
ಮುಂಬೈ(ಜೂ.14): ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಗೆ ಬಹುದೊಡ್ಡ ಶಾಕ್ ಸಿಕ್ಕಿದೆ. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಮೂರು ವಿದೇಶೀ ಫಂಡ್ಸ್‌ಗಳಾದ Albula ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಹಾಗೂ ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್ ಖಾತೆಗಳನ್ನು ಫ್ರೀಜ್ ಮಾಡಿದೆ. ಇವುಗಳ ಬಳಿ ಅದಾನಿ ಗ್ರೂಪ್‌ನ ನಾಲ್ಕು ಕಂಪನಿಯ 43,500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಶೇರು ಇದೆ. ಈ ಬೆಳವಣಿಗೆ ಬೆನ್ನಲ್ಲೇ ಅದಾನಿ ಗ್ರೂಪ್‌ನ ಷೇರುಗಳು ಕುಸಿಯಲಾರಂಭಿಸಿವೆ.
ಅದಾನಿಯವರ ಅನೇಕ ಕಂಪನಿಗಳಲ್ಲಿ ಲೋವರ್ ಸರ್ಕಿಟ್ ಕೂಡಾ ವಿಧಿಸಲಾಗಿದೆ. ಇನ್ನು ಆರಂಭಿಕ ವಹಿವಾಟಿನ ಮೊದಲ ಒಂದು ತಾಸಿನಲ್ಲಿ ಕಂಪನಿಗಳ ಷೇರು ಶೇಕಡಾ 20 ರಷ್ಟು ಕುಸಿತವಾಗಿವೆ. ಇದರಿಂದ ಅದಾನಿ ಸಂಪತ್ತು 7.6 ಮಿಲಿಯನ್ ಡಾಲರ್ ಅಂದರೆ 55 ಸಾವಿರ ಕೋಟಿ ಕುಸಿತವಾಗಿದೆ. NSDL ವೆಬ್‌ಸೈಟ್ ಅನ್ವಯ ಈ ಅಕೌಂಟ್‌ಗಳನ್ನು ಮೇ 31 ಕ್ಕೂ ಮೊದಲೇ ಫ್ರೀಜ್ ಮಾಡಲಾಗಿದೆ.
ಯಾವ ಕಂಪನಿಯ ಷೇರು ಎಷ್ಟು ಕುಸಿತ?
ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇ 15ರಷ್ಟು, ಅದಾನಿ ಪೋರ್ಟ್ಸ್ ಆಂಡ್ ಎಕನಾಮಿಕ್ ಝೋನ್‌ನ ಶೇ 14ರಷ್ಟು ಷೇರುಗಳು, ಅದಾನಿ ಪವರ್‌ನ ಶೇ. 5ರಷ್ಟು, ಅದಾನಿ ಟ್ರಾನ್ಸ್ಮಿಷನ್‌ನ ಶೇ 5 ರಷ್ಟು, ಅದಾನಿ ಗ್ರೀನ್ ಎನರ್ಜಿಯ ಶೇ 5ರಷ್ಟು ಹಾಗೂ ಅದಾನಿ ಟೋಟಲ್ ಗ್ಯಾಸ್‌ನ ಶೇ 5 ರಷ್ಟು ಷೇರುಗಳು ಕುಸಿತ ಕಂಡಿವೆ.
ಅಕೌಂಟ್ ಫ್ರೀಜ್ ಆಗಿದ್ದು ಏಕೆ?
ಕಸ್ಟೋಡಿಯನ್ ಬ್ಯಾಂಕುಗಳು ಮತ್ತು ವಿದೇಶಿ ಹೂಡಿಕೆದಾರರನ್ನು ನಿರ್ವಹಿಸುವ ಕಾನೂನು ಸಂಸ್ಥೆಗಳ ಪ್ರಕಾರ, ಈ ವಿದೇಶಿ ಫಂಡ್ಸ್‌ಗಳ ಬಳಿ beneficial ownership ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ, ಈ ಕಾರಣದಿಂದಾಗಿ ಅವರ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.