Multiple Bank Accounts: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇವೆಯಾ? ಈಗಲೇ ಎಚ್ಚೆತ್ತುಕೊಳ್ಳಿ

By Suvarna NewsFirst Published Dec 4, 2021, 6:05 PM IST
Highlights

ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ಬಗ್ಗೆ ಯಾರೂ ಬಾಯ್ಬಿಡೋದಿಲ್ಲ. ನಾವೂ ಹೇಳೋದಿಲ್ಲ ಬಿಡಿ. ಆದ್ರೆ ಕೆಲವರು ಎಷ್ಟು ಬ್ಯಾಂಕ್ ಖಾತೆ ಇದೆ ಅನ್ನೋದನ್ನು ಕುಟುಂಬಸ್ಥರಿಗೂ ಹೇಳಿರೋದಿಲ್ಲ. ಪತ್ನಿಗೆ ತೋರಿಸೋ ಖಾತೆಯಲ್ಲಿ ಬ್ಯಾಲೆನ್ಸ್ ಇರೋದೆ ಇಲ್ಲ. ಇನ್ನೊಂದು ಖಾತೆಯಲ್ಲಿ ಬೇಕಾದಷ್ಟು ಹಣವಿದ್ರೂ,ಆ ಖಾತೆ ಬಗ್ಗೆ ಗುಟ್ಟು ಬಿಟ್ಟುಕೊಡೋದಿಲ್ಲ. ನಿಮ್ಮ ಬಳಿಯೂ ಎರಡೆರಡು ಖಾತೆಯಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಅದ್ರಿಂದ ನಷ್ಟವೇ ಹೆಚ್ಚು.

ಬ್ಯಾಂಕ್ (Bank) ಖಾತೆ (Account) ಈಗ ಪ್ರತಿಯೊಬ್ಬರಿಗೂ ಅತ್ಯಗತ್ಯ. ಹಿಂದೆ ನಗರ ಪ್ರದೇಶಗಳಲ್ಲಿರುವವರು ಮಾತ್ರ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಿದ್ದರು. ಗ್ರಾಮೀಣ ಪ್ರದೇಶದ ರೈತರು, ಕೂಲಿ ಕಾರ್ಮಿಕರ ಬಳಿ ಬ್ಯಾಂಕ್ ಖಾತೆಗಳಿರಲಿಲ್ಲ. ಆದರೆ ಸರ್ಕಾರದ ಕೆಲ ಯೋಜನೆ ಲಾಭ ಪಡೆಯಲು ಈಗ ಬ್ಯಾಂಕ್ ಖಾತೆ ಅನಿವಾರ್ಯವಾಗಿದೆ. ಅನೇಕ ಬ್ಯಾಂಕ್ ಗಳು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಹೋಗಿ ಬ್ಯಾಂಕ್ ಖಾತೆ ಮಾಡಿಸುವಂತೆ ಸಲಹೆ ನೀಡುತ್ತದೆ. ಬ್ಯಾಂಕ್ ಖಾತೆ ಹೊಂದಿರುವುದು ಅತ್ಯುತ್ತಮ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ತೆರೆಯುತ್ತಾರೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ತೆರೆಯಲು ಜನರು ತಮ್ಮದೇ ಕಾರಣ ನೀಡುತ್ತಾರೆ. ನೌಕರರು, ಸಂಬಳಕ್ಕೊಂದು, ಕುಟುಂಬ ನಿರ್ವಹಣೆಗೊಂದು ಖಾತೆ ಹೊಂದಿರುತ್ತಾರೆ. 

ನೀವೂ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆದಿದ್ದರೆ, ಜಾಗರೂಕರಾಗಿರಿ. ಏಕೆಂದರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಇಟ್ಟುಕೊಳ್ಳುವುದು ನಷ್ಟಕ್ಕೆ ಕಾರಣವಾಗಬಹುದು. ಜನರು ಅಗತ್ಯವಿಲ್ಲದೇ ಅನೇಕ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ನಂತರ ಅವುಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ಬ್ಯಾಂಕ್ ಖಾತೆಗಳು ನಿಮಗೆ ಹೇಗೆ ಹಾನಿಮಾಡುತ್ತವೆ ಎಂಬುದರ ವಿವರ ಇಲ್ಲಿದೆ. ಮೊದಲೇ ಹೇಳಿದಂತೆ ಇಂದಿನ ಕಾಲದಲ್ಲಿ ಕೆಲಸ ಮಾಡುವ ಜನರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುತ್ತಾರೆ. ಒಂದು ಅವರ ಸಂಬಳ ಖಾತೆ ಮತ್ತು ಇನ್ನೊಂದು ಅವರ ವೈಯಕ್ತಿಕ ಉಳಿತಾಯ ಖಾತೆ. ಇದು ನಿಮಗೆ ನಷ್ಟವುಂಟು ಮಾಡುತ್ತದೆ ಎಂಬುದನ್ನು ಸಾಬೀತುಪಡಿಸಬಹುದು.

