GST On Rent:ಮನೆ ಬಾಡಿಗೆ ಮೇಲೂ ಶೇ.18 ಜಿಎಸ್ ಟಿ; ಆದ್ರೆ ಈ ಬಾಡಿಗೆದಾರರಿಗೆ ಮಾತ್ರ ಇದು ಅನ್ವಯ

By Suvarna News  |  First Published Aug 12, 2022, 4:06 PM IST

*ವೈಯಕ್ತಿಕ ಬಳಕೆಗೆ ಮನೆ ಬಾಡಿಗೆ ಪಡೆದಿರೋರಿಗೆ ಜಿಎಸ್ ಟಿ ಇಲ್ಲ
*ಉದ್ಯಮ, ವೃತ್ತಿ ನಡೆಸಲು ಮನೆ ಬಾಡಿಗೆ ಪಡೆದವರಿಗೆ ಶೇ.18ರಷ್ಟು ಜಿಎಸ್ ಟಿ
*ಜಿಎಸ್ ಟಿ ನೋಂದಾಯಿತ ವ್ಯಕ್ತಿಗೆ ಮಾತ್ರ ಇದು ಅನ್ವಯ


ನವದೆಹಲಿ (ಜು.12): ಇಲ್ಲಿಯ ತನಕ ವಾಣಿಜ್ಯ ಕಟ್ಟಡಗಳು ಅಂದ್ರೆ ಕಚೇರಿ ಅಥವಾ ಚಿಲ್ಲರೆ ಮಾರಾಟದ ಸ್ಥಳಗಳನ್ನು ಬಾಡಿಗೆಗೆ ನೀಡಿದ್ರೆ ಮಾತ್ರ ಅದಕ್ಕೆ ಜಿಎಸ್ ಟಿ ಅನ್ವಯಿಸುತ್ತಿತ್ತು. ಆದರೆ, ಜುಲೈ 18ರಿಂದ ಜಾರಿಗೆ ಬರಲಿರುವ ಹೊಸ ಜಿಎಸ್ ಟಿ ನಿಯಮಗಳ ಪ್ರಕಾರ ಜಿಎಸ್ ಟಿ ನೋಂದಾಯಿತ ಬಾಡಿಗೆದಾರ ಒಂದು ನಿವಾಸ (ಮನೆ) ಬಾಡಿಗೆ ಪಡೆದರೆ ಶೇ.18ರಷ್ಟು ಸರಕು ಹಾಗೂ ಸೇವಾ ತೆರಿಗೆ ಪಾವತಿಸಬೇಕು. 47ನೇ ಜಿಎಸ್ ಟಿ ಮಂಡಳಿ ಸಭೆಯ ಶಿಫಾರಸ್ಸುಗಳ ಪ್ರಕಾರ ರಿವರ್ಸ್ ಚಾರ್ಜ್ (ಆರ್ ಸಿಎಂ) ಆಧಾರದಲ್ಲಿ ಬಾಡಿಗೆದಾರ ಶೇ.18 ಜಿಎಸ್ ಟಿ ಪಾವತಿಸಬೇಕು. ಆ ಬಳಿಕ ಆತ ಇನ್ ಪುಟ್ ತೆರಿಗೆ ಕ್ರೆಡಿಟ್ ಅಡಿಯಲ್ಲಿ ಇದನ್ನು ತೆರಿಗೆ ಕಡಿತವೆಂದು ಕ್ಲೇಮ್ ಮಾಡಲು ಅವಕಾಶವಿದೆ. ಆದರೆ, ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಮನೆಯನ್ನು ಬಾಡಿಗೆಗೆ ನೀಡಿದರೆ ಅದಕ್ಕೆ ಯಾವುದೇ ಜಿಎಸ್ ಟಿ ಅನ್ವಯಿಸೋದಿಲ್ಲ. ಹಾಗೆಯೇ ಮಾಲೀಕ ಅಥವಾ ಆ ಸಂಸ್ಥೆಯ ಪಾಲುದಾರ ಮನೆಯನ್ನು ವೈಯಕ್ತಿಕ ಬಳಕೆಗೆ ನೀಡಿದ್ರೆ ಆಗ ಕೂಡ ಯಾವುದೇ ಜಿಎಸ್ ಟಿ ಪಾವತಿಸಬೇಕಾಗಿಲ್ಲ. ಮನೆ ಅಥವಾ ವಾಸ್ತವ್ಯದ ಕಟ್ಟಡವನ್ನು ಉದ್ಯಮ ಸಂಸ್ಥೆಗೆ ಬಾಡಿಗೆ ನೀಡಿದ್ರೆ ಮಾತ್ರ ಜಿಎಸ್ ಟಿ ಅನ್ವಯಿಸುತ್ತದೆ.

