* 5%ರ ಜಿಎಸ್‌ಟಿ ಮೇನಲ್ಲಿ 8%ಕ್ಕೇರಿಕೆ ಸಾಧ್ಯತೆ
* ಜಿಎಸ್‌ಟಿ ರಹಿತ ಕೆಲ ವಸ್ತುಗಳಿಗೆ 3% ತೆರಿಗೆ?
* ಸರ್ಕಾರಗಳಿಗೆ ಆದಾಯ ಹೆಚ್ಚಿಸಲು ಈ ನಡೆ
ನವದೆಹಲಿ(ಏ.18): ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ (Price Hike) ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಮುಂದಿನ ತಿಂಗಳು ಇನ್ನೊಂದು ‘ದುಬಾರಿ ಹೊಡೆತ’ ಬೀಳುವ ಸಾಧ್ಯತೆಯಿದೆ. ಜಿಎಸ್‌ಟಿ ಮಂಡಳಿಯು ಸದ್ಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕೆಲ ವಸ್ತುಗಳಿಗೆ 3% ಜಿಎಸ್‌ಟಿ ವಿಧಿಸಲು ಹಾಗೂ 5% ಜಿಎಸ್‌ಟಿ ಸ್ಲಾಬ್ ತೆಗೆದು ಅದನ್ನು 8%ಗೆ ಏರಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸದ್ಯ 5%, 12%, 18% ಮತ್ತು 28% ಸ್ಲಾಬ್‌ಗಳಲ್ಲಿದೆ. ಬೇರೆ ಬೇರೆ ಸರಕು ಮತ್ತು ಸೇವೆಗಳಿಗೆ ಬೇರೆ ಬೇರೆ ಸ್ಲಾಬ್‌ನ ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಲ್ಲಿ ಸಂಸ್ಕರಿತ ಆಹಾರ ಸೇರಿದಂತೆ ಬಹುತೇಕ ಅಗತ್ಯ ವಸ್ತುಗಳಿಗೆ 5% ಜಿಎಸ್‌ಟಿ ವಿಧಿಸಲಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡಲು ಈ ಸ್ಲಾಬ್ 7% ಅಥವಾ 8% ಅಥವಾ 9%ಗೆ ಏರಿಸುವ ಸಾಧ್ಯತೆಯಿದೆ. 5% ಸ್ಲಾಬ್ ತೆಗೆದು 8% ಸ್ಲಾಬ್ ನಿಗದಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.
ಇನ್ನು, ಅನ್‌ಬ್ರಾಂಡೆಡ್ ಮತ್ತು ಪ್ಯಾಕ್ ಮಾಡದ ಆಹಾರ ಸೇರಿದಂತೆ ಅನೇಕ ವಸ್ತುಗಳಿಗೆ ಸದ್ಯ ಜಿಎಸ್‌ಟಿ ಇಲ್ಲ. ಅವುಗಳಲ್ಲಿ ಕೆಲ ವಸ್ತುಗಳಿಗೆ ವಿನಾಯ್ತಿ ರದ್ದುಪಡಿಸಿ 3% ಜಿಎಸ್‌ಟಿ ವಿಧಿಸುವ ಸಾಧ್ಯತೆಯಿದೆ. ಸದ್ಯ ಚಿನ್ನ ಮತ್ತು ಚಿನ್ನಾಭರಣಕ್ಕೆ ಮಾತ್ರ 3% ಜಿಎಸ್‌ಟಿ ಇದೆ.
ಈಗ ಇರುವ 5% ಜಿಎಸ್‌ಟಿಯನ್ನು ಶೇ.1ರಷ್ಟುಏರಿಸಿದರೂ ಸರ್ಕಾರಕ್ಕೆ ವಾರ್ಷಿಕ 50,000 ಕೋಟಿ ರು. ಆದಾಯ ಬರುತ್ತದೆ. ರಾಜ್ಯಗಳಿಗೆ ನೀಡುತ್ತಿರುವ ಜಿಎಸ್‌ಟಿ ಪರಿಹಾರವನ್ನು ಪೂರ್ತಿ ನಿಲ್ಲಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಅದಕ್ಕೆ ಪ್ರತಿಯಾಗಿ ರಾಜ್ಯಗಳ ಆದಾಯ ಹೆಚ್ಚಿಸಲು ಮತ್ತು ತನ್ನ ಆದಾಯವನ್ನೂ ಹೆಚ್ಚಿಸಿಕೊಳ್ಳಲು ಜಿಎಸ್‌ಟಿ ಹೆಚ್ಚಿಸುವ ಚಿಂತನೆಯಲ್ಲಿದೆ ಎಂದು ಮೂಲಗಳು ಹೇಳಿವೆ.
ಹೊಸ ತೆರಿಗೆ ನೀತಿಯಲ್ಲಿ ಶೇ.3, ಶೇ.8, ಶೇ.18, ಶೇ.28ರ ಸ್ತರಗಳು ಇರಲಿವೆ ಎನ್ನಲಾಗಿದೆ.
ಬೊಮ್ಮಾಯಿ ನಿರ್ಧಾರ ಮುಖ್ಯ?
ಜಿಎಸ್‌ಟಿ ಅಡಿ ಸರ್ಕಾರಕ್ಕೆ ಆದಾಯ ಹೆಚ್ಚಿಸಲು ಮತ್ತು ತೆರಿಗೆ ವ್ಯವಸ್ಥೆಯಲ್ಲಿರುವ ನ್ಯೂನತೆ ಸರಿಪಡಿಸಲು ಜಿಎಸ್‌ಟಿ ಮಂಡಳಿಯು ಕಳೆದ ವರ್ಷ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಮುಂದಿನ ತಿಂಗಳ ಮೊದಲ ವಾರ ಮಂಡಳಿಗೆ ತನ್ನ ಶಿಫಾರಸು ಸಲ್ಲಿಸಲಿದ್ದು, ನಂತರ ಮೇ ಮಧ್ಯಭಾಗದಲ್ಲಿ ಜಿಎಸ್‌ಟಿ ಮಂಡಳಿ ಸಭೆ ನಡೆಸಿ ತೆರಿಗೆ ಹೆಚ್ಚಿಸುವ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಈಗಿರುವ ತೆರಿಗೆ ಸ್ತರಗಳು
5%, 12%, 18%, 28%
ಹೊಸ ತೆರಿಗೆ ಸ್ತರಗಳು
3%, 8%, 18%, 28%
3% ತೆರಿಗೆ ಯಾವುದಕ್ಕೆ?
ಅನ್‌ಬ್ರಾಂಡೆಡ್, ಪ್ಯಾಕ್ ಮಾಡದ ಆಹಾರ ಸೇರಿದಂತೆ ಕೆಲ ವಸ್ತುಗಳು ಹೊಸದಾಗಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆ ಸಾಧ್ಯತೆ