ಮಾರುಕಟ್ಟೆಗೆ Groww ಗ್ರ್ಯಾಂಡ್‌ ಎಂಟ್ರಿ, ನಾಲ್ಕೇ ದಿನದಲ್ಲಿ ಬಿಲಿಯನೇರ್‌ ಕ್ಲಬ್‌ ಸೇರಿದ ರೈತನ ಮಗ!

Published : Nov 17, 2025, 03:13 PM IST
Groww IPO

ಸಾರಾಂಶ

ಹೂಡಿಕೆ ವೇದಿಕೆ ಗ್ರೋವ್‌ನ ಸಹ-ಸಂಸ್ಥಾಪಕ ಲಲಿತ್ ಕೇಶ್ರೆ, ಕಂಪನಿಯ ಷೇರು ಮಾರುಕಟ್ಟೆ ಯಶಸ್ಸಿನ ನಂತರ ಬಿಲಿಯನೇರ್‌ ಕ್ಲಬ್ ಸೇರಿದ್ದಾರೆ. ಮಧ್ಯಪ್ರದೇಶದ ರೈತನ ಮಗನಾಗಿ, ಐಐಟಿ ಬಾಂಬೆಯಲ್ಲಿ ಓದಿ, ಫ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡಿ, ನಂತರ ಗ್ರೋವ್‌ ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ.

ಬೆಂಗಳೂರು (ನ.17): ಹೂಡಿಕೆ ವೇದಿಕೆಯಾದ ಗ್ರೋವ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಲಲಿತ್ ಕೇಶ್ರೆ, ಗ್ರೋವ್‌ ಷೇರು ಮಾರುಕಟ್ಟೆಗೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ ನಂತರ ಬಿಲಿಯನೇರ್‌ ಕ್ಲಬ್‌ ಪ್ರವೇಶಿಸಿದ್ದಾರೆ. ಮಧ್ಯಪ್ರದೇಶದ ಲೆಪಾ ಗ್ರಾಮದ ರೈತನ ಮಗನಾಗಿರುವ ಲಲಿತ್‌ ಕೇಶ್ರೆ, ದೇಶದ ಪ್ರಮುಖ ಫಿನ್‌ಟೆಕ್‌ ಕಂಪನಿಯ ಚುಕ್ಕಾಗಿ ಹಿಡಿದಿರುವುದು ಭಾರತದ ನವೋದ್ಯಮದ ಅವಕಾಶಗಳನ್ನು ವಿಸ್ತರಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಕೇಶ್ರೆ ಪ್ರಸ್ತುತ 55.91 ಕೋಟಿ ಷೇರುಗಳನ್ನು ಹೊಂದಿದ್ದು, ಗ್ರೋವ್‌ನಲ್ಲಿ ಶೇಕಡಾ 9.06 ರಷ್ಟು ಪಾಲನ್ನು ಇದು ಪ್ರತಿನಿಧಿಸುತ್ತದೆ. ದಾಖಲೆಯ ಪ್ರತಿ ಷೇರಿಗೆ 169 ರೂ.ಗಳ ಷೇರು ವಹಿವಾಟಿನೊಂದಿಗೆ, ಅವರ ಹೋಲ್ಡಿಂಗ್‌ನ ಮೌಲ್ಯ 9448 ಕೋಟಿ ರೂ.ಗಳಾಗಿದ್ದು, ಅವರನ್ನು $1 ಬಿಲಿಯನ್ ಮೌಲ್ಯದ ಗಡಿಯ ಆಸುಪಾಸಿನಲ್ಲಿ ಇರಿಸಿದೆ.