ಬಾಡಿಗೆದಾರ ಜಿಎಸ್ ಟಿ (GST) ಅಡಿಯಲ್ಲಿ ನೋಂದಣಿಯಾಗಿದ್ದು, ಜಿಎಸ್ ಟಿ ರಿಟರ್ನ್ಸ್ ಫೈಲ್ ಮಾಡಲು ಜವಾಬ್ದಾರಿಯುತನಾಗಿದ್ರೆ  ಮಾತ್ರ ಅಂಥವರಿಗೆ ಈ ತೆರಿಗೆ ಅನ್ವಯಿಸುತ್ತದೆ. ಉಳಿದಂತೆ ವೈಯಕ್ತಿಕ ಉದ್ದೇಶಕ್ಕೆ ಬಳಸುವ ಸಾಮಾನ್ಯ ಜನರಿಗೆ ಇದು ಅನ್ವಯಿಸೋದಿಲ್ಲ. ಇನ್ನು ಜಿಎಸ್ ಟಿ ಪಾವತಿಸೋದು ಮನೆ ಮಾಲೀಕನ (Owner) ಜವಾಬ್ದಾರಿ ಕೂಡ ಅಲ್ಲ. 'ಒಂದು ವೇಳೆ ವೇತನ ಪಡೆಯುತ್ತಿರುವ ಯಾವುದೇ ಸಾಮಾನ್ಯ ವ್ಯಕ್ತಿ ವಾಸ್ತವ್ಯ ಯೋಗ್ಯ ಮನೆ ಅಥವಾ ಫ್ಲ್ಯಾಟ್ ಅನ್ನು ಬಾಡಿಗೆ ಅಥವಾ ಲೀಸ್ ಗೆ (Lease) ಪಡೆದಿದ್ರೆ ಆಗ ಆತ ಜಿಎಸ್ ಟಿ ಪಾವತಿಸಬೇಕಾಗಿಲ್ಲ. ಆದರೆ, ಜಿಎಸ್ ಟಿ ನೋಂದಾಯಿತ ವ್ಯಕ್ತಿ ಮನೆಯನ್ನು ಬಾಡಿಗೆ ಪಡೆದು ಅಲ್ಲಿ ಉದ್ಯಮ (Business) ಅಥವಾ ವೃತ್ತಿ (Profession) ನಡೆಸುತ್ತಿದ್ರೆ, ಆಗ ಮಾತ್ರ ಆತ ಮಾಲೀಕರಿಗೆ ಪಾವತಿಸುವ ಬಾಡಿಗೆ (Rent) ಮೇಲೆ ಶೇ.18ರಷ್ಟು ಜಿಎಸ್ ಟಿ ಪಾವತಿಸೋದು ಕಡ್ಡಾಯ' ಎನ್ನುತ್ತಾರೆ ಕ್ಲಿಯರ್ ಟ್ಯಾಕ್ಸ್ ಸಂಸ್ಥಾಪಕಿ ಹಾಗೂ ಸಿಇಒ ಅರ್ಚಿತ್ ಗುಪ್ತಾ. 

Tap to resize

Latest Videos

2023ರಲ್ಲಿ ಸಿಗಲ್ಲ Johnson & Johnson ಬೇಬಿ ಪೌಡರ್; ವಿಶ್ವಾದ್ಯಂತ ಮಾರಾಟ ಸ್ಥಗಿತ ನಿರ್ಧಾರ ಪ್ರಕಟಿಸಿದ ಕಂಪನಿ

ಜಿಎಸ್ ಟಿ ನೋಂದಾಯಿತ ವ್ಯಕ್ತಿ ಬಾಡಿಗೆ ಪಡೆದಿರುವ ಮನೆಯಿಂದ ಸೇವೆಗಳನ್ನು (Services) ನೀಡುತ್ತಿದ್ರೆ ಆಗ ಆತ ಶೇ.18ರಷ್ಟು ಜಿಎಸ್ ಟಿ ಪಾವತಿಸೋದು ಅಗತ್ಯ. ಜಿಎಸ್ ಟಿ ಕಾನೂನಿನ ಅಡಿಯಲ್ಲಿ ನೋಂದಾಯಿತರೆಂದ್ರೆ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸೇರಿದ್ದಾರೆ. ನಿಗದಿತ ಮಿತಿ ಮೀರಿದ ವಾರ್ಷಿಕ ವಹಿವಾಟು (Annual turnover) ನಡೆಸುವ ಉದ್ಯಮಗಳು ಅಥವಾ ವೃತ್ತಿಯನ್ನು ಹೊಂದಿರುವ ವ್ಯಕ್ತಿ ಜಿಎಸ್ ಟಿ ನೋಂದಣಿ ಮಾಡೋದು ಕಡ್ಡಾಯ. 

ಜಿಎಸ್ ಟಿ ಕಾನೂನಿನ ಅಡಿಯಲ್ಲಿ ಮಿತಿ ಪೂರೈಕೆ ಸ್ಥಳ ಹಾಗೂ ವಿಧಾನದ ಆಧಾರದಲ್ಲಿ ಬದಲಾಗುತ್ತದೆ. ಸೇವೆಗಳನ್ನು ಪೂರೈಕೆ ಮಾಡುವ ನೋಂದಾಯಿತ ವ್ಯಕ್ತಿಗೆ ಈ ಮಿತಿ  ಒಂದು ಆರ್ಥಿಕ ವರ್ಷಕ್ಕೆ 20ಲಕ್ಷ ರೂ. 

Bank Holidays:ಬ್ಯಾಂಕ್ ಕೆಲಸವಿದ್ರೆ ಮುಂದೂಡಿ; ಇಂದಿನಿಂದ 5 ದಿನ ರಜೆ

ಯಾರ ಮೇಲೆ ಪರಿಣಾಮ ಬೀರಲಿದೆ?
ಈ ಹೊಸ ಬದಲಾವಣೆಗಳು ವಾಸ್ತವ್ಯದ ಕಟ್ಟಡಗಳನ್ನು ಉದ್ಯಮ ಅಥವಾ ವ್ಯವಹಾರಕ್ಕಾಗಿ ಬಾಡಿಗೆ ಅಥವಾ ಲೀಸ್ ಗೆ ಪಡೆದಿರುವ ಕಂಪನಿಗಳು ಹಾಗೂ ವೃತ್ತಿಪರರ ಮೇಲೆ ಪರಿಣಾಮ ಬೀರಲಿದೆ. 

click me!