ಭಾರತದಲ್ಲಿ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ.ಆದರೆ, ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಆಗಿಲ್ಲ ಎಂಬುದನ್ನು ಪತ್ತೆ ಹಚ್ಚಲು ಆಗಾಗ ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಇಂದು ಭಾರತದ ಪ್ರಮುಖ ಗುರುತು ದಾಖಲೆಗಳಲ್ಲಿ ಒಂದಾಗಿದೆ. ಭಾರತೀಯ ಆದಾಯ ತೆರಿಗೆ ಇಲಾಖೆ ಈ ಕಾರ್ಡ್ ಅನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಅನ್ನು ಗುರುತಿನ ದಾಖಲೆಯಾಗಿ ಬಳಸುವ ಜೊತೆಗೆ ಅನೇಕ ಹಣಕಾಸಿನ ವಹಿವಾಟುಗಳಿಗೆ ಬಳಸಲಾಗುತ್ತದೆ. ತೆರಿಗೆಗಳ ಪಾವತಿ, ಬ್ಯಾಂಕ್ ಖಾತೆ ತೆರೆಯೋದು ಹಾಗೂ ಸಾಲ ಪಡೆಯಲು ಪ್ಯಾನ್ ಕಾರ್ಡ್ ಅಗತ್ಯ. ಪ್ಯಾನ್ ಕಾರ್ಡ್ ಮೂಲಕ ಆದಾಯ ತೆರಿಗೆ ಇಲಾಖೆ ತೆರಿಗೆದಾರರ ಎಲ್ಲ ವಹಿವಾಟಿನ ಮೇಲೆ ನಿಗಾವಿರಿಸುತ್ತದೆ. ಕೆಲವು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಕೂಡ ಪ್ಯಾನ್ ಕಾರ್ಡ್ ಅಗತ್ಯ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಬಳಸಿ ಸಾಲ ಪಡೆಯೋದು ಸೇರಿದಂತೆ ವಿವಿಧ ಮಾದರಿಯ ವಂಚನೆಗಳನ್ನುನಡೆಸುವ ಸಾಧ್ಯತೆ ಇದೆ. ಇಂಥ ವಂಚನೆಗಳಿಗೆ ಕಡಿವಾಣ ಹಾಕಲು ನಿಯಮಿತವಾಗಿ ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಯಾರಾದ್ರೂ ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡಿದ್ರೆ ಮಾಹಿತಿ ಸಿಗುತ್ತದೆ. ಆದಾಯ ತೆರಿಗೆ ಇಲಾಖೆ ಆನ್ ಲೈನ್ ಪೋರ್ಟಲ್ ಮೂಲಕ ಅಥವಾ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವ ಮೂಲಕ ನೀವು ನಿಮ್ಮ ಪ್ಯಾನ್ ಕಾರ್ಡ್ ಚೆಕ್ ಮಾಡಬಹುದು.
ಆದಾಯ ತೆರಿಗೆ ಪೋರ್ಟಲ್ ಮೂಲಕ ಹೇಗೆ?
ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡಬಹುದು. ಆದರೆ, ಇದಕ್ಕಾಗಿ ನೀವು ಇ-ಫೈಲಿಂಗ್ ಪೋರ್ಟಲ್ ನಲ್ಲಿ ಖಾತೆ ತೆರೆಯಬೇಕು. ಆ ಬಳಿಕ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ಇತರ ಮಾಹಿತಿಗಳನ್ನು ಬಳಸಿಕೊಂಡು ಲಾಗಿನ್ ಆಗಬೇಕು. ಒಮ್ಮೆ ಲಾಗಿನ್ ಆದ್ರೆ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಯಾವುದೇ ವಹಿವಾಟು ನಡೆದಿದ್ರೆ ಅಥವಾ ಏನಾದರೂ ಬದಲಾವಣೆ ಮಾಡಿದ್ರೆ ಮಾಹಿತಿ ಸಿಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಅನಧಿಕೃತ ಬಳಕೆಯನ್ನು ಗುರುತಿಸಲು ಇದು ನೆರವು ನೀಡುತ್ತದೆ.
