ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಸೋಷಿಯಲ್ ಮೀಡಿಯಾದಲ್ಲಿಸದಾ ಸಕ್ರಿಯ. ಒಂದಿಲ್ಲೊಂದು ಟ್ವೀಟ್ ಮೂಲಕ ಸುದ್ದಿಗೆ ಮೂಲವಾಗುವ ಮಸ್ಕ್, ಇಂದು ಸಾವಿನ ಕುರಿತು ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿದ್ದಾರೆ. ಎಲಾನ್ ಮಸ್ಕ್ ಇಂದು ಮಾಡಿದ ಟ್ವೀಟ್, ಒಂದು ಗಂಟೆಯೊಳಗೆ 33 ಸಾವಿರಕ್ಕೂ ಅಧಿಕ ಬಾರಿ ರಿಟ್ವೀಟ್ ಆಗಿದೆ.
Business Desk: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ವಿಶ್ವದ ನಂ.1 ಶ್ರೀಮಂತ ,ಟೆಸ್ಲಾ (Tesla) ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಒಂದಿಲ್ಲೊಂದು ಟ್ವೀಟ್ (Tweet) ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಎಲಾನ್ ಮಸ್ಕ್ ಇಂದು (ಮೇ 9) ಸಾವಿನ ಕುರಿತು ಮಾಡಿದ ಟ್ವೀಟ್ ವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ, ಮಸ್ಕ್ ಈ ರೀತಿ ಟ್ವೀಟ್ ಮಾಡಲು ಕಾರಣವೇನು ಎಂಬ ಕುತೂಹಲವು ಮೂಡಿದೆ.
ಮಸ್ಕ್ ಇಂದು ಅನುಮಾನಾಸ್ಪದ (Mysterious) ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಒಂದು ವೇಳೆ ನಾನು ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವನ್ನಪ್ಪಿದರೆ, ಅದರ ಕಾರಣ ತಿಳಿದಿದೆ' ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಒಂದು ಗಂಟೆಯೊಳಗೆ 33 ಸಾವಿರಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. 'ಇಲ್ಲ, ನೀವು ಸಾಯಲ್ಲ. ಸುಧಾರಣೆಗಾಗಿ ಜಗತ್ತಿಗೆ ನಿಮ್ಮ ಅಗತ್ಯವಿದೆ' ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬ ಟ್ವಿಟರ್ ಬಳಕೆದಾರ 'ಜಗತ್ತಿಗೆ ನಿಮ್ಮ ಅಗತ್ಯವಿದೆ' ಎಂದಿದ್ದಾರೆ. ಮತ್ತೊಬ್ಬರು 'ಯಾವುದೇ ಬೆಲೆ ತೆತ್ತಾದರೂ ನಾವು ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಮಾನವೀಯತೆ ನಿಮ್ಮನ್ನು ರಕ್ಷಿಸುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಮಸ್ಕ್ ಟ್ವೀಟ್ ಹಿಂದಿನ ಅರ್ಥ ಹಾಗೂ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಈ ಟ್ವೀಟ್ ಅನ್ನು ಬೇರೆ ಬೇರೆ ಆಯಾಮಗಳಲ್ಲಿ ವಿಶ್ಲೇಷಿಸಿ ಅರ್ಥ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.
Elon Musk: ಟ್ವಿಟರ್ ಆಯ್ತು, ಈಗ ಕೋಕಾ ಕೋಲಾ ಮೇಲೆ ಕಣ್ಣು; ಟ್ವೀಟ್ ಮೂಲಕ ಕಾಮಿಡಿ ಮಾಡ್ತಿದ್ದಾರಾ ಮಸ್ಕ್?
