Cement Price:ಮುಂದಿನ ತಿಂಗಳಿಂದ ಸಿಮೆಂಟ್ ದುಬಾರಿ; ಪ್ರತಿ ಬ್ಯಾಗಿನ ಮೇಲೆ 55ರೂ. ಬೆಲೆ ಹೆಚ್ಚಿಸಿದ ಇಂಡಿಯಾ ಸಿಮೆಂಟ್ಸ್

By Suvarna News  |  First Published May 28, 2022, 4:10 PM IST

*ಜೂನ್ 1ರಿಂದ ಹಂತ ಹಂತವಾಗಿ ಬೆಲೆಯೇರಿಕೆ ಮಾಡಲಿರುವ ಇಂಡಿಯಾ ಸಿಮೆಂಟ್ಸ್ 
*ಕಲ್ಲಿದ್ದಲು ಬೆಲೆಯಲ್ಲಿ ಭಾರೀ ಏರಿಕೆ ಹಿನ್ನೆಲೆಯಲ್ಲಿ ಸಿಮೆಂಟ್ ದರ ಏರಿಕೆ
*ಮುಂದಿನ ದಿನಗಳಲ್ಲಿ ಇತರ ಸಿಮೆಂಟ್ ಕಂಪೆನಿಗಳು ಬೆಲೆ ಹೆಚ್ಚಳ ಮಾಡುವ ಸಾಧ್ಯತೆ


ಚೆನ್ನೈ (ಮೇ 29):  ಕಲ್ಲಿದ್ದಲು ( Coal) ಬೆಲೆಯಲ್ಲಿ (Price) ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಸಿಮೆಂಟ್ (Cement) ಬೆಲೆಯಲ್ಲಿ (Price) ಹೆಚ್ಚಳವಾಗುವ ನಿರೀಕ್ಷೆಯಿದೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಇಂಡಿಯಾ ಸಿಮೆಂಟ್ಸ್ ಲಿ. (India Cements Ltd) ಮುಂದಿನ ಒಂದು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಪ್ರತಿ ಬ್ಯಾಗಿನ ಬೆಲೆಯಲ್ಲಿ 55ರೂ. ಹೆಚ್ಚಳ ಮಾಡುವುದಾಗಿ ತಿಳಿಸಿದೆ.

ಸಿಮೆಂಟ್ (Cement) ತಯಾರಿಕೆಯಲ್ಲಿ ಬಳಕೆಯಾಗುವ ಕಲ್ಲಿದ್ದಲು (Coal) ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆಯಾಗಿದ್ದು, ಪ್ರತಿ ಟನ್ ದರ  4661.53ರೂ.ನಿಂದ (60 ಡಾಲರ್)  23307.66ರೂ.ಗೆ (300 ಡಾಲರ್) ಜಿಗಿದಿದೆ.ಭಾರತದ ಪ್ರಮುಖ ಸಿಮೆಂಟ್ ತಯಾರಿಕಾ ಕಂಪೆನಿ ಇಂಡಿಯಾ ಸಿಮೆಂಟ್ಸ್ (India Cements) 2021-22ನೇ ಹಣಕಾಸು ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ (Quarter) ನಷ್ಟ (loss) ಅನುಭವಿಸಿದ್ದು, ಸಾಲದ (Loan) ಭಾರ ತಗ್ಗಿಸಲು ತನ್ನ ಹೆಚ್ಚುವರಿ ಜಮೀನಿನ ಸ್ವಲ್ಪ ಭಾಗವನ್ನು ಮಾರಾಟ ಮಾಡಲು ಹಾಗೂ ಬಂಡವಾಳ ಸಂಗ್ರಹಿಸಲು ಯೋಚಿಸಿದೆ. 

Tap to resize

Latest Videos

Jet Airways:ಕಳೆದ ತ್ರೈಮಾಸಿಕದಲ್ಲಿ ಜೆಟ್ ಏರ್ ವೈಸ್ ಗೆ 233.63 ಕೋಟಿ ರೂ. ನಿವ್ವಳ ನಷ್ಟ

ಇಂಡಿಯಾ ಸಿಮೆಂಟ್ ಜೂನ್ 1ರಿಂದ  ಪ್ರತಿ ಬ್ಯಾಗ್ ಮೇಲೆ 20ರೂ. , ಜೂನ್ 15ರಿಂದ ಮತ್ತೆ 15ರೂ. ಹಾಗೂ ಜುಲೈ 1ರಿಂದ ಹೆಚ್ಚುವರಿ 20ರೂ. ಏರಿಕೆ ಮಾಡಲು ಸಿದ್ಧತೆ ನಡೆಸಿದೆ. 'ಇತ್ತೀಚಿನ ದಿನಗಳಲ್ಲಿ  ಕ್ಷಿಪ್ರವಾಗಿ ಏರಿಕೆಯಾಗಿರುವ ಉತ್ಪಾದನಾ ವೆಚ್ಚವನ್ನು ಭರಿಸಲು ಇದು ನಮಗೆ ನೆರವು ನೀಡಲಿದೆ. ಇತರ ಸಿಮೆಂಟ್ ಉತ್ಪಾದಕರು ಕೂಡ ಇದನ್ನು ಅನುಸರಿಸುತ್ತಾರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ' ಎಂದು ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷ ಹಾಗೂ ಎಂಡಿ ಎನ್. ಶ್ರೀನಿವಾಸನ್ (N Srinivasan) ಹೇಳಿದ್ದಾರೆ. 

