
ಬೆಂಗಳೂರು (ಸೆ.16): ದೇಶದ ಪ್ರಮುಖ 'ಝೀರೋ-ಸ್ಟಾಕ್ ಫ್ರೆಶ್ ಕಾಮರ್ಸ್' (Zero-Stock Fresh Commerce) ವೇದಿಕೆಯಾದ 'ಹ್ಯಾಂಡ್ಪಿಕ್ಡ್' (Handpicked), ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ. ಇದುವರೆಗೆ ಕೇವಲ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸರಬರಾಜು ಮಾಡುತ್ತಿದ್ದ ಈ ಪ್ಲಾಟ್‌ಫಾರ್ಮ್, ಇನ್ಮುಂದೆ ದಿನನಿತ್ಯದ ಅಗತ್ಯ ಅಡುಗೆ ಪದಾರ್ಥಗಳನ್ನೂ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದಾಗಿ ಘೋಷಿಸಿದೆ. ನಗರ ಪ್ರದೇಶಗಳಲ್ಲಿ ಶುದ್ಧ ಹಾಗೂ ರಾಸಾಯನಿಕ ರಹಿತ ಆಹಾರ ಸೇವನೆಗೆ ಆದ್ಯತೆ ನೀಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ವಿಸ್ತರಣೆ ಮಾಡಲಾಗಿದೆ. ಯಾವುದೇ ಕೃತಕ ರಾಸಾಯನಿಕಗಳಾಗಲಿ ಅಥವಾ ಸಂರಕ್ಷಕಗಳಾಗಲಿ (Preservatives) ಇಲ್ಲದೆ, ತಾಜಾವಾಗಿ ಸಿದ್ಧಪಡಿಸಿದ ಅಡುಗೆ ಸಾಮಗ್ರಿಗಳನ್ನು ಪೂರೈಸಲು ಕಂಪನಿಯು ತನ್ನ ಪೂರೈಕೆ ಜಾಲವನ್ನು ಬಲಪಡಿಸಿದೆ.
ಹ್ಯಾಂಡ್ಪಿಕ್ಡ್ ಒದಗಿಸುವ ನೂತನ ಉತ್ಪನ್ನ ಶ್ರೇಣಿಯಲ್ಲಿ ಹಲವು ವಿಶೇಷತೆಗಳಿವೆ
ತಾಜಾ ಹಿಟ್ಟು: ಗ್ರಾಹಕರು ಆಪ್‌ನಲ್ಲಿ ಆರ್ಡರ್ ನೀಡಿದ ತಕ್ಷಣವೇ ಗಿರಣಿಯಲ್ಲಿ ಬೀಸಿ ತಯಾರಿಸುವ ತಾಜಾ ಹಿಟ್ಟು.
ಮಸಾಲೆ ಮತ್ತು ಎಣ್ಣೆ: ಸ್ಥಳದಲ್ಲೇ ಅರೆದ ಸಾಂಬಾರ ಪದಾರ್ಥಗಳು ಹಾಗೂ ಸಾಂಪ್ರದಾಯಿಕ ಗಾಣದ ತಾಜಾ ಎಣ್ಣೆ.
ಇತರ ಉತ್ಪನ್ನಗಳು: ಡೈರಿ ಪದಾರ್ಥಗಳು, ಸಣ್ಣ ಬ್ಯಾಚ್‌ಗಳಲ್ಲಿ ಸಿದ್ಧಪಡಿಸಿದ ಸ್ಪ್ರೆಡ್‌ಗಳು, ತಾಜಾ ಹೂವುಗಳು ಹಾಗೂ 'ರೆಡಿ-ಟು-ಕುಕ್' (Ready-to-Cook) ಅಡುಗೆ ಸಾಮಗ್ರಿಗಳು.
ಬೆಂಗಳೂರು ನಗರವು ಕಂಪನಿಯ ಪ್ರಮುಖ ಬೆಳವಣಿಗೆಯ ಕೇಂದ್ರವಾಗಿ ಹೊರಹೊಮ್ಮಿದ್ದು, ತಾಜಾ ಕೃಷಿ ಉತ್ಪನ್ನಗಳ ವಿಭಾಗದಲ್ಲಿದ್ದ ಬಲವಾದ ಮಾರುಕಟ್ಟೆ ನಂಬಿಕೆಯೇ ಈ ನೂತನ ವಿಸ್ತರಣೆಗೆ ಪ್ರೇರಣೆಯಾಗಿದೆ. ಮುಂಬರುವ ವರ್ಷಗಳಲ್ಲಿ ಹಿಟ್ಟು ಮತ್ತು ಮಸಾಲೆ ವಿಭಾಗವೇ ಕಂಪನಿಯ ಪ್ರಮುಖ ಆದಾಯದ ಚಾಲಕ ಶಕ್ತಿಯಾಗಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೆಚ್ಚಿನ ಆಹಾರ ವಿತರಣಾ ವ್ಯವಸ್ಥೆಗಳು ರಾಸಾಯನಿಕ ಸಂರಕ್ಷಕಗಳು, ಕೃತಕ ಬಣ್ಣಗಳು ಹಾಗೂ ಸೂಪರ್‌ಮಾರ್ಕೆಟ್ ಶೆಲ್ಫ್‌ಗಳಲ್ಲಿ ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಲಾದ ಬೃಹತ್ ಗೋದಾಮು ಶೇಖರಣಾ ಮಾದರಿಯನ್ನೇ ನೆಚ್ಚಿಕೊಂಡಿವೆ. ಆದರೆ ಹ್ಯಾಂಡ್ಪಿಕ್ಡ್ ಇದಕ್ಕೆ ತದ್ವಿರುದ್ಧವಾದ 'ಝೀರೋ-ಇನ್ವೆಂಟರಿ' (Zero-Inventory) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯಲ್ಲಿ ಆಹಾರ ಸಿದ್ಧತೆ ಮತ್ತು ಬೆಳೆ ಕೊಯ್ಲಿನ ಹಂತದಿಂದ ಗ್ರಾಹಕರ ಮನೆಗೆ ನೇರ ಸಂಪರ್ಕ ಕಲ್ಪಿಸುವುದರಿಂದ, ಆಹಾರ ಧಾನ್ಯಗಳು ತಮ್ಮ ನೈಸರ್ಗಿಕ ಪೋಷಕಾಂಶ ಹಾಗೂ ಅಸಲಿ ಸುವಾಸನೆಯನ್ನು ಕಳೆದುಕೊಳ್ಳುವುದಿಲ್ಲ.
