E-Commerce: ಚಿಲ್ಲರೆ ವ್ಯಾಪಾರಕ್ಕೆ ಸರ್ಕಾರಿ ಆ್ಯಪ್‌: ಎಲ್ಲವೂ ಇದರಲ್ಲಿ ಲಭ್ಯ..!

By Girish GoudarFirst Published Apr 29, 2022, 6:29 AM IST
Highlights

*  ನಂದನ್‌ ನಿಲೇಕಣಿ ಸಾರಥ್ಯ
*  ಬೆಂಗಳೂರು ಸೇರಿ 5 ನಗರಗಳಲ್ಲಿ ಮೇನಲ್ಲಿ ಬಿಡುಗಡೆ
*  ಅಮೆಜಾನ್‌, ಫ್ಲಿಪ್‌ಕಾರ್ಟ್‌ ಜತೆ ಚಿಲ್ಲರೆ ವ್ಯಾಪಾರಿಗಳ ಪೈಪೋಟಿಗೆ ಕೇಂದ್ರ ವೇದಿಕೆ
 

ನವದೆಹಲಿ(ಏ.28):  ಅಮೆಜಾನ್‌(Amazon) ಹಾಗೂ ಫ್ಲಿಪ್‌ಕಾರ್ಟ್‌ನಂತಹ(Flipkart) ದೈತ್ಯ ಇ-ಕಾಮರ್ಸ್‌ ಕಂಪನಿಗಳ ಅಬ್ಬರದಿಂದಾಗಿ ಮಂಕಾಗಿರುವ ದೇಶದ ಚಿಲ್ಲರೆ ವ್ಯಾಪಾರಿಗಳ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಇನ್ಫೋಸಿಸ್‌ ಕಂಪನಿಯ ಸಹ ಸಂಸ್ಥಾಪಕ, ಆಧಾರ್‌ ಯೋಜನೆಯ ರೂವಾರಿಯಾಗಿರುವ ಕನ್ನಡಿಗ ನಂದನ್‌ ನಿಲೇಕಣಿ(Nandan Nilekani) ಅವರ ಸಹಾಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಸರ್ಕಾರ ಚಿಲ್ಲರೆ ವ್ಯಾಪಾರಿಗಳಿಗಾಗಿ ತಂತ್ರಜ್ಞಾನದ ವೇದಿಕೆ (ಆ್ಯಪ್‌/ವೆಬ್‌ಸೈಟ್‌) ಒದಗಿಸಿಕೊಡಲು ಮುಂದಾಗಿದೆ.

‘ಓಪನ್‌ ನೆಟ್‌ವರ್ಕ್ ಫಾರ್‌ ಡಿಜಿಟಲ್‌ ಕಾಮರ್ಸ್‌’(Open Network for Digital Commerce) (ONDC) ಎಂಬ ಹೆಸರಿನ ಇದು ಸರ್ಕಾರಿ ಸ್ವಾಮ್ಯದ ಮುಕ್ತ ತಂತ್ರಜ್ಞಾನ ಜಾಲವಾಗಿದ್ದು, ಯಾವುದೇ ವ್ಯಾಪಾರಿ ಹಾಗೂ ಖರೀದಿದಾರರು ಏನನ್ನು ಬೇಕಾದರೂ ಮಾರಬಹುದು, ಏನನ್ನು ಬೇಕಾದರೂ ಕೊಳ್ಳಬಹುದು. ಸೋಪ್‌ನಿಂದ ಹಿಡಿದು ದಿನಸಿ, ಆಹಾರ, ಹೋಟೆಲ್‌, ವಿಮಾನ ಟಿಕೆಟ್‌ವರೆಗೆ ಎಲ್ಲವನ್ನೂ ಮಾರಬಹುದು/ಖರೀದಿಸಬಹುದು. ಲಾಭರಹಿತ ವ್ಯವಸ್ಥೆ ಇದಾಗಿದ್ದು, ಮುಂದಿನ ತಿಂಗಳು ಬೆಂಗಳೂರು, ದೆಹಲಿ, ಕೊಯಮತ್ತೂರು, ಭೋಪಾಲ್‌ ಹಾಗೂ ಶಿಲ್ಲಾಂಗ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರವೇ(Central Government) ತಂತ್ರಜ್ಞಾನ (Technology) ನೆರವು ಒದಗಿಸುವ ಪ್ರಯೋಗ ಎಲ್ಲೂ ಆಗಿಲ್ಲ. ಹೀಗಾಗಿ ಇದೊಂದು ವಿನೂತನ ಪ್ರಯೋಗ ಎನ್ನಿಸಿಕೊಳ್ಳಲಿದೆ.

