ಆನ್ ಲೈನ್ ವಂಚನೆಗೆ ನಾನಾ ಮುಖಗಳಿವೆ ಎಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಈಗ ಸೈಬರ್ ವಂಚಕರು ಬ್ಯಾಂಕ್ ಖಾತೆಗೆ ಕನ್ನ ಹಾಕಲು AnyDesk app ತಂತ್ರ ಬಳಸಿಕೊಳ್ಳುತ್ತಿದ್ದು, ಉತ್ತರ ಪ್ರದೇಶದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು 5 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಲಖ್ನೋ (ಅ.26): ದೇಶದಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿವೆ. ಹಣ ಲೂಟಿ ಮಾಡಲು ವಂಚಕರು ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಐಎಎಸ್ ಅಧಿಕಾರಿಯೊಬ್ಬರು ಹಣ ಕಳೆದುಕೊಂಡಿದ್ದಾರೆ. ಲಖನೌ ಪ್ರಗ್ ನಾರಾಯಣ ರಸ್ತೆ ನಿವಾಸಿ, ನಿವೃತ್ತ ಐಎಎಸ್ ಅಧಿಕಾರಿ ರಾಮ್ ಕುನ್ವರ್ ಆನ್ ಲೈನ್ ವಂಚನೆಗೊಳಗಾಗಿದ್ದು, 5ಲಕ್ಷ ರೂ. ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ವಂಚಕರು ಯಾರೂ ಊಹಿಸದ ಹೊಸ ವಿಧಾನವೊಂದನ್ನು ಅನುಸರಿಸುವ ಮೂಲಕ ಐಎಎಸ್ ಅಧಿಕಾರಿ ಖಾತೆಗೆ ಕನ್ನ ಹಾಕಿದ್ದಾರೆ. ಸಿನಿಮೀಯ ಮಾದರಿಯಲ್ಲಿ ಈ ವಂಚನೆ ಪ್ರಕರಣ ನಡೆದಿದೆ. ಪ್ರಾರಂಭದಲ್ಲಿ ಒಂದು ಸಂದೇಶದ ಮೂಲಕ ವಂಚಕರು ಐಎಎಸ್ ಅಧಿಕಾರಿಯನ್ನು ಸಂಪರ್ಕಿಸಿದ್ದು, ಆ ಬಳಿಕ ಅವರ ಖಾತೆಗೆ ಕನ್ನ ಹಾಕಿದ್ದಾರೆ. ಅಕ್ಟೋಬರ್ 3ರಂದು ರಾಮ್ ಅವರ ಮೊಬೈಲ್ ಗೆ 29.78 ಕೋಟಿ ರೂ. ಕ್ರೆಡಿಟ್ ಆಗಿರುವ ಸಂದೇಶ ಬರುತ್ತದೆ. ಈ ವಿಚಾರವನ್ನು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಾಗ ಇದು ಬ್ಯಾಂಕ್ ನಿಂದ ಬಂರುವ ಸಂದೇಶವಲ್ಲ ಎಂಬುದು ತಿಳಿಯುತ್ತದೆ. ಆದರೆ, ಇದರ ಮೂಲ ಹುಡುಕಲು ಹೊರಟ ರಾಮ್ ಅವರಿಗೆ ಬ್ಯಾಂಕ್ ಅಧಿಕಾರಿಗಳಿಂದ ಸೂಕ್ತ ಸಹಕಾರ ಸಿಗೋದಿಲ್ಲ. ಆದರೆ, ಅವರು 5ಲಕ್ಷ ರೂ. ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ರಾಮ್ ಕುನ್ವರ್ ಅವರ ಬ್ಯಾಂಕ್ ಖಾತೆಗೆ 29.78 ಕೋಟಿ ರೂ. ಕ್ರೆಡಿಟ್ ಆಗಿರುವ ಸಂದೇಶ ಬಂದ ತಕ್ಷಣ ಜಾಗ್ರತರಾಗುವ ಅವರು ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡುತ್ತಾರೆ. ಆಗ ಬ್ಯಾಂಕ್ ಮ್ಯಾನೇಜರ್ ಈ ಸಂದೇಶ ಬ್ಯಾಂಕಿನಿಂದ ಬಂದಿಲ್ಲ ಎಂಬ ಮಾಹಿತಿ ನೀಡುತ್ತಾರೆ. ಆದರೆ, ಈ ಸಂದೇಶದ ಮೂಲದ ಬಗ್ಗೆ ತಿಳಿಯಲು ಬ್ಯಾಂಕ್ ಮ್ಯಾನೇಜರ್ ಯಾವ ಆಸಕ್ತಿ ಕೂಡ ತೋರಿಸೋದಿಲ್ಲ. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಯಲಿ ಎಂಬ ಉದ್ದೇಶದಿಂದ ರಾಮ್, ಬ್ಯಾಂಕಿನ ಝೋನಲ್ ಮ್ಯಾನೇಜರ್ ಗೆ ಈ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ, ಝೋನಲ್ ಮ್ಯಾನೇಜರ್ ಕೂಡ ಈ ವಿಚಾರದ ಬಗ್ಗೆ ಹೆಚ್ಚಿನ ಆಸಕ್ತಿ ತೋರೋದಿಲ್ಲ. ಅಲ್ಲದೆ, ಬ್ಯಾಂಕಿನ ಕಿರಿಯ ಅಧಿಕಾರಿ ಈ ಬಗ್ಗೆ ವಿಚಾರಣೆ ನಡೆಸುತ್ತಾರೆ ಎಂಬ ಮಾಹಿತಿ ನೀಡುತ್ತಾರೆ.
