ಜಿಡಿಪಿ ಬೆಳವಣಿಗೆ 3 ನೇ ತ್ರೈಮಾಸಿಕದಲ್ಲಿ ಶೇ.4.7 ಕ್ಕೆ ಇಳಿಕೆ

By Kannadaprabha NewsFirst Published Feb 29, 2020, 10:02 AM IST
Highlights

ಜಿಡಿಪಿ ಬೆಳವಣಿಗೆ 7 ವರ್ಷದ ಕನಿಷ್ಠ | 3 ನೇ ತ್ರೈಮಾಸಿಕದಲ್ಲಿ ಶೇ.4.7ಕ್ಕೆ ಇಳಿಕೆ |  2012-13ರ ನಂತರದ ಅತಿ ಕನಿಷ್ಠ ಜಿಡಿಪಿ |  ಕಳೆದ ತ್ರೈಮಾಸಿಕದಲ್ಲಿ ಶೇ.5.1 ಇತ್ತು | ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.5.6 ಇತ್ತು

ನವದೆಹಲಿ (ಫೆ. 29): ಪ್ರಸಕ್ತ ಹಣಕಾಸು ವರ್ಷದ ತೃತೀಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.4.7ಕ್ಕೆ ಕುಸಿದಿದೆ. ಇದು 7 ವರ್ಷದ ಕನಿಷ್ಠವಾಗಿದೆ. ಆರ್ಥಿಕ ಹಿಂಜರಿತದ ಬಿಸಿ ಈಗಲೂ ಮುಂದುವರಿದಿದೆ ಎಂಬುದರ ಸಂಕೇತ ಇದು ಎಂದು ವಿಶ್ಲೇಷಿಸಲಾಗುತ್ತಿದೆ.

2012-13 ರ ಜನವರಿ-ಮಾಚ್‌ರ್‍ನಲ್ಲಿ ಜಿಡಿಪಿ ಶೇ.4.3 ರ ದರದಲ್ಲಿ ಪ್ರಗತಿ ಕಂಡಿತ್ತು. ಅದರ ನಂತರದ ಅತಿ ಕನಿಷ್ಠ ಜಿಡಿಪಿ ಪ್ರಗತಿ ದರ ಇದಾಗಿದೆ.

2019ರ ಮೊದಲ ತ್ರೈಮಾಸಿಕ ಜಿಡಿಪಿ ಶೇ.5 ರ ದರದಲ್ಲಿ ಬೆಳವಣಿಗೆ ಸಾಧಿಸಿದೆ ಎಂದು ಮೊದಲು ಪ್ರಕಟಿಸಿ ನಂತರ ಅದನ್ನು ಶೇ.5.6 ಕ್ಕೆ ಹೆಚ್ಚಿಸಲಾಗಿತ್ತು. ಅದೇ ರೀತಿ ಜುಲೈ-ಸೆಪ್ಟೆಂಬರ್‌ ನಡುವಿನ 2 ನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.4.5ರ ದರದ ಬೆಳವಣಿಗೆ ಕಂಡಿದೆ ಎಂಬ ಅಂಕಿ-ಅಂಶ ನೀಡಿ, ಬಳಿಕ ಅದನ್ನು ಶೇ.5.1ಕ್ಕೆ ಪರಿಷ್ಕರಿಸಲಾಗಿತ್ತು. ಆದರೆ ಡಿಸೆಂಬರ್‌ಗೆ ಮುಗಿದ 3ನೇ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಶೇ.4.7ಕ್ಕೆ ಕುಸಿಯುವುದರೊಂದಿಗೆ ಶೇ.0.4ರಷ್ಟುಇಳಿಕೆ ಕಂಡಂತಾಗಿದೆ.

2018-19ರಲ್ಲಿ ಇದೇ ಅವಧಿಯಲ್ಲಿ ಜಿಡಿಪಿ ಶೇ.5.6ರ ಪ್ರಗತಿ ದರದಲ್ಲಿ ಬೆಳವಣಿಗೆ ಕಂಡಿತ್ತು. ಅದಕ್ಕೆ ಹೋಲಿಸಿದರೆ ಈ ಸಲದ ಜಿಡಿಪಿ ಬೆಳವಣಿಗೆ ದರ ತುಂಬಾ ಕುಂಠಿತವಾಗಿದೆ ಎಂದೂ ವಿಶ್ಲೇಷಿಸಬಹುದಾಗಿದೆ.

ಇದೇ ವೇಳೆ, 2019ರ ಏಪ್ರಿಲ್‌-ಡಿಸೆಂಬರ್‌ ಅವಧಿಯ 9 ತಿಂಗಳ ಜಿಡಿಪಿ ಶೇ.5.1ರ ದರದಲ್ಲಿ ಪ್ರಗತಿ ಸಾಧಿಸಿದೆ. ಆದರೆ 2018ರ ಇದೇ 9 ತಿಂಗಳ ಅವಧಿಯಲ್ಲಿ ಪ್ರಗತಿ ದರ ಶೇ.6.3 ಇತ್ತು.

ಇಳಿಕೆಗೆ ಏನು ಕಾರಣ?:

ಕಟ್ಟಡ ನಿರ್ಮಾಣ ವಲಯ, ಉತ್ಪಾದಕ ವಲಯ, ವಿದ್ಯುತ್‌, ಅನಿಲ, ನೀರು ಪೂರೈಕೆ, ವ್ಯಾಪಾರ, ಹೋಟೆಲ್‌, ಸಾರಿಗೆ, ಸಂಪರ್ಕ ಹಾಗೂ ಪ್ರಸಾರ ವಲಯಗಳ ಬೆಳವಣಿಗೆ ಕುಂಠಿತಗೊಂಡಿದೆ. ಇದು ಜಿಡಿಪಿ ಪ್ರಗತಿ ದರದ ಬೆಳವಣಿಗೆಗೆ ಅಡ್ಡಿಯಾಗಿದೆ.

ಆದರೆ ಕೃಷಿ ವಲಯ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.1.5ರಷ್ಟು (ಶೇ.2 ರಿಂದ ಶೇ.3.5ಕ್ಕೆ) ಪ್ರಗತಿ ಕಂಡಿದೆ.

ಸರ್ಕಾರದ ಆಶಾವಾದ:

‘ಆರ್ಥಿಕ ಪ್ರಗತಿಯ ಕುಸಿತವು ಈಗ ಅತ್ಯಂತ ಕನಿಷ್ಠ ಮಟ್ಟಮುಟ್ಟಿದೆ’ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅತನು ಚಕ್ರವರ್ತಿ ಹೇಳಿದ್ದಾರೆ. ಈ ಮೂಲಕ ಇನ್ನೇನಿದ್ದರೂ ಪ್ರಗತಿ ಯುಗ ಆರಂಭ ಎಂಬ ಪರೋಕ್ಷ ಸಂದೇಶವನ್ನು ಅವರು ನೀಡಿದ್ದಾರೆ.

click me!