ಡ್ರೈವರ್ ಕೆಲಸ ಕಳೆದುಕೊಂಡು ಹಳ್ಳಿಗೆ ಮರಳಿದ ಬಿಹಾರದ ವ್ಯಕ್ತಿಯೊಬ್ಬರಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಡೈರಿ ಉದ್ಯಮ ವಿಸ್ತರಣೆಗೆ ನೆರವು ನೀಡಿದೆ. ಈ ಉದ್ಯಮದಿಂದ ಆ ವ್ಯಕ್ತಿ ತಿಂಗಳಿಗೆ 80 ಸಾವಿರ ಆದಾಯ ಗಳಿಸುತ್ತಿದ್ದಾರೆ.
Business Desk: ಕೇಂದ್ರ ಸರ್ಕಾರದ ಕೆಲವೊಂದು ಯೋಜನೆಗಳು ನಾಗರಿಕರಿಗೆ ಅನೇಕ ವಿಧದಲ್ಲಿ ನೆರವಾದ ನಿದರ್ಶನಗಳು ಆಗಾಗ ಸಿಗುತ್ತಲೇ ಇರುತ್ತವೆ. ಕೆಲವೊಂದು ಯೋಜನೆಗಳು ಸಂಕಷ್ಟದಲ್ಲಿರೋರಿಗೆ ಹೊಸ ದಾರಿ ತೋರಿರುತ್ತವೆ. ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿರುತ್ತವೆ. ಅಂಥ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಕೂಡ ಒಂದು. ಬಿಹಾರದ ಹಿರಿಯ ವ್ಯಕ್ತಿಯೊಬ್ಬರು ಮುದ್ರಾ ಯೋಜನೆ ಹೇಗೆ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು ಎಂಬುದನ್ನು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಇವರು ಪುಟ್ಟ ಉದ್ಯಮವೊಂದನ್ನು ನಡೆಸುತ್ತಿದ್ದರು. ಆದರೆ, ಉದ್ಯಮ ನಷ್ಟದ ಹಾದಿಯಲ್ಲಿತ್ತು. ಈ ಸಮಯದಲ್ಲಿ ಉದ್ಯಮದಲ್ಲಿ ಬದಲಾವಣೆ ತರಲು ಅಥವಾ ಇನ್ನಷ್ಟು ವಿಸ್ತರಿಸಲು ಇವರ ಬಳಿ ಬಂಡವಾಳ ಕೂಡ ಇರಲಿಲ್ಲ. ಇಂಥ ಸಮಯದಲ್ಲಿ ಮುದ್ರಾ ಯೋಜನೆ ಅವರ ಕೈ ಹಿಡಿಯಿತು. ಈ ಯೋಜನೆ ಸಹಾಯದಿಂದ ಅವರು ತಮ್ಮ ಉದ್ಯಮ ನಷ್ಟ ಅನುಭವಿಸೋದನ್ನು ತಪ್ಪಿಸಿರುವ ಜೊತೆಗೆ ಅದನ್ನು ಹೊಸ ಎತ್ತರಕ್ಕೆ ಕೊಂಡು ಹೋಗಿದ್ದಾರೆ.
ಅಂದ ಹಾಗೇ ಬಿಹಾರದ ಈ ಹಿರಿಯ ನಾಗರಿಕ ಉದ್ಯಮಿ ಹೆಸರು ದೇವೇಂದ್ರ ಶಾ. ಇವರು ಬಿಹಾರದ ವೈಶಾಲಿ ಜಿಲ್ಲೆಯ ಕಟೇರ್ಮಾಲ ಎಂಬ ಹಳ್ಳಿಯ ನಿವಾಸಿ. ಲೋಕಲ್ 18ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ದೇವೇಂದ್ರ ಶಾ ಪಟ್ನಾದ ದೂರಸಂಪರ್ಕ ಇಲಾಖೆಯಲ್ಲಿ ಸುಮಾರು 15 ವರ್ಷಗಳ ಕಾಲ ಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಉದ್ಯೋಗದಲ್ಲಿ ನೆಮ್ಮದಿ ಕಂಡುಕೊಂಡಿದ್ದ ದೇವೇಂದ್ರ ಅವರನ್ನು ಒಂದು ದಿನ ಇದ್ದಕ್ಕಿದ್ದಂತೆ ಉದ್ಯೋಗದಿಂದ ತೆಗೆದು ಹಾಕಲಾಯಿತು. ಇದರಿಂದ ದೇವೇಂದ್ರ ಶಾ ತನ್ನ ಸ್ವಗ್ರಾಮಕ್ಕೆ ಹಿಂತಿರುಗಬೇಕಾಯಿತು.
