ಉದ್ಯೋಗಿಗಳಿಗೆ ಬಿಗ್ ರಿಲೀಫ್: ಪಿಎಫ್ ಮಾಸಿಕ ವೇತನ ಮಿತಿ 15 ಸಾವಿರದಿಂದ 25 ಸಾವಿರಕ್ಕೆ ಏರಿಕೆ

Published : Sep 16, 2026, 04:20 PM IST
epf salary limit increased from 15000 to 25000 who benefits

ಸಾರಾಂಶ

ಕೇಂದ್ರ ಸರ್ಕಾರವು ಉದ್ಯೋಗಿಗಳ ಭವಿಷ್ಯ ನಿಧಿ (PF) ವ್ಯಾಪ್ತಿಗೆ ಒಳಪಡುವ ಮಾಸಿಕ ವೇತನದ ಗರಿಷ್ಠ ಮಿತಿಯನ್ನು ₹15,000 ದಿಂದ ₹25,000 ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ. ಇದರಿಂದ ಲಕ್ಷಾಂತರ ಹೆಚ್ಚುವರಿ ನೌಕರರು ಇಪಿಎಫ್ ವ್ಯಾಪ್ತಿಗೆ ಬರಲಿದ್ದಾರೆ.

ನವದೆಹಲಿ (ಸೆ.16): ದೇಶದ ಶ್ರಮಿಕ ವಲಯ ಹಾಗೂ ಖಾಸಗಿ ರಂಗದ ಉದ್ಯೋಗಿಗಳಿಗೆ ಬೃಹತ್ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೃಹತ್ ಹೆಜ್ಜೆ ಇಟ್ಟಿದೆ. ಉದ್ಯೋಗಿಗಳ ಭವಿಷ್ಯ ನಿಧಿ (PF) ವ್ಯಾಪ್ತಿಗೆ ಒಳಪಡುವ ಮಾಸಿಕ ವೇತನದ ಗರಿಷ್ಠ ಮಿತಿಯನ್ನು ಪ್ರಸ್ತುತ ಇರುವ ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಕೇಂದ್ರ ಸಂಪುಟ ಸಭೆ ಅಂತಿಮ ಅನುಮೋದನೆ ನೀಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಲಕ್ಷಾಂತರ ಹೆಚ್ಚುವರಿ ನೌಕರರು ಇಪಿಎಫ್ ಹಾಗೂ ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಗೆ ತರಲ್ಪಡಲಿದ್ದಾರೆ. ಪಿಎಫ್ ಕವರೇಜ್ ಮಿತಿಯನ್ನು ಹೆಚ್ಚಿಸಿರುವುದರಿಂದ, ಇನ್ಮುಂದೆ ₹25,000 ವರೆಗೆ ಮೂಲ ವೇತನ (Basic Salary) ಹಾಗೂ ತುಟ್ಟಿಭತ್ಯೆ (DA) ಪಡೆಯುವ ನೌಕರರಿಗೆ ಪಿಎಫ್ ಮತ್ತು ಪಿಂಚಣಿ (EPS) ವಂತಿಗೆ ಕಡಿತಗೊಳಿಸುವುದು ಕಂಪನಿಗಳಿಗೆ ಕಡ್ಡಾಯವಾಗಲಿದೆ.

