ನಿಮ್ಮ ಕಾರು ಮಾರದೇ ಹಣ ಪಡೆಯಬಹುದು, ಹೇಗೆ ಅಂತೀರಾ?

By Suvarna News  |  First Published Jun 14, 2021, 3:32 PM IST

ಕಾರು ಖರೀದಿಸೋಕೆ ಬ್ಯಾಂಕ್ ಸಾಲ ನೀಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತು.ಆದ್ರೆ ಸಂಕಷ್ಟದ ಸಮಯದಲ್ಲಿ ಕಾರನ್ನು ಸೆಕ್ಯುರಿಟಿಯಾಗಿಟ್ಟು ಸಾಲ ಪಡೆಯಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ.


ಕೊರೋನಾ, ಲಾಕ್‌ಡೌನ್‌ನಿಂದ ಅನೇಕರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಉದ್ಯೋಗ ಕಳೆದುಕೊಂಡಿರೋದು, ವ್ಯಾಪಾರದಲ್ಲಿನಷ್ಟ, ವೇತನ ಕಡಿತದ ಜೊತೆ  ಗಗನಕ್ಕೇರಿರೋ ಪೆಟ್ರೋಲ್‌, ಡಿಸೇಲ್‌ ಬೆಲೆ ಇವೆಲ್ಲವೂ ನಿತ್ಯದ ಬದುಕಿನ ಮೇಲೆ ಪರಿಣಾಮ ಬೀರಿವೆ. ಇಂಥ ಸಮಯದಲ್ಲಿ ಹಣದ ಕೊರತೆ ನೀಗಿಸಿಕೊಳ್ಳಲು ಸಾಲದ ಮೊರೆ ಹೋಗೋದು ಅನಿವಾರ್ಯ. ಆದ್ರೆ ತಕ್ಷಣಕ್ಕೆ ಸಾಲ ಬೇಕೆಂದ್ರೆ ಯಾರು ತಾನೇ ಕೊಡ್ತಾರೆ? ಬ್ಯಾಂಕ್‌ನಲ್ಲಿ ಕೂಡ ವೈಯಕ್ತಿಕ ಸಾಲ ಪಡೆಯಲು ಒಂದಿಷ್ಟು ನೀತಿ-ನಿಯಮ, ಪ್ರಕ್ರಿಯೆಗಳಿವೆ. ಇಂಥ ಪರಿಸ್ಥಿತಿಯಲ್ಲಿ ಅಪತ್ಬಾಂಧವನಂತೆ ಕೈ ಹಿಡಿಯೋದು ನಮ್ಮ ಬಳಿಯಿರೋ ಆಸ್ತಿಗಳು. ಹೌದು, ಜಮೀನು,ಚಿನ್ನವನ್ನು ಅಡವಿಟ್ಟು ಸಾಲ ಪಡೆಯಬಹುದು. ಆದ್ರೆ ಇದ್ಯಾವುದೂ ಇಲ್ಲದಿರೋರು ಏನ್‌ ಮಾಡೋದು? ಡೋಂಟ್‌ ವರಿ, ನಿಮ್ಮ ಬಳಿ ಕಾರ್‌ ಇದ್ದರೂ ಸಾಕು, ಅದರ ಮೇಲೆ ಸಾಲ ಪಡೆಯಬಹುದು. ಸಾಮಾನ್ಯವಾಗಿ ಕಾರ್‌ ಖರೀದಿಸಲು ಬ್ಯಾಂಕ್‌ನಿಂದ ಸಾಲ ಪಡೆಯೋದು ಎಲ್ಲರಿಗೂ ಗೊತ್ತು. ಆದ್ರೆ ಸಂಕಷ್ಟದ ಸಮಯದಲ್ಲಿ ಕಾರನ್ನೇ ಸೆಕ್ಯೂರಿಟಿಯಾಗಿ ಬಳಸಿಕೊಂಡು ಸಾಲ ಪಡೆಯಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ.ಇನ್ನೂ ಒಂದು ವಿಶೇಷವೆಂದ್ರೆ ಬಹುತೇಕ ಬ್ಯಾಂಕ್‌ಗಳಲ್ಲಿ ಕಾರ್ ಸೆಕ್ಯುರಿಟಿಯಾಗಿಟ್ಟು ತೆಗೆಯೋ ಸಾಲದ ಮೇಲಿನ ಬಡ್ಡಿ ಪರ್ಸನಲ್‌ ಲೋನ್‌ಗೆ ವಿಧಿಸೋ ಬಡ್ಡಿಗೆ ಹೋಲಿಸಿದ್ರೆ ಕಡಿಮೆ. ಹಾಗಾದ್ರೆ ಕಾರ್‌ ಮೇಲೆ ಸಾಲ ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆಗಳು ಯಾವುವು?

