ಬೆಂಗಳೂರು (ಜೂ. 11): ಆದಾಯ ತೆರಿಗೆಯನ್ನು ಇ-ಫೈಲಿಂಗ್‌ ಮೂಲಕ ಸಲ್ಲಿಸುವ ವಿಧಾನ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಇರುವ ವೆಬ್‌ಸೈಟ್‌ನಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದಿದೆ. ವೆಬ್‌ಸೈಟ್‌ ಹೆಸರೇ ಬದಲಾಗಿದ್ದು, ಹಲವು ವಿಶೇಷತೆಗಳನ್ನು ಹೊಸ ಜಾಲತಾಣ ಹೊಂದಿದೆ. ನೂತನ ವೆಬ್‌ಸೈಟ್‌ ಸೋಮವಾರ ಲೋಕಾರ್ಪಣೆಯಾಗಿದೆ. ಹೊಸ ವೆಬ್‌ಸೈಟ್‌ನಿಂದ ತೆರಿಗೆದಾರರಿಗೆ ಅನುಕೂಲವಿದ್ದು, ಯಾವುದೇ ಸಮಸ್ಯೆ ಇಲ್ಲದೆ ತೆರಿಗೆ ವಿವರ ತುಂಬಬಹುದಾಗಿದೆ.

 

ಹಾಗಿದ್ದರೆ ಈ ವೆಬ್‌ಸೈಟ್‌ನಲ್ಲಿ ಏನು ವಿಶೇಷತೆ ಇದೆ ಎಂಬ ಕುತೂಹಲ ಸೃಷ್ಟಿಸಹಜ. ಈ ಕುತೂಹಲ ತಣಿಸುವ ವಿವರಗಳು ಇಲ್ಲಿವೆ.

ಹೊಸತೇನಿದೆ?

ಹೆಸರು ಬದಲು

ಈವರೆಗೆ http://www.incometaxindiaefiling.gov.in ವೆಬ್‌ಸೈಟ್‌ ಬಳಸಲಾಗುತ್ತಿತ್ತು. ಇದು ತುಂಬಾ ಉದ್ದವಿದ್ದ ಕಾರಣ ನೆನಪಿನಲ್ಲಿಟ್ಟುಕೊಳ್ಳಲು ಸಮಸ್ಯೆಯಾಗುತ್ತಿತ್ತು. ಹೀಗಾಗಿ ವೆಬ್‌ಸೈಟ್‌ ಹೆಸರನ್ನು www.incometax.gov.in ಎಂದು ಬದಲಿಸಲಾಗಿದೆ. 3-4 ವರ್ಷಗಳ ಪ್ರಯತ್ನದ ಫಲವಾಗಿ ಈ ವೆಬ್‌ಸೈಟ್‌ ರೂಪುಗೊಂಡಿದೆ.

ಒಂದೆರಡು ದಿನದಲ್ಲೇ ರೀಫಂಡ್‌

ಹೊಸ ವೆಬ್‌ಸೈಟ್‌ನಲ್ಲಿ ಈವರೆಗೆ ನೀವು ಸಲ್ಲಿಸಿರುವ ತೆರಿಗೆ ಮಾಹಿತಿ ಲಭ್ಯ. ಈ ವೆಬ್‌ಸೈಟ್‌ ಅನ್ನು ಐಟಿಆರ್‌ ಸಂಸ್ಕರಣೆ ಕೇಂದ್ರದ ಜತೆ ಬೆಸೆದಿರುವುದರಿಂದ ಒಂದೆರಡು ದಿನದಲ್ಲೇ ತೆರಿಗೆ ರೀಫಂಡ್‌ ಲಭಿಸಲಿದೆ.

ಪ್ರಶ್ನೆಗೆ ಉತ್ತರಿಸಿದರೆ ಸಾಕು

ಹೊಸ ವೆಬ್‌ಸೈಟ್‌ನಲ್ಲಿ ತೆರಿಗೆ ತುಂಬುವುದಕ್ಕೆ ನೆರವಾಗಲು ಉಚಿತ ಸಾಫ್ಟ್‌ವೇರ್‌ ಇದೆ. ಅದರಲ್ಲಿ ಪ್ರಶ್ನೆಗಳು ಇರುತ್ತವೆ. ಅದಕ್ಕೆ ಉತ್ತರಿಸಿದರೆ ರಿಟರ್ನ್‌ ಭರ್ತಿಯಾಗುತ್ತದೆ. ಹೆಚ್ಚು ವಿವರಗಳನ್ನೂ ತುಂಬಬೇಕಿಲ್ಲ.

