ಬೆಳ್ಳಿ ಆಮದಿಗೆ ಕೇಂದ್ರದ ಬ್ರೇಕ್: 99.9% ಶುದ್ಧತೆಯ ಬೆಳ್ಳಿ ಬಾರ್‌ ಆಮದಿಗೆ ಇನ್ಮುಂದೆ ಪರ್ಮಿಟ್‌ ಕಡ್ಡಾಯ

Published : May 16, 2026, 10:15 PM IST
Silver Bars

ಸಾರಾಂಶ

ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ನಿರ್ದಿಷ್ಟ ವರ್ಗದ ಬೆಳ್ಳಿ ಬಾರ್‌ಗಳ ಆಮದಿನ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇದರೊಂದಿಗೆ, 'ಅಡ್ವಾನ್ಸ್ ಅಥರೈಸೇಷನ್' ಯೋಜನೆಯಡಿ ಚಿನ್ನದ ಆಮದಿಗೆ 100 ಕೆಜಿ ಮಿತಿ ನಿಗದಿಪಡಿಸಿದೆ.

ನವದೆಹಲಿ (ಮೇ.16): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶದ ಆರ್ಥಿಕ ಹಿತದೃಷ್ಟಿಯಿಂದ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ನಿರ್ದಿಷ್ಟ ವರ್ಗದ ಬೆಳ್ಳಿ ಬಾರ್‌ಗಳ (Silver Bars) ಆಮದಿನ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಭಾರಿ ನಿರ್ಬಂಧಗಳನ್ನು ಹೇರಲಾಗಿದೆ. ಈ ಪಟ್ಟಿಯಲ್ಲಿ ಶೇಕಡಾ 99.9 ರಷ್ಟು ಅತ್ಯಂತ ಹೆಚ್ಚಿನ ಶುದ್ಧತೆ ಹೊಂದಿರುವ ಬೆಳ್ಳಿಯೂ ಸೇರಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (DGFT) ಹೊರಡಿಸಿರುವ ಅಧಿಕೃತ ಅಧಿಸೂಚನೆ ತಿಳಿಸಿದೆ.

ವಾಣಿಜ್ಯ ಸಚಿವಾಲಯವು ಪ್ರಕಟಿಸಿರುವ ಪರಿಷ್ಕೃತ ಆಮದು ನೀತಿಯ ಪ್ರಕಾರ, ಶೇ. 99.9 ರಷ್ಟು ಶುದ್ಧತೆಯ ಬೆಳ್ಳಿ ಬಾರ್‌ಗಳನ್ನು ಈ ಮುಂಚೆ ಇದ್ದ "ಮುಕ್ತ" (Free) ವರ್ಗದಿಂದ ಇನ್ಮುಂದೆ "ನಿರ್ಬಂಧಿತ" (Restricted) ವರ್ಗಕ್ಕೆ ವರ್ಗಾಯಿಸಲಾಗಿದೆ. ಇದರೊಂದಿಗೆ ಇನ್ನು ಕೆಲವು ನಿರ್ದಿಷ್ಟ ವರ್ಗದ ಬೆಳ್ಳಿ ಬಾರ್‌ಗಳ ಆಮದಿನ ಮೇಲೂ ನಿರ್ಬಂಧ ವಿಧಿಸಲಾಗಿದೆ. ದೇಶದೊಳಗೆ ಆಗುತ್ತಿರುವ ಬೆಳ್ಳಿ ಆಮದಿನ ಮೇಲೆ ಕಠಿಣ ನಿಗಾ ಇಡುವುದು ಮತ್ತು ನಿಯಂತ್ರಣವನ್ನು ಬಲಪಡಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.

