ಪಾಸಿಟಿವ್ ಪೇ ವ್ಯವಸ್ಥೆಯನ್ನು ಸೆಪ್ಟೆಂಬರ್ 1ರಿಂದ ಆಕ್ಸಿಸ್ ಬ್ಯಾಂಕ್ ಜಾರಿಗೊಳಿಸಿದೆ. ಹಂತ ಹಂತವಾಗಿ ಒಂದೊಂದೇ ಬ್ಯಾಂಕ್‌ಗಳು ಈ ವ್ಯವಸ್ಥೆ ಅಳವಡಿಸಿಕೊಳ್ಳಲಿರೋ ಕಾರಣ ಈ ಬಗ್ಗೆ ಗ್ರಾಹಕರು ಮಾಹಿತಿ ಹೊಂದಿರೋದು ಅಗತ್ಯ.
ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರದವರಿಗೆ ಇನ್ನು ಮುಂದೆ 50 ಸಾವಿರ ರೂ.ಗಿಂತ ಅಧಿಕ ಮೊತ್ತದ ಚೆಕ್ ಕ್ಲಿಯರನ್ಸ್ ಕಷ್ಟವಾಗಬಹುದು. ಏಕೆಂದ್ರೆ ಆಕ್ಸಿಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ಗಳು ಅಧಿಕ ಮೊತ್ತದ ಚೆಕ್ಗಳ ಪಾವತಿಗೆ ಸಂಬಂಧಿಸಿ ಈಗಾಗಲೇ ಪಾಸಿಟಿವ್ ಪೇ ವ್ಯವಸ್ಥೆ ಜಾರಿಗೊಳಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಪಾಸಿಟಿವ್ ಪೇ ವ್ಯವಸ್ಥೆಯನ್ನು 2021ರ ಜನವರಿ 1ರಂದೇ ಜಾರಿಗೆ ತಂದಿತ್ತು. ವಂಚನೆ ಪ್ರಕರಣಗಳನ್ನು ತಡೆಯೋದು ಇದರ ಮುಖ್ಯ ಉದ್ದೇಶ. ಆದ್ರೆ ಬಹುತೇಕ ಬ್ಯಾಂಕ್ಗಳು ಇತ್ತೀಚೆಗಷ್ಟೇ ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸುತ್ತಿವೆ. ಎಸ್ಬಿಐ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ 50 ಸಾವಿರ ರೂ. ಮೇಲ್ಪಟ್ಟ ಚೆಕ್ಗಳಿಗೆ ಈಗಾಗಲೇ ಪಾಸಿಟಿವ್ ಪೇ ವ್ಯವಸ್ಥೆ ಜಾರಿಗೊಳಿಸಿವೆಯಾದ್ರೂ ಇದನ್ನು ಕಡ್ಡಾಯಗೊಳಿಸಿಲ್ಲ.
ಉದ್ಯೋಗಿಗಳು EPF ಎರಡು ಖಾತೆ ತೆರೆಯೋದು ಅಗತ್ಯವೇ?
undefined
ಪಾಸಿಟಿವ್ ಪೇ ಅಂದ್ರೇನು?
ಈ ವ್ಯವಸ್ಥೆಯಲ್ಲಿ ಚೆಕ್ ಕ್ಲಿಯರ್ ಆಗಬೇಕೆಂದ್ರೆ ಅದನ್ನು ನೀಡಿರೋ ವ್ಯಕ್ತಿ ಬ್ಯಾಂಕ್ಗೆ ಈ ಕುರಿತು ಕೆಲವು ಮಾಹಿತಿಗಳನ್ನು ಮುಂಚಿತವಾಗಿ ನೀಡಬೇಕು. ಇದ್ರಿಂದ ಚೆಕ್ ಪಡೆದ ವ್ಯಕ್ತಿ ಅದನ್ನು ಕ್ಲಿಯರ್ ಮಾಡಲು ಆತ ಖಾತೆ ಹೊಂದಿರೋ ಬ್ಯಾಂಕ್ಗೆ ನೀಡಿದಾಗ ಆ ಬ್ಯಾಂಕ್ ಕ್ಲಿಯರೆನ್ಸ್ಗಾಗಿ ಚೆಕ್ ನೀಡಿರೋ ವ್ಯಕ್ತಿ ಬ್ಯಾಂಕ್ಗೆ ಅದನ್ನು ಕಳುಹಿಸುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕ್ ಆತ ಈಗಾಗಲೇ ಚೆಕ್ಗೆ ಸಂಬಂಧಿಸಿ ನೀಡಿದ ಮಾಹಿತಿಯೊಂದಿಗೆ ಚೆಕ್ನಲ್ಲಿರೋ ಮಾಹಿತಿಗಳನ್ನು ತಾಳೆ ಹಾಕಿ ನೋಡುತ್ತದೆ. ಎರಡೂ ಹೊಂದಿಕೆಯಾದ್ರೆ ಚೆಕ್ ಕ್ಲಿಯರ್ ಮಾಡುತ್ತದೆ. ಇಲ್ಲವಾದ್ರೆ ಚೆಕ್ ತಿರಸ್ಕರಿಸಲ್ಪಡುತ್ತದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಪಾಸಿಟಿವ್ ಪೇ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಡಿಜಿಟಲ್ ಗೋಲ್ಡ್ ಅಂದ್ರೇನು? ಖರೀದಿಸೋದು ಹೇಗೆ?
ಬ್ಯಾಂಕ್ಗೆ ಮಾಹಿತಿ ನೀಡೋದು ಹೇಗೆ?
