India Post Payments Bank: ಜನವರಿ 1ರಿಂದ ನಗದು ವಿತ್ ಡ್ರಾ, ಠೇವಣಿ ಶುಲ್ಕದಲ್ಲಿ ಬದಲಾವಣೆ

By Suvarna NewsFirst Published Dec 4, 2021, 4:53 PM IST
Highlights

ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್( IPPB) ನಗದು ವಿತ್ ಡ್ರಾ ಹಾಗೂ ಠೇವಣಿ ಮೇಲಿನ ಶುಲ್ಕಗಳನ್ನು ಪರಿಷ್ಕರಿಸಿದೆ. ಹೊಸ ಶುಲ್ಕ ನೀತಿ ಜನವರಿ 1ರಿಂದ ಜಾರಿಗೆ ಬರಲಿದೆ.

ನವದೆಹಲಿ (ಡಿ.4): ನಗದು ವಿತ್ ಡ್ರಾ ಹಾಗೂ ಠೇವಣಿ ಮೇಲಿನ ಶುಲ್ಕಗಳನ್ನುಪರಿಷ್ಕರಿಸಲಾಗಿದ್ದು,ಹೊಸ ಶುಲ್ಕ 2022ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (IPPB) ಘೋಷಿಸಿದೆ. ಐಪಿಪಿಬಿ ಭಾರತೀಯ ಅಂಚೆಯ ಒಂದು ವಿಭಾಗವಾಗಿದ್ದು, ಭಾರತೀಯ ಅಂಚೆ ಇಲಾಖೆ (Indian Postal Department)ಅಧೀನಕ್ಕೊಳಪಡುತ್ತದೆ. ಐಪಿಪಿಬಿ ನವೆಂಬರ್ 3ರಂದು ಹೊರಡಿಸಿರೋ ಪ್ರಕಟಣೆಯಲ್ಲಿ ಹೊಸ ದರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. 

ಮೂಲ (basic) ಉಳಿತಾಯ ಖಾತೆಯಿಂದ ಮಾಸಿಕ 4 ಬಾರಿ ಹಣ ವಿತ್ ಡ್ರಾ ಮಾಡಲು ಯಾವುದೇ ಶುಲ್ಕವಿಲ್ಲ.ಆದ್ರೆ ಈ ಉಚಿತ ವಿತ್ ಡ್ರಾ ಮಿತಿ ಮೀರಿದ ಪ್ರತಿ ವಹಿವಾಟಿಗೆ ಕನಿಷ್ಠ 25ರೂ.ನಿಂದ ಹಿಡಿದು ಹಿಂಪಡೆದ ಹಣದ ಮೊತ್ತದ ಶೇ.0.50 ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕ ಜಿಎಸ್ ಟಿ(GST)  ಹಾಗೂ ಸಿಇಎಸ್ಎಸ್ ಗಳನ್ನು (CESS) ಒಳಗೊಂಡಿಲ್ಲ.ಆದ್ರೆ ಈ ಖಾತೆಯಲ್ಲಿ ನಗದು ಠೇವಣಿಯಿಡಲು(Cash deposit) ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
ಉಳಿತಾಯ (ಬೇಸಿಕ್ ಉಳಿತಾಯ ಖಾತೆ ಹೊರತುಪಡಿಸಿ) ಹಾಗೂ ಚಾಲ್ತಿ ಖಾತೆಗಳಿಂದ ಮಾಸಿಕ  25,000ರೂ. ತನಕ ನಗದು ವಿತ್ ಡ್ರಾ ಮಾಡಲು ಯಾವುದೇ ಶುಲ್ಕ ವಿಧಿಸಿಲ್ಲ. ಆದ್ರೆ ಇದನ್ನು ಮೀರಿದ ಪ್ರತಿ ನಗದು ವಿತ್ ಡ್ರಾ ಮೇಲೆ ಕನಿಷ್ಠ 25ರೂ. ನಿಂದ ಹಿಡಿದು ಹಿಂಪಡೆದ ಮೊತ್ತದ ಶೇ.0.50ರಷ್ಟು ಶುಲ್ಕ ವಿಧಿಸಲಾಗುತ್ತದೆ. ಇನ್ನು ಈ ಖಾತೆಗಳಲ್ಲಿ 10 ಸಾವಿರ ರೂ. ತನಕ ನಗದು ಠೇವಣಿ ಜಮೆ ಮಾಡಲು ಯಾವುದೇ ಶುಲ್ಕವಿಲ್ಲ. ಆದ್ರೆ ಇದಕ್ಕಿಂತ ಅಧಿಕ ಮೊತ್ತದ ಮೇಲೆ ಕನಿಷ್ಠ 25ರೂ. ನಿಂದ ಹಿಡಿದು ಠೇವಣಿಯಿಟ್ಟ ಮೊತ್ತದ ಶೇ.0.50ರಷ್ಟು ಶುಲ್ಕ ವಿಧಿಸಲಾಗುತ್ತದೆ. 

