ದಿವಾಳಿ ಪತ್ರ ಸಲ್ಲಿಸಿದ ಗೋ ಫರ್ಸ್ಟ್‌ ಏರ್‌ ಲೈನ್ಸ್‌, ಮೇ, 3, 4ರ ಎಲ್ಲಾ ವಿಮಾನ ರದ್ದು!

By Santosh Naik  |  First Published May 2, 2023, 5:01 PM IST

ಆರ್ಥಿಕ ಸಂಕಷ್ಟದಲ್ಲಿರುವ ಗೋ ಫರ್ಸ್ಟ್‌ ಏರ್‌ ಲೈನ್ಸ್‌ ಸ್ವಯಂಪ್ರೇರಿತವಾಗಿ ದಿವಾಳಿತನದ ಅರ್ಜಿ ಸಲ್ಲಿಕೆ ಮಾಡಿದೆ. ಅದರ ಬೆನ್ನಲ್ಲಿಯೇ ಮೇ 3 ಹಾಗೂ 4ರ ಎಲ್ಲಾ ವಿಮಾನಗಳನ್ನು ರದ್ದು ಮಾಡಿದ್ದಾಗಿ ಕಂಪನಿ ಡಿಜಿಸಿಎಗೆ ತಿಳಿಸಿದೆ.


ನವದೆಹಲಿ (ಮೇ.2): ಗೋ ಫರ್ಸ್ಟ್‌ ಏರ್‌ಲೈನ್ಸ್‌ನ ಎಲ್ಲಾ ವಿಮಾನಗಳು ಮೇ 3 ಮತ್ತು 4 ರಂದು ರದ್ದುಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಮೇ 3 ಮತ್ತು 4 ರಂದು ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗುವುದು ಎಂದು ಗೋ ಫಸ್ಟ್ ಏರ್‌ಲೈನ್ಸ್ ತಿಳಿಸಿರುವುದಾಗಿ ವಿಮಾನಯಾನ ನಿಯಂತ್ರಕ ತಿಳಿಸಿದೆ. ದೆಹಲಿಯ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗಾಗಿ ಅರ್ಜಿ ಸಲ್ಲಿಕೆ ಮಾಡಿದೆ. ಏರ್‌ಲೈನ್‌ನ ಮುಖ್ಯಸ್ಥ ಕೌಶಿಕ್ ಖೋನಾ, ಪ್ರ್ಯಾಟ್ ಮತ್ತು ವಿಟ್ನಿ (P&W) ಇಂಜಿನ್‌ಗಳನ್ನು ಪೂರೈಸದ ಕಾರಣ ಏರ್‌ಲೈನ್ ತನ್ನ ಫ್ಲೀಟ್‌ನ ಅರ್ಧಕ್ಕಿಂತ ಹೆಚ್ಚು 28 ವಿಮಾನಗಳನ್ನು ರದ್ದು ಮಾಡಿದೆ ಎಂದು ಹೇಳಿದ್ದಾರೆ. ಇದು ಕೊನೆಗೆ ಹಣಕಾಸು ಸಮಸ್ಯೆಗೆ ಕಾರಣವಾಗಿದೆ."ಇದು ದುರದೃಷ್ಟಕರ ನಿರ್ಧಾರವಾಗಿದೆ (ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗೆ ಸಲ್ಲಿಸುವುದು) ಆದರೆ ಕಂಪನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಇದನ್ನು ಮಾಡಬೇಕಾಗಿದೆ" ಎಂದು ಅವರು ಹೇಳಿದರು.

ಏರ್‌ಲೈನ್ಸ್ ಬೆಳವಣಿಗೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದೆ ಮತ್ತು ಡಿಜಿಸಿಎಗೆ ವಿವರವಾದ ವರದಿಯನ್ನು ಸಲ್ಲಿಸಲಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ವಾಡಿಯಾಸ್ ಒಡೆತನದ ಗೋ ಫರ್ಸ್ಟ್‌, ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) ಪಾವತಿಸಲು ಹಣದ ಕೊರತೆಯಿಂದಾಗಿ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಪುನರಾವರ್ತಿತ ಸಮಸ್ಯೆಗಳಿಂದಾಗಿ ಮತ್ತು ಅದರ ಏರ್‌ಬಸ್ A320 ನಿಯೋ ವಿಮಾನಕ್ಕೆ ಶಕ್ತಿ ನೀಡುವ ಪ್ರಾಟ್ ಮತ್ತು ವಿಟ್ನಿ ಎಂಜಿನ್‌ಗಳ ಪೂರೈಕೆಯಿಲ್ಲದ ಕಾರಣ ವಿಮಾನಯಾನವು ತನ್ನ ಅರ್ಧದಷ್ಟು ಫ್ಲೀಟ್‌ಗಳನ್ನು ರದ್ದು ಮಾಡಬೇಕಾಗಿರುವುದರಿಂದ ಗಮನಾರ್ಹ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ವರದಿ ಹೇಳಿದೆ. ಇದು ವಿಮಾನಯಾನ ಸಂಸ್ಥೆಯ ಹಣದ ಹರಿವಿನ ಮೇಲೆ ಗಂಭೀರ ಪರಿಣಾಮ ಬೀರಿದೆ.
 

click me!