ಪಿಎಫ್‌ ಹಣವನ್ನು ಯಾವಾಗ ಹಿಂಪಡೆಯಬಹುದು? 

Latest Videos

undefined

ಅರ್ಜಿ ತುಂಬಿಸಬೇಕು
ನೀವು ಕಾರ್‌ ಮೇಲೆ ಸಾಲ ಪಡೆಯಲು ಬಯಸಿದ್ರೆ ಯಾವುದಾದ್ರೂ ಬ್ಯಾಂಕ್ ಅಥವಾ ಫೈನಾನ್ಸ್‌ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ನೀವು ಸಾಲದ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯಲ್ಲಿ ಕಾರ್‌ ಮಾಡೆಲ್‌, ಉತ್ಪಾದನೆಗೊಂಡ ವರ್ಷ, ಬಳಕೆಯ ಉದ್ದೇಶ( ವೈಯಕ್ತಿಕ/ವಾಣಿಜ್ಯ) ಮುಂತಾದ ಮಾಹಿತಿಗಳನ್ನು ಭರ್ತಿ ಮಾಡಬೇಕು. ನೀವು ಅರ್ಜಿ ತುಂಬಿಸಿ, ಸಲ್ಲಿಸಿದ ಬಳಿಕ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಬ್ಯಾಂಕ್‌ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಈ ಸಂದರ್ಭದಲ್ಲಿ ನೀವು ಸಾಲದ ಅರ್ಜಿ ಪ್ರತಿಯನ್ನು ತುಂಬಿಸಿ ಅಗತ್ಯ ದಾಖಲೆಗಳೊಂದಿಗೆ ಅವರಿಗೆ ನೀಡಬೇಕು.

ಯಾವೆಲ್ಲ ದಾಖಲೆಗಳು ಬೇಕು?
ಬ್ಯಾಂಕ್‌ ವಿವರಗಳು, ಕಳೆದ 2-3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್‌ ಪ್ರತಿಗಳು ಹಾಗೂ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಪ್ರತಿಗಳನ್ನು ಅರ್ಜಿಯೊಂದಿಗೆ ನೀಡಬೇಕು. ಇದರೊಂದಿಗೆ ಗುರುತು, ವಿಳಾಸ ದೃಢಪಡಿಸೋ ಯಾವುದಾದ್ರೂ ಗುರುತು ಚೀಟಿ ಹಾಗೂ ನಿಮ್ಮ ಪಾಸ್‌ಪೋರ್ಟ್‌ ಗಾತ್ರದ ಫೋಟೋ ನೀಡಬೇಕು.
 

