ಅಂಚೆ ಕಚೇರಿಯಲ್ಲಿ ನೀವು ಉಳಿತಾಯ ಖಾತೆ ಹೊಂದಿದ್ದು, ಅದನ್ನು ಮೂರು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಬಳಸದಿದ್ರೆ ಆಗ ಅದು ನಿಷ್ಕ್ರಿಯಗೊಳ್ಳುತ್ತದೆ. ಹಾಗಾದ್ರೆ ಅಂಥ ಖಾತೆಯನ್ನು ಸಕ್ರಿಯಗೊಳಿಸೋದು ಹೇಗೆ?
Business Desk:ಉಳಿತಾಯದ ವಿಚಾರ ಬಂದಾಗ ಮೊದಲು ನೆನಪಾಗೋದೆ ಅಂಚೆ ಕಚೇರಿ. ಏಕೆಂದರೆ ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡಿದ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ. ಇದೇ ಕಾರಣಕ್ಕೆ ಇಂದಿಗೂ ಭಾರತದ ಗ್ರಾಮೀಣ ಭಾಗದ ಜನರು ಹೂಡಿಕೆ ಹಾಗೂ ಉಳಿತಾಯಕ್ಕೆ ಅಂಚೆ ಕಚೇರಿಯನ್ನೇ ನೆಚ್ಚಿಕೊಂಡಿದ್ದಾರೆ. ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ ಕೂಡ ಸಿಗುತ್ತದೆ. ಹಾಗೆಯೇ ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಲು ಹೆಚ್ಚುವರಿ ಶುಲ್ಕ ಅಥವಾ ಕನಿಷ್ಠ ಬ್ಯಾಲೆನ್ಸ್ ಅಗತ್ಯವಿಲ್ಲ. ಹೀಗಿರುವಾಗ ಬ್ಯಾಂಕ್ ನಂತೆ ಅಂಚೆ ಕಚೇರಿಯಲ್ಲಿ ಕೂಡ ನಿಷ್ಕ್ರಿಯ ಖಾತೆ ಇದ್ದರೆ ಅದರ ಕಥೆಯೇನು? ಇಂಥ ಖಾತೆಯನ್ನು ಮತ್ತೆ ಸಕ್ರಿಯಗೊಳಿಸೋದು ಹೇಗೆ? ಇಲ್ಲಿದೆ ಮಾಹಿತಿ.
ಅಂಚೆ ಕಚೇರಿ ಖಾತೆಯಲ್ಲಿ ನಿರ್ದಿಷ್ಟ ಅವಧಿಗೆ ಯಾವುದೇ ಚಟುವಟಿಕೆ ನಡೆಸದಿದ್ದರೆ ಅಂಥ ಖಾತೆಯನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಅಂದರೆ ಒಂದು ಅಂಚೆ ಕಚೇರಿ ಖಾತೆಯಿಂದ ಸತತ ಮೂರು ಹಣಕಾಸು ವರ್ಷಗಳಲ್ಲಿ ಯಾವುದೇ ಠೇವಣಿ ಜಮೆ ಅಥವಾ ವಿತ್ ಡ್ರಾ ನಡೆಯದಿದ್ದರೆ ಅಂಥ ಖಾತೆಯನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ.
ಈ 9 ಪೋಸ್ಟ್ ಆಫೀಸ್ ಸ್ಕೀಂಗಳಲ್ಲಿ ಹೂಡಿಕೆ ಮಾಡಿ: ತೆರಿಗೆ ಪ್ರಯೋಜನ, ಗ್ಯಾರಂಟಿ ಆದಾಯ ತಗೊಳ್ಳಿ!
ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸೋದು ಹೇಗೆ?
ಕೆವೈಸಿ ದಾಖಲೆಗಳು ಹಾಗೂ ಪಾಸ್ ಪುಸ್ತಕದ ಜೊತೆಗೆ ಅರ್ಜಿ ಸಲ್ಲಿಕೆ ಮಾಡುವ ಮೂಲಕ ನಿಷ್ಕ್ರಿಯ ಅಂಚೆ ಕಚೇರಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು. ನೀವು ಖಾತೆ ತೆರೆದಿರುವ ಅಂಚೆ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ನಿಮ್ಮ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.
ಕನಿಷ್ಠ ಠೇವಣಿ ಎಷ್ಟು?
