ಕೇಂದ್ರ ಸರ್ಕಾರ ಜಾರಿಗೆ ತಂದ GST ಗೆ ಎರಡು ವರ್ಷಗಳು ಪೂರ್ಣವಾಗಿದ್ದು, ಇದೇ ವೇಳೆ ಪ್ರಮುಖವಾಗಿ ಮೂರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ.
ನವದೆಹಲಿ [ಜು.1]: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ದೇಶದಲ್ಲಿ ಜಾರಿಯಾಗಿ ಸೋಮವಾರಕ್ಕೆ 2 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೋಮವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಜಿಎಸ್‌ಟಿ ಪದ್ಧತಿಯಲ್ಲಿ ಮತ್ತಷ್ಟು ಸುಧಾ ರಣಾ ಕ್ರಮಗಳನ್ನು ಸರ್ಕಾರ ಘೋಷಿಸಲಿದೆ. ತೆರಿಗೆ ಪಾವತಿಯನ್ನು ಪಾರದರ್ಶಕಗೊಳಿ ಸುವ ನಿಟ್ಟಿನಲ್ಲಿ, ಪಾವತಿ ವ್ಯವಸ್ಥೆಯನ್ನು ಸರಳೀಕೃತಗೊಳಿಸುವ ನಿಟ್ಟಿನಲ್ಲಿ 2017 ರ ಜು. 1ರಿಂದ ಕೇಂದ್ರ ಜಿಎಸ್‌ಟಿ ಜಾರಿಗೆ ತಂದಿತು.
ಆರಂಭಿಕ ಅಡೆತಡೆಯ ಹೊರತಾಗಿಯೂ ಜಿಎಸ್‌ಟಿ ವ್ಯವಸ್ಥೆಯನ್ನು ವ್ಯಾಪಾರಿ ವರ್ಗ ಇದಕ್ಕೆ ಒಪ್ಪಿಕೊಂಡಿದೆ. ಮತ್ತೊಂದೆಡೆ ಸರ್ಕಾರ ಕೂಡಾ ಕಾಲಕಾಲಕ್ಕೆ ವ್ಯಾಪಾರಿಗಳ ಬೇಡಿಕೆಯಂತೆ ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ. ಇದರ ಮುಂದುವರೆದ ಭಾಗವಾಗಿ ಸೋಮವಾರ ಮತ್ತೆ 3 ಸುಧಾರಣಾ ಕ್ರಮಗಳನ್ನು ಸರ್ಕಾರ ಘೋಷಿಸಲಿದೆ.
ಅವುಗಳೆಂದರೆ ಹೊಸ ಜಿಎಸ್‌ಟಿ ಪಾವತಿ ವ್ಯವಸ್ಥೆ, ಸುಧಾರಿತ ಕ್ಯಾಶ್ ಲೆಡ್ಜರ್ ವ್ಯವಸ್ಥೆ ಮತ್ತು ಮರುಪಾವತಿಗೆ ಏಕೀಕೃತ ವ್ಯವಸ್ಥೆ. ಪ್ರಾಯೋಗಿಕ ವಾಗಿ ಈ ವ್ಯವಸ್ಥೆಯನ್ನು ಸೋಮವಾರದಿಂದ ಜಾರಿಗೊಳಿಸಲಾಗುತ್ತಿದ್ದು. ಅ.1 ರಿಂದ ಇವು ಕಡ್ಡಾಯವಾಗಿದೆ ಜಾರಿಗೆ ಬರಲಿದೆ. ಹೊಸ ಪಾವತಿ ವ್ಯವಸ್ಥೆಯು ಸಣ್ಣ ವ್ಯಾಪಾರಿಗಳಿಗಾಗಿ ರೂಪಿಸಿರುವ ಸಹಜ್ ಮತ್ತು ಸುಗಮ್ ಫಾರ್ಮ್ ಗಳಾಗಿವೆ. ಇನ್ನು ಸಿಂಗಲ್ ಕ್ಯಾಶ್ ಲೆಡ್ಜರ್ ವ್ಯವಸ್ಥೆಯು ತೆರಿಗೆ, ಬಡ್ಡಿ, ದಂಡ ಮತ್ತು ಇತರೆ ಎಲ್ಲಾ ವ್ಯವಸ್ಥೆಗಳಿಗೂ ಒಂದೇ ಲೆಡ್ಜರ್ ಜಾರಿ ಮಾಡಲಿರುವ ಕ್ರಮವಾಗಿದೆ.