ಹೊಸ ವರ್ಷದಲ್ಲಿಈ 5 ಹಣಕಾಸಿನ ತಪ್ಪುಗಳನ್ನು ಮಾಡ್ಬೇಡಿ
ಕಸ್ಟಮರ್ ಕೇರ್ ಸೆಂಟರ್
ಆದಾಯ ತೆರಿಗೆ ಇಲಾಖೆಯ ಕಸ್ಟಮರ್ ಕೇರ್ ಸೆಂಟರ್ ಸಂಪರ್ಕಿಸುವ ಮೂಲಕ ಕೂಡ ನೀವು ಪ್ಯಾನ್ ಕಾರ್ಡ್ ಹಿಸ್ಟರಿ ಪಡೆಯಬಹುದು. ಇದು ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೆರವು ನೀಡುತ್ತದೆ.
ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ವಂಚನೆ ಹಾಗೂ ದುರ್ಬಳಕೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಹಾಗೆಯೇ ಪ್ರತಿ ವ್ಯಕ್ತಿಯ ಆರ್ಥಿಕ ಮಾಹಿತಿಯನ್ನು ಸಂರಕ್ಷಿಸಲು ಅನೇಕ ಕ್ರಮಗಳನ್ನು ಕೂಡ ಅನುಷ್ಠಾನಗೊಳಿಸಿದೆ. ಆದರೂ ಪ್ಯಾನ್ ಕಾರ್ಡ್ ದುರ್ಬಳಕೆ ಮೂಲಕ ವಂಚನೆ ನಡೆಸಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ನಿಯಮಿತವಾಗಿ ಪ್ಯಾನ್ ಕಾರ್ಡ್ ಹಿಸ್ಟರಿ ಚೆಕ್ ಮಾಡೋದ್ರಿಂದ ವಂಚನೆ ಹಾಗೂ ದುರ್ಬಳಕೆಗೆ ತಡೆ ಹಾಕಲು ಸಾಧ್ಯವಿದೆ.
ಏನಿದು ಅಂಚೆ ಇಲಾಖೆ ಪ್ರೀಮಿಯಂ ಉಳಿತಾಯ ಖಾತೆ? ಇದರಲ್ಲಿ ಯಾರು ಹೂಡಿಕೆ ಮಾಡಬಹುದು?
ವಂಚನೆ ತಪ್ಪಿಸಲು ಹೀಗೆ ಮಾಡಿ
ಯಾವುದೇ ಸಂದರ್ಭದಲ್ಲೂ ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ನಿಮ್ಮ ಪ್ಯಾನ್ ಮಾಹಿತಿ ಹಂಚಿಕೊಳ್ಳಬೇಡಿ. ಇನ್ನು ಪ್ಯಾನ್ ಅಥವಾ ಆಧಾರ್ ಫೋಟೋಕಾಪಿಯನ್ನು ಹಂಚಿಕೊಳ್ಳುವಾಗ ಅದರಲ್ಲಿ ಉದ್ದೇಶ ನಮೂದಿಸಬೇಕು. ಹಾಗೆಯೇ ಪೋಟೋಕಾಪಿಯಲ್ಲಿ ಸಹಿ ಹಾಗೂ ದಿನಾಂಕ ನಮೂದಿಸಬೇಕು. ಇದ್ರಿಂದ ಕೂಡ ದುರ್ಬಳಕೆಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ಯಾವುದೇ ವೆಬ್ ಸೈಟ್ ನಲ್ಲಿ ನಿಮ್ಮ ಪ್ಯಾನ್ ಸಂಖ್ಯೆ ನಮೂದಿಸೋದನ್ನು ಆದಷ್ಟು ತಪ್ಪಿಸಿ. ಪ್ಯಾನ್ ಸಂಖ್ಯೆ ಬದಲು ಡ್ರೈವಿಂಗ್ ಲೈಸೆನ್ಸ್ (Driving Licence), ವೋಟರ್ ಐಡಿ (Voter ID), ಆಧಾರ್ ಕಾರ್ಡ್ (Aadhaar card) ಇತ್ಯಾದಿ ಇತರ ಐಡಿಗಳನ್ನು ಬಳಸಿ. ಆನ್ ಲೈನ್ ಪೋರ್ಟಲ್ ಗಳಲ್ಲಿ ನಿಮ್ಮ ಪೂರ್ಣ ಹೆಸರು, ಜನ್ಮದಿನಾಂಕ ನಮೂದಿಸೋದನ್ನು ತಪ್ಪಿಸಿ. ನಿಮ್ಮ ಪ್ಯಾನ್ ಸಂಖ್ಯೆ ಟ್ರ್ಯಾಕ್ (track) ಮಾಡಲು ಈ ಮಾಹಿತಿಗಳನ್ನು ಬಳಸೋ ಸಾಧ್ಯತೆಯಿರುತ್ತದೆ.