ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

By BK AshwinFirst Published Feb 12, 2023, 12:28 PM IST
Highlights

ವಾಯು ಯುದ್ಧ ಅಭಿವೃದ್ಧಿ ಹೊಂದುತ್ತಿರುವ ಹಾಗೇ, ದಾಳಿ ಮತ್ತು ವಾಯು ರಕ್ಷಣಾ ಪೈಲಟ್‌ಗಳು ಸಾಕಷ್ಟು ಹೆಚ್ಚಿನ ಕಷ್ಟಕರ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇಂತಹ ಕಷ್ಟಕರ ಪರಿಸ್ಥಿತಿಗಳನ್ನು ಸಾಂಪ್ರದಾಯಿಕ ತರಬೇತಿ ವಿಧಾನಗಳಿಂದ ನಿರ್ವಹಿಸಲು ಸಾಧ್ಯವಿಲ್ಲ.

(ಗಿರೀಶ್‌ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸವನ್ನು ಪ್ರದರ್ಶಿಸಿದೆ. ಈ ವಿನೂತನ ವಿನ್ಯಾಸ ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನಗಳ ಆಧುನಿಕ ತರಬೇತಿ ವಿಚಾರದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ. ಎಚ್ಎಎಲ್ ಹೂಡಿಕೆ ಮಾಡಿ ನಿರ್ಮಿಸಿರುವ ಎಚ್ಎಲ್ಎಫ್‌ಟಿ-42 ಒಂದು ಎಲ್‌ಸಿಎ ತೇಜಸ್ ವಿಮಾನದ ಮುಂದಿನ ಆವೃತ್ತಿಯಾಗಿದ್ದು, ಇದೊಂದು ಒಂಟಿ ಎಂಜಿನ್ನಿನ ಸೂಪರ್‌ಸಾನಿಕ್ ಟ್ರೈನರ್ (ತರಬೇತಿ) ವಿಮಾನವಾಗಿರಲಿದೆ.

ಈ ನೂತನ ವಿನ್ಯಾಸದ ವಿಮಾನವು ಹಾಕ್-132 ಮೇಲಿನ ಸಬ್ ಸಾನಿಕ್ ಜೆಟ್ ತರಬೇತಿ ಹಾಗೂ ಮಿಗ್-21 ನಂತಹ ವಿಮಾನದ ಮೂಲಕ ನಡೆಯುವ ಸೂಪರ್‌ಸಾನಿಕ್ ಜೆಟ್ ತರಬೇತಿ ವಿಮಾನಗಳ ಮಧ್ಯದ ಅಂತರವನ್ನು ತಗ್ಗಿಸುವ ಸಲುವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ವಿನ್ಯಾಸವು ಭಾರತೀಯ ವಾಯುಪಡೆಗೆ ಹಣ ಉಳಿತಾಯ ಮಾಡುವಂತಹ ಪ್ಲಾಟ್‌ಫಾರಂ ಆಗಿದ್ದು, ಮುಂಚೂಣಿ ಯುದ್ಧ ವಿಮಾನಗಳ ಏರ್ ಫ್ರೇಮ್ ನಿರ್ಮಾಣದ ಸಲುವಾಗಿ ನಡೆಸುವ ಅಪಾರ ವೆಚ್ಚವನ್ನು ಇದು ಕಡಿತಗೊಳಿಸಲಿದೆ.