ಇನ್ನು ಇಂಡಿಯಾ ಸಿಮೆಂಟ್ಸ್ ಈ ಹಿಂದೆ ಇಷ್ಟು ದೊಡ್ಡ ಮೊತ್ತದಲ್ಲಿ ಬೆಲೆ ಹೆಚ್ಚಳ ಮಾಡಿರೋದು ಯಾವಾಗ ಎಂಬುದು ನೆನಪಿಲ್ಲ ಎಂದು ಶ್ರೀನಿವಾಸನ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಪ್ರತಿ ಬ್ಯಾಗಿಗೆ 320ರೂ.-400ರೂ. ಬೆಲೆಯಲ್ಲಿ  ಸಿಮೆಂಟ್ ಮಾರಾಟ ಮಾಡುವ  40 ವಿವಿಧ ಬ್ರ್ಯಾಂಡ್ ಗಳಿವೆ. ಆದರೆ, ನಮ್ಮ ಉತ್ಪನ್ನಗಳು ಪ್ರೀಮಿಯಂ ಗುಣಮಟ್ಟದ್ದಾಗಿದ್ದು, ನಾವು ಸದಾ ಪ್ರತಿ ಬ್ಯಾಗಿಗೆ 360ರೂ. ಹಾಗೂ ಅದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದೇವೆ' ಎಂದು ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.

2022ನೇ ಹಣಕಾಸು ಸಾಲಿನ 4ನೇ ತ್ರೈಮಾಸಿಕದಲ್ಲಿ ಇಂಡಿಯಾ ಸಿಮೆಂಟ್ಸ್ 23.7 ಕೋಟಿ ರೂ. ನಷ್ಟ ತೋರಿಸಿತ್ತು. ಅದೇ ಈ ಹಿಂದಿನ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ 71.6 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. 2022ನೇ ಹಣಕಾಸು ಸಾಲಿನಲ್ಲಿ ಒಟ್ಟು ನಿವ್ವಳ ಲಾಭ 38.9 ಕೋಟಿ ರೂ.ಗೆ ಇಳಿಕೆಯಾಗಿತ್ತು. 2021ನೇ ಹಣಕಾಸು ಸಾಲಿನಲ್ಲಿ ಕಂಪೆನಿಯ ನಿವ್ವಳ ಲಾಭ 222 ಕೋಟಿ ರೂ. ಇತ್ತು. ಉತ್ಪಾದನೆಯಲ್ಲಿ ಶೇ.11ರಷ್ಟು ಕುಸಿತ ಹಾಗೂ ಅನಿರ್ದಿಷ್ಟ ಉತ್ಪಾದನಾ ವೆಚ್ಚದಲ್ಲಿ ಶೇ.33ರಷ್ಟು ಹೆಚ್ಚಳದಿಂದ ಕಂಪೆನಿಯ ನಿವ್ವಳ ಲಾಭದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ. 

ಸ್ಟೈಸ್ ಜೆಟ್ ಹಾಗೂ ಇಂಡಿಗೋ ಮೇಲೆ ಕಳಪೆ ಸರ್ವೀಸ್ ನ ಗರಿಷ್ಠ ದೂರು!

ಕಂಪೆನಿಯು  26,000 ಎಕರೆ ಜಮೀನು ಹೊಂದಿದೆ. ಇದರಲ್ಲಿ ಸ್ವಲ್ಪ ಭಾಗವನ್ನು ಮಾರಾಟ ಮಾಡಿ ಕಂಪೆನಿಯ ಸಾಲ ತೀರಿಸಲು ಹಾಗೂ ಉತ್ಪಾದನಾ ಘಟಕಗಳ ಉನ್ನತೀಕರಣಕ್ಕೆ ಬಳಕೆ ಮಾಡಲಾಗುವುದು ಎಂದು ಶ್ರೀನಿವಾಸನ್ ತಿಳಿಸಿದ್ದಾರೆ. ಇಂಡಿಯಾ ಸಿಮೆಂಟ್ಸ್ 3,000 ಕೋಟಿ ರೂ. ಸಾಲ ಹೊಂದಿದೆ. ಕಂಪೆನಿಯು ಪ್ರತಿ ವರ್ಷ ಬ್ಯಾಂಕಿಗೆ ಸಾಲದ ಮರುಪಾವತಿ ಮಾಡುತ್ತ ಬಂದಿದೆ. ಕಳೆದ ವರ್ಷ ಬ್ಯಾಂಕಿಗೆ 551 ಕೋಟಿ ರೂ. ಸಾಲ ಮರುಪಾವತಿ ಮಾಡಿತ್ತು. ಈ ವರ್ಷ  500 ಕೋಟಿ ರೂ. ಸಾಲ ಮರುಪಾವತಿ ಮಾಡಲಿದೆ ಎಂದು ಶ್ರೀನಿವಾಸನ್ ತಿಳಿಸಿದ್ದಾರೆ. 

click me!