ಆರ್ಥಿಕ ತುರ್ತು ಸಂದರ್ಭಗಳಲ್ಲಿ ಕಿರುಸಾಲ ಪಡೆಯಲು ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲಗಳು ಲಭ್ಯವಿವೆ. ಆದರೆ, ಯಾವ ಸಾಲ ಪಡೆದರೆ ಸೂಕ್ತ ಎಂಬ ಗೊಂದಲಗಳಿಗೆ ಇಲ್ಲಿದೆ ನೋಡಿ ಪರಿಹಾರ..
ಆರ್ಥಿಕ ತುರ್ತು ಸಂದರ್ಭಗಳು ಬಂದಾಗ ಕೂಡಲೇ ನಾವು ಸಾಲವನ್ನು ಮಾಡಲು ಮುಂದಾಗುತ್ತೇವೆ. ಇದು ಎಲ್ಲರ ಜೀವನದಲ್ಲಿಯೂ ಅನಿವಾರ್ಯವಾಗಿರುತ್ದೆ. ಅದರಲ್ಲಿಯೂ ಕಿರುಸಾಲ (ಸಣ್ಣ ಮೊತ್ತದ ಹಣ)ಬೇಗ ಬೇಕಿದ್ದಲ್ಲಿ, ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲಗಳು ಎರಡು ಎಲ್ಲರ ಆಯ್ಕೆ ಆಗಿರುತ್ತವೆ. ಆದರೆ, ಈ ಕಿರುಸಾಲಕ್ಕೆ ಬಡ್ಡಿ, ಸಾಲ ಪಡೆಯಲು ತಗಲುವ ಸಮಯ, ಮರುಪಾವತಿ ನಿಯಮಗಳು ಮುಂತಾದ ಅಂಶಗಳನ್ನು ಅವಲಂಬಿಸಿ ಈ ಸಾಲಗಳಿಗೆ ಅನುಕೂಲ ಹಾಗೂ ಅನಾನುಕೂಲಗಳಿವೆ.
ಚಿನ್ನದ ಮೇಲಿನ ಸಾಲ (Gold Loan) :
ಚಿನ್ನಾಭರಣಗಳು, ಚಿನ್ನದ ನಾಣ್ಯಗಳು ಇತ್ಯಾದಿಗಳನ್ನು ಭದ್ರತೆಯಾಗಿ ನೀಡಿ ಪಡೆಯುವ ಸುರಕ್ಷಿತ ಸಾಲ ಇದಾಗಿದೆ. ಸಾಲ ನೀಡುವವರು ಚಿನ್ನದ ಶುದ್ಧತೆ, ತೂಕ ಮತ್ತು ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಹಣವನ್ನು ನೀಡುತ್ತಾರೆ. ಹೆಚ್ಚಿನ ಬ್ಯಾಂಕುಗಳು ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಶೇ.75% ವರೆಗೆ ಸಾಲ-ಮೌಲ್ಯ ಅನುಪಾತದಲ್ಲಿ ಚಿನ್ನದ ಸಾಲವನ್ನು ನೀಡುತ್ತವೆ. ಬೇಗ ಸಾಲ ಸಿಗುವುದರಿಂದ ಮತ್ತು ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲದಿರುವುದರಿಂದ ಚಿನ್ನದ ಸಾಲಗಳು ಜನಪ್ರಿಯವಾಗಿವೆ.
ವೈಯಕ್ತಿಕ ಸಾಲ (Personal Loan) :
ವೈಯಕ್ತಿಕ ಸಾಲವು ಬ್ಯಾಂಕುಗಳಿಗೆ ಸುರಕ್ಷಿತವಲ್ಲದ ಸಾಲವಾಗಿದೆ. ಏಕೆಂದರೆ, ಇದಕ್ಕೆ ಯಾವುದೇ ಭದ್ರತೆ ನೀಡಬೇಕಾಗಿಲ್ಲ. ಆದ್ದರಿಂದಲೇ, ಸಾಲವನ್ನು ನೀಡುವ ಮೊದಲು ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ, ಉದ್ಯೋಗದ ಸ್ಥಿರತೆ, ಮರುಪಾವತಿ ಸಾಮರ್ಥ್ಯವನ್ನು ಪರಿಶೀಲಿಸುತ್ತವೆ. 10,000 ದಿಂದ 40 ಲಕ್ಷ ರೂಪಾಯಿ ವರೆಗೆ ವೈಯಕ್ತಿಕ ಸಾಲ ಲಭ್ಯವಿದೆ. ಸುರಕ್ಷಿತವಲ್ಲದ ಸಾಲವಾಗಿರುವುದರಿಂದ ಇತರ ಸಾಲಗಳಿಗೆ ಹೋಲಿಸಿದರೆ ಬಡ್ಡಿ ದರಗಳು ಹೆಚ್ಚಾಗಿರುತ್ತವೆ.