ಬ್ಯಾಂಕ್‌ ಸ್ಟೇಟ್‌ಮೆಂಟ್‌ ಬೇಕಿಲ್ಲ

ನಿಮಗೆ ಯಾವ ಬ್ಯಾಂಕಿಂದ ಎಷ್ಟುಬಡ್ಡಿ ಆದಾಯ ಬಂದಿದೆ ಎಂಬುದನ್ನು ಪತ್ತೆ ಹಚ್ಚಲು ಅಕೌಂಟ್‌ ಸ್ಟೇಟ್‌ಮೆಂಟ್‌ ಮೊರೆ ಹೋಗಬೇಕಿಲ್ಲ. ನಿಮ್ಮ ಅಷ್ಟೂಬಡ್ಡಿ ಆದಾಯದ ವಿವರ ಐಟಿಆರ್‌ನಲ್ಲಿ ಮೊದಲೇ ಭರ್ತಿಯಾಗಿರುತ್ತದೆ. ಈ ವಿವರ ಬ್ಯಾಂಕುಗಳಿಂದ ತೆರಿಗೆ ಇಲಾಖೆಗೆ ಲಭಿಸಿರುತ್ತದೆ. ಅದು ಸರಿ ಇದ್ದರೆ ಸಮ್ಮತಿ ಸೂಚಿಸಿದರೆ ಸಾಕು.

ಷೇರು ಡಿವಿಡೆಂಡ್‌ ಹುಡುಕಬೇಕಿಲ್ಲ

ಷೇರುಗಳಿಂದ ಈ ವರ್ಷ ಎಷ್ಟುಡಿವಿಡೆಂಡ್‌ ಬಂದಿದೆ ಎಂಬುದನ್ನು ರಿಟರ್ನ್‌ ಸಲ್ಲಿಕೆ ವೇಳೆ ಶೋಧಿಸುವ ಅಗತ್ಯವಿಲ್ಲ. ನಿಮ್ಮ ಅಷ್ಟೂಡಿವಿಡೆಂಡ್‌ ಪ್ರವರ ತೆರಿಗೆ ರಿಟರ್ನ್‌ನಲ್ಲಿ ಮೊದಲೇ ಭರ್ತಿಯಾಗಿರುತ್ತದೆ. ಇದಲ್ಲದೆ ತೆರಿಗೆದಾರರ ಕುರಿತು ತೆರಿಗೆ ಇಲಾಖೆ ಬಳಿ ಇರುವ ಕೆಲವು ಮಾಹಿತಿಗಳೂ ನಮೂದಾಗಿರುತ್ತವೆ.

ವಿಮೆ, ಪಿಪಿಎಫ್‌ ವಿವರವೂ ಲಭ್ಯ

ತೆರಿಗೆ ಡಿಡಕ್ಷನ್‌ ಆದಾಯ, ವಿಮೆ, ಪಿಪಿಎಫ್‌ ಮಾಹಿತಿ ಮೊದಲೇ ಅರ್ಜಿಯಲ್ಲಿ ಅಡಕವಾಗಿರುತ್ತದೆ. ಹೀಗಾಗಿ ಇದಕ್ಕಾಗಿ ತೆರಿಗೆದಾರರು ಮಾಹಿತಿ ತುಂಬಬೇಕಿಲ್ಲ.

ಮೊಬೈಲ್‌ ಇದ್ದರೆ ಸಾಕು, ಆ್ಯಪ್‌ನಲ್ಲೇ ರಿಟರ್ನ್ಸ್‌ ಫೈಲ್‌

ಹೊಸ ವೆಬ್‌ಸೈಟ್‌ ಬಳಕೆ ಸುಲಭ. ಅಗತ್ಯವಿರುವ ಎಲ್ಲ ಮಾಹಿತಿ ಹೋಮ್‌ ಪೇಜ್‌ನಲ್ಲೇ ಲಭ್ಯ. ರಿಟರ್ನ್‌ ಫೈಲ್‌ ಮಾಡಲು ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬೇಕು ಎಂಬ ಪರಿಸ್ಥಿತಿ ಇಲ್ಲ. ಸದ್ಯದಲ್ಲೇ ಮೊಬೈಲ್‌ ಆ್ಯಪ್‌ ಬರಲಿದೆ. ಎಲ್ಲ ಸೇವೆಗಳೂ ಅದರಲ್ಲಿದ್ದು, ಮೊಬೈಲ್‌ನಿಂದಲೇ ರಿಟರ್ನ್‌ ಫೈಲ್‌ ಮಾಡಬಹುದು.