ಆರ್ಥಿಕ ಸ್ಥಿರತೆ ಮತ್ತು ಬೊಕ್ಕಸಕ್ಕೆ ಹೊರೆ

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಪುಟ ಸಭೆಯ ನಿರ್ಧಾರವನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸುತ್ತಾ, "ಈ ಐತಿಹಾಸಿಕ ನಿರ್ಧಾರವು ನೌಕರರಿಗೆ ಉತ್ತಮ ಸಾಮಾಜಿಕ ಭದ್ರತೆ ಮತ್ತು ದೀರ್ಘಾವಧಿಯ ಆರ್ಥಿಕ ಸ್ಥಿರತೆಯನ್ನು ಒದಗಿಸಲಿದೆ" ಎಂದು ತಿಳಿಸಿದರು. ಈ ನೂತನ ಬದಲಾವಣೆಯಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಪ್ರತಿವರ್ಷ ಸುಮಾರು ₹11,339 ಕೋಟಿ ಹೆಚ್ಚುವರಿ ವೆಚ್ಚ ತಗಲಲಿದೆ ಎಂದು ಅಂದಾಜಿಸಲಾಗಿದೆ. ಸಾಮಾಜಿಕ ಭದ್ರತೆಯ ವ್ಯಾಪ್ತಿ ಹಿಗ್ಗುವುದರಿಂದ ನೌಕರರಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ಸಿಗಲಿದ್ದು, ಕಂಪನಿಗಳಿಗೂ ಸಹ ನೌಕರರನ್ನು ದೀರ್ಘಕಾಲ ಸಂಸ್ಥೆಯಲ್ಲೇ ಉಳಿಸಿಕೊಳ್ಳಲು (Employee Retention) ಇದು ನೆರವಾಗಲಿದೆ ಎಂಬುದು ಸರ್ಕಾರದ ಆಶಯವಾಗಿದೆ.

ಸುಲಭ ಭಾಷೆಯಲ್ಲಿ ಅರ್ಥೈಸಿಕೊಳ್ಳಿ: ಈ ಮಿತಿ ಏರಿಕೆಯಿಂದ ಏನಾಗಲಿದೆ?

ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ಯಾವುದೇ ಒಬ್ಬ ನೌಕರನ ಮೂಲ ವೇತನ (Basic) ಮತ್ತು ತುಟ್ಟಿಭತ್ಯೆ (DA) ಸೇರಿ ₹25,000 ಅಥವಾ ಅದಕ್ಕಿಂತ ಕಡಿಮೆಯಿದ್ದರೆ, ಅಂತಹ ಉದ್ಯೋಗಿಯನ್ನು ಇಪಿಎಫ್ (EPF) ವ್ಯಾಪ್ತಿಗೆ ಸೇರ್ಪಡೆಗೊಳಿಸುವುದು ಕಂಪನಿಗೆ ಶಾಸನಬದ್ಧವಾಗಿ ಕಡ್ಡಾಯವಾಗಿರುತ್ತದೆ.

ಒಂದು ವೇಳೆ, ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಯ ಮೂಲ ವೇತನ + ತುಟ್ಟಿಭತ್ಯೆ ₹25,000 ಕ್ಕಿಂತ ಹೆಚ್ಚಿದ್ದು, ಆತ ಈ ಹಿಂದೆ ಎಂದೂ ಇಪಿಎಫ್ ಸದಸ್ಯನಾಗಿರದಿದ್ದರೆ (ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುತ್ತಿದ್ದರೆ), ಅಂತಹ ನೌಕರನಿಗೆ ಇಪಿಎಫ್ ಯೋಜನೆಗೆ ಸೇರ್ಪಡೆಯಾಗುವುದು ಕಡ್ಡಾಯವಾಗಿರುವುದಿಲ್ಲ. ಇಂತಹ ಉದ್ಯೋಗಿಗೆ ಪಿಎಫ್ ಕಡಿತಗೊಳಿಸಬೇಕೋ ಅಥವಾ ಬೇಡವೋ ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಇರಲಿದೆ.