ಈ ಟ್ವೀಟ್ ನಲ್ಲಿ ಮಸ್ಕ್ ಉಲ್ಲೇಖಿಸಿರುವ ಸಾಲುಗಳು ನೈಸ್ ನೋಯಿನ್ ಯಾ ಹಾಡಿದ್ದಾಗಿದೆ ಎನ್ನಲಾಗುತ್ತಿದೆ. ಈ ಹಾಡು TWENTY2 ಎಂಬ ಬ್ಯಾಂಡ್ ನಿಂದ 2018ರಲ್ಲಿ ಬಿಡುಗಡೆಯಾಗಿತ್ತು. ಆದ್ರೆ ಈ ಟ್ವೀಟ್ ಗಿಂತಲೂ ಒಂದು ಗಂಟೆ ಮುನ್ನ ಮಸ್ಕ್ ಪೋಸ್ಟ್ ವೊಂದನ್ನು ಷೇರ್ ಮಾಡಿದ್ದರು. ಅದು ರಷ್ಯಾದ ಅಧಿಕಾರಿಯೊಬ್ಬರ ಸಂದೇಶವಾಗಿತ್ತು. ಅದರಲ್ಲಿ ಮಿಲಿಟರಿ ಸಂವಹನ ಸಾಧನಗಳ ಜೊತೆಗೆ ಫ್ಯಾಸಿಸ್ಟ್ ಪಡೆಗಳನ್ನು ಉಕ್ರೇನ್ ಗೆ ಕಳುಹಿಸುವ ಕಾರ್ಯದಲ್ಲಿ ಎಲಾನ್ ಮಸ್ಕ್ ಭಾಗಿಯಾಗಿರುವುದಾಗಿ ಇತ್ತು. ಅಲ್ಲದೆ, 'ಇದಕ್ಕಾಗಿ ಎಲಾನ್, ನೀನು ವಯಸ್ಕನಂತೆ ಜವಾಬ್ದಾರನಾಗಿದ್ದೀಯಾ. ನೀವು ಎಷ್ಟು ಆಟವಾಡಿದರೂ ಬಿಡುವುದಿಲ್ಲ' ಎಂದು ಬರೆಯಲಾಗಿತ್ತು. ಹೀಗಾಗಿ ಮಸ್ಕ್ ರಷ್ಯಾದಿಂದ ತನ್ನ ಜೀವಕ್ಕೆ ಅಪಾಯವಿದೆ ಎಂಬುದನ್ನು ಟ್ವೀಟ್ ಮೂಲಕ ಹೇಳುವ ಪ್ರಯತ್ನ ಮಾಡಿರಬಹುದು ಎಂಬ ಊಹೆ ಕೂಡ ಇದೆ.
ಇತ್ತೀಚೆಗಷ್ಟೇ 44 ಬಿಲಿಯನ್ ಅಮೆರಿಕನ್ ಡಾಲರ್ ಗೆ ಟ್ವಿಟರ್ ಖರೀದಿಸುವ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಂಚಲನ ಮೂಡಿಸಿರುವ ಎಲಾನ್ ಮಸ್ಕ್ ಈ ರೀತಿ ಟ್ವೀಟ್ ಮಾಡೋದು ಹೊಸದೇನಲ್ಲ. ಟ್ವಿಟರ್ ಒಪ್ಪಂದ ನಡೆದ ಕೆಲವೇ ದಿನಗಳಲ್ಲಿ 'ನನ್ನ ಮುಂದಿನ ಗುರಿ ಕೋಕಾ ಕೋಲಾ (Coca Cola)' ಎಂದು ಟ್ವೀಟ್ ಮಾಡುವ ಮೂಲಕ ಚರ್ಚೆ ಹುಟ್ಟು ಹಾಕಿದ್ದರು. ಆದ್ರೆ ಮಸ್ಕ್ ಈ ಟ್ವೀಟ್ ಅನ್ನು ಗಂಭೀರವಾಗಿ ಮಾಡಿದ್ದಾರೋ ಅಥವಾ ತಮಾಷೆಯಾಗಿಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
Elon Musk Advice:ಯಾವ ಕಂಪನಿ ಷೇರು ಖರೀದಿಸಿದ್ರೆ ಲಾಭ? ಎಲಾನ್ ಮಸ್ಕ್ ನೀಡಿದ ಟಿಪ್ಸ್ ಹೀಗಿದೆ ನೋಡಿ
ಇನ್ನು ಮಸ್ಕ್ 5 ವರ್ಷಗಳ ಹಿಂದೆಯೇ ದೈತ್ಯ ಮೈಕ್ರೋಬ್ಲಾಗಿಂಗ್ ಸಂಸ್ಥೆ ಖರೀದಿಗೆ ಆಸಕ್ತಿ ಹೊಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿರುವ ಹಳೆಯ ಟ್ವೀಟ್ ವೊಂದು (tweet) ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 2017ರ ಡಿಸೆಂಬರ್ 21ರಂದು ಮಸ್ಕ್ ಹಾಗೇ ಸುಮ್ಮನೆ “I love Twitter” ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಟ್ವಿಟರ್ (Twitter) ಬಳಕೆದಾರರೊಬ್ಬರು ಆ ಸಂಸ್ಥೆಯನ್ನೇ ಖರೀದಿಸುವಂತೆ ಮಸ್ಕ್ ಗೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್ 'ಇದಕ್ಕೆ ಎಷ್ಟು? ಎಂದು ಪ್ರಶ್ನಿಸಿದ್ದರು.