ಚೆಕ್ ದಿನಾಂಕ, 6 ಸಂಖ್ಯೆಗಳ ಚೆಕ್ ನಂಬ್ರ, ಮೊತ್ತ, ಚೆಕ್ ಯಾರಿಗೆ ನೀಡಿದ್ದೀರಿ ಮುಂತಾದ ಮಾಹಿತಿಯನ್ನು ನೀವು ಬ್ಯಾಂಕ್ಗೆ ನೀಡಬೇಕಾಗುತ್ತದೆ. ಈ ಮಾಹಿತಿಗಳನ್ನು ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀಡಬಹುದು. ಇಲ್ಲವೆ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಕೂಡ ನೀಡಬಹುದು. ಕೆಲವು ಬ್ಯಾಂಕ್ಗಳು ಗ್ರಾಹಕರಿಗೆ ಎಸ್ಎಂಎಸ್, ಎಟಿಎಂ ಅಥವಾ ಇ-ಮೇಲ್ ಮುಖಾಂತರ ಈ ಮಾಹಿತಿಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಪಾಸಿಟಿವ್ ಪೇ ವ್ಯವಸ್ಥೆಯನ್ನು ಜಾರಿಗೊಳಿಸಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸೋದು ಅಗತ್ಯ. ಇಲ್ಲವಾದ್ರೆ ಚೆಕ್ ಕ್ಲಿಯರ್ ಆಗದೆ ತೊಂದರೆ ಎದುರಾಗಬಹುದು.
ಎಷ್ಟು ಮೊತ್ತದ ಚೆಕ್ಗೆ ಅನ್ವಯಿಸುತ್ತದೆ?
ಆರ್ಬಿಐ ನಿಯಮಾವಳಿಗಳ ಪ್ರಕಾರ 50 ಸಾವಿರ ರೂ. ಹಾಗೂ ಅದಕ್ಕಿಂತ ಅಧಿಕ ಮೌಲ್ಯದ ಚೆಕ್ಗಳಿಗೆ ಪಾಸಿಟಿವ್ ಪೇ ವ್ಯವಸ್ಥೆ ಅನ್ವಯಿಸುತ್ತದೆ.
ಈ ವ್ಯವಸ್ಥೆ ಜಾರಿಗೊಳಿಸಲು ಕಾರಣವೇನು?
ಪಾಸಿಟಿವ್ ಪೇ ವ್ಯವಸ್ಥೆಯ ಮುಖ್ಯ ಗುರಿ ಚೆಕ್ ವಂಚನೆ ಪ್ರಕರಣಗಳನ್ನು ತಡೆಯೋದು. ಚೆಕ್ನಲ್ಲಿನ ಮೊತ್ತವನ್ನು ತಿದ್ದೋದು, ಖಾಲಿ ಚೆಕ್ಗಳ ದುರುಪಯೋಗ ಮುಂತಾದ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು ಈ ವ್ಯವಸ್ಥೆ ನೆರವು ನೀಡುತ್ತದೆ.
ಸೆ. 30ರೊಳಗೆ ತಪ್ಪದೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ!
ಈ ವಿಷಯ ತಿಳಿದಿರಲಿ
ಚೆಕ್ ಮೂಲಕ ಪಾವತಿ ಮಾಡೋರು ಪಾಸಿಟಿವ್ ಪೇ ವ್ಯವಸ್ಥೆಯ ಬಗ್ಗೆ ತಿಳಿದಿರೋ ಜೊತೆ ನ್ಯಾಷನಲ್ ಅಟೋಮೇಟೆಡ್ ಕ್ಲಿಯರಿಂಗ್ ಹೌಸ್ (ಎನ್ಎಸಿಎಚ್) ಗೆ ಸಂಬಂಧಿಸಿ ಆರ್ಬಿಐನ ಹೊಸ ನಿಯಮಗಳ ಬಗ್ಗೆ ತಿಳಿದಿರೋದು ಕೂಡ ಮುಖ್ಯ. ಎನ್ಎಸಿಎಚ್ ಸೌಲಭ್ಯ ಆಗಸ್ಟ್ 1ರಿಂದ ಎಲ್ಲ ದಿನವೂ ತೆರೆದಿರಲಿದೆ. ಹೀಗಾಗಿ ರಜಾ ದಿನಗಳಲ್ಲಿ ಚೆಕ್ ಕ್ಲಿಯರಿಂಗ್ಗೆ ಹೋಗೋದಿಲ್ಲ ಎಂದು ಭಾವಿಸಿ ಖಾತೆಯಲ್ಲಿ ಹಣವಿಲ್ಲದಿದ್ರೂ ಚೆಕ್ ನೀಡಿದ್ರೆ ದಂಡ ಬೀಳೋ ಸಾಧ್ಯತೆಯಿದೆ. ಏಕೆಂದ್ರೆ ಈಗ ವಾರದ ಏಳು ದಿನಗಳಲ್ಲಿಯೂ ಚೆಕ್ ಕ್ಲಿಯರ್ ಆಗುತ್ತೆ. ಹೀಗಾಗಿ ಚೆಕ್ ಜಮಾ ಮಾಡೋ ಮೊದಲು ನಿಮ್ಮ ಖಾತೆಯಲ್ಲಿ ಅಷ್ಟು ಮೊತ್ತದ ಹಣ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ. ಇಲ್ಲವಾದ್ರೆ ಚೆಕ್ ಬೌನ್ಸ್ ಆಗೋ ಸಾಧ್ಯತೆಯಿದೆ.