
ಮುಂಬೈ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಹಲವು ದೇಶಗಳ ವಸ್ತುಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳು ಮಂಕಾಗಿದ್ದು, ಇದಕ್ಕೆ ಭಾರತ ಕೂಡ ಸೇರಿಕೊಂಡಿದೆ. ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಒಂದೇ ದಿನ 2227 ಅಂಕ ಹಾಗೂ ನಿಫ್ಟಿ 742 ಅಂಕಗಳ ಮಹಾಪತನ ಕಂಡಿವೆ. 10 ತಿಂಗಳಲ್ಲಿ (2024ರ ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆ ಬಳಿಕ) ಏಕದಿನದ ಅತಿ ಕನಿಷ್ಠ ಕುಸಿತವಾಗಿದೆ. ಇದರಿಂದ ಒಂದೇ ದಿನ ಹೂಡಿಕೆದಾರರಿಗೆ ₹14 ಲಕ್ಷ ಕೋಟಿ ನಷ್ಟವಾಗಿದೆ.ಸೆನ್ಸೆಕ್ಸ್ ಸತತ ಮೂರನೇ ದಿನವು ಇಳಿಕೆ ಕಂಡಿದೆ. ಸೋಮವಾರದ ಆರಂಭದಲ್ಲಿ 3939.6 ಅಂಕ (ಶೇ.5ರಷ್ಟು) ಕುಸಿತ ಕಂಡು 71,425ಕ್ಕೆ ಇಳಿದಿತ್ತು. ಅನಂತರ ಅಲ್ಪ ಚೇತರಿಕೆ ಕಂಡು ದಿನದ ಅಂತ್ಯಕ್ಕೆ 2,226.7 ಅಂಕ ಇಳಿಕೆಯಾಗಿ ದಿನದ ಅಂತ್ಯಕ್ಕೆ 73,137.9 ಅಂಕದಲ್ಲಿ ಮುಕ್ತಾಯಗೊಂಡಿತು.
ಇನ್ನು ನಿಫ್ಟಿಯಲ್ಲಿಯೂ ಇಳಿಕೆಯಾಗಿದ್ದು 742.8 ಅಂಕ ಕುಸಿತದೊಂದಿಗೆ 22,161ರಲ್ಲಿ ಅಂತ್ಯಗೊಂಡಿತು. ಮಧ್ಯಂತರದಲ್ಲಿ ನಿಫ್ಟಿ 1,160.8 (ಶೇ.5.06)ರಷ್ಟು ಕುಸಿದಿತ್ತು. ಒಟ್ಟಾರೆ ಇಳಿಕೆ ಪ್ರಮಾಣ ಶೇ.3ರಷ್ಟಾಗಿದ್ದು, ಹೂಡಿಕೆದಾರರು ಸಂಪತ್ತು ಒಂದೇ ದಿನದಲ್ಲಿ 14 ಲಕ್ಷ ಕೋಟಿ ರು. ಕರಗಿದೆ. ಹಿಂದುಸ್ತಾನ್ ಯುನಿಲಿವರ್ ಬಿಟ್ಟು ಇನ್ನೆಲ್ಲ ಕಂಪನಿಗಳ ಷೇರು ಭಾರಿ ಇಳಿಕೆ ಕಂಡಿವೆ. ಅಮೆರಿಕಕ್ಕೆ ಹೆಚ್ಚು ಉಕ್ಕು ರಫ್ತು ಮಾಡುವ ಟಾಟಾ ಸ್ಟೀಲ್ ಷೇರು ಶೇ.7.33ರಷ್ಟು ಇಳಿದಿದೆ.
ಕಳೆದ ವರ್ಷ ಜೂ.4ಕ್ಕೆ 4389 ಅಂಕ ಕುಸಿದಿತ್ತು:
ಇಷ್ಟೊಂದು ಏಕದಿನದ ಕುಸಿತ, 2024ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂ.4ರಂದು ಆಗಿತ್ತು. ಬಿಜೆಪಿಗೆ ಸಂಪೂರ್ಣ ಬಹುಮತ ಬಾರದೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾರಣ 4,389.73 ಅಂಕ ಕುಸಿತ ಸಂಭವಿಸಿತ್ತು. ಅದಾದ ನಂತರದ ಒಂದು ದಿನದ ಗರಿಷ್ಠ ಕುಸಿತ ಈಗ ಆಗಿದೆ.
ಅಮೆರಿಕ ಷೇರುಪೇಟೆ ಕೂಡ ಹೊಯ್ದಾಟ
| ದೇಶ | ಅಂಕ ಇಳಿಕೆ | ಶೇಕಡಾ | ಅಂತ್ಯದ ಅಂಕ |
| ಜರ್ಮನಿ | 917.77 | 6.5% | 19,803 |
| ಫ್ರಾನ್ಸ್ | 286 | 5.7% | 6,988.74 |
| ಬ್ರಿಟನ್ | 331.93 | 4.12% | 7,723.84 |
| ಪಾಕಿಸ್ತಾನ | 3,882.18 | 3.27% | 114,909.48 |
| ಜಪಾನ್ | 2,644.00 | 7.83 | 31,136.58 |
| ಶಾಂಘೈ | 245.43 | 7.3% | 3,096.58 |
| ಹಾಂಕಾಂಗ್ | 3,021.51 | 3.22% | 19,828 |
| ತೈವಾನ್ | 2,065.87 | 9.70% | 19,232.35 |
ಇದನ್ನೂ ಓದಿ: ನೋಡಿ ಗೋಲ್ಡ್ ಖರೀದಿ ಮಾಡೋ ಟೈಮ್ ಬಂದೇ ಬಿಡ್ತು, ಒಂದೇ ದಿನ ಭಾರೀ ಪ್ರಮಾಣದಲ್ಲಿ ಕುಸಿದ ಚಿನ್ನದ ಬೆಲೆ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.