2023-24ನೇ ಸಾಲಿನ ಬಡ್ಡಿದರ ಯಾವಾಗ ತಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ ಎಂದು ಇಪಿಎಫ್ ಒ ಸದಸ್ಯರು ಕಾಯುತ್ತಿದ್ದಾರೆ.ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಇಪಿಎಫ್ ಒ, ಶೀಘ್ರದಲ್ಲೇ ಬಡ್ಡಿ ಕ್ರೆಡಿಟ್ ಆಗಲಿದೆ ಎಂದು ತಿಳಿಸಿದೆ.
ನವದೆಹಲಿ (ಏ.26): 2023-24ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇಪಿಎಫ್ ಒ ಫೆಬ್ರವರಿ ತಿಂಗಳಲ್ಲಿ ಶೇ.8.15ರಿಂದ ಶೇ.8.25ಕ್ಕೆ ಹೆಚ್ಚಿಸಿದೆ. ಇದು ಕಳೆದ ಮೂರು ವರ್ಷಗಳ ಅವಧಿಯಲ್ಲೇ ಅತ್ಯಧಿಕ ಬಡ್ಡಿದರವಾಗಿದೆ. ಇಪಿಎಫ್ ಬಡ್ಡಿದರ ತಮ್ಮ ಖಾತೆಗೆ ಯಾವಾಗ ಕ್ರೆಡಿಟ್ ಆಗುತ್ತದೆ ಎಂದು ಅನೇಕ ಉದ್ಯೋಗಿಗಳು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಇಪಿಎಫ್ ಒ ಮಾಹಿತಿ ನೀಡಿದ್ದು, ಈಗಾಗಲೇ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಉದ್ಯೋಗಿ ಖಾತೆಗೆ ಆದಷ್ಟು ಬೇಗ ಇಪಿಎಫ್ ಬಡ್ಡಿದರ ಕ್ರೆಡಿಟ್ ಆಗಲಿದೆ ಎಂದು ತಿಳಿಸಿದೆ. ಎಕ್ಸ್ ನಲ್ಲಿ ಇಪಿಎಫ್ ಒ ಸದಸ್ಯರೊಬ್ಬರು ಯಾವಾಗ ಬಡ್ಡಿದರ ಕ್ರೆಡಿಟ್ ಆಗುತ್ತದೆ ಎಂಬ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಇಪಿಎಫ್ ಒ, ಪ್ರಕ್ರಿಯೆ ನಡೆಯುತ್ತಿದ್ದು, ಆದಷ್ಟು ಶೀಘ್ರದಲ್ಲೇ ಸದಸ್ಯರ ಖಾತೆಗೆ ಬಡ್ಡಿ ಕ್ರೆಡಿಟ್ ಆಗಲಿದೆ. ಬಡ್ಡಿ ಯಾವಾಗ ಕ್ರೆಡಿಟ್ ಆದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಲಾಗುತ್ತದೆ. ಅದರಿಂದ ಸದಸ್ಯರಿಗೆ ಯಾವುದೇ ಬಡ್ಡಿ ನಷ್ಟವಾಗೋದಿಲ್ಲ ಎಂದು ಸ್ಪಷ್ಟಪಡಿಸಿದೆ.
2022-23ನೇ ಹಣಕಾಸು ಸಾಲಿನಲ್ಲಿ 28.17 ಕೋಟಿ ಸದಸ್ಯರ ಖಾತೆಗಳಿಗೆ ಇಪಿಎಫ್ ಒ ಬಡ್ಡಿ ಕ್ರೆಡಿಟ್ ಮಾಡಿದೆ. ಸದಸ್ಯರು ತಮ್ಮ ಪಾಸ್ ಪುಸ್ತಕದ ಮೂಲಕ ಬಡ್ಡಿ ಜಮೆಯಾಗಿರೋದನ್ನು ಖಚಿತಪಡಿಸಿಕೊಳ್ಳಬಹುದು. 2021-22ನೇ ಸಾಲಿನಲ್ಲಿ ಶೇ.8.10 ಇದ್ದ ಬಡ್ಡಿ ದರವನ್ನು ಇಪಿಎಫ್‌ಒ, 2022-23ರಲ್ಲಿ ಶೇ.8.15ಕ್ಕೆ ಹೆಚ್ಚಿಸಿತ್ತು.
