26 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದೆ ಬೆ ಐಕಾನಿಕ್‌ ಗೋಲ್ಡ್‌ ಸ್ಪಾಟ್‌!

Published : Nov 24, 2026, 02:10 PM IST
Gold Spot

ಸಾರಾಂಶ

90ರ ದಶಕದ ನೆಚ್ಚಿನ ಪಾನೀಯ 'ಗೋಲ್ಡ್ ಸ್ಪಾಟ್' 26 ವರ್ಷಗಳ ನಂತರ ಮಾರುಕಟ್ಟೆಗೆ ಮರಳುತ್ತಿದೆ. ಕೋಕಾ-ಕೋಲಾ ಕಂಪನಿಯು ಈ ಕಿತ್ತಳೆ ಬಣ್ಣದ ಪಾನೀಯವನ್ನು ಕಡಿಮೆ ಸಕ್ಕರೆಯೊಂದಿಗೆ ಪರಿಚಯಿಸುತ್ತಿದೆ. ಎಂ.ಎಸ್. ಧೋನಿ ಅವರ ವೈರಲ್ ಫೋಟೋ ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಬೆಂಗಳೂರು (ನ.24): ನೀವು 80 ಅಥವಾ 90ರ ದಶಕದಲ್ಲಿ ಬೆಳೆದವರಾಗಿದ್ದರೆ, 'ಗೋಲ್ಡ್ ಸ್ಪಾಟ್' (Gold Spot) ಎಂಬ ಹೆಸರೇ ಬಿರುಬೇಸಿಗೆಯ ಮಧ್ಯಾಹ್ನದ ಆಯಾಸವನ್ನೆಲ್ಲಾ ಕ್ಷಣಾರ್ಧದಲ್ಲಿ ಕಳೆಯುತ್ತಿದ್ದ ತಣ್ಣನೆಯ ಕೂಲ್ ಡ್ರಿಂಕ್ ಬಾಟಲಿಯ ನೆನಪನ್ನು ತರಿಸುತ್ತದೆ. ಇದೀಗ ಬರೋಬ್ಬರಿ 26 ವರ್ಷಗಳ ಸುದೀರ್ಘ ವಿರಾಮದ ನಂತರ ಆ ಪ್ರಕಾಶಮಾನವಾದ ಕಿತ್ತಳೆ ಬಣ್ಣದ (Orange fizz) ಪಾನೀಯ ಮತ್ತೆ ಮಾರುಕಟ್ಟೆಗೆ ಮರಳಲು ಸಜ್ಜಾಗಿದೆ\. 'ದಿ ಎಕನಾಮಿಕ್ ಟೈಮ್ಸ್' (The Economic Times) ವರದಿಯ ಪ್ರಕಾರ, ಜಾಗತಿಕ ಪಾನೀಯ ದಿಗ್ಗಜ ಕೋಕಾ-ಕೋಲಾ (Coca-Cola) ಕಂಪನಿಯು 'ಗೋಲ್ಡ್ ಸ್ಪಾಟ್' ಪಾನೀಯವನ್ನು ಮತ್ತೆ ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸುತ್ತಿದೆ.

ಕೋಕಾ-ಕೋಲಾ ಕಂಪನಿಯು 1993ರಲ್ಲಿ ಪಾರ್ಲೆ ಗ್ರೂಪ್‌ನಿಂದ (Parle group) ಗೋಲ್ಡ್ ಸ್ಪಾಟ್ ಬ್ರ್ಯಾಂಡ್ ಅನ್ನು ಖರೀದಿಸಿತ್ತು. ಇದೀಗ ಸುಮಾರು 26 ವರ್ಷಗಳ ನಂತರ ಮುಂದಿನ ವಾರವೇ ಇದು ಮರುಬಿಡುಗಡೆಯಾಗುವ ನಿರೀಕ್ಷೆಯಿದೆ. ಇಂದಿನ ಗ್ರಾಹಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಹೆಚ್ಚಿನ ಜನರು ಹಗುರವಾದ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವ ಪಾನೀಯಗಳನ್ನು ಬಯಸುತ್ತಿರುವುದರಿಂದ ಈ ಬಾರಿ ಗೋಲ್ಡ್ ಸ್ಪಾಟ್ ಕಡಿಮೆ ಸಕ್ಕರೆ (Low-sugar) ಅಥವಾ ಸಕ್ಕರೆ ರಹಿತ (No-sugar / Sugar-free) ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಎಂ.ಎಸ್. ಧೋನಿ ಮತ್ತು ಸಾಕ್ಷಿ ಅವರ ವೈರಲ್ ಫೋಟೋದಿಂದ ಹೆಚ್ಚಿದ ಕುತೂಹಲ!

