ಬ್ಯಾಂಕ್‌ಗಳಿಗೆ ಕೆಟ್ಟಕಾಲ ಅಂದ ಸಚಿವೆ ನಿರ್ಮಲಾಗೆ ಡಾ. ಸಿಂಗ್‌ ತಿರುಗೇಟು!

By Web DeskFirst Published Oct 18, 2019, 8:59 AM IST
Highlights

ಪ್ರಸ್ತುತದ ಆರ್ಥಿಕ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವುದರ ಬದಲು ಆರೋಪ ಮಾಡುವುದರಲ್ಲೇ ಕೇಂದ್ರ ಸರ್ಕಾರ ಕಾಲ ಕಳೆಯುತ್ತಿದೆ |  ಬ್ಯಾಂಕ್‌ಗಳಿಗೆ ಕೆಟ್ಟಕಾಲ ಅಂದ ಸಚಿವೆ ನಿರ್ಮಲಾಗೆ ಡಾ. ಸಿಂಗ್‌ ತಿರುಗೇಟು| 

ಮುಂಬೈ[ಅ.18]: ಪ್ರಸ್ತುತದ ಆರ್ಥಿಕ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವುದರ ಬದಲಾಗಿ ದೇಶದ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ವಿಪಕ್ಷಗಳು ಮತ್ತು ವಿಪಕ್ಷ ನಾಯಕರೇ ಕಾರಣ ಎಂಬುದಾಗಿ ನಿರಂತರ ಆರೋಪ ಮಾಡುವುದರಲ್ಲೇ ಕೇಂದ್ರ ಸರ್ಕಾರ ಕಾಲ ಕಳೆಯುತ್ತಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ, ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಹಾಗೂ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಆಡಳಿತಾವಧಿಯು ಭಾರತೀಯ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಅತೀ ಕೆಟ್ಟಕಾಲವಾಗಿತ್ತು ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಆರೋಪಕ್ಕೆ ಸಿಂಗ್‌ ತಿರುಗೇಟು ನೀಡಿದ್ದಾರೆ.

ಮನಮೋಹನ್‌, ರಾಜನ್‌ ಜೋಡಿ ಆಡಳಿತ ಬ್ಯಾಂಕುಗಳಿಗೆ ಕೆಟ್ಟಕಾಲ

ಮುಂಬೈನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್‌ ಅವರು, ‘ಪ್ರಸ್ತುತ ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್‌(ಪಿಎಂಸಿ) ಅವ್ಯವಹಾರದಿಂದ ಎದುರಾದ ಬಿಕ್ಕಟ್ಟಿನಿಂದಾಗಿ 16 ಲಕ್ಷ ಹೂಡಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಾರ್ವಜನಿಕ ಸ್ನೇಹಿ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ’ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗಂಡ ತಪರಾಕಿ!

‘ಸಚಿವೆ ನಿರ್ಮಲಾ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅದರ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಕೈ ಹಾಕುವ ಮೊದಲು, ಸಮಸ್ಯೆಗೆ ಕಾರಣವೇನು ಎಂಬುದನ್ನು ಸರಿಯಾಗಿ ಪರಾಮರ್ಶಿಸಬೇಕು. ಆದರೆ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ದಾರಿ ತಿಳಿಯದ ಸರ್ಕಾರ, ಎಲ್ಲ ಸಮಸ್ಯೆಗಳಿಗೂ ಪ್ರತಿಪಕ್ಷಗಳನ್ನೇ ಗುರಿ ಮಾಡಲು ಯತ್ನಿಸುತ್ತಿದೆ. ಅಲ್ಲದೆ, ನಾನು ಆಡಳಿತದಲ್ಲಿದ್ದಾಗ, ಆರ್ಥಿಕತೆಯಲ್ಲಿ ಕೆಲ ದೌರ್ಬಲ್ಯಗಳು ಕಂಡುಬಂದಿದ್ದವು. ಆದರೆ, ಸಮಸ್ಯೆಯಲ್ಲೇ ಯುಪಿಎ ಆಡಳಿತಾವಧಿ ಮುಳುಗಿತ್ತು ಎಂದು ನೀವು ಹೇಳುವಂತಿಲ್ಲ’ ಎಂದು ಹೇಳಿದರು.

click me!