
ದೇಶದ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳಲ್ಲಿ ಒಂದೆನಿಸಿದ ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ ಅವರು ಇಂದು ಲಂಡನ್‌ನಲ್ಲಿ ನಿಧನರಾಗಿದ್ದು, ಅವರಿಗೆ 85 ವರ್ಷ ವಯಸ್ಸಾಗಿತ್ತು. ಉದ್ಯಮ ಲೋಕದ ಮುತ್ಸದಿ ಎನಿಸಿದ್ದ ಗೋಪಿಚಂದ್ ಅವರಿಗೆ 85 ವರ್ಷ ವಯಸ್ಸಾಗಿತ್ತು. ಹಿಂದೂಜಾ ಕುಟುಂಬದ ಎರಡನೇ ತಲೆಮಾರಿನವರಾದ ಗೋಪಿಚಂದ್ ಅವರು ತಮ್ಮ ಅಣ್ಣ ಶ್ರೀಚಂದ್ ಅವರು 2023ರಲ್ಲಿ ನಿಧನರಾದ ನಂತರ ಹಿಂದೂಜಾ ಗ್ರೂಪ್ನ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡಿದ್ದರು.
ಗೋಪಿಚಂದ್ ಅವರು ಪತ್ನಿ ಸುನೀತಾ, ಇಬ್ಬರು ಪುತ್ರರಾದ ಸಂಜಯ್ ಮತ್ತು ಧೀರಜ್ ಹಾಗೂ ಮಗಳು ರೀಟಾ ಅವರನ್ನು ಅಗಲಿದ್ದಾರೆ. ಈ ವರ್ಷದ ಆರಂಭದಲ್ಲಿ, ದಿ ಸಂಡೇ ಟೈಮ್ಸ್ ಶ್ರೀಮಂತರ ಲಿಸ್ಟ್‌ನಲ್ಲಿ ಗೋಪಿಚಂದ್ ಹಿಂದೂಜಾ ಅವರ ಹೆಸರಿತ್ತು. ಅವರು ಹಾಗೂ ಅವರ ಕುಟುಂಬವು ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿಗಳಾಗಿ ತಮ್ಮ ಸ್ಥಾನಮಾನವನ್ನು ಉಳಿಸಿಕೊಂಡಿದ್ದಾರೆ ಎಂದು ವರದಿ ಹೇಳಿತ್ತು..
ಉದ್ಯಮ ಲೋಕದ ಗೆಳೆಯರ ಪಾಲಿಗೆ ಪ್ರೀತಿಯ ಜಿಪಿಯಾಗಿದ್ದ ಗೋಪಿಚಂದ್ ಅವರು ಯುನೈಟೆಡ್ ಕಿಂಗ್‌ಡಂನಲ್ಲಿ ಹಿಂದೂಜಾ ಗ್ರೂಪ್ ಮತ್ತು ಹಿಂದೂಜಾ ಆಟೋಮೋಟಿವ್ ಲಿಮಿಟೆಡ್ ಎರಡರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1959 ರಲ್ಲಿ ಮುಂಬೈನಲ್ಲಿ ಕುಟುಂಬದ ಉದ್ಯಮದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಗೋಪಿಚಂದ್ ಅವರು, ದೇಶಿಯವಾಗಿ ಇದ್ದ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಬೆಳೆಸುವುದರ ಜೊತೆಗೆ ಶತಕೋಟಿ ಮೌಲ್ಯದ ವೈವಿಧ್ಯಮಯ ಕಂಪನಿಯಾಗಿಸುವಲ್ಲಿ ಶ್ರಮವಹಿಸಿದ್ದರು.
1984ರಲ್ಲಿ ಗಲ್ಫ್ ಆಯಿಲ್ ಕಂಪನಿಯನ್ನು ಖರೀದಿಸುವುದರ ಹಿಂದೆ ಅವರ ನಿರ್ಣಾಯಕ ಕಾರ್ಯತಂತ್ರವಿತ್ತು, ಹಾಗೆಯೇ 1987ರಲ್ಲಿ ಆಗ ತೀವ್ರ ಸಂಕಷ್ಟದಲ್ಲಿದ್ದ ಅಶೋಕ್ ಲೇಲ್ಯಾಂಡ್ ಅನ್ನು ಅವರು ಖರೀದಿಸಿದ್ದರು. ಇದು ಭಾರತದಲ್ಲಿ ಮೊದಲ ಗಣನೀಯ ಎನ್‌ಆರ್‌ಐ ಹೂಡಿಕೆಯನ್ನು ಗುರುತಿಸಿತು. ಈ ಅಶೋಕ್ ಲೇಲ್ಯಾಂಡ್ ಖರೀದಿಯೂ ಈಗ ಭಾರತದ ಅತ್ಯಂತ ಗಮನಾರ್ಹ ಕಾರ್ಪೊರೇಟ್ ಯಶಸ್ಸಿನ ಕಥೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಮುಂದಾಲೋಚನೆಯ ನಾಯಕರಾಗಿದ್ದ ಜಿಪಿ ಅವರು ಹಿಂದೂಜಾ ಗ್ರೂಪ್ ವಿದ್ಯುತ್ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕೈಯಾಡಿಸುವುದರ ಹಿಂದೆ ಮಹತ್ವದ ಪಾತ್ರ ವಹಿಸಿದರು. ಭಾರತದಾದ್ಯಂತ ಗಣನೀಯ ಇಂಧನ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡರು.
