ಮ್ಯೂಚುವಲ್ ಫಂಡ್ ಹೂಡಿಕೆದಾರರು 2023ರ ಮಾ.31ರೊಳಗೆ ಕಡ್ಡಾಯವಾಗಿ ನಾಮಿನಿ ಸಲ್ಲಿಕೆ ಮಾಡುವಂತೆ ಸೆಬಿ ಈ ಹಿಂದೆ ಆದೇಶಿಸಿತ್ತು. ಆದರೆ, ಈ ಗಡುವನ್ನು ಸೆಬಿ ಸೆ.30ರ ತನಕ ವಿಸ್ತರಿಸಿದೆ. ಈ ಅಂತಿಮ ಗಡುವಿನೊಳಗೆ ನಾಮಿನಿ ಸಲ್ಲಿಕೆ ಮಾಡದಿದ್ರೆ ಅಂಥವರ ಮ್ಯೂಚುವಲ್ ಫಂಡ್ ಖಾತೆ ನಿಷ್ಕ್ರಿಯಗೊಳ್ಳಲಿದೆ.
ನವದೆಹಲಿ (ಮಾ.29): ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಆಯ್ಕೆ ಮಾಡಿ ಅರ್ಜಿ ಸಲ್ಲಿಸಲು ಮಾ.31ರ ತನಕ ನೀಡಿದ್ದ ಗಡುವನ್ನು ಮಾರುಕಟ್ಟೆ ನಿಯಂತ್ರಕ ಸ್ಟಾಕ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸೆಪ್ಟೆಂಬರ್ 30ರ ತನಕ ವಿಸ್ತರಿಸಿದೆ. ಮಾ.31ರೊಳಗೆ ನಾಮಿನಿ ಆಯ್ಕೆ ಮಾಡಿ ಅರ್ಜಿ ಸಲ್ಲಿಕೆ ಮಾಡದಿದ್ರೆ ಅಂಥವರ ಮ್ಯೂಚುವಲ್ ಫಂಡ್ ಖಾತೆಯನ್ನು ಕ್ಲೋಸ್ ಮಾಡೋದಾಗಿ ಈ ಹಿಂದೆ ಸೆಬಿ ಎಚ್ಚರಿಕೆ ನೀಡಿತ್ತು. ಹೀಗಾಗಿ ಇನ್ನೂ ನಾಮಿನಿ ಸೇರ್ಪಡೆ ಮಾಡದ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಸದ್ಯಕ್ಕೆ ತುಸು ನಿರಾಳತೆ ಸಿಕ್ಕಿದೆ. ಹಾಗಂತ ಕೊನೆಯ ದಿನಾಂಕದ ತನಕ ಕಾಯುವ ಬದಲು ಆದಷ್ಟು ಬೇಗ ನಾಮಿನಿ ಅರ್ಜಿ ಸಲ್ಲಿಕೆ ಮಾಡೋದು ಉತ್ತಮ. ಒಂದು ವೇಳೆ ಅಂತಿಮ ಗಡುವಿನೊಳಗೆ ನೀವು ನಾಮಿನಿ ವಿವರ ಸಲ್ಲಿಕೆ ಮಾಡದಿದ್ರೆ ನಿಮ್ಮ ಮ್ಯೂಚುವಲ್ ಫಂಡ್ ಖಾತೆ ನಿಷ್ಕ್ರಿಯಗೊಳ್ಳಲಿದೆ. ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನಿ ಅರ್ಜಿ ಸಲ್ಲಿಕೆ ಮಾಡುವ ಬಗ್ಗೆ ಸೆಬಿ 2022ರ ಜೂನ್ 15ರಂದು ಸುತ್ತೋಲೆ ಹೊರಡಿಸಿತ್ತು. ಅದರ ಅನ್ವಯ ಮ್ಯೂಚುವಲ್ ಫಂಡ್ ಹೂಡಿಕೆದಾರರು 2022ರ ಆಗಸ್ಟ್ 1ರೊಳಗೆ ನಾಮಿನಿ ವಿವರ ಸಲ್ಲಿಕೆ ಮಾಡೋದನ್ನು ಕಡ್ಡಾಯಗೊಳಿಸಿತ್ತು. ಆ ಬಳಿಕ ಈ ಗಡುವನ್ನು 2022ರ ಅಕ್ಟೋಬರ್ ತನಕ ಮುಂದೂಡಲಾಗಿತ್ತು. ನಂತರ 2023ರ ಮಾರ್ಚ್ 31ರವರೆಗೂ ವಿಸ್ತರಿಸಲಾಗಿತ್ತು. ಆದರೆ, ಈಗ ಮತ್ತೊಮ್ಮೆ ಗಡುವನ್ನು ಸೆ.30 ತನಕ ವಿಸ್ತರಿಸಲಾಗಿದೆ.
'ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಮ್ಯೂಚುವಲ್ ಫಂಡ್ ಹೊಂದಿರುವ ಎಲ್ಲರೂ 2023ರ ಮಾ.31ರೊಳಗೆ ನಾಮಿನಿ ಸಲ್ಲಿಕೆ ಮಾಡೋದು ಅಗತ್ಯ. ಒಂದು ವೇಳೆ ನಾಮಿನಿ ಸಲ್ಲಿಕೆ ಮಾಡದಿದ್ರೆ ಅಂಥವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುವುದು' ಎಂದು ಸೆಬಿ ತನ್ನ ಈ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು. '2022ರ ಜೂನ್ 15ರ ಸೆಬಿ ಸುತ್ತೋಲೆಯ ಪ್ಯಾರಾ 4ರ ಅನ್ವಯ ನೀಡಲಾಗಿರುವ ಗಡುವನ್ನು 2023ರ ಮಾ.31ರ ಬದಲು 2023ರ ಸೆ.30ಕ್ಕೆ ಮುಂದುವರಿಸಲಾಗಿದೆ' ಎಂದು ಹೊಸ ಸುತ್ತೋಲೆಯಲ್ಲಿ ತಿಳಿಸಿದೆ.
Breaking: ಪಾನ್-ಆಧಾರ್ ಲಿಂಕ್ ಅವಧಿ ವಿಸ್ತರಣೆ, ಜೂನ್ 30 ಅಂತಿಮ ದಿನ!
ನಾಮಿನಿ ಏಕೆ?
ಈ ಹಿಂದೆ ಅನೇಕ ಮ್ಯೂಚುವಲ್ ಫಂಡ್ ಖಾತೆಗಳನ್ನು ಯಾವುದೇ ನಾಮಿನಿ ನೀಡದೆ ತೆರೆಯಲಾಗುತ್ತಿತ್ತು. ಇದರಿಂದ ಒಂದು ವೇಳೆ ಹೂಡಿಕೆದಾರ ಆಕಸ್ಮಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಹೂಡಿಕೆ ಮಾಡಿದ ಹಣವನ್ನು ಯಾರಿಗೆ ವರ್ಗಾಯಿಸಬೇಕು ಎಂಬ ಪ್ರಶ್ನೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಇಂಥ ಸಮಸ್ಯೆಯನ್ನು ತಪ್ಪಿಸಲು ಹೂಡಿಕೆದಾರ ನಾಮಿನಿ ವಿವರವನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು ಎಂದು ಸೆಬಿ ಹೇಳಿದೆ. ಇದರಿಂದ ಒಂದು ವೇಳೆ ಹೂಡಿಕೆದಾರ ಮರಣ ಹೊಂದಿದ್ರೆ ಆತನ ಹಣವನ್ನು ಅವನ್ನೇ ಆಯ್ಕೆ ಮಾಡಿರುವ ನಾಮಿನಿಗೆ ವರ್ಗಾವಣೆ ಮಾಡಲಾಗುತ್ತದೆ. ಜಂಟಿ ಖಾತೆ ಹೊಂದಿರೋರು ಕೂಡ ನಾಮಿನಿಯನ್ನು ಹೆಸರಿಸೋದು ಅಗತ್ಯ.
ಕೆಲವರು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಉವ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿರೋದಿಲ್ಲ. ಅಲ್ಲದೆ, ನಾಮಿನಿಯನ್ನು ಕೂಡ ಹೆಸರಿಸಿರೋದಿಲ್ಲ. ಇದ್ರಿಂದ ಆಕಸ್ಮಿಕವಾಗಿ ಅವರು ಮರಣ ಹೊಂದಿದ್ರೆ ಅವರ ಹೂಡಿಕೆ ಹಣವೆಲ್ಲ ವ್ಯರ್ಥವಾಗುತ್ತದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಏ.1ರಿಂದ ಲಭ್ಯ; ಹೂಡಿಕೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ಮ್ಯೂಚುಯಲ್ ಫಂಡ್ ಎಂಬುದು ಒಂದಕ್ಕಿಂತ ಹೆಚ್ಚು ಅನುಕೂಲಗಳುಳ್ಳ ಹೂಡಿಕೆ ಅವಕಾಶ ಎಂದೇ ಹೇಳಬಹುದು. ಏಕೆಂದರೆ, ನಾನಾ ಕಂಪನಿಗಳ ಸ್ಟಾಕ್-ಷೇರುಗಳು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಉತ್ತಮ ಲಾಭ ತಂದುಕೊಡಬಹುದು ಇಲ್ಲವೆ ನಷ್ಟಕ್ಕೂ ಕಾರಣ ಆಗಬಹುದು. ಆದರೆ, ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆಯಿಂದ ನಷ್ಟವನ್ನು ಕಡಿಮೆ ಮಾಡುವ ಜೊತೆಗೆ ಹೂಡಿಕೆಯಿಂದ ಲಾಭ ಗಳಿಸಲು ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತವೆ.