
ಜೈಪುರ್(ಜು.24): ರಾಜಸ್ಥಾನದಲ್ಲಿ ಗೋಮೂತ್ರ ನಿಜಕ್ಕೂ ದ್ರವರೂಪದ ಬಂಗಾರವಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ರಾಜ್ಯದ ಹೈನು ಕೃಷಿಕರಿಗೆ ದನದ ಹಾಲಿಗಿಂತಲೂ ಹೆಚ್ಚು ಆದಾಯ ಗೋಮೂತ್ರದಿಂದ ಬರುತ್ತಿದೆ.
ರಾಜಸ್ಥಾನದಲ್ಲಿ ದನದ ಹಾಲನ್ನು ಮಾರುವ ಹೈನು ಕೃಷಿಕರಿಗೆ ಲೀಟರಿಗೆ 22 ರಿಂದ 25 ರೂ. ಸಿಗುತ್ತದೆ. ಆದರೆ ಗೋಮೂತ್ರವನ್ನು ಹೋಲ್‌ಸೇಲ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿದರೆ ಲೀಟರಿಗೆ 30 ರೂ. ಸಿಗುತ್ತಿದೆ.
ಸಾವಯವ ಕೃಷಿಗೆ ಈಗ ಅತ್ಯಧಿಕ ಒತ್ತು ದೊರಕುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ರೈತರು ತಮ್ಮ ಕೃಷಿ ಭೂಮಿಗೆ ರಾಸಾಯನಿಕ ಗೊಬ್ಬರಕ್ಕಿಂತ ಗೋಮೂತ್ರ ಮತ್ತು ಹಟ್ಟಿ ಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ಗೋಮೂತ್ರ ಮಾರುವ ಹೈನು ಕೃಷಿಕರ ಆದಾಯ ರಾಜಸ್ಥಾನದಲ್ಲೀಗ ಶೇ. 30ರಷ್ಟು ಹೆಚ್ಚಾಗಿದೆ ಎಂದು ಇಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಹೈನು ಕೃಷಿಕರಿಗೆ ಉಚ್ಚ ತಳಿಯ ಗೋವುಗಳಿಂದ ಅಧಿಕ ಲಾಭ ಬರುತ್ತಿದೆ. ಇವುಗಳಲ್ಲಿ ಗಿರ್ ಮತ್ತು ಥರ್‌ಪಾರ್‌ಕರ್ ತಳಿಗಳು ಮುಖ್ಯವಾಗಿವೆ. ಈ ತಳಿಗಳ ಗೋಮೂತ್ರಕ್ಕೆ ಲೀಟರಿಗೆ 15ರಿಂದ 30 ರೂ. ಬೆಲೆ ಇದೆ.
ಗೋಮೂತ್ರವನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಹೆಚ್ಚೆಚ್ಚು ಬಳಸಲಾಗುತ್ತಿದ್ದು, ಇದೂ ಕೂಡ ಹೈನು ಕೃಷಿಕರ ಬಾಳಲ್ಲಿ ಮಂದಹಾಸ ಮೂಡಿಸಿದೆ. ಅಲ್ಲದೇ ಧಾರ್ಮಿಕ ಉದ್ದೇಶಗಳಿಗೂ, ಮುಖ್ಯವಾಗಿ ಯಾಗ, ಯಜ್ಞ, ಹೋಮ, ಹವನ, ಪಂಚಗವ್ಯಕ್ಕೆ ಗೋಮೂತ್ರ ಬಳಕೆಯಾಗುತ್ತದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಮೂತ್ರಕ್ಕೆ ಒಳ್ಳೆಯ ಬೇಡಿಕೆ ಮತ್ತು ಬೆಲೆ ಇದೆ. ಇಲ್ಲಿ ಗೋಮೂತ್ರಕ್ಕೆ ಲೀಟರಿಗೆ 30ರಿಂದ 50 ರೂ. ಬೆಲೆ ಇದೆ. ಹಾಗಾಗಿ ಗೋಮೂತ್ರದಿಂದ ಹೈನು ಕೃಷಿಕರಿಗೆ ಉತ್ತಮ ಹೆಚ್ಚುವರಿ ಆದಾಯಕ ದೊರಕುವಂತಾಗಿದೆ.
ಉದಯಪುರದ ಮಹಾರಾಣಾ ಪ್ರತಾಪ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಅತ್ಯಧಿಕ ಪ್ರಮಾಣದ ಗೋಮೂತ್ರ ಖರೀದಿದಾರ ಸಂಸ್ಥೆಯಾಗಿದೆ. ಈ ವಿಶ್ವವಿದ್ಯಾಲಯ ಸಾವಯವ ಕೃಷಿಗಾಗಿ ಪ್ರತೀ ತಿಂಗಳೂ 300ರಿಂದ 500 ಲೀಟರ್ ಗೋ ಮೂತ್ರವನ್ನು ಹೈನು ಕೃಷಿಕರಿಂದ ಖರೀದಿಸುತ್ತದೆ. ಇದರಿಂದ ವಿವಿಗೆ 15 ರಿಂದ 20 ಸಾವಿರ ರೂ. ಖರ್ಚು ಬರುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.