ತಿಂಗಳಿಗೆ ₹10,000 ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ! ಹಣ ಉಳಿಕೆ ಶ್ರೇಷ್ಠವೋ, ಹೂಡಿಕೆ ಒಳ್ಳೆಯದೋ?

Kannadaprabha News, Ravi Janekal |   | Kannada Prabha
Published : Nov 04, 2025, 01:48 PM IST
saving vs investing for beginners

ಸಾರಾಂಶ

ಕೇವಲ ಹಣ ಉಳಿತಾಯ ಮಾಡುವುದರಿಂದ ಹಣದುಬ್ಬರದ ಕಾರಣ ನಿಮ್ಮ ಹಣದ ಮೌಲ್ಯ ಕುಸಿಯುತ್ತದೆ. ಆದರೆ, ಸಿಪ್ (SIP) ನಂತಹ ಹೂಡಿಕೆಗಳು ಚಕ್ರಬಡ್ಡಿಯ ಲಾಭ ನೀಡಿ, ಕಡಿಮೆ ಸಮಯದಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಲ್ಲವು. ಬೇಗ ಹೂಡಿಕೆ ಆರಂಭಿಸುವುದರಿಂದ ಆರ್ಥಿಕವಾಗಿ ಬೆಳೆಯಲು ಸಾಧ್ಯ.

ತಿಂಗಳಿಗೆ 10,000 ರು. ಉಳಿಸುತ್ತ ಬಂದರೆ 5 ವರ್ಷಕ್ಕೆ 6 ಲಕ್ಷ ಹಣವಾಗುತ್ತದೆ, ಅದು ಬದುಕಿಗೆ ಭದ್ರತೆ ನೀಡುತ್ತದೆ ಎಂದು ಬಹಳ ಮಂದಿ ಭಾವಿಸಿದ್ದಾರೆ. ಆದರೆ ಈಗ ಹಣದ ಲೆಕ್ಕಾಚಾರ ಬದಲಾಗಿದೆ. ಈ ಥರ ಹಣ ಉಳಿತಾಯ ಮಾಡಿದರೆ ಶ್ರೀಮಂತರಾಗಲ್ಲ, ಆರ್ಥಿಕವಾಗಿ ಹಿಂದುಳಿದು ಬಿಡುತ್ತೀರಿ. ಆರ್ಥಿಕವಾಗಿ ಬೆಳೆಯುವ ಹೊಸ ದಾರಿಗಳ ಬಗೆಗೆ ಮಾಹಿತಿ ಇಲ್ಲಿದೆ.

ನಮ್ಮಲ್ಲಿ ಬಹುತೇಕರು ಹಣ ಉಳಿಸುವುದನ್ನೇ ಹಣಕಾಸಿನ ಶಿಸ್ತು ಎಂದು ನಂಬಿದ್ದೇವೆ. ತಿಂಗಳಿಗೆ ರು. 10,000 ಬ್ಯಾಂಕ್ ಖಾತೆಯಲ್ಲಿ ಇಡುವುದು ಸುರಕ್ಷಿತ, ಬದುಕಿಗೆ ಭದ್ರತೆ ಎಂದು ಭಾವಿಸುತ್ತೇವೆ. ಆದರೆ ಬದಲಾದ ಆರ್ಥಿಕ ಸ್ಥಿತಿಯಲ್ಲಿ ಈ ಮನಸ್ಥಿತಿಯೇ ನಮ್ಮ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ.

ನಿಶ್ಚಲ್‌ಗೆ ಕೆಲಸಕ್ಕೆ ಸೇರಿ ಬೈಕ್‌ ಖರೀದಿಗಾಗಿ ಪ್ರತೀ ತಿಂಗಳು 10,000 ರು. ಉಳಿಕೆ ಮಾಡುತ್ತಾ ಬಂದ. ಐದು ವರ್ಷಕ್ಕೆ ಆತನ ಬಳಿ 6 ಲಕ್ಷ ರು.ಗಳಷ್ಟು ಹಣ ಸಂಗ್ರಹವಾಯಿತು. (ಬ್ಯಾಂಕ್‌ ಸೇವಿಂಗ್ಸ್‌ಗೆ ಕೊಂಚ ಬಡ್ಡಿ ಸೇರಿದರೂ ಅದೇನು ಹೆಚ್ಚಿರಲಿಲ್ಲ.) ಕನಸು ಕೈಗೂಡುವ ಸಮಯ ಬಂತು ಎಂದು ಖುಷಿಯಿಂದ ಶೋರೂಂಗೆ ಹೋದರೆ ಅಲ್ಲೊಂದು ಆಘಾತ ಕಾದಿತ್ತು. ಆತ ಉದ್ಯೋಗಕ್ಕೆ ಸೇರುವಾಗ 6 ಲಕ್ಷ ಇದ್ದ ಆ ಬೈಕ್ ಬೆಲೆ ಐದೇ ವರ್ಷದಲ್ಲಿ 10 ಲಕ್ಷ ರು.ಗೆ ಏರಿಕೆಯಾಗಿತ್ತು! ಐದು ವರ್ಷಗಳ ಕಾಲ ಕಷ್ಟಪಟ್ಟು ಉಳಿಸಿದ ಹಣದ ಮೌಲ್ಯ ಬದಲಾದ ಆರ್ಥಿಕತೆಯಲ್ಲಿ ಕುಸಿತ ಕಂಡಿತ್ತು.