ಇಪಿಎಫ್ ನಿಯಮ ಬದಲಾವಣೆ;ವೈದ್ಯಕೀಯ ಚಿಕಿತ್ಸೆಗೆ ಒಂದು ಲಕ್ಷ ರೂ. ತನಕ ಹಣ ವಿತ್ ಡ್ರಾಗೆ ಅವಕಾಶ
ಇನ್ನು ಇಪಿಎಫ್ ಮೇಲಿನ ಬಡ್ಡಿದರವನ್ನು ಹಣಕಾಸು ಸಚಿವಾಲಯದ ಜೊತೆಗೆ ಚರ್ಚಿಸಿದ ಬಳಿಕ ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ. ಶಿಫಾರಸ್ಸು ಮಾಡಿದ ದರವನ್ನು ಪರಿಗಣಿಸಿದ ಬಳಿಕ ಕೇಂದ್ರ ಹಣಕಾಸು ಸಚಿವಾಲಯ ಅಂತಿಮ ದರದ ಅಧಿಸೂಚನೆ ಹೊರಡಿಸುತ್ತದೆ. ಇನ್ನು ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಬಡ್ಡಿದರ ಜಮೆ ಮಾಡಲಾಗುತ್ತದೆ. ಇದನ್ನು ಪ್ರತಿ ಹಣಕಾಸು ಸಾಲಿನ ಮಾರ್ಚ್ 31ರಂದು ಮಾಡಲಾಗುತ್ತದೆ. ಅಂದಹಾಗೇ ಇಪಿಎಫ್ ಬಡ್ಡಿದರವನ್ನು ವರ್ಷಕ್ಕೊಮ್ಮೆ ಖಾತೆಗೆ ಜಮೆ ಮಾಡಲಾಗುತ್ತದೆಯಾದರೂ ಬಡ್ಡಿಯನ್ನು ಮಾತ್ರ ಪ್ರತಿ ತಿಂಗಳು ಲೆಕ್ಕ ಹಾಕಲಾಗುತ್ತದೆ. ಪ್ರತಿ ತಿಂಗಳ ಕ್ಲೋಸಿಂಗ್ ಬ್ಯಾಲೆನ್ಸ್ ಹಾಗೂ ಇಡೀ ವರ್ಷದ ಕ್ಲೋಸಿಂಗ್ ಬ್ಯಾಲೆನ್ಸ್ ಆಧಾರದಲ್ಲಿ ಬಡ್ಡಿ ಲೆಕ್ಕಾಚಾರ ನಡೆಯುತ್ತದೆ.
ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಹಂತ 1: ಇಪಿಎಫ್ ಒ (EPFO) ಅಧಿಕೃತ ವೆಬ್ ಸೈಟ್ epfindia.gov.in.ಭೇಟಿ ನೀಡಿ.
ಹಂತ 2:‘Services’ವಿಭಾಗದ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದಡಿಯಲ್ಲಿ ‘For Employees’ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ‘Member Passbook’ ಮೇಲೆ ಕ್ಲಿಕ್ ಮಾಡಿ. ಈಗ ಲಾಗಿನ್ ಪುಟ ತೆರೆದುಕೊಳ್ಳುತ್ತದೆ.
ಹಂತ 4: ಇಲ್ಲಿ ನೀವು ನಿಮ್ಮ ಯುಎಎನ್ ಸಂಖ್ಯೆ (UAN) ಹಾಗೂ ಪಾಸ್ ವರ್ಡ್ ನಮೂದಿಸಿ. ಕ್ಯಾಪ್ಚ ಕೋಡ್ ಕೂಡ ನಮೂದಿಸಬೇಕಾಗುತ್ತದೆ. ಇದಾದ ಬಳಿಕ ನಿಮ್ಮ ಪಾಸ್ ಬುಕ್ ಕಾಣಿಸುತ್ತದೆ.
EPF ಖಾತೆಗೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಲು ಹೊಸ ವಿಧಾನ; ಈ ಆನ್ಲೈನ್ ಪ್ರಕ್ರಿಯೆ ಬಲು ಸರಳ
ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್
ನಿಮ್ಮ ಮೊಬೈಲ್ ನಲ್ಲಿ “EPFOHO UAN ENG" ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಮೆಸೇಜ್ (Message) ಕಳುಹಿಸಿ. ಒಂದು ವೇಳೆ ನಿಮಗೆ ಕನ್ನಡದಲ್ಲಿ ಮಾಹಿತಿ ಬೇಕಿದ್ದರೆ ಕೊನೆಯಲ್ಲಿ ಟೈಪ್ ಮಾಡಿರುವ ENG ತೆಗೆದು KAN ಎಂದು ಟೈಪ್ ಮಾಡಿ ಕಳುಹಿಸಿ. ನಿಮಗೆ ಪಿಎಫ್ ಖಾತೆಯಲ್ಲಿರುವ ಬ್ಯಾಲೆನ್ಸ್ ವಿವರ ಕೆಲವೇ ಸಮಯದಲ್ಲಿ ಲಭಿಸುತ್ತದೆ. ]
ಮಿಸ್ಡ್ ಕಾಲ್
9966044425 ಸಂಖ್ಯೆಗೆ ಮಿಸ್ ಕಾಲ್ ನೀಡೋ ಮೂಲಕ ಕೂಡ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದ್ರೆ ಇದಕ್ಕೆ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ರೆ ಮಾತ್ರ ಮಾಹಿತಿ ಲಭಿಸುತ್ತದೆ. ನೀವು ಕರೆ ಮಾಡಿದಾಗ ಎರಡು ರಿಂಗ್ ಆಗಿ ಬಳಿಕ ಕಡಿತಗೊಳ್ಳುತ್ತದೆ. ಆ ಬಳಿಕ ನಿಮ್ಮ ಮೊಬೈಲ್ ಗೆ ಬ್ಯಾಲೆನ್ಸ್ ಮಾಹಿತಿ ಸಂದೇಶ ರೂಪದಲ್ಲಿ ಬರುತ್ತದೆ.