ಆಧಾರ್ ಕಾರ್ಡ್ ಬಳಕೆದಾರರು ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿದ್ರೆ, ಬ್ಯಾಂಕ್ ಖಾತೆಯಲ್ಲಿರುವ ಹಣ ಸೇಫ್!
ಈ ಎಲ್ಲ ಘಟನೆಗಳು ನಡೆಯುತ್ತಿರುವಾಗಲೇ ರಾಮ್ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬರುತ್ತದೆ. ತನ್ನ ಹೆಸರು ಅವಿನಾಶ್ , ಹಿರಿಯ ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಳ್ಳುವ ಆ ವ್ಯಕ್ತಿ, ತಪ್ಪಾಗಿ ರಾಮ್ ಖಾತೆಗೆ ಹಣ ಕ್ರೆಡಿಟ್ ಆಗಿರೋದಾಗಿ ತಿಳಿಸುತ್ತಾರೆ. ಅಲ್ಲದೆ, ಈ ಪ್ರಕರಣವನ್ನು ಇತ್ಯರ್ಥಪಡಿಸಲು AnyDesk app ಡೌನ್ಲೋಡ್ ಮಾಡುವಂತೆ ತಿಳಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ರಾಮ್ ತಮ್ಮ ಸೆಂಟ್ರಲ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಖಾತೆಗಳ ಸೂಕ್ಷ್ಮ ಮಾಹಿತಿಗಳನ್ನು ತಿಳಿಯದೆ ಹಂಚಿಕೊಳ್ಳುತ್ತಾರೆ. AnyDesk app ಮೂಲಕ ಅನ್ಯ ವ್ಯಕ್ತಿ ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲಿರುವ ಮಾಹಿತಿಗಳನ್ನು ಪಡೆಯಬಹುದು. ಹೀಗಾಗಿ ಈ app ಬಳಸಿ ಯಾರಿಗಾದರೂ ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ಮೇಲಿನ ಮಾಹಿತಿ ಪಡೆಯಲು ಅವಕಾಶ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕು.
ಆರ್ಡರ್ ಮಾಡದೆ ಮನೆಗೆ ಬಂತು ಸಾವಿರ ಕಾಂಡೋಮ್! ಹಣ ಕಟ್ ಆಗ್ತಿದ್ದಂತೆ ಮಹಿಳೆ ಕಂಗಾಲು
ಈ ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ರಾಮ್ ಅವರ ಸೆಂಟ್ರಲ್ ಬ್ಯಾಂಕ್ ಖಾತೆಯಿಂದ 4.65 ಲಕ್ಷ ರೂ. ಕಡಿತವಾಗಿರುವ ಸಂದೇಶ ಬರುತ್ತದೆ. ಹಾಗೆಯೇ ಯೂನಿಯನ್ ಬ್ಯಾಂಕ್ ಖಾತೆಯಿಂದ 50 ಸಾವಿರ ರೂ. ಕಡಿತವಾಗಿರುವ ಸಂದೇಶ ಬರುತ್ತದೆ. ಆಗ ರಾಮ್ ಅವರಿಗೆ ತಾವು ವಂಚನೆಗೊಳಗಾಗಿರೋದು ತಿಳಿಯುತ್ತದೆ.ಈ ಘಟನೆಯಿಂದ ಎಚ್ಚೆತ್ತ ಹಜರತ್ ಗಂಜ್ ಎಸ್ ಎಚ್ ಒ ಪ್ರಮೋದ್ ಪಾಂಡೆ, ತಕ್ಷಣ ಎಫ್ ಐಆರ್ ದಾಖಲಿಸಿದ್ದಾರೆ. ಈ ಘಟನೆ ಬಗ್ಗೆ ವಿಚಾರಣೆ ನಡೆಯುತ್ತಿದೆ.