ಹೂಡಿಕೆ ಮತ್ತು ಉಳಿಕೆ ನಡುವೆ ಹೆಚ್ಚುತ್ತಿರುವ ಅಂತರ

ಹಣದುಬ್ಬರದ ಪರಿಣಾಮ ಹಣದ ಮೌಲ್ಯ ವೇಗವಾಗಿ ಬದಲಾಗುತ್ತಿದೆ. ನೀವು ತಿಂಗಳಿಗೆ 10 ಸಾವಿರಗಳಷ್ಟನ್ನು 10 ವರ್ಷಕ್ಕೆ ಉಳಿತಾಯ ಮಾಡಿದರೆ 12 ಲಕ್ಷ ರು. ಸೇವಿಂಗ್ಸ್‌ ಆಗುತ್ತದೆ. ಆದರೆ ಹಣದುಬ್ಬರ ಯಾವ ಬಗೆಯಲ್ಲಿ ಏರುತ್ತಿದೆ ಎಂದರೆ 12 ಲಕ್ಷ ರು.ಗೆ 6.7 ಲಕ್ಷ ಮೌಲ್ಯದ ವಸ್ತುವನ್ನಷ್ಟೇ ಖರೀದಿಸುವಂತಾಗಿದೆ. ಇದೇ ಹಣ ಹೂಡಿಕೆದಾರರ ಕೈಗೆ ಸಿಕ್ಕರೆ ಅವರು ಇದರಿಂದ 22 ಲಕ್ಷ ರು.ನಷ್ಟು ಗಳಿಕೆ ಮಾಡುತ್ತಾರೆ.

ಸಿಪ್‌ ಹೂಡಿಕೆಯಿಂದ ಏನು ಪ್ರಯೋಜನ

ವಿಜೇತ ಮತ್ತು ಸಾತ್ವಿಕಾ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಇಬ್ಬರಿಗೂ 60,000 ರು. ಸಂಬಳವಿದೆ. ವಿಜೇತ ಪ್ರತಿ ವಾರ ರು.2,500 ಮೊತ್ತವನ್ನು ಬ್ಯಾಂಕ್‌ನಲ್ಲಿ ಉಳಿಸುತ್ತಾಳೆ; ಸಾತ್ವಿಕಾ ಅದೇ ಹಣವನ್ನು ಸಿಪ್‌ (ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌) ಮೂಲಕ ಹೂಡಿಕೆ ಮಾಡುತ್ತಾಳೆ. ಹತ್ತು ವರ್ಷಗಳ ಬಳಿಕ ವಿಜೇತ ಬಳಿ ರು.13 ಲಕ್ಷ ಇದ್ದರೆ ಸಾತ್ವಿಕಾ ಬಳಿ ರು.25 ಲಕ್ಷ ಸಂಗ್ರಹವಾಗಿತ್ತು. ಇದು ಹೂಡಿಕೆಗಿರುವ ತಾಕತ್ತಿಗೆ ಉದಾಹರಣೆ.

ಚಕ್ರಬಡ್ಡಿಯಿಂದ ಹಣದ ಏರಿಕೆ

ಚಕ್ರಬಡ್ಡಿ ಅಥವಾ ಕಾಂಪೌಂಡ್‌ ಇಂಟರೆಸ್ಟ್‌ನಲ್ಲಿ ಪ್ರತೀ ತಿಂಗಳು ರು.10,000 ಹೂಡಿಕೆ ಮಾಡಿದರೆ ಶೇ.12ರ ಬಡ್ಡಿಯಂತೆ 20 ವರ್ಷಗಳಲ್ಲಿ 1 ಕೋಟಿ, 30 ವರ್ಷಗಳಲ್ಲಿ 3.5 ಕೋಟಿ ಗಳಿಸಬಹುದು. ಇದರಲ್ಲಿ ಎಷ್ಟು ಹೂಡಿಕೆ ಮಾಡಿದಿರಿ ಅನ್ನೋದರ ಜೊತೆಗೆ ಈ ಪ್ರೊಸೆಸ್‌ಗೆ ಎಷ್ಟು ಸಮಯ ನೀಡುತ್ತೀರಿ ಅನ್ನೋದೂ ಮುಖ್ಯವಾಗುತ್ತದೆ.

ಆರಂಭದಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿ. ನಿಮ್ಮ ವಯಸ್ಸು 25 ವರ್ಷವಾಗಿದ್ದರೆ ಸಿಪ್‌ನಲ್ಲಿ ತಿಂಗಳಿಗೆ 5000 ಅಥವಾ 10000 ಸಾವಿರ ಹೂಡಿಕೆ ಮಾಡಿದರೂ ಸಾಕು, ನೀವು 55ರ ವಯಸ್ಸು ಸಮೀಪಿಸುವ ಮೊದಲೇ ಕೋಟ್ಯಧಿಪತಿ ಆಗಬಹುದು.

ಈ ಕುರಿತು ಪರಿಣತರಿಂದ ಸೂಕ್ತ ಮಾರ್ಗದರ್ಶನ ಪಡೆದು ಮುಂದುವರಿಯುವುದು ಒಳ್ಳೆಯದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!