ಸಾಲ ನೀಡೋ ಪ್ರಕ್ರಿಯೆ ಹೇಗೆ ನಡೆಯುತ್ತೆ?
ಒಂದು ಬಾರಿ ದಾಖಲೆಗಳನ್ನು ನೀಡಿದ್ರೆ ಸಾಕು, ಪರಿಶೀಲನೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯನ್ನು ಬ್ಯಾಂಕ್‌ ಅಥವಾ ಫೈನಾನ್ಸ್‌ ಸಂಸ್ಥೆ ಪ್ರಾರಂಭಿಸುತ್ತದೆ. ಆ ಮೂಲಕ ಕಾರ್‌ಗೆ ಪ್ರಸ್ತುತ ಎಷ್ಟು ಮೌಲ್ಯವಿದೆ ಎಂಬುದನ್ನು ಲೆಕ್ಕ ಹಾಕುತ್ತದೆ. ಆ ಬಳಿಕ ಕಾರಿನ ಪ್ರಸಕ್ತ ಮೌಲ್ಯದ ಆಧಾರದಲ್ಲಿ ಎಷ್ಟು ಮೊತ್ತದ ಸಾಲ ನೀಡಬಹುದು ಎಂಬುದನ್ನು ನಿರ್ಧರಿಸುತ್ತಾರೆ. 

ಇದೀಗ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಜನಸ್ನೇಹಿ ಅವತಾರದಲ್ಲಿ, ಹೊಸತೇನಿದೆ?

ಎಷ್ಟು ಶುಲ್ಕ ನೀಡಬೇಕು?
ದಾಖಲಾತಿ ಹಾಗೂ ಸಾಲ ಪ್ರಕ್ರಿಯೆಗೆ ವಿಧಿಸೋ ಶುಲ್ಕ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಯವಾಗುತ್ತದೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಕನಿಷ್ಠ 500ರೂ.ನಿಂದ ಗರಿಷ್ಠ 5500 ರೂ. ತನಕ ಶುಲ್ಕ ವಿಧಿಸುತ್ತವೆ. ಈ ಶುಲ್ಕವನ್ನು ಸಾಲದ ಮೊತ್ತ ಪಡೆಯುವಾಗ ಪಾವತಿಸಿದರೂ ಸಾಕು.  

ಎಷ್ಟು ಅವಧಿಗೆ ಸಾಲ ನೀಡಲಾಗುತ್ತೆ?
ಕಾರ್ ಮೇಲಿನ  ಸಾಲವನ್ನು 18ರಿಂದ 60 ತಿಂಗಳುಗಳ ಅವಧಿಗೆ ನೀಡಲಾಗುತ್ತದೆ. 

ಬಡ್ಡಿದರ ಎಷ್ಟು?
ಕಾರ್ ಆಧಾರದಲ್ಲಿ ನೀಡೋ ಸಾಲದ ಮೇಲಿನ ಬಡ್ಡಿ ದರ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. ಇದು ಸಾಧಾರಣವಾಗಿ ಶೇ. 8 ರಿಂದ ಶೇ. 16 ತನಕ ಇರುತ್ತದೆ. 

ಕೋವಿಡ್‌ ಲಸಿಕೆ ಪಡೆದವರಿಗೆ ಬ್ಯಾಂಕ್‌ನಲ್ಲಿ ಸಿಗಲಿದೆ ಭರ್ಜರಿ ಆಫರ್!

ಗಮನಿಸಬೇಕಾದ ವಿಷಯಗಳು
ವಾಣಿಜ್ಯ ಉದ್ದೇಶದ ಅಥವಾ ಹಳದಿ ನಂಬರ್‌ ಪ್ಲೇಟ್‌ ಹೊಂದಿರೋ ಕಾರುಗಳಿಗೆ ಸಾಲ ಸಿಗೋದಿಲ್ಲ. ಸಾಲ ಪಡೆದ ಹಣಕ್ಕೆ ಕಾರು ಸೆಕ್ಯುರಿಟಿಯಾಗಿರೋ ಕಾರಣ ಜಾಮೀನುದಾರರು ಬೇಕಾಗಿಲ್ಲ. ಹೀಗಾಗಿ ಸ್ನೇಹಿತರು ಅಥವಾ ಬಂಧುಗಳ ಬಳಿ ಜಾಮೀನು ಹಾಕುವಂತೆ ದುಬಾಲು ಬೀಳಬೇಕಾದ ಅಗತ್ಯವಿಲ್ಲ. 

click me!