2023ನೇ ಸಾಲಿನಲ್ಲಿ ತೆರಿಗೆ ಉಳಿತಾಯದ ಪ್ಲ್ಯಾನ್ ಹೇಗಿರಬೇಕು? ಯಾವ ಯೋಜನೆಯಲ್ಲಿ ಹೂಡಿಕೆ ಮಾಡ್ಬಹುದು?

By Suvarna NewsFirst Published Dec 26, 2022, 5:36 PM IST
Highlights

ಹೊಸ ವರ್ಷದ ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷಕ್ಕೆ ಆರ್ಥಿಕ ಯೋಜನೆಗಳ ಜೊತೆಗೆ ತೆರಿಗೆ ಉಳಿತಾಯದ ಪ್ಲ್ಯಾನ್ ಕೂಡ ಮಾಡೋದು ಅಗತ್ಯ. ಹಾಗಾದ್ರೆ 2023ನೇ ಸಾಲಿಗೆ ನಿಮ್ಮ ತೆರಿಗೆ ಉಳಿತಾಯದ ಪ್ಲ್ಯಾನ್ ಹೇಗಿರಬೇಕು? ಇಲ್ಲಿದೆ ಮಾಹಿತಿ. 
 

Business Desk: ದುಡಿದ ಹಣದಲ್ಲಿ ಬಹುಪಾಲು ತೆರಿಗೆಗೆ ಹೋದ್ರೆ ಹೊಟ್ಟೆ ಉರಿಯದೆ ಇರುತ್ತಾ ಹೇಳಿ? ಕಷ್ಟಪಟ್ಟು ದುಡಿದ ದುಡಿಮೆ ಹೀಗೆ ತೆರಿಗೆ ಹೆಸರಲ್ಲಿ ಕೈಜಾರುವುದನ್ನು ತಪ್ಪಿಸಲು ಸೂಕ್ತವಾದ ತೆರಿಗೆ ಯೋಜನೆ ರೂಪಿಸೋದು ಅಗತ್ಯ. ಆದ್ರೆ ಬಹುತೇಕರು ಪರಿಣಾಮಕಾರಿಯಾಗಿ ತೆರಿಗೆ ಪ್ಲ್ಯಾನ್ ಮಾಡೋದೇ ಇಲ್ಲ. ಇದ್ರಿಂದ ದೊಡ್ಡ ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆಯನ್ನು ಆರ್ಥಿಕ ಹೊರೆ ಎಂದು ಪರಿಗಣಿಸಲಾಗುತ್ತದೆ. ಆದರೆ, ತೆರಿಗೆಗೆ ಸಂಬಂಧಿಸಿ ಸರಿಯಾದ ಯೋಜನೆ ರೂಪಿಸದೆ ಹೋದ್ರೆ ಅದು ದೊಡ್ಡ ಪ್ರಮಾಣದಲ್ಲಿ ಒತ್ತಡ ಸೃಷ್ಟಿಸಬಲ್ಲದು. ಪ್ರತಿವರ್ಷ ಆದಾಯ ತೆರಿಗೆ ಪಾವತಿ ಗಡುವು ಹತ್ತಿರ ಬಂದಾಗ ಮಾತ್ರ ನಾವು ಆ ಬಗ್ಗೆ ಯೋಚಿಸುತ್ತೇವೆ. ಆದರೆ, ಆಗ ತೆರಿಗೆ ಪಾವತಿಸೋದು ಬಿಟ್ಟರೆ ಬೇರೆ ಆಯ್ಕೆಗಳು ಇರೋದಿಲ್ಲ. ಈಗ ಮತ್ತೊಂದು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ, ಹಿಂದಿನ ತಪ್ಪುಗಳನ್ನು ಈ ವರ್ಷವೂ ಮಾಡುವುದು ಬೇಡ. ತೆರಿಗೆಗೆ ಸಂಬಂಧಿಸಿ ಸೂಕ್ತ ಮಾಹಿತಿಗಳನ್ನು ಹೊಂದಿರುವ ಜೊತೆಗೆ ಯಾವೆಲ್ಲ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆ ಉಳಿಸಬಹುದು ಎಂಬ ಮಾಹಿತಿ ಕಲೆ ಹಾಕಿ, ಸೂಕ್ತ ಯೋಜನೆ ರೂಪಿಸಿ. ಇಲ್ಲಿ 2022ನೇ ಸಾಲಿನ ಅತ್ಯುತ್ತಮ ತೆರಿಗೆ ಉಳಿತಾಯ ಹೂಡಿಕೆ ಆಯ್ಕೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. 