ಇದನ್ನು ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

2017ರಲ್ಲಿ, ಪ್ರಸ್ತುತ ಭಾರತೀಯ ವಾಯುಪಡೆ ಉಪಯೋಗಿಸುತ್ತಿರುವ ಹಾಕ್ ಟ್ರೈನರ್ ನಿರ್ಮಾಣದ ಸಂಸ್ಥೆ ಬಿಎಇ ಸಿಸ್ಟಮ್ಸ್ ಭಾರತೀಯ ವಾಯುಪಡೆಗಾಗಿ ಬಿಎಇ - ಎಚ್ಎಎಲ್ ಜಂಟಿ 'ಅಡ್ವಾನ್ಸ್ಡ್ ಹಾಕ್' ನಿರ್ಮಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ಈ ಕುರಿತು ಮಾಹಿತಿ ನೀಡಿದ ಬಿಎಇ ಸಿಸ್ಟಮ್ಸ್ ಅಡ್ವಾನ್ಸ್ಡ್ ಹಾಕ್ ಅಭಿವೃದ್ಧಿ ನಡೆಸುವ ಮೂಲಕ ತರಬೇತಿಗಾಗಿ ಅಪಾರ ಬೆಲೆಬಾಳುವ ಮುಂಚೂಣಿ ವಿಮಾನಗಳ ಮೇಲೆ ಮಾಡುವ ವೆಚ್ಚವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ ಮತ್ತು ಕಾರ್ಯಾಚರಣೆಯ ಗುರಿಗಳಿಗೆ ಹೆಚ್ಚಿನ ಅವಕಾಶ ಲಭ್ಯವಾಗುತ್ತದೆ. ಆ ಮೂಲಕ ತರಬೇತಿ ಕಡಿಮೆ ವೆಚ್ಚದಾಯಕವೂ, ಸುಲಭವೂ ಆಗುತ್ತದೆ. ಆದರೆ ಅಡ್ವಾನ್ಸ್ಡ್ ಹಾಕ್ ವಿಮಾನ ಸೂಪರ್‌ಸಾನಿಕ್ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿಲ್ಲ ಎನ್ನುವ ಕಾರಣದಿಂದ ಈ ಯೋಜನೆಯ ಕುರಿತಾದ ಆಸಕ್ತಿ ಕ್ರಮೇಣ ಕಡಿಮೆಯಾಯಿತು.

ಎಚ್ಎಎಲ್ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ ಎಚ್ಎಲ್ಎಫ್‌ಟಿ-42 ಒಂದು ಹೊಸ ತಲೆಮಾರಿನ, ಲೀಡ್-ಇನ್ ಫೈಟರ್ ಟ್ರೈನರ್ ಆಗಿದ್ದು, ವಾಯು ಸಮರದಲ್ಲಿ ಪ್ರಾವೀಣ್ಯತೆ ಹೊಂದಲು ಅಭಿವೃದ್ಧಿ ಪಡಿಸಲಾಗಿದೆ. ವಾಯು ಯುದ್ಧ ಅಭಿವೃದ್ಧಿ ಹೊಂದುತ್ತಿರುವ ಹಾಗೇ, ದಾಳಿ ಮತ್ತು ವಾಯು ರಕ್ಷಣಾ ಪೈಲಟ್‌ಗಳು ಸಾಕಷ್ಟು ಹೆಚ್ಚಿನ ಕಷ್ಟಕರ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇಂತಹ ಕಷ್ಟಕರ ಪರಿಸ್ಥಿತಿಗಳನ್ನು ಸಾಂಪ್ರದಾಯಿಕ ತರಬೇತಿ ವಿಧಾನಗಳಿಂದ ನಿರ್ವಹಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!

ಎಚ್ಎಲ್ಎಫ್‌ಟಿ-42 ಒಂದು ಆಧುನಿಕ ಸೂಪರ್‌ಸಾನಿಕ್ ವಿಮಾನವಾಗಿದ್ದು, ಇದನ್ನು ಪೈಲಟ್ ತರಬೇತಿಗೆ ಬಳಸಲಾಗುತ್ತದೆ. ಅದರೊಡನೆ ಈ ವಿಮಾನವು ಅತ್ಯಾಧುನಿಕವಾದ ಏವಿಯಾನಿಕ್ಸ್ ವ್ಯವಸ್ಥೆಗಳಾದ ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ, ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಇನ್‌ಫ್ರಾರೆಡ್ ಸರ್ಚ್ ಮತ್ತು ಟ್ರ್ಯಾಕ್ ವ್ಯವಸ್ಥೆ, ಫ್ಲೈ ಬೈ ವೈರ್ ನಿಯಂತ್ರಣ ವ್ಯವಸ್ಥೆಗಳನ್ನು ಒಳಗೊಂಡಿದೆ ಎಂದು ಎಚ್ಎಎಲ್ ಹೇಳಿದೆ.