ಯಾವುದೇ ಸಂಬಳ ಖಾತೆಯಲ್ಲಿ ಮೂರು ತಿಂಗಳವರೆಗೆ ಸಂಬಳ ಬರದೆ ಹೋದಲ್ಲಿ ಅದನ್ನು ಉಳಿತಾಯ ಖಾತೆಯಾಗಿ ಪರಿವರ್ತಿಸಲಾಗುತ್ತದೆ. ಬ್ಯಾಂಕ್ ಗಳು, ಉಳಿತಾಯ ಖಾತೆಗೆ ಕನಿಷ್ಠ ಬ್ಯಾಲೆನ್ಸ್ ಮಿತಿ ಅನ್ವಯಿಸುತ್ತವೆ.ಅಷ್ಟು ಬ್ಯಾಲೆನ್ಸ್ ಖಾತೆಯಲ್ಲಿ ಇಲ್ಲವಾದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಬೇರೆ ಬೇರೆ ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ ಇರುತ್ತದೆ. ಹಲವು ಬ್ಯಾಂಕ್‌ಗಳಲ್ಲಿ ಈ ಮಿತಿ 10,000 ರೂಪಾಯಿಯಿದೆ. ಒಂದು ಖಾತೆಯಲ್ಲಿಯೇ ಇಷ್ಟು ಕನಿಷ್ಠ ಬ್ಯಾಲೆನ್ಸ್ ಮೆಂಟೇನ್ ಮಾಡುವುದು ಕಷ್ಟ ಎನ್ನುವವರು,ಎರಡು ಖಾತೆ ಹೊಂದಿದ್ದರೆ ನಿಶ್ಚಿತವಾಗಿ ದಂಡ ಪಾವತಿಸಬೇಕಾಗುತ್ತದೆ. ಉಳಿತಾಯ ಖಾತೆ ಹಣ ಉಳಿಸುವ ಬದಲು ನಷ್ಟಕ್ಕೆ ಕಾರಣವಾಗುತ್ತದೆ.

ತೆರಿಗೆ ಪಾವತಿಯಲ್ಲಿ ತೊಂದರೆ:  ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ತೆರಿಗೆ ಪಾವತಿ ವೇಳೆ  ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತೆರಿಗೆ ಸಲ್ಲಿಸುವಾಗ, ಎಲ್ಲಾ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕಾಗುತ್ತದೆ.ಇದು ತೊಂದರೆಯನ್ನುಂಟು ಮಾಡುತ್ತದೆ. ಜೊತೆಗೆ ಸಮಸ್ಯೆಗೆ ಕಾರಣವಾಗುತ್ತದೆ.

ನಿರ್ವಹಣಾ ಶುಲ್ಕ- ಸೇವಾ ಶುಲ್ಕ ಪಾವತಿ : ಬ್ಯಾಂಕ್ ಗಳು ಗ್ರಾಹಕರಿಂದ ನಿರ್ವಹಣಾ ಶುಲ್ಕ ಮತ್ತು ಸೇವಾ ಶುಲ್ಕವನ್ನು ವಸೂಲಿ ಮಾಡುತ್ತವೆ. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೆ, ಎರಡೂ ಅಥವಾ ಮೂರು ಬ್ಯಾಂಕ್ ಗಳ ಖಾತೆಗೂ ವಾರ್ಷಿಕ ನಿರ್ವಹಣಾ ಶುಲ್ಕಗಳು ಮತ್ತು ಸೇವಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಗಳಿಗೂ ಹಣ ಪಾವತಿಸಬೇಕಾಗುತ್ತದೆ.ಇದರಿಂದಾಗಿ ಆರ್ಥಿಕ ತೊಂದರೆ ಹೆಚ್ಚಾಗುತ್ತದೆ. ಹೆಚ್ಚು ಕಾರ್ಡ್ ಪಡೆದಷ್ಟು ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ.

ಕ್ರೆಡಿಟ್ ಸ್ಕೋರ್ (Credit Score): ಇನ್ನೊಂದು ಮಹತ್ವದ ವಿಷ್ಯವೆಂದ್ರೆ ಕ್ರೆಡಿಟ್ ಸ್ಕೋರ್. ಒಂದಕ್ಕಿಂತ ಹೆಚ್ಚು ನಿಷ್ಕ್ರಿಯ ಖಾತೆಗಳನ್ನು ಹೊಂದಿದ್ದರೆ  ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು.ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ವಿಫಲವಾದರೆ, ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಆಗ ನಿಮಗೆ ಸಾಲ ಸೇರಿದಂತೆ ಬ್ಯಾಂಕ್ ನ ಕೆಲ ಸೌಲಭ್ಯಗಳು ಸಿಗುವುದಿಲ್ಲ. ಹಾಗಾಗಿ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದರೆ ತಕ್ಷಣ ಖಾತೆ ಮುಚ್ಚಿ. ಒಂದೇ ಖಾತೆಯಲ್ಲಿ ಕೆಲಸ ಮುಂದುವರೆಸಿ.

click me!