
ಮುಂಬೈ (ನ.24): ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳನ್ನು ತಡೆಗಟ್ಟಲು ಮತ್ತು ಗ್ರಾಹಕರಿಗೆ ತಮ್ಮ ಖಾತೆಗಳ ಮೇಲೆ ಹೆಚ್ಚಿನ ನಿಯಂತ್ರಣ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ರಕ್ಷಣಾ ಕ್ರಮಗಳ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಇದರಲ್ಲಿ, ಹಣ ಪಾವತಿಯನ್ನು ತಕ್ಷಣ ತಡೆಯುವ ‘ಸ್ಟಾಪ್ ಸ್ವಿಚ್’, ಗ್ರಾಹಕರೇ ನಿಗದಿಪಡಿಸುವ ಹಣಕಾಸು ಮಿತಿಗಳು ಹಾಗೂ ಹೆಚ್ಚಿನ ಮೌಲ್ಯದ ವರ್ಗಾವಣೆಗಳಿಗೆ ವಿಶ್ವಾಸಾರ್ಹ ವ್ಯಕ್ತಿಯ ಅನುಮೋದನೆ ಪಡೆಯುವ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ಈ ಕುರಿತು ಆರ್‌ಬಿಐ ಡಿ.14ರವರೆಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಪ್ರಸ್ತಾವಿತ ಕ್ರಮಗಳು ಅಂತಿಮಗೊಂಡರೆ, ಅವು 2027ರ ಜು.1ರಿಂದ ಜಾರಿಗೆ ಬರಲಿವೆ.
ಪ್ರಸ್ತಾವಿತ ಸ್ಟಾಪ್ ಸ್ವಿಚ್ ಸೌಲಭ್ಯದ ಮೂಲಕ ಗ್ರಾಹಕರು ತಮ್ಮ ಖಾತೆಯಿಂದ ಹೊರಹೋಗುವ ಎಲ್ಲ ವಹಿವಾಟುಗಳನ್ನು ಒಂದೇ ಕ್ರಮದಲ್ಲಿ ತಕ್ಷಣವೇ ನಿರ್ಬಂಧಿಸಬಹುದು ಮತ್ತು ಪ್ರತಿ ವಹಿವಾಟಿನ ಗರಿಷ್ಠ ಮಿತಿಯನ್ನು ತಾವೇ ನಿರ್ಧರಿಸಬಹುದು. ಜತೆಗೆ, ತಾವು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಮೊತ್ತದ ಎಲೆಕ್ಟ್ರಾನಿಕ್ ಹಣ ವರ್ಗಾವಣೆಗೆ 18 ವರ್ಷ ಮೇಲ್ಪಟ್ಟ ವ್ಯಕ್ತಿಯೊಬ್ಬರನ್ನು ನೋಂದಾಯಿಸಿಕೊಳ್ಳಬಹುದು. ಅಂತಹ ವಹಿವಾಟು ನಡೆದಾಗ ಆ ವಿಶ್ವಾಸಾರ್ಹ ವ್ಯಕ್ತಿಗೆ ಮೊತ್ತ, ವಹಿವಾಟಿನ ಮಾಹಿತಿ ರವಾನೆಯಾಗಲಿದ್ದು, ಅವರು 1 ಗಂಟೆಯೊಳಗೆ ಅನುಮೋದನೆ ನೀಡಿದರೆ ಮಾತ್ರ ವಹಿವಾಟು ಪೂರ್ಣಗೊಳ್ಳುತ್ತದೆ. ನಿರಾಕರಿಸಿದರೆ ಅಥವಾ ಪ್ರತಿಕ್ರಿಯೆ ನೀಡದಿದ್ದರೆ ವಹಿವಾಟು ತಿರಸ್ಕೃತವಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.