ಕೋಕಾ-ಕೋಲಾ ಕಂಪನಿ ಇನ್ನೂ ಈ ಕುರಿತು ಅಧಿಕೃತ ಘೋಷಣೆ ಮಾಡದಿದ್ದರೂ, ವಾರಾಂತ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಈ ಸುದ್ದಿಗೆ ಭಾರಿ ವೇಗ ಸಿಕ್ಕಿದೆ. ವೈರಲ್ ಆಗಿರುವ ಫೋಟೋಗಳಲ್ಲಿ ಧೋನಿ ಮತ್ತು ಸಾಕ್ಷಿ ಕುಳಿತಿದ್ದ ಟೇಬಲ್ ಮೇಲೆ 'ಗೋಲ್ಡ್ ಸ್ಪಾಟ್' ಕ್ಯಾನ್‌ಗಳು ಕಾಣಿಸಿಕೊಂಡಿವೆ. ಅಭಿಮಾನಿಗಳು ತಕ್ಷಣವೇ ತಮ್ಮ ನೆಚ್ಚಿನ ಪಾನೀಯವನ್ನು ಗುರುತಿಸಿದ್ದಾರೆ. ಗೋಲ್ಡ್ ಸ್ಪಾಟ್ ಬ್ರ್ಯಾಂಡ್‌ನ ಪ್ರಚಾರ ರಾಯಭಾರಿಯಾಗಿ (Brand Ambassador) ಧೋನಿ ಅವರನ್ನು ಸಹಿ ಮಾಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಈ ಫೋಟೋ 90ರ ದಶಕದ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಗೋಲ್ಡ್ ಸ್ಪಾಟ್ ಮರುಬಿಡುಗಡೆಯ ಸುದ್ದಿ ಆನ್‌ಲೈನ್‌ನಲ್ಲಿ ಹರಡುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ 90ರ ದಶಕದ ಸವಿ ನೆನಪುಗಳು (Nostalgia) ಹರಿದಾಡುತ್ತಿವೆ. ಮೊದಲ ಗುಟುಕು ಹೀರಲು ಕಾತರದಿಂದ ಕಾಯುತ್ತಿರುವ ನೆಟ್ಟಿಗರು ತಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. 'ಇದನ್ನು ಪ್ರಯತ್ನಿಸಲು ನನಗೆ ಕಾಯಲು ಸಾಧ್ಯವಾಗುತ್ತಿಲ್ಲ. ಅವರು ಹಳೆಯ ರೆಸಿಪಿಯನ್ನು (ರುಚಿಯನ್ನು) ಬದಲಾಯಿಸದಿದ್ದರೆ, ನಮ್ಮ ಬಾಲ್ಯ ಮತ್ತೆ ಮರಳಿದಂತೆಯೇ' ಎಂದು ಯೂಸರ್‌ ಒಬ್ಬರು ಬರೆದುಕೊಂಡಿದ್ದಾರೆ. 'ಯೆಸ್... ಯೆಸ್... ಯೆಸ್! ಇದು ನಿಜವಾಗಿಯೂ ನಡೆದರೆ, ನಾನು ಮತ್ತೆ ಕೂಲ್ ಡ್ರಿಂಕ್ಸ್ ಕುಡಿಯಲು ಶುರು ಮಾಡುತ್ತೇನೆ' ಎಂದು ಮತ್ತೊಬ್ಬರು ಸಂಭ್ರಮಿಸಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯ ನೆನಪು

ಮತ್ತೊಬ್ಬ ಯೂಸರ್‌ ತಮ್ಮ ಬಾಲ್ಯದ ಸವಿ ನೆನಪನ್ನು ಹಂಚಿಕೊಳ್ಳುತ್ತಾ, ನನ್ನ ಬಾಲ್ಯದ ನೆಚ್ಚಿನ ಗೋಲ್ಡ್ ಸ್ಪಾಟ್... 1980ರ ದಶಕದ ಮಧ್ಯಭಾಗದಲ್ಲಿ ನಾನು ಚಿಕ್ಕ ಹುಡುಗನಾಗಿದ್ದಾಗ ಬೆಂಗಳೂರಿನಿಂದ ಮೈಸೂರಿಗೆ ಮೊದಲ ಬಾರಿಗೆ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದೆ. ಆಗ ಹೆದ್ದಾರಿಯಲ್ಲಿದ್ದ ಗೋಲ್ಡ್ ಸ್ಪಾಟ್ ಫ್ಯಾಕ್ಟರಿಯನ್ನು ಮೊದಲ ಬಾರಿಗೆ ನೋಡಿ, ಕಾರು ನಿಲ್ಲಿಸಿ ಬಾಟಲಿ ಕೊಡಿಸುವಂತೆ ನನ್ನ ಮಾಮನ ಬಳಿ ಹಠ ಹಿಡಿದಿದ್ದೆ; ಅವರು ಯಾಕೆ ಅಲ್ಲಿ ನಿಲ್ಲಿಸಿ ಖರೀದಿಸಲು ಸಾಧ್ಯವಿಲ್ಲ ಎಂದು ನನಗೆ ಅರ್ಥಮಾಡಿಸಲು ಪ್ರಯತ್ನಿಸುತ್ತಿದ್ದುದು ನನಗೆ ಇನ್ನೂ ನೆನಪಿದೆ ಎಂದು ಭಾವುಕರಾಗಿ ಬರೆದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ನಟ ಮಾಡಿದ ಆ ಒಂದು ತಪ್ಪಿನಿಂದ 1800 ಕೋಟಿ ರೂ. ಮೌಲ್ಯದ ಆಸ್ತಿಗೆ ಓನರ್ ಆಗುವ ಚಾನ್ಸ್ ತಪ್ಪಿಹೋಯ್ತು!
ಸಿಇಒ ಆಗಿ ಎನ್‌ವಿಡಿಯಾಗೆ ಮರಳಿದ ದಿನವೇ ₹3.14 ಲಕ್ಷ ಕೋಟಿ ಶ್ರೀಮಂತರಾದ Jensen Huang, ಈಗ ಅವರ ಆಸ್ತಿ ₹13.36 ಲಕ್ಷ ಕೋಟಿ!