undefined
ದಿನಕ್ಕೆ 7ರೂ.ಗಳಿಸುತ್ತಿದ್ದ ವ್ಯಕ್ತಿ ಈಗ 3 ಕೋಟಿ ವಹಿವಾಟು ನಡೆಸೋ ಸಂಸ್ಥೆ ಒಡೆಯ;ಈತನ ಕಥೆ ಸಿನಿಮಾಕ್ಕಿಂತಲೂ ರೋಚಕ
ಕೆಲಸ ಕಳೆದುಕೊಂಡು ಹಳ್ಳಿಗೆ ಮರಳಿದ ದೇವೇಂದ್ರ ಶಾ ಎರಡು ವರ್ಷಗಳ ಕಾಲ ವ್ಯವಸಾಯದ ಕೆಲಸಗಳನ್ನು ಮಾಡಿದರು. ಅದಾದ ಬಳಿಕ ಹಾಲು ಮಾರುವ ಉದ್ಯಮ ಪ್ರಾರಂಭಿಸಿದರು. ಹಳ್ಳಿಗಳ ರೈತರಿಂದ ಹಾಲು ಖರೀದಿಸಿ ತಂದು ನಗರಗಳಲ್ಲಿ ಮಾರಾಟ ಮಾಡ ತೊಡಗಿದರು. ಆದರೆ, ಈ ಉದ್ಯೋಗದಲ್ಲಿ ದೇವೇಂದ್ರ ಶಾ ಅವರಿಗೆ ಭಾರೀ ನಷ್ಟವಾಯಿತು. ಈ ಸಮಯದಲ್ಲಿ ಒಬ್ಬರು ಸ್ನೇಹಿತರು ಅವರಿಗೆ ಡೈರಿ ಉತ್ಪನ್ನಗಳ ಉದ್ಯಮ ಪ್ರಾರಂಭಿಸುವಂತೆ ಸಲಹೆ ನೀಡಿದರು. ಹೀಗಾಗಿ ಅವರು ಸಣ್ಣ ಕೋಣೆಯೊಂದರ್ಲಿ ಉದ್ಯಮ ಪ್ರಾರಂಭಿಸಿದರು. ಈ ಸಮಯದಲ್ಲಿ ಅವರ ಬಳಿ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಲು ಸಾಕಷ್ಟು ಬಂಡವಾಳವಿರಲಿಲ್ಲ.
ಡೈರಿ ಉತ್ಪನ್ನಗಳ ಉದ್ಯಮ ಪ್ರಾರಂಭಿಸಿದ ಬಳಿಕ ದೇವೇಂದ್ರ ಶಾ ಅನೇಕ ಸವಾಲುಗಳನ್ನು ಕೂಡ ಎದುರಿಸಿದ್ದರು. ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಅವರ ಬಳಿ ಬಂಡವಾಳವಿರಲಿಲ್ಲ. ಇಂಥ ಸಮಯದಲ್ಲಿ ಅವರ ಗ್ರಾಹಕರಾಗಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬರು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಮೂಲಕ ಉದ್ಯಮ ವಿಸ್ತರಣೆಗೆ ಪ್ರಯತ್ನಿಸುವಂತೆ ಸಲಹೆ ನೀಡಿದರು. ಹೀಗಾಗಿ ದೇವೇಂದ್ರ ಶಾ ಮುದ್ರಾ ಯೋಜನೆ ಮೂಲಕ 10 ಲಕ್ಷ ರೂ. ಸಾಲ ಪಡೆಯಲು ನಿರ್ಧರಿಸಿದರು. 2021ರಲ್ಲಿ ಅವರ ಉದ್ಯಮ ಸಾಕಷ್ಟು ಮಟ್ಟದ್ಲಿ ವಿಸ್ತರಣೆ ಕಂಡಿತು. ಅವರು ಮುಜಫರ್ ಪುರ, ಮೋಟಿಪುರ ಹಾಗೂ ವೈಶಾಲಿ ನಗರಗಳಿಗೆ ಕೂಡ ಹಾಲು ಪೂರೈಸಲು ಪ್ರಾರಂಭಿಸಿದರು. ವರದಿ ಪ್ರಕಾರ ದೇವೇಂದ್ರ ಶಾ ಆರು ಜನರಿಗೆ ಉದ್ಯೋಗ ಕೂಡ ನೀಡಿದ್ದಾರೆ.
ಮನೆಯಲ್ಲಿ ಟಾಯ್ಲೆಟ್ ಇದ್ರೂ ತೋಟಕ್ಕೆ ಗೆಸ್ಟ್ ಕಳಿಸುವ ಈಕೆ ಅದಕ್ಕೂ ಹಣ ಪಡೆಯೋದ್ಯಾಕೆ?
ದೇವೇಂದ್ರ ಶಾ ಮೂರು ವಿಧದ ಮೊಸರುಗಳನ್ನು ಮಾರಾಟ ಮಾಡುತ್ತಾರೆ. 60ರೂ, 65ರೂ ಹಾಗೂ 75ರೂ. ಮೊಸರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು 8ರೂ., 10ರೂ. ಹಾಗೂ 15ರೂ. ಬೆಲೆಯ ಸಿಹಿತಿಂಡಿಗಳನ್ನು ಕೂಡ ಮಾರಾಟ ಮಾಡುತ್ತಿದ್ದಾರೆ. ಅವರೇ ನೀಡಿರುವ ಮಾಹಿತಿ ಪ್ರಕಾರ ಈಗ ಪ್ರತಿ ತಿಂಗಳು ಅವರು 80 ಸಾವಿರ ರೂ. ಗಳಿಸುತ್ತಿದ್ದಾರೆ. ತನ್ನ ಈ ಯಶಸ್ಸಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯೇ ಕಾರಣ ಎಂದು ಹೇಳಲು ಅವರು ಮರೆತಿಲ್ಲ.