ಆನ್ ಲೈನ್ ಹಣ ವರ್ಗಾವಣೆ ಮಾಡುವವರಿಗೆ ಗುಡ್ ನ್ಯೂಸ್

By Web DeskFirst Published Jul 1, 2019, 7:55 AM IST
Highlights

ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಇಲ್ಲಿದೆ ಗುಡ್ ನ್ಯೂಸ್.ಇನ್ಮುಂದೆ ಹಣ ವರ್ಗಾವಣೆ ಮಾಡಿದ್ರೆ ನಿಮಗೆ ಯಾವು ಶುಲ್ಕ ವಿಧಿಸಲಾಗುವುದಿಲ್ಲ. 

ಮುಂಬೈ [ಜು.1] : ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಬ್ಯಾಂಕುಗಳು ವಿಧಿಸುವ ಶುಲ್ಕ ಸೋಮವಾರದಿಂದ ಅಗ್ಗ ವಾಗಲಿದೆ. ಆರ್‌ಟಿಜಿಎಸ್ ಹಾಗೂ ಎನ್‌ಇ ಎಫ್‌ಟಿ (ನೆಫ್ಟ್) ಮೂಲಕ ಹಣ ವರ್ಗಾವಣೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಸಂಪೂರ್ಣ ರದ್ದುಗೊಳಿಸುವ ನಿರ್ಧಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳೆದ ತಿಂಗಳು ಕೈಗೊಂಡಿತ್ತು. ಅದು ಸೋಮವಾರದಿಂದ ಜಾರಿಗೆ ಬರುತ್ತಿದೆ. 

ಹೀಗಾಗಿ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಬ್ಯಾಂಕುಗಳು ಕಡಿತ ಮಾಡಲಿವೆ ಎಂದು ಭಾರತೀಯ ಬ್ಯಾಂಕರುಗಳ ಸಂಘ ತಿಳಿಸಿದೆ. 2 ಲಕ್ಷ ರು.ವರೆಗಿನ ಹಣ ವರ್ಗಾವಣೆಗೆ  ನೆಫ್ಟ್ ಬಳಸಲಾಗುತ್ತದೆ. ಭಾರಿ ಮೊತ್ತದ ಹಣವನ್ನು ಕಳುಹಿಸಲು ಆರ್‌ಟಿಜಿಎಸ್ ಅನ್ನು ಗ್ರಾಹಕರು ಉಪಯೋಗಿಸುತ್ತಿದ್ದಾರೆ. ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, ನೆಫ್ಟ್‌ಗೆ 1 ರಿಂದ 5 ರು. ಹಾಗೂ ಆರ್‌ಟಿಜಿಎಸ್ ಗೆ 5ರಿಂದ 50  ರು.ವರೆಗೆ ಶುಲ್ಕ ವಿಧಿಸುತ್ತಿದೆ.

ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಆರ್‌ಬಿಐ ಇಂತಿಷ್ಟು ಶುಲ್ಕ ಎಂದು ವಿಧಿಸುತ್ತಿತ್ತು. ಆ ಶುಲ್ಕ ಹಾಗೂ ಅದರ ಮೇಲೆ ಒಂದಿಷ್ಟು ಲೆವಿ ವಿಧಿಸಿ ಬ್ಯಾಂಕುಗಳು ಗ್ರಾಹಕರ ಮೇಲೆವರ್ಗಾಯಿಸುತ್ತಿದ್ದವು. ಡಿಜಿಟಲ್ ಮೂಲಕ ಹಣದ ವಹಿವಾಟಿಗೆ ಉತ್ತೇಜನ ನೀಡಲು ಹಣ ವರ್ಗಾವಣೆ ಶುಲ್ಕವನ್ನು ಜು.1 ರಿಂದ ಜಾರಿಗೆ ಬರುವಂತೆ ಆರ್‌ಬಿಐ ಮಾಫಿ ಮಾಡಿತ್ತು. ಅಲ್ಲದೆ ಶುಲ್ಕ ವಿನಾಯಿತಿಯನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಬ್ಯಾಂಕುಗಳಿಗೂ ಸೂಚನೆ ಕೊಟ್ಟಿತ್ತು. ಆದಾಗ್ಯೂ ಬ್ಯಾಂಕುಗಳು ತಮ್ಮ ನಿರ್ವಹಣಾ ಶುಲ್ಕವನ್ನು ಉಳಿಸಿಕೊಳ್ಳುವ ಸಂಭವ ಹೆಚ್ಚಿದೆ.

click me!