LIC IPO: ಪ್ಯಾನ್ ಮಾಹಿತಿ ನವೀಕರಿಸಲು ಪಾಲಿಸಿದಾರರಿಗೆ ಸೂಚನೆ

ಉಳಿತಾಯ ಖಾತೆ ವಿಧಗಳು
ಐಪಿಪಿಬಿಯಲ್ಲಿ ಮೂರು ವಿಧದ ಖಾತೆಗಳಿವೆ- ನಿಯಮಿತ (Regular), ಡಿಜಿಟಲ್(Digital ) ಹಾಗೂ ಮೂಲ ಉಳಿತಾಯ ಖಾತೆ(Basic savings account). ಈ ಖಾತೆಗಳಲ್ಲಿಒಂದು ಲಕ್ಷ ರೂ.ತನಕದ ಬ್ಯಾಲೆನ್ಸ್ ಮೇಲೆ ಶೇ.2.50, ಒಂದು ಲಕ್ಷದಿಂದ ಎರಡು ಲಕ್ಷ ರೂ. ತನಕ ಬ್ಯಾಲೆನ್ಸ್ ಇದ್ರೆ ಶೇ.2.75 ಬಡ್ಡಿದರ ನೀಡಲಾಗುತ್ತಿದೆ.ಈ ಎಲ್ಲ ಉಳಿತಾಯ ಖಾತೆಗಳನ್ನು ಶೂನ್ಯ ಬ್ಯಾಲೆನ್ಸ್ ನೊಂದಿಗೆ ತೆರೆಯಲು ಅವಕಾಶವಿದೆ. 

ಅಂಚೆ ಕಚೇರಿ ಉಳಿತಾಯ ಖಾತೆ
ಐಪಿಪಿಬಿ ಬ್ಯಾಂಕ್ ಮಾತ್ರವಲ್ಲದೆ, ಅಂಚೆ ಕಚೇರಿಯಲ್ಲಿ ಕೂಡ ನೀವು ಉಳಿತಾಯ ಖಾತೆ ತೆರೆಯಲು ಅವಕಾಶವಿದೆ. ಈ ಖಾತೆಯಲ್ಲಿರೋ ಹಣಕ್ಕೆ ಅಂಚೆ ಇಲಾಖೆ ಬಡ್ಡಿ ಕೂಡ ನೀಡುತ್ತದೆ. ಅಂಚೆ ಕಚೇರಿಯಲ್ಲಿಉಳಿತಾಯ ಖಾತೆಯನ್ನು ಕನಿಷ್ಠ 20ರೂ.ನಗದಿನೊಂದಿಗೆ ತೆರೆಯಬಹುದು. ಚೆಕ್ ಸೌಲಭ್ಯವಿಲ್ಲದ ಖಾತೆಯಲ್ಲಿ 50ರೂ. ಕನಿಷ್ಠ ಬ್ಯಾಲೆನ್ಸ್ ಇರೋದು ಅಗತ್ಯ. ಈ ಉಳಿತಾಯ ಖಾತೆಗಳಿಗೆ ವಾರ್ಷಿಕ ಶೇ.4ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. 

ATM Transactions: ಜ.1ರಿಂದ ಎಟಿಎಂ ಹಣ ವಿತ್ ಡ್ರಾ ಶುಲ್ಕ ಹೆಚ್ಚಳ

ಎಟಿಎಂ ದರ ಪರಿಷ್ಕರಣೆ 
ಅಂಚೆ ಇಲಾಖೆ ಇತ್ತೀಚೆಗೆ ಎಟಿಎಂ ಕಾರ್ಡ್ಗಳ ಮೇಲಿನ ವಿವಿಧ ಶುಲ್ಕಗಳನ್ನು ಕೂಡ ಪರಿಷ್ಕರಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ. ಇನ್ನು ಎಟಿಎಂ ಮೂಲಕ ಮಾಸಿಕ ಹಣಕಾಸು ಹಾಗೂ ಹಣಕಾಸೇತರ ಉಚಿತ ವಹಿವಾಟುಗಳ ಮಿತಿಯನ್ನು ಕೂಡ ಬದಲಾಯಿಸಿದೆ. ಎಟಿಎಂ/ ಡೆಬಿಟ್ ಕಾರ್ಡ್ ವಾರ್ಷಿಕ ನಿರ್ವಹಣಾ ಶುಲ್ಕ 125ರೂ.+ಜಿಎಸ್ ಟಿ (GST) ನಿಗದಿಪಡಿಸಿರೋದಾಗಿ ಸುತ್ತೋಲೆಯಲ್ಲಿ ತಿಳಿಸಿದೆ. ಅಲ್ಲದೆ, ಡೆಬಿಟ್ ಕಾರ್ಡ್ ಗ್ರಾಹಕರ ಮೊಬೈಲ್ ಗೆ ಎಸ್ಎಂಎಸ್ ಅಲರ್ಟ್ ಕಳುಹಿಸೋದಕ್ಕೆ ವಾರ್ಷಿಕ 12ರೂ. ನಿಗದಿಪಡಿಸಿದೆ.ಒಂದು ವೇಳೆ ಗ್ರಾಹಕರು ಭಾರತೀಯ ಅಂಚೆ ಇಲಾಖೆಯ ಎಟಿಎಂ ಕಾರ್ಡ್ ಕಳೆದುಕೊಂಡರೆ ಅಂಥವರು ಹೊಸ ಕಾರ್ಡ್ ಪಡೆಯಲು 300ರೂ. +ಜಿಎಸ್ ಟಿ ಪಾವತಿಸಬೇಕು. ಹೊಸ ಎಟಿಎಂ ಪಿನ್ ಸಂಖ್ಯೆ ಪಡೆಯಲು ಗ್ರಾಹಕರು 50ರೂ. ಪಾವತಿಸಬೇಕು. 

click me!