ಕಡ್ಡಾಯ ವಂತಿಗೆಯ ವೇತನ ಮಿತಿ ₹15,000 ರಷ್ಟೇ ಇರಲಿದೆ

ಇಲ್ಲಿ ನೌಕರರು ಮತ್ತು ಕಂಪನಿಗಳು ತಿಳಿದುಕೊಳ್ಳಬೇಕಾದ ಅತ್ಯಂತ ಪ್ರಮುಖ ತಾಂತ್ರಿಕ ವ್ಯತ್ಯಾಸವೊಂದಿದೆ. ಅದೇನೆಂದರೆ, ಇಪಿಎಫ್‌ನಲ್ಲಿ ಕಡ್ಡಾಯ ವಂತಿಗೆಯ (Mandatory Contribution) ವೇತನ ಮಿತಿಯು ₹15,000 ರಷ್ಟೇ ಮುಂದುವರಿಯಲಿದೆ. ಅಂದರೆ, ಕಂಪನಿ ಮತ್ತು ಉದ್ಯೋಗಿ ಪಾವತಿಸಬೇಕಾದ ಕಡ್ಡಾಯ ಪಿಎಫ್ ವಂತಿಗೆಯನ್ನು ₹15,000 ವೇತನದ ಆಧಾರದ ಮೇಲೆಯೇ ಲೆಕ್ಕಹಾಕಲಾಗುತ್ತದೆ.

ಉದಾಹರಣೆ 1: ಒಬ್ಬ ನೌಕರನ ಮೂಲ ವೇತನ ಮತ್ತು ಡಿಎ ಸೇರಿ ₹20,000 ಇದ್ದರೆ, ಆತನನ್ನು ಪಿಎಫ್ ಯೋಜನೆಗೆ ಒಳಪಡಿಸುವುದು ಕಂಪನಿಗೆ ಕಡ್ಡಾಯ. ಆದರೆ ಆತನ ಕಡ್ಡಾಯ ಪಿಎಫ್ ವಂತಿಗೆಯನ್ನು ₹15,000 ದ ಮಿತಿಗೇ ನಿಗದಿಪಡಿಸಲಾಗುತ್ತದೆ.

ಉದಾಹರಣೆ 2: ಒಬ್ಬ ನೌಕರನ ಮೂಲ ವೇತನ ಮತ್ತು ಡಿಎ ಸೇರಿ ₹30,000 ಇದ್ದು, ಆತ ಮೊದಲ ಬಾರಿಗೆ ಕೆಲಸಕ್ಕೆ ಸೇರುತ್ತಿದ್ದರೆ, ಆತನಿಗೆ ಹೊಸ ಕೆಲಸದಲ್ಲಿ ಪಿಎಫ್ ಪಡೆಯುವುದು ಕಡ್ಡಾಯವಲ್ಲ. ಆತ ತನ್ನ ಇಚ್ಛೆಯಂತೆ ಪಿಎಫ್ ಆಯ್ಕೆ ಮಾಡಿಕೊಳ್ಳಬಹುದು.

ಆದ್ದರಿಂದ, ಸರ್ಕಾರ ಹೆಚ್ಚಿಸಿರುವ ಈ ನೂತನ ₹25,000 ರ ಮಿತಿಯು ಮುಖ್ಯವಾಗಿ 'ಪಿಎಫ್ ವ್ಯಾಪ್ತಿ ಪಡೆಯುವ ನೌಕರರ ಅರ್ಹತೆಗೆ' (EPF Coverage) ಅನ್ವಯವಾಗಲಿದೆಯೇ ಹೊರತು, ಕಡ್ಡಾಯ ವಂತಿಗೆಯ ಗರಿಷ್ಠ ಮಿತಿಯು ₹15,000 ರಂತೆಯೇ ಮುಂದುವರಿಯಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Flipkart Big Billion Days 2026: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್.. ಈ ಬ್ಯಾಂಕ್ ಕಾರ್ಡ್‌ಗೆ ಭರ್ಜರಿ ಡಿಸ್ಕೌಂಟ್!
ಉದ್ಯಮಿ ನೀತಾ ಅಂಬಾನಿ ಫ್ಯಾಷನ್​ ಡಿಸೈನರ್​, ಮೇಕಪ್​ ಆರ್ಟಿಸ್ಟ್​ಗಳ ಸಂಬಳ ಎಷ್ಟು ಗೊತ್ತಾ