ಹಲವು ಡಾಕ್ಟರೇಟ್ ಗರಿ
1959 ರಲ್ಲಿ ಮುಂಬೈನ ಜೈ ಹಿಂದ್ ಕಾಲೇಜಿನಿಂದ ಪದವಿ ಪಡೆದ ಅವರಿಗೆ ಹಲವು ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಲಭಿಸಿದೆ. ಯುಕೆಯ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಿಂದ ಕಾನೂನು ಡಾಕ್ಟರೇಟ್ ಮತ್ತು ಲಂಡನ್‌ನ ರಿಚ್ಮಂಡ್ ಕಾಲೇಜಿನಿಂದ ಅರ್ಥಶಾಸ್ತ್ರದ ಡಾಕ್ಟರೇಟ್ ಪದವಿ ಅವರ ಮುಡಿಗೇರಿಸಿಕೊಂಡಿದ್ದರು
2 ಲಕ್ಷ ಜನರಿಗೆ ಉದ್ಯೋಗದಾತ
ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಹಿಂದೂಜಾ ಗ್ರೂಪ್, ಬ್ಯಾಂಕಿಂಗ್ ಮತ್ತು ಹಣಕಾಸು, ಇಂಧನ, ಮಾಧ್ಯಮ, ಟ್ರಕ್‌ಗಳು, ಲೂಬ್ರಿಕಂಟ್‌ಗಳು ಮತ್ತು ಕೇಬಲ್ ಟೆಲಿವಿಷನ್ ಸೇರಿದಂತೆ ವೈವಿಧ್ಯಮಯ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ಬಹುರಾಷ್ಟ್ರೀಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ವಿಶ್ವಾದ್ಯಂತ ಸುಮಾರು 200,000 ವ್ಯಕ್ತಿಗಳಿಗೆ ಉದ್ಯೋಗವನ್ನು ಒದಗಿಸಿರುವ ಈ ಸಂಸ್ಥೆಯನ್ನು ಪರಮಾನಂದ್ ದೀಪ್‌ಚಂದ್ ಹಿಂದೂಜಾ ಅವರು 1919 ರಲ್ಲಿ ಸಿಂಧ್‌ನಿಂದ ಇರಾನ್‌ಗೆ ಸ್ಥಳಾಂತರಗೊಂಡ ನಂತರ ಸ್ಥಾಪಿಸಿದರು. (ಸಿಂದ್ ಹಿಂದೆ ಭಾರತದ ಭಾಗವಾಗಿತ್ತು, ಪ್ರಸ್ತುತ ಪಾಕಿಸ್ತಾನದಲ್ಲಿದೆ) ನಂತರ 1979 ರಲ್ಲಿ ವ್ಯವಹಾರದ ಪ್ರಧಾನ ಕಚೇರಿಯನ್ನು ಇರಾನ್‌ನಿಂದ ಲಂಡನ್‌ಗೆ ಸ್ಥಳಾಂತರಿಸಿದ್ದರು.
ಇದನ್ನೂ ಓದಿ: ನಿನಗಾಗಿ ಹೆಂಡ್ತಿ ಕೊಂದೇ: ಒಂದೇ ಮೆಸೇಜ್ 4-5 ಹೆಂಗಸರಿಗೆ ಕಳುಹಿಸಿದ್ದ ಸ್ತ್ರೀಲೋಲ ಡಾ. ಮಹೇಂದ್ರ
ಇದನ್ನೂ ಓದಿ: ಬಿಹಾರದಲ್ಲಿ 6 ವರ್ಷದ ಹಿಂದಷ್ಟೇ ನಿರ್ಮಿಸಿದ ಸೇತುವೆ ಕುಸಿತ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.