ನಾಲ್ಕನೇ ದಿನದಲ್ಲಿ ಜಿಗಿದ ಷೇರು ಬೆಲೆ

ನವೆಂಬರ್ 12 ರಂದು ಪ್ರತಿ ಷೇರಿಗೆ 100 ರೂ.ಗೆ ಲಿಸ್ಟ್‌ ಆಗಿರುವ ಈ ಷೇರು, ನಾಲ್ಕು ಅವಧಿಗಳಲ್ಲಿ ಶೇ. 70 ಕ್ಕಿಂತ ಹೆಚ್ಚು ಜಿಗಿದಿದೆ, ಅದರ ಮಾರುಕಟ್ಟೆ ಬಂಡವಾಳೀಕರಣವು 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಭರ್ಜರಿಯಾಗಿ ಪದಾರ್ಪಣೆ ಮಾಡಿದ ಷೇರುಗಳ ಪೈಕಿ ಗ್ರೋವ್‌ ಕೂಡ ಒಂದಾಗಿದೆ.

ಗ್ರೋವ್ ಅನ್ನು 2016 ರಲ್ಲಿ ನಾಲ್ವರು ಮಾಜಿ ಫ್ಲಿಪ್‌ಕಾರ್ಟ್ ಕಾರ್ಯನಿರ್ವಾಹಕರಾದ ಕೇಶ್ರೆ, ಹರ್ಷ್ ಜೈನ್, ಇಶಾನ್ ಬನ್ಸಾಲ್ ಮತ್ತು ನೀರಜ್ ಸಿಂಗ್ ಸ್ಥಾಪಿಸಿದರು.

ಸಾಧಾರಣ ಕುಟುಂಬದಲ್ಲಿ ಬೆಳೆದಿದ್ದ ಲಲಿತ್‌ ಕೇಶ್ರೆ

44 ವರ್ಷದ ಕೇಶ್ರೆ, ಅತ್ಯಂತ ಸಾಧಾರಣ ಕುಟುಂಬದಲ್ಲಿ ಬೆಳೆದವರು. ತಮ್ಮ ಅಜ್ಜ-ಅಜ್ಜಿ ಜೊತೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಕೇಶ್ರೆ, ಇಡೀ ಜಿಲ್ಲೆಯಲ್ಲಿದ್ದ ಏಕೈಕ ಇಂಗ್ಲೀಷ್‌ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದರು.

ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಜಂಟಿ ಪ್ರವೇಶ ಪರೀಕ್ಷೆಯಲ್ಲಿ ಪಾಸ್‌ ಆಗಿ ಐಐಟಿ ಬಾಂಬೆಗೆ ಪ್ರವೇಶ ಪಡೆದರು. ಅಲ್ಲಿ ಅವರು ತಂತ್ರಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು. ಆ ನಂತರವೇ ಅವರು ಫ್ಲಿಪ್‌ಕಾರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಫ್ಲಿಪ್‌ಕಾರ್ಟ್ ಮಾರುಕಟ್ಟೆಯನ್ನು ಮೇಲ್ವಿಚಾರಣೆ ಮಾಡುವ ಆರಂಭಿಕ ಉತ್ಪನ್ನ ವ್ಯವಸ್ಥಾಪಕರಲ್ಲಿ ಒಬ್ಬರಾಗಿ ಕೆಲಸ ಮಾಡಿದರು, 2016 ರಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಗ್ರೋವ್ ಅನ್ನು ಆರಂಭಿಸಿದ್ದರು.

ಗ್ರೋವ್‌ ಲಿಸ್ಟಿಂಗ್‌ನಿಂದ ಇತರ ಮೂವರು ಸಂಸ್ಥಾಪಕರ ಸಂಪತ್ತನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಹರ್ಷ್ ಜೈನ್ ಅವರ 41.16 ಕೋಟಿ ಷೇರುಗಳು ಪ್ರಸ್ತುತ 6956 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದರೆ, ಇಶಾನ್ ಬನ್ಸಾಲ್ ಅವರ 27.78 ಕೋಟಿ ಷೇರುಗಳು 4695 ಕೋಟಿ ರೂ ಮೌಲ್ಯದ್ದಾಗಿದೆ ಮತ್ತು ನೀರಜ್ ಸಿಂಗ್ ಅವರ 38.32 ಕೋಟಿ ಷೇರುಗಳು 6476 ಕೋಟಿ ರೂ. ಮೌಲ್ಯದ್ದಾಗಿವೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!