2019ರಲ್ಲಿ ಎಚ್ಎಎಲ್ ಮುಂದಿನ ದಿನಗಳಲ್ಲಿ ಎಚ್ಎಲ್ಎಫ್‌ಟಿ-42 ಎಂದು ಕರೆಯಬಹುದಾದ ವಿನ್ಯಾಸವನ್ನು ಪ್ರದರ್ಶಿಸಿತು. ಆ ಸಮಯದಲ್ಲಿ ಅದು ಸ್ಪೋರ್ಟ್ (SPORT) - ಸೂಪರ್‌ಸಾನಿಕ್ ಓಮ್ನಿರೋಲ್ ಟ್ರೈನರ್ ಏರ್‌ಕ್ರಾಫ್ಟ್ ಆಗಿದ್ದು, ಎಲ್‌ಸಿಎ ವಿನ್ಯಾಸದ ಆಧಾರಿತವಾಗಿತ್ತು. ಇದನ್ನು ಮೂಲತಃ ಎಲ್‌ಸಿಎ ತೇಜಸ್ ವಿಮಾನದ ಕಡಿಮೆಗೊಳಿಸಿದ ಆವೃತ್ತಿ ಅಥವಾ ಎಲ್‌ಸಿಎ ಲೈಟ್ ಎಂಬುದಾಗಿ ಆರಂಭಿಸಲಾಗಿತ್ತು. ಆದರೆ ಬಳಿಕ ಇದು ಪ್ರತ್ಯೇಕ ಏರ್ ಫ್ರೇಮ್ ಹೊಂದುವಂತೆ ಅಭಿವೃದ್ಧಿ ಪಡೆಯಿತು. ಆದರೆ ಇಂದಿಗೂ ಎಚ್ಎಲ್ಎಫ್‌ಟಿ-42 ಎಲ್‌ಸಿಎ ಸಾಮರ್ಥ್ಯಕ್ಕೆ ಹೋಲಿಸಿದರೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದರ ಕುರಿತಾದ ಹೆಚ್ಚಿನ ಮಾಹಿತಿಗಳು ಏರೋ ಇಂಡಿಯಾ ಪ್ರದರ್ಶನದಲ್ಲಿ ತಿಳಿದು ಬರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಏರೋ ಇಂಡಿಯಾ: ರಕ್ಷಣಾ ಕಂಪನಿ ಸಿಇಒಗಳ ಜೊತೆ 13ಕ್ಕೆ ಸಚಿವರ ಸಭೆ

ಎಚ್ಎಎಲ್ ಈಗ ಎಚ್‌ಜೆಟಿ-36 ಸಿತಾರಾದ ಅಂತಿಮ ಹಂತಗಳ ಸಿದ್ಧತೆಯನ್ನು ನಡೆಸುತ್ತಿದೆ. ಇದು ಈ ಹಿಂದೆ ಸಮಸ್ಯೆಗಳನ್ನು ಎದುರಿಸಿದ ಇಂಟರ್‌ಮೀಡಿಯಟ್ ಜೆಟ್ ಟ್ರೈನರ್ ಆಗಿದ್ದು, ಎಚ್ಎಎಲ್ ಇದರ ಪರೀಕ್ಷೆಯನ್ನೂ ಪ್ರಮುಖ ಗುರಿಯಾಗಿಸಿದೆ.

ಇನ್ನು ಎಚ್‌ಟಿಟಿ-40 ಪ್ರೊಪೆಲ್ಲರ್ ಟ್ರೈನರ್ ಮೂಲಕ ಆರಂಭಿಕ ಮಟ್ಟದ ತರಬೇತಿಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲಾಗಿದ್ದು, ಭಾರತೀಯ ವಾಯು ಸೇನೆ ಇದರ 70 ಮಾದರಿಗಳ ಖರೀದಿಗಾಗಿ ಬೇಡಿಕೆ ಸಲ್ಲಿಸಿದೆ. ಪರೀಕ್ಷಾ ಪ್ರಯೋಗಗಳನ್ನು ಪೂರ್ಣಗೊಳಿಸಿದ ಬಳಿಕ, ಭಾರತೀಯ ವಾಯುಪಡೆ ಮೊದಲ ಎಚ್‌ಟಿಟಿ-40 ಮಾದರಿಗಳನ್ನು 2024-25ರಲ್ಲಿ ಪಡೆದುಕೊಳ್ಳುವ ಸಾಧ್ಯತೆಗಳಿವೆ.

click me!