ರಿಟರ್ನ್‌ ಸಲ್ಲಿಕೆ ವೇಳೆ ಸಹಾಯಹಸ್ತ

ರಿಟರ್ನ್‌ ಸಲ್ಲಿಸುವಾಗ ಏನಾದರೂ ಸಮಸ್ಯೆ ಎದುರಾದರೆ ಅದನ್ನು ಬಗೆಹರಿಸಲು ಸಹಾಯ ಕೂಡ ಸಿಗಲಿದೆ. ಇದಕ್ಕಾಗಿ ಎಫ್‌ಎಕ್ಯು, ಹೆಲ್ಪ್‌ ಆರ್ಟಿಕಲ್‌, ವಿಡಿಯೋ ಟ್ಯುಟೋರಿಯಲ್‌ಗಳು ಇರುತ್ತವೆ. ಹಾಗಿದ್ದೂ ಸಮಸ್ಯೆ ಆದಲ್ಲಿ ಕಾಲ್‌ಸೆಂಟರ್‌ಗೆ ಫೋನಾಯಿಸಿ ಏಜೆಂಟ್‌ಗಳ ಬಳಿ ಮಾತನಾಡಬಹುದು.

ತೆರಿಗೆ ಹಣ ಕಟ್ಟೋದು ಸುಲಭ

ಹಲವು ಸೇವೆಗಳು ಹೊಸ ವೆಬ್‌ಸೈಟ್‌ನಲ್ಲೇ ಲಭ್ಯ. ಹಿಂದೆಲ್ಲಾ ತೆರಿಗೆ ಪಾವತಿಸಲು ಎನ್‌ಎಸ್‌ಡಿಎಲ್‌ ವೆಬ್‌ಸೈಟ್‌ಗೆ ಹೋಗಬೇಕಿತ್ತು. ಈಗ ಅದರ ಅಗತ್ಯವಿಲ್ಲ. ತೆರಿಗೆ ಕಟ್ಟಲು ಹಲವು ಆಯ್ಕೆಗಳಿವೆ. ನೆಟ್‌ ಬ್ಯಾಂಕಿಂಗ್‌, ಆರ್‌ಟಿಜಿಎಸ್‌/ನೆಫ್ಟ್‌, ಯುಪಿಐ, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಮೂಲಕವೂ ತೆರಿಗೆ ಸಂದಾಯ ಮಾಡಬಹುದು. ಪೇ ಮಾಡಿದ ಬಳಿಕ ಚಲನ್‌ ತುಂಬುವ ಅಗತ್ಯವಿಲ್ಲ. ಈ ಸೇವೆ ಜೂ.18ರಿಂದ ಲಭ್ಯ.

1 ವಾರ ಸಮಸ್ಯೆ ಇತ್ತು, ಇನ್ನು ಸಮಸ್ಯೆ ಇಲ್ಲ

ಹೊಸ ವೆಬ್‌ಸೈಟ್‌ ಲೋಕಾರ್ಪಣೆ ಹಿನ್ನೆಲೆಯಲ್ಲಿ ಜೂ.1ರಿಂದ ಜೂ.6ರವರೆಗೆ ಆದಾಯ ತೆರಿಗೆಯ ರಿಟರ್ನ್‌ ಸಲ್ಲಿಕೆ ವೆಬ್‌ಸೈಟ್‌ ಸೇವೆ ಲಭ್ಯ ಇರಲಿಲ್ಲ. ಹಳೆಯ ವೆಬ್‌ಸೈಟ್‌ ಕೂಡ ಸ್ಥಗಿತವಾಗಿತ್ತು. ಸೋಮವಾರದಿಂದ ಹೊಸ ವೆಬ್‌ಸೈಟ್‌ ಲಭ್ಯವಾಗಿದ್ದು, ಇನ್ನು ಸಮಸ್ಯೆ ಇಲ್ಲ.

ರಿಟರ್ನ್‌ ಸಲ್ಲಿಕೆಗೆ ಹೆಚ್ಚು ಟೈಂ

ಕೊರೋನಾ ಅಬ್ಬರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೆರಿಗೆ ಪಾವತಿ ಗಡುವನ್ನು ವಿಸ್ತರಿಸಿದೆ. ಆದಾಯ ತೆರಿಗೆ ಸಲ್ಲಿಕೆಗೆ ಜು.31 ಕಡೆಯ ದಿನವಾಗಿತ್ತು, ಅದನ್ನು ಸೆ.30ರವರೆಗೆ ವಿಸ್ತರಣೆ ಮಾಡಿದೆ. ಆಡಿಟೆಡ್‌ ಆದಾಯ ವಿವರ ಸಲ್ಲಿಕೆಗೆ ಇದ್ದ ಸೆ.30ರ ಗಡುವನ್ನು ಅ.31ರವರೆಗೆ ವಿಸ್ತರಿಸಲಾಗಿದೆ. ಕಂಪನಿಗಳು ತಮ್ಮ ನೌಕರರಿಗೆ ಫಾಮ್‌ರ್‍ 16 ನೀಡಲು ಜು.15ರವರೆಗೂ ಕಾಲಾವಕಾಶ ನೀಡಲಾಗಿದೆ. ಈ ಹಿಂದೆ ಜೂ.15ರೊಳಗೆ ಕೊಡಬೇಕಾಗಿತ್ತು.