರೆಯಲ್ಪಡುವ ನಗದಿನಿಂದ ಹಿಡಿದು ಮದುವೆ ಸಮಯದಲ್ಲಿ ನೀಡುವ ಎಲ್ಲ ಉಡುಗೊರೆಗಳ ದಾಖಲೆಗಳನ್ನು ಹೊಂದಿರೋದು ಅಗತ್ಯ. ಭವಿಷ್ಯದಲ್ಲಿ ಎದುರಾಗುವ ಆದಾಯ ತೆರಿಗೆ ತನಿಖೆಗಳಿಂದ ಬಚಾವಾಗಲು ದಂಪತಿ  ವಿವಾಹ ಸಮಯದಲ್ಲಿ ಸ್ವೀಕರಿಸಿದ ನಗದನ್ನು ಬ್ಯಾಂಕ್ ಖಾತೆಯಲ್ಲಿ ಠೇವಣಿಯಿಡುವುದು ಉತ್ತಮ ಎನ್ನುತ್ತಾರೆ ಸಿಎ ಜೈಸ್ವಾಲ್ 
 

click me!