ಇದನ್ನೂ ಓದಿ: ಅವಧಿಗಿಂತ ಮುಂಚೆ ಸಾಲ ತೀರಿಸ್ತೀರಾ? Foreclosure ಚಾರ್ಜ್ ರದ್ದು ಮಾಡಲು ಆರ್‌ಬಿಐ ಶಿಫಾರಸು!
ಯಾವ ಮಾದರಿ ಸಾಲ ಸೂಕ್ತ: ಚಿನ್ನದ ಸಾಲಗಳ ಬಡ್ಡಿ ದರವು ವಾರ್ಷಿಕವಾಗಿ 7% ರಿಂದ 15% ವರೆಗೆ ಇರುತ್ತದೆ. ಕೆಲವು ಬ್ಯಾಂಕುಗಳು ಪ್ರಕ್ರಿಯೆ ಶುಲ್ಕವನ್ನು ವಿಧಿಸುವುದಿಲ್ಲ. ವೈಯಕ್ತಿಕ ಸಾಲದ ಬಡ್ಡಿ ದರವು 10% ರಿಂದ 24% ವರೆಗೆ ಇರುತ್ತದೆ. ವೈಯಕ್ತಿಕ ಸಾಲಗಳ ಪ್ರಕ್ರಿಯೆ ಶುಲ್ಕವು ಹೆಚ್ಚಾಗಿರುತ್ತದೆ., ಸಾಮಾನ್ಯವಾಗಿ ಸಾಲದ ಮೊತ್ತದ 1% ರಿಂದ 3% ವರೆಗೆ ವಿಧಿಸಲಾಗುತ್ತದೆ. ಆದ್ದರಿಂದ, ಒಂದು ಸಣ್ಣ ಅವಧಿಗೆ ಒಂದು ಸಣ್ಣ ಮೊತ್ತದ ಅಗತ್ಯವಿದ್ದರೆ ಚಿನ್ನದ ಸಾಲಗಳು ಹೆಚ್ಚು ಉಪಯುಕ್ತವಾಗುತ್ತವೆ. ಇನ್ನು ನಮ್ಮ ಬಳಿ ಚಿನ್ನವೇ ಇಲ್ಲ ಎನ್ನುವವರು ಅಗತ್ಯಕ್ಕೆ ಅನುಗುಣವಾಗಿ ವೈಯಕ್ತಿಕ ಸಾಲವನ್ನು ಪಡೆಯಬಹುದು.
ಆ್ಯಪ್ ಸಾಲ ಬೇಡವೇಬೇಡ: ನಮ್ಮ ದೇಶದಲ್ಲಿ ಪರ್ಸನಲ್ ಲೋನ್ ಕೊಡುವುದಕ್ಕೆ ಹಲವು ಖಾಸಗಿ ಆ್ಯಪ್‌ಗಳು ಜಾಹೀರಾತು ಕೊಡುತ್ತವೆ. ಇಂತಹ ಆ್ಯಪ್‌ಗಳು ನಿಮಗೆ ಕೆಲವೊಂದು ಸಾಫ್ಟ್‌ಕಾಪಿ ದಾಖಲೆಗಳನ್ನು ಪಡೆದು ಕೆಲವೇ ನಿಮಿಷಗಳಲ್ಲಿ ಸಾಲವನ್ನು ನೀಡುತ್ತವೆ. ಆದರೆ, ಅವರ ಅಗ್ರೀಮೆಂಟ್ ಕೂಡ ನಮಗೆ ಬೇಗನೇ ಸಿಗುವುದಿಲ್ಲ. ಹಣಕಾಸು ವ್ಯವಹಾರ ಪೂರ್ಣಗೊಂಡ ನಂತರ ನೂರಾರು ಷರತ್ತುಗಳು ಇರುತ್ತವೆ. ಈ ಷರತ್ತುಗಳಲ್ಲಿ ಒಂದನ್ನು ಮೀರಿದರೆ ಸಾಲ ಪಡೆದವರ ಮಾನ ಮರ್ಯಾದೆ ಹರಾಜು ಮಾಡಲು ಹೇಸುವುದಿಲ್ಲ. ಇಂತಹ ಖಾಸಗಿ ಆ್ಯಪ್‌ಗಳ ಸಾಲದಿಂದ ಹಲವರು ಮರ್ಯಾದೆಗೆ ಅಂಜಿಕೊಂಡು ಪ್ರಾಣವನ್ನೇ ಬಿಟ್ಟಿರುವ ಪ್ರಕರಣಗಳು ನಡೆದಿವೆ.
ಇದನ್ನೂ ಓದಿ: ಬ್ಯಾಂಕಲ್ಲಿ ಸಾಲ ಮಾಡಿ ಸತ್ತರೆ ಏನಾಗುತ್ತೆ?