ಕ್ರಿಪ್ಟೋಗೆ ಭವಿಷ್ಯವಿದೆ, ಅಮೆಝಾನ್‌ ಕೂಡ ಭವಿಷ್ಯದಲ್ಲಿ NFT ಮಾರಬಹುದು: ಸಿಐಓ ಆಂಡಿ ಜಾಸ್ಸಿ

ಅಮೇಜಾನ್‌, ಫ್ಲಿಪ್‌ಕಾರ್ಟ್‌ಗೆ ಕಡಿವಾಣ:

ಕಿರಾಣಿ ಅಂಗಡಿಗಳಿಗೆ ನೆರವಾಗುವ ಉದ್ದೇಶದೊಂದಿಗೆ ಈ ಆನ್‌ಲೈನ್‌(Online) ವೇದಿಕೆಯನ್ನು ಸರ್ಕಾರ ರೂಪಿಸುತ್ತಿದೆಯಾದರೂ, ಇದರಿಂದ ಅಮೆಜಾನ್‌ ಹಾಗೂ ವಾಲ್‌ಮಾರ್ಟ್‌(Wallmart) ಮಾಲೀಕತ್ವದ ಫ್ಲಿಪ್‌ಕಾರ್ಚ್‌ ನಿಯಂತ್ರಣ ತಗ್ಗುವ ನಿರೀಕ್ಷೆ ಇದೆ. ಈ ಎರಡೂ ಇ-ಕಾಮರ್ಸ್‌(E-Commerce) ಸಂಸ್ಥೆಗಳು ರಿಯಾಯಿತಿ ಹಾಗೂ ಪ್ರಚಾರದ ಮೂಲಕ ದೇಶದ ಶೇ.80ರಷ್ಟು ಆನ್‌ಲೈನ್‌ ರೀಟೆಲ್‌ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿವೆ. ಇದಕ್ಕಾಗಿ ದೇಶದಲ್ಲಿ 1.80 ಲಕ್ಷ ಕೋಟಿ ರು. ಹೂಡಿಕೆಯನ್ನೂ ಮಾಡಿವೆ.

ಇ-ಕಾಮರ್ಸ್‌ ಕಂಪನಿಗಳ ಪ್ರವೇಶದ ಹೊರತಾಗಿಯೂ ದೇಶದ ಚಿಲ್ಲರೆ (ಕಿರಾಣಿ) ಮಾರುಕಟ್ಟೆಯಲ್ಲಿ ಶೇ.6ರಷ್ಟು ಮಾತ್ರ ಆ ಕಂಪನಿಗಳಿಗೆ ವ್ಯವಹಾರವಾಗುತ್ತಿದೆ. ಆದರೆ ಭವಿಷ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಕಿರಾಣಿ ಅಂಗಡಿಗಳಿಗೆ ಸಂಚಕಾರ ತಂದೊಡ್ಡಬಹುದೆಂಬ ಆತಂಕವಂತೂ ಇದೆ. ಒಎನ್‌ಡಿಸಿ ಯೋಜನೆಯು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಕಾರ್ಯಕ್ರಮವಾಗಿದೆ. ಈ ಇಲಾಖೆಯು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಲ್ಲಿ ಅಧೀನದಲ್ಲಿದೆ.

ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೀಶೋ 150 ಉದ್ಯೋಗಿಗಳು ವಜಾ

ಹೊಸ ಹಾಗೂ ಅತಿ ವೇಗದ ಬೆಳವಣಿಗೆಯ ಡಿಜಿಟಲ್‌ ಕಾಮರ್ಸ್‌ ಕ್ಷೇತ್ರದಲ್ಲಿ ಸುಲಭವಾಗಿ ಹೇಗೆ ಭಾಗಿಯಾಗಬೇಕು ಎಂಬುದನ್ನು ತೋರಿಸಿಕೊಡುವ ಹೊಣೆಯನ್ನು ನಾವು ಕೋಟ್ಯಂತರ ಸಣ್ಣ ವ್ಯಾಪಾರಿಗಳಿಂದ ಹೊತ್ತಿದ್ದೇವೆ. ಇದೊಂದು ಆಲೋಚನೆಯಾಗಿದ್ದು, ಅದರ ಸಮಯ ಈಗ ಬಂದಿದೆ ಅಂತ ಇನ್ಫೋಸಿಸ್‌ ಸಹ ಸಂಸ್ಥಾಪಕ ನಂದನ್‌ ನಿಲೇಕಣಿ ತಿಳಿಸಿದ್ದಾರೆ.  

ನಮ್ಮ ಪಾತ್ರ ಏನಾದರೂ ಇದರಲ್ಲಿ ಇದೆಯೇ ಎಂಬುದನ್ನು ನೋಡಲು ಹೊಸ ವಿಧಾನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಅಂತ ಅಮೆಜಾನ್‌ ತಿಳಿಸಿದೆ. 
 

click me!