ಬ್ರ್ಯಾಂಡ್ ಫೈನಾನ್ಸ್ ವಾರ್ಷಿಕ ಬ್ರ್ಯಾಂಡ್- 2018ರ ವರದಿ ಪ್ರಕಟ! ಭಾರತದ ಬ್ರ್ಯಾಂಡ್ ಮೌಲ್ಯ ಶೇ.5 ರಷ್ಟು ಏರಿಕೆ! 10 ರಾಷ್ಟ್ರಗಳ ಸಾಲಿನಲ್ಲಿ ಭಾರತಕ್ಕೆ 9ನೇ ಸ್ಥಾನ! 2018ರಲ್ಲಿ 2,159 ಬಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯ! ಅಮೆರಿಕ, ಚೀನಾ ಬ್ರ್ಯಾಂಡ್ ಮೌಲ್ಯ ಪಟ್ಟಿಯಲ್ಲಿ ಮೊದಲೆರಡು ಸ್ಥಾನ
ನವದೆಹಲಿ(ಅ.21): ವಿಶ್ವದ ಅತಿ ಹೆಚ್ಚು ಮೌಲ್ಯಯುತ ರಾಷ್ಟ್ರಗಳ ಸಾಲಿನಲ್ಲಿ ಭಾರತದ ಬ್ರ್ಯಾಂಡ್ ಮೌಲ್ಯ ಶೇ.5 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಭಾರತ ಅಗ್ರ 10 ರಾಷ್ಟ್ರಗಳ ಸಾಲಿನಲ್ಲಿ 9ನೇ ಸ್ಥಾನ ಪಡೆದಿದೆ.
ಬ್ರ್ಯಾಂಡ್ ಫೈನಾನ್ಸ್ ವಾರ್ಷಿಕ ಬ್ರ್ಯಾಂಡ್- 2018ರ ವರದಿ ಪ್ರಕಟವಾಗಿದ್ದು, ಭಾರತದ ಕಳಪೆ ಸಾಧನೆ ಚಿಂತೆಗೀಡು ಮಾಡಿದೆ. ಕಳೆದ ವರ್ಷ ಭಾರತ 8ನೇ ಸ್ಥಾನ ಪಡಿದಿದ್ದು, 2018ರಲ್ಲಿ ಒಂದು ಅಂಕ ಕಳೆದುಕೊಂಡು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಆದರೂ, ಶೇ.5 ಬ್ರ್ಯಾಂಡ್ ಮೌಲ್ಯ ಏರಿಕೆ ಆಗಿದ್ದು, 2016ರಲ್ಲಿ 'ಬ್ರ್ಯಾಂಡ್ ಇಂಡಿಯಾ' ಮೌಲ್ಯ 2,046 ಬಿಲಿಯನ್ ಡಾಲರ್ನಷ್ಟಿತ್ತು. ಕಳೆದ ಎರಡು ವರ್ಷಗಳಲ್ಲಿ 113 ಬಿಲಿಯನ್ ಡಾಲರ್ನಷ್ಟು ಏರಿಕೆ ಕಂಡು 2018ರಲ್ಲಿ 2,159 ಬಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯ ಹೊಂದಿದೆ.
ಅಮೆರಿಕ ಮತ್ತು ಚೀನಾ ಕ್ರಮವಾಗಿ 25,899 ಹಾಗೂ 12,779 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಮೊದಲ ಎರಡು ಸ್ಥಾನದಲ್ಲಿವೆ. ಕಳೆದ ವರ್ಷದಿಂದ ಅಮೆರಿಕದ ಆರ್ಥಿಕತೆ ತ್ವರಿತಗತಿಯಲ್ಲಿ ಬೆಳೆಯುತ್ತಿದ್ದು, ವರ್ಷದ ಬ್ರ್ಯಾಂಡ್ ಮೌಲ್ಯದ ಬೆಳವಣಿಗೆ ಶೇ.23 ರಷ್ಟಿದೆ. ಚೀನಾ ಶೇ.25 ರಷ್ಟು ಬ್ರ್ಯಾಂಡ್ ಮೌಲ್ಯವನ್ನು ಕಾಪಾಡಿಕೊಂಡಿದೆ. ನಂತರದ ಸ್ಥಾನದಲ್ಲಿ ಜರ್ಮನಿ, ಇಂಗ್ಲೆಂಡ್, ಜಪಾನ್ ಮತ್ತು ಫ್ರಾನ್ಸ್ ರಾಷ್ಟ್ರಗಳು ಇವೆ.
ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ವಿವಿಧ ದೇಶಗಳ ಬೃಹತ್ ಕಂಪನಿಗಳ ಎಲ್ಲಾ ಬ್ರ್ಯಾಂಡ್ ಉತ್ಪನ್ನಗಳ ಅಂದಾಜು ಮಾರಾಟ ಮೌಲ್ಯದ ಆಧಾರದಲ್ಲಿ ಆಯಾ ದೇಶದ ರಾಷ್ಟ್ರೀಯ ಬ್ರ್ಯಾಂಡ್ ಮೌಲ್ಯವನ್ನು ನಿರ್ಧರಿಸಲಾಗುತ್ತದೆ.