ಚಿನ್ನ ಆಮದಿಗೂ ಕಠಿಣ ನಿಯಮ; 100 ಕೆಜಿ ಮಿತಿ ನಿಗದಿ

ಕೇಂದ್ರ ಸರ್ಕಾರವು ಕೇವಲ ಬೆಳ್ಳಿ ಮಾತ್ರವಲ್ಲದೆ, ಅಮೂಲ್ಯ ಲೋಹಗಳ ಆಮದು ಸುಂಕವನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರ ಜೊತೆಗೆ 'ಅಡ್ವಾನ್ಸ್ ಅಥರೈಸೇಷನ್' (ಮುಂಗಡ ದೃಢೀಕರಣ) ಯೋಜನೆಯಡಿ ದೇಶಕ್ಕೆ ಆಮದು ಮಾಡಿಕೊಳ್ಳಲಾಗುವ ಚಿನ್ನದ ಮೇಲೆ 100 ಕೆಜಿಯ ಕಟ್ಟುನಿಟ್ಟಿನ ಮಿತಿಯನ್ನು ಹೇರಲಾಗಿದೆ. ಈ ಯೋಜನೆಯು ಜಿಆರ್ ಮತ್ತು ಆಭರಣ ರಫ್ತುದಾರರಿಗೆ ಶೂನ್ಯ ಸುಂಕದಲ್ಲಿ ಕಚ್ಚಾ ವಸ್ತುಗಳು ಅಥವಾ ಇನ್‌ಪುಟ್ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಚಿನ್ನ ಆಮದಿಗಾಗಿ ಮುಂಗಡ ದೃಢೀಕರಣವನ್ನು ನೀಡುವ ಮತ್ತು ಅದರ ಮೇಲೆ ನಿಗಾ ಇಡುವ ಷರತ್ತುಗಳನ್ನು ಸರ್ಕಾರ ಮತ್ತಷ್ಟು ಕಠಿಣಗೊಳಿಸಿದೆ. ಈ ಹಿಂದೆ ಈ ಯೋಜನೆಯಡಿ ಚಿನ್ನ ಆಮದು ಮಾಡಿಕೊಳ್ಳಲು ಯಾವುದೇ ಗರಿಷ್ಠ ಮಿತಿ ಇರಲಿಲ್ಲ ಎಂಬುದು ಗಮನಾರ್ಹ.

ಆಮದು ಸುಂಕ ಶೇ. 15ಕ್ಕೆ ಭಾರಿ ಏರಿಕೆ!

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದನ್ನು ತಡೆಯಲು ಮತ್ತು ಅನಗತ್ಯ ಆಮದನ್ನು ಸಂಪೂರ್ಣವಾಗಿ ನಿರುತ್ಸಾಹಗೊಳಿಸಲು ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಗಣನೀಯವಾಗಿ ಹೆಚ್ಚಿಸಿದೆ.

ಮೇ 13 ರಿಂದಲೇ ಜಾರಿಗೆ ಬರುವಂತೆ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಈ ಹಿಂದೆ ಇದ್ದ ಶೇಕಡಾ 6 ರಿಂದ ಒಮ್ಮೆಗೆ ಶೇಕಡಾ 15 ಕ್ಕೆ ಏರಿಸಲಾಗಿದೆ. ಹಾಗೆಯೇ ಪ್ಲಾಟಿನಂ ಮೇಲಿನ ಸುಂಕವನ್ನು ಶೇಕಡಾ 6.4 ರಿಂದ ಶೇಕಡಾ 15.4 ಕ್ಕೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಚಿನ್ನ/ಬೆಳ್ಳಿಯ ಅದಿರು (Dore), ನಾಣ್ಯಗಳು ಮತ್ತು ಆಭರಣದ ಇತರ ಪೂರಕ ವಸ್ತುಗಳ ಮೇಲಿನ ತೆರಿಗೆಯಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.

ವಿದೇಶಿ ವಿನಿಮಯದ ಅನಗತ್ಯ ವೆಚ್ಚವನ್ನು ಕಡಿಮೆ ಮಾಡಲು ಚಿನ್ನದ ಖರೀದಿ ಸೇರಿದಂತೆ ಇತರೆ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಕರೆ ನೀಡಿದ್ದರು. ಪ್ರಧಾನಿಯವರ ಈ ಮಿತವ್ಯಯದ ಕರೆಯ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕಠಿಣ ಆರ್ಥಿಕ ಕ್ರಮಗಳನ್ನು ಜಾರಿಗೆ ತಂದಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅದಾನಿ ಏರ್‌ಪೋರ್ಟ್‌ಗಳಲ್ಲಿ ಐಷಾರಾಮಿ ಕ್ರಾಂತಿ: ನಮ್ಮ ಮಂಗಳೂರಿಗೂ ಬರಲಿದೆ ಕಿಂಪ್ಟನ್‌
ಅದಾನಿ-ಐಎಚ್‌ಜಿ ಮೈತ್ರಿ: ಪ್ರವಾಸೋದ್ಯಮದಲ್ಲಿ ಹೊಸ ಅಧ್ಯಾಯ, ಮಂಗಳೂರು ಸೇರಿ 5 ಕಡೆಗಳಲ್ಲಿ ಕಿಂಪ್ಟನ್‌ ಹೊಟೇಲ್‌