ಜಿಎಸ್ಟಿ ಅಡಿ ಪೆಟ್ರೋಲ್‌, ಡೀಸೆಲ್‌? : ಆದಲ್ಲಿ 30 ರು.ವರೆಗೆ ತೈಲ ಬೆಲೆ ಇಳಿಕೆ!

By Kannadaprabha NewsFirst Published Sep 17, 2021, 7:31 AM IST
Highlights
  •  ಪೆಟ್ರೋಲ್‌, ಡೀಸೆಲ್‌ ದರಗಳು ಗಗನಮುಖಿ ಆಗಿರುವ ಹಿನ್ನೆಲೆ
  • ತೈಲೋತ್ಪನ್ನಗಳನ್ನು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಅಡಿ ತರುವ ಮಹತ್ವದ ಪ್ರಸ್ತಾಪ

ನವದೆಹಲಿ (ಸೆ.17) : ಪೆಟ್ರೋಲ್‌, ಡೀಸೆಲ್‌ ದರಗಳು ಗಗನಮುಖಿ ಆಗಿರುವ ಹಿನ್ನೆಲೆಯಲ್ಲಿ ತೈಲೋತ್ಪನ್ನಗಳನ್ನು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಅಡಿ ತರುವ ಮಹತ್ವದ ಪ್ರಸ್ತಾಪವು ಜಿಎಸ್‌ಟಿ ಮಂಡಳಿಯ ಮುಂದೆ ಬಂದಿದೆ.

ಈ ನಿಟ್ಟಿನಲ್ಲಿ ಶುಕ್ರವಾರದ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪ್ರಸ್ತಾವನೆಯ ಕುರಿತು ಚರ್ಚೆ ಆಗುವ ಸಾಧ್ಯತೆ ಇದೆ. ಜಿಎಸ್‌ಟಿಯ ಅಡಿಯಲ್ಲಿ ಬಂದಿದ್ದೇ ಆದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 30 ರು.ವರೆಗೂ ಇಳಿಕೆ ಆಗುವ ಕಾರಣ, ಸಭೆಯ ನಿರ್ಧಾರದ ಭಾರೀ ಕುತೂಹಲ ಕೆರಳಿಸಿದೆ. ಆದರೆ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಕೇಂದ್ರ ಮತ್ತು ರಾಜ್ಯಗಳಿಗೆ ವಾರ್ಷಿಕ 4 ಲಕ್ಷ ಕೋಟಿ ರು.ನಷ್ಟವಾಗುತ್ತದೆ. ಹೀಗಾಗಿ ಉಭಯ ಬಣಗಳು ಈ ಬಗ್ಗೆ ಒಪ್ಪಿಕೊಳ್ಳುವ ಬಗ್ಗೆ ಅನುಮಾನಗಳಿವೆ.

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ? ಹೀಗಾದ್ರೆ ಪೆಟ್ರೋಲ್ ದರ 60ರು. ಗೆ ಇಳಿಕೆ?

ಇದೇ ವೇಳೆ ಕೋರೋನಾ ಔಷಧ ಸಾಮಗ್ರಿಗಳು ಸೇರಿದಂತೆ ಸುಮಾರು 48 ವಸ್ತುಗಳ ತೆರಿಗೆ ದರಗಳ ಪರಿಶೀಲನೆಯ ಬಗ್ಗಯೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ಜಿಎಸ್‌ಟಿ ಮಂದಳಿ ತೀರ್ಮಾನ ಕೈಗೊಳ್ಳಲಿದೆ.

ಮೊಬೈಲ್‌ ಆ್ಯಪ್‌ ಮೂಲಕ ಆಹಾರ ಡೆಲಿವರಿ ಸೇವೆ ಒದಗಿಸುತ್ತಿರುವ ಝೋಮೆಟೋ, ಸ್ವಿಗ್ಗಿಯನ್ನು ರೆಸ್ಟೋರೆಂಟ್‌ ನಂತೆ ಪರಿಗಣಿಸಿ ಶೇ.5ರಷ್ಟುಜಿಎಸ್‌ಟಿ ವಿಧಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕೋರೋನಾ ವಿರುದ್ಧ ಬಳಕೆ ಆಗುತ್ತಿರುವ ವಿವಿಧ ಔಷಧಿಗಳೂ ಸೇರಿದಂತೆ ಹಲವು ಔಷಧಗಳ ಮೇಲಿನ ಜಿಎಸ್‌ಟಿಯನನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡುವ ಪ್ರಸ್ತಾವನೆಯ ಬಗ್ಗೆಯೂ ಜಿಎಸ್‌ಟಿ ಮಂಡಳಿ ಚರ್ಚೆ ನಡೆಸಲಿದೆ.

click me!