1.ಸಾರ್ವಜನಿಕ ಭವಿಷ್ಯ ನಿಧಿ (PPF)
ತೆರಿಗೆ ಉಳಿತಾಯಕ್ಕೆ ಸಾರ್ವಜನಿಕ ಭವಿಷ್ಯ ನಿಧಿ (PPF) ಜನಪ್ರಿಯ ಹೂಡಿಕೆ ಆಯ್ಕೆಯಾಗಿದೆ. ದೀರ್ಘಕಾಲದ ಉಳಿತಾಯ ಹಾಗೂ ಹೂಡಿಕೆಗೆ ನೀವು ಅಂಚೆ ಕಚೇರಿ ಅಥವಾ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳ ನಿರ್ದಿಷ್ಟ ಶಾಖೆಗಳಲ್ಲಿ ಪಿಪಿಎಫ್ ಖಾತೆ ತೆರೆಯಬೇಕು. ಈ ಪಿಪಿಎಫ್ ಖಾತೆಯಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಬಡ್ಡಿ ನೀಡಲಾಗುತ್ತದೆ. ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಪ್ರತಿ ಆರ್ಥಿಕ ಸಾಲಿನಲ್ಲಿ 1.5ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಸಿಗುತ್ತದೆ.

ಹೊಸ ವರ್ಷದಲ್ಲಿಈ 5 ಹಣಕಾಸಿನ ತಪ್ಪುಗಳನ್ನು ಮಾಡ್ಬೇಡಿ

2.ಸ್ಥಿರ ಠೇವಣಿ
ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಕೂಡ ತೆರಿಗೆ ಭಾರ ತಗ್ಗಿಸಿಕೊಳ್ಳಬಹುದು. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷ್ 80 ಸಿ ಅಡಿಯಲ್ಲಿ ನೀವು ನಿಮ್ಮ ತೆರಿಗೆ ಭಾರ ತಗ್ಗಿಸಿಕೊಳ್ಳಲು ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಬಹುದು. ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವ ಮೂಲಕ  1.5ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಇಂಥ ಎಫ್ ಡಿಗಳು ಐದು ವರ್ಷಗಳ ಲಾಕ್ ಇನ್ ಅವಧಿ ಹೊಂದಿವೆ. ಅಲ್ಲದೆ, ಈ ಎಫ್ ಡಿ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಉಳಿತಾಯದ ಎಫ್ ಡಿಗಳ ಮೇಲೆ ಶೇ.5.5ರಿಂದ ಶೇ.7.75ರ ತನಕ ಬಡ್ಡಿದರ ಇರುತ್ತದೆ. 

3.ಹಿರಿಯ ನಾಗರಿಕರ ಉಳಿತಾಯ ಯೋಜನೆ
ಇದು 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಸಹಭಾಗಿತ್ವದ ಉಳಿತಾಯ ಯೋಜನೆಯಾಗಿದೆ. ನಿವೃತ್ತಿ ನಂತರದ ಬದುಕಿಗೆ ಈ ಹೂಡಿಕೆ ಆದಾಯದ ಮೂಲವಾಗಿರುತ್ತದೆ. ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ ಕೂಡ ಸಿಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಸಿ ಅಡಿಯಲ್ಲಿ ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಗರಿಷ್ಠ 1.5ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಸಿಗಲಿದೆ. 

4.ಜೀವ ವಿಮೆ
ಪ್ರತಿಯೊಬ್ಬ ವ್ಯಕ್ತಿಗೂ ಜೀವ ವಿಮೆ ಅತ್ಯಗತ್ಯ. ಇದು ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಜೀವ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡೋದ್ರಿಂದ ಕೂಡ ತೆರಿಗೆ ಉಳಿತಾಯ ಮಾಡಬಹುದು. ಪಾಲಿಸಿದಾರರು ಪ್ರೀಮಿಯಂ ಪಾವತಿ ಮೇಲೆ ತೆರಿಗೆ ಪ್ರಯೋಜನ ಪಡೆಯಬಹುದು. ತೆರಿಗೆ ಉಳಿತಾಯ ಮಾಡುವ ಅನೇಕ ವಿಮಾ ಯೋಜನೆಗಳು ಲಭ್ಯವಿದ್ದು, ನೀವು ಹೂಡಿಕೆ ಮಾಡಬಹುದು.

ಏನಿದು ಅಂಚೆ ಇಲಾಖೆ ಪ್ರೀಮಿಯಂ ಉಳಿತಾಯ ಖಾತೆ? ಇದರಲ್ಲಿ ಯಾರು ಹೂಡಿಕೆ ಮಾಡಬಹುದು?

5.ಪಿಂಚಣಿ ಯೋಜನೆಗಳು
ಪಿಂಚಣಿ ಯೋಜನೆಗಳು ಇನ್ನೊಂದು ವಿಧದ ಜೀವ ವಿಮೆ ಆಗಿದೆ. ಪಿಂಚಣಿ ಯೋಜನೆಗಳು ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್  80 ಸಿಸಿಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. 
 

click me!