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಕನಿಷ್ಠ 500ರೂ. ಠೇವಣಿಯಿಡಬೇಕು. ಗರಿಷ್ಠ ಠೇವಣಿಗೆ ಯಾವುದೇ ಮಿತಿಯಿಲ್ಲ. 2023ರ ನವೆಂಬರ್ 30ಕ್ಕೆ ಅನ್ವಯಿಸುವಂತೆ ವೈಯಕ್ತಿಕ ಅಥವಾ ಜಂಟಿ ಖಾತೆಯಲ್ಲಿನ ಹೂಡಿಕೆಗೆ ವಾರ್ಷಿಕ ಶೇ.4ರಷ್ಟು ಬಡ್ಡಿ ನೀಡಲಾಗುತ್ತಿದೆ.
ಯಾರು ಖಾತೆ ತೆರೆಯಬಹುದು?
ವಯಸ್ಕ ವ್ಯಕ್ತಿ, ಇಬ್ಬರು ವಯಸ್ಕ ವ್ಯಕ್ತಿಗಳು, ಅಪ್ರಾಪ್ತರ ಪರವಾಗಿ ಅವರ ಪಾಲಕರು ಅಂಚೆ ಕಚೇರಿ ಉಳಿತಾಯ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಅಪ್ರಾಪ್ತರ ಹೆಸರಿನಲ್ಲಿ ಕೂಡ ಖಾತೆ ತೆರೆಯಬಹುದು.
ಅಂಚೆ ಕಚೇರಿ ಉಳಿತಾಯ ಖಾತೆ ತೆರೆಯೋದು ಹೇಗೆ?
ಈ ಖಾತೆಯನ್ನು ಆನ್ ಲೈನ್ ಹಾಗೂ ಆಪ್ ಲೈನ್ ಮೂಲಕ ಕೂಡ ತೆರೆಯಬಹುದು.
* ಅಂಚೆ ಕಚೇರಿಯ ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ಸಮೀಪದ ಅಂಚೆ ಭೇಟಿ ನೀಡಿ ಉಳಿತಾಯ ಖಾತೆ ತೆರೆಯಬಹುದು.
*ಅರ್ಜಿಯಲ್ಲಿ ಅಗತ್ಯವಾದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
*ಅಗತ್ಯವಾದ ದಾಖಲೆಗಳು ಹಾಗೂ ಪಾಸ್ ಪೋರ್ಟ್ ಗಾತ್ರದ ಫೋಟೋ ನೀಡಿ.
*ಠೇವಣಿ ಹಣ ಪಾವತಿಸಬೇಕು.
*ಚೆಕ್ ಬುಕ್ ಇಲ್ಲದೆ ಅಂಚೆ ಕಚೇರಿ ಉಳಿತಾಯ ಖಾತೆ ತೆರೆಯಲು ಕನಿಷ್ಠ 500 ರೂ. ಠೇವಣಿ ಇಡಬೇಕು.
ಪಿಪಿಎಫ್, ಎಸ್ ಸಿಎಸ್ಎಸ್, ಅಂಚೆ ಕಚೇರಿ ಉಳಿತಾಯ ಖಾತೆ ನಿಯಮ ಸಡಿಲಿಸಿದ ಸರ್ಕಾರ; ಏನೆಲ್ಲ ಬದಲಾಗಿದೆ?
ಆನ್ ಲೈನ್ ಸೇವೆ
ಇತ್ತೀಚಿನ ದಿನಗಳಲ್ಲಿ ಅಂಚೆ ಇಲಾಖೆ ಕೂಡ ಡಿಜಿಟಲೀಕರಣಕ್ಕೆ ತೆರೆದುಕೊಂಡಿದೆ. ಗ್ರಾಹಕರು ಆನ್ ಲೈನ್ ನಲ್ಲಿ ಖಾತೆ ಬ್ಯಾಲೆನ್ಸ್ ಚೆಕ್ ಮಾಡಬಹುದು, ಮಿನಿ ಸ್ಟೇಟ್ಮೆಂಟ್ ಪಡೆಯಬಹುದು ಹಾಗೂ ಹಣ ಕೂಡ ವರ್ಗಾವಣೆ ಮಾಡಬಹುದು. ಇನ್ನು ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿ ಕನಿಷ್ಠ 500ರೂ. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ರೆ ಅವರ ಖಾತೆಯಿಂದ ಅಂಚೆ ಇಲಾಖೆ 100ರೂ. ಕಡಿತಗೊಳಿಸುತ್ತದೆ.