ಸೇವೆಯ ವಿಸ್ತರಣೆ ಕುರಿತು ಮಾತನಾಡಿದ ಹ್ಯಾಂಡ್ಪಿಕ್ಡ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಅನಂತ್ ಗೋಯಲ್, "ಆಹಾರ ಪದಾರ್ಥಗಳು ದೀರ್ಘಕಾಲ ಉಳಿಯುವಂತೆ ಮಾಡುವುದರ ಹಿಂದೆ ಎರಡೇ ಮಾರ್ಗಗಳಿವೆ: ಒಂದೋ ಅದಕ್ಕೆ ರಾಸಾಯನಿಕಗಳನ್ನು ಸೇರಿಸುವುದು, ಇಲ್ಲವೇ ಅದರಲ್ಲಿರುವ ನೈಸರ್ಗಿಕ ಸತ್ವವನ್ನು ಹೊರತೆಗೆಯುವುದು. ಜಾಗತಿಕ ಕಂಪನಿಗಳು ಒಂದೇ ಕಡೆ ಉತ್ಪಾದಿಸಿ ವಿಶ್ವಾದ್ಯಂತ ವಿತರಿಸಲು ಇಂತಹ ತಂತ್ರಜ್ಞಾನಗಳ ಮೇಲೆ ದಶಕಗಳಿಂದ ಭಾರಿ ಹೂಡಿಕೆ ಮಾಡುತ್ತಿವೆ. ನಿಮ್ಮ ಸ್ಥಳೀಯ ಗಿರಣಿಗಾರರಿಗಾಗಲಿ ಅಥವಾ ಸಿಹಿ ತಯಾರಕರಿಗಾಗಲಿ ಆ ತಂತ್ರಜ್ಞಾನ ತಿಳಿದಿಲ್ಲ, ಆದರೆ ಅಲ್ಲಿ ಕಚ್ಚಾವಸ್ತುಗಳ ಕಲಬೆರಕೆಯ ಸವಾಲಿದೆ" ಎಂದರು.
ಮುಂದುವರಿದು ಮಾತನಾಡಿದ ಅವರು, "ಹ್ಯಾಂಡ್ಪಿಕ್ಡ್ ಈ ಎರಡೂ ಸವಾಲುಗಳಿಗೆ ಏಕಕಾಲದಲ್ಲಿ ಪರಿಹಾರ ನೀಡುತ್ತಿದೆ. ಶುದ್ಧ ಕಚ್ಚಾವಸ್ತು, ನೈರ್ಮಲ್ಯದ ತಯಾರಿಕೆ ಮತ್ತು ತಕ್ಷಣದ ವಿತರಣೆ ನಮ್ಮ ಸೂತ್ರ. ನೈಸರ್ಗಿಕ ನಿಯಮದ ಪ್ರಕಾರ ಕೆಡಬೇಕಾದ ಸಮಯದಲ್ಲಿಯೇ ಹಾಳಾಗುವ ನೈಜ ತಾಜಾ ಆಹಾರವನ್ನು ನಾವು ನೀಡುತ್ತಿದ್ದೇವೆ. ಏಕೆಂದರೆ ನೈಜ ತಾಜಾತನಕ್ಕೆ ಯಾವುದೇ ಕೃತಕ ವಿಜ್ಞಾನದ ಅಗತ್ಯವಿಲ್ಲ" ಎಂದು ಹೇಳಿದರು.
ಹ್ಯಾಂಡ್ಪಿಕ್ಡ್ ದಿನಸಿ ಶ್ರೇಣಿಯ ಪ್ರತಿಯೊಂದು ಬ್ಯಾಚ್ ಅನ್ನು ನುರಿತ ರೈತರು ಮತ್ತು ಸ್ಥಳೀಯ ಗಿರಣಿಗಳಿಂದಲೇ ಸಂಗ್ರಹಿಸಲಾಗುತ್ತಿದ್ದು, ಗ್ರಾಹಕರ ವಿತರಣಾ ಸ್ಥಳದ ಸಮೀಪದಲ್ಲೇ ಸಿದ್ಧಪಡಿಸಲಾಗುತ್ತದೆ. ಪ್ರಸ್ತುತ ಈ ಸೇವೆಯು ಬೆಂಗಳೂರು ಸೇರಿದಂತೆ ಗುರುಗ್ರಾಮ್ ಹಾಗೂ ನೋಯ್ಡಾದಾದ್ಯಂತ ಲಭ್ಯವಿದೆ. ಸಂಪೂರ್ಣ 'ಫುಲ್-ಸ್ಟಾಕ್ ಫ್ರೆಶ್ ಕಾಮರ್ಸ್ ಇಕೋಸಿಸ್ಟಮ್' ನಿರ್ಮಿಸುವ ಹಾದಿಯಲ್ಲಿ ಕಂಪನಿಯು ಈ ಹೆಜ